ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೋನ್ಹಾಳ ಕೆರೆಯ ಚಂದ

Last Updated 30 ಜನವರಿ 2017, 19:30 IST
ಅಕ್ಷರ ಗಾತ್ರ

‘ಹೈದರಾಬಾದ್‌ ಕರ್ನಾಟಕ ಪ್ರವಾಸ ಪರಿಪೂರ್ಣ ಆಗಬೇಕೆಂದರೆ ನೀವು ಬೋನ್ಹಾಳ ಕೆರೆ ನೋಡಲೇಬೇಕು’ ಎಂದರು ಭೀಮರಾಯನಗುಡಿಯ ಇತಿಹಾಸ ಸಂಶೋಧನಾ ಕೇಂದ್ರದ ಸಂಚಾಲಕ ಭಾಸ್ಕರರಾವ್‌ ಮುಡಬೂಳ.  ಅವರ ಮಾತು ಕೇಳಿ ‘ಬೋನ್ಹಾಳ’ ಸಾಮಾನ್ಯ ಕೆರೆ ಇದ್ದಿರಬೇಕು ಅಂದುಕೊಂಡೆ. ನಿಮ್ಮ ‘ರಂಗನತಿಟ್ಟು’ಗಿಂತಲೂ ನಮ್ಮ ಬೋನ್ಹಾಳ ಕೆರೆ ಮೂರುಪಟ್ಟು ದೊಡ್ಡದು. ಈ ಚಳಿಗಾಲದಲ್ಲಿ ವಿದೇಶಿ ಪಕ್ಷಿಗಳು ಬೋನ್ಹಾಳ ಕೆರೆ ಹುಡುಕಿಕೊಂಡು ಬರುತ್ತವೆ ಎಂದು ಅವರು ಹೇಳಿದಾಗ ಅಚ್ಚರಿಯಾಯಿತು.

ಅದೊಂದು ಮುಂಜಾನೆ ಸುರಪುರ ದಾಟಿ ಬೋನ್ಹಾಳ ಕೆರೆ ಏರಿ ಮೇಲೆ ನಮ್ಮ ಬೈಕುಗಳು ನಿಂತಿದ್ದವು. ಎತ್ತ ನೋಡಿದರೂ ಜಲರಾಶಿ... ಪುರ್ರನೆ ಹಾರುವ ಹಕ್ಕಿಗಳ ನಿನಾದ... ಕಿಚಪಿಚ ಕಲರವ... ನಡುನಡುವೆ ಗುಟುರು ಹಾಕುವ ಕಾಡು ಪಾರಿವಾಳ... ಹದವಾದ ಏರಿಯ ಮೇಲೆ ನಮ್ಮ ಹೆಜ್ಜೆಗಳು ಹಗುರಾಗಿದ್ದವು.

ಸುತ್ತಲೂ ಎಂಥ ಹಸಿರುರಾಶಿ... ಇಲ್ಲಿಗೆ ಬರುವವರೆಗೂ ಕೆಂದೂಳು ನಮ್ಮ ಕಣ್ಣಿಗೆ ರಾಚಿತ್ತು... ಕ್ರಿಮಿನಾಶಕಗಳಿಂದ ದುರ್ನಾತ ಸೂಸುತ್ತಿದ್ದ ಗದ್ದೆಗಳು ಅಸಹನೀಯ ಎನಿಸಿದ್ದವು. ಈಗ ಹಸಿರು ಕಾನನದ ಮಡಿಲಲ್ಲಿ ಮಿಂದಂತೆ.... ಮನಸ್ಸಿನ ದಣಿವಾರಿದಂತೆ... ಮೈಮನಸ್ಸಿಗೆ ನವೋಲ್ಲಾಸ ತುಂಬಿದಂತೆ ಭಾಸವಾಗುತ್ತಿತ್ತು.

ನೈಸರ್ಗಿಕ ಸೌಂದರ್ಯದ ಖನಿ ಬೋನ್ಹಾಳ ಕೆರೆ ನಿರ್ಮಾಣಗೊಂಡಿದ್ದು ಹೇಗೆ? ನಿರ್ಮಾತೃ ಯಾರು? ನಮ್ಮಲ್ಲೇ ಸಹಜ ಕುತೂಹಲದ ಚರ್ಚೆ ಆರಂಭಗೊಂಡಿತು. ಒಬ್ಬ ಬ್ರಿಟಿಷ್‌ ಅಧಿಕಾರಿ ಬೋನ್ಹಾಳ ಕೆರೆ ಪಕ್ಷಿಧಾಮವಾಗಲು ಶ್ರಮಿಸಿದ ಎಂಬ ಐತಿಹಾಸಿಕ ದಾಖಲೆ ನಮ್ಮ ಕುತೂಹಲವನ್ನು ಮತ್ತಷ್ಟು ಇಮ್ಮಡಿಸಿತು.

ಕೆರೆ ಇತಿಹಾಸ
ಸುರಪುರ ತಾಲ್ಲೂಕಿನ ಬೋನ್ಹಾಳ ಗ್ರಾಮದ ಉತ್ತರ ದಿಕ್ಕಿನ ಪರ್ವತ ಶ್ರೇಣಿ ಮಧ್ಯೆ ಒಂದು ಜಲರಾಶಿ ಇತ್ತು. 1845ರಲ್ಲಿ ಫಿಲಿಪ್ಸ್‌ ಮೆಡೋಸ್‌ ಟೇಲರ್‌ ಎಂಬ ಬ್ರಿಟಿಷ್‌ ಅಧಿಕಾರಿ ಈ ಜಲರಾಶಿಯ ಸೌಂದರ್ಯಕ್ಕೆ ಮನಸೋತ. ಆಗ ಸುರಪುರ ಸಂಸ್ಥಾನ ಹೈದರಾಬಾದ್‌ ನಿಜಾಮರ ಅಧೀನದಲ್ಲಿತ್ತು.

1848ರಲ್ಲಿ ಟೇಲರ್‌ ಬ್ರಿಟಿಷ್‌ ರೆಸಿಡೆಂಟ್‌ ಫ್ರೆಜರ್‌ನನ್ನು ಕರೆತಂದು ಕೆರೆ ತೋರಿಸುತ್ತಾನೆ. ನಂತರ ಬ್ರಿಟಿಷ್‌ ರೆಸಿಡೆಂಟ್‌ ನಿಜಾಮನಿಗೆ ಆದೇಶಿಸಿ ಕೆರೆ ಅಭಿವೃದ್ಧಿಗೊಳಿಸಿ ಪಕ್ಷಿಧಾಮವನ್ನಾಗಿ ರೂಪಿಸಲಾಗುತ್ತದೆ. ಆಗಿನ ಮುಖ್ಯ ಅಭಿಯಂತರ ಮೇಜರ್ ಬಕಲ್‌ರಿ ಕೆರೆಯ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾನೆ.

ಕೆರೆವೀಕ್ಷಣಾ ಗೋಪುರ ಸೇರಿದಂತೆ ಕಾಟೇಜ್‌ ಅನ್ನು ಆಗಿನ ಕಾಲದಲ್ಲೇ ನಿರ್ಮಿಸಲಾಗಿದೆ. ಸುರಪುರ ಸಂಸ್ಥಾನದ ರಾಜ ವೆಂಕಟಪ್ಪ ನಾಯಕ ಈ ಕೆರೆಯಲ್ಲಿ ದೋಣಿವಿಹಾರ ಮಾಡುತ್ತಿದ್ದ ಎಂದು ಚರಿತ್ರೆಯ ಪುಟಗಳಿಂದ ತಿಳಿದು ಬರುತ್ತದೆ.

1984–85ರಲ್ಲಿ ಕೆರೆಯ ಜಲರಾಶಿ ಬರಿದು ಮಾಡಿ ಸಾವಿರಾರು ಎಕರೆ ಭೂಮಿಯನ್ನು ಕಬಳಿಸಿಕೊಳ್ಳುವ ಹುನ್ನಾರ ನಡೆಯಿತು. ಇದಕ್ಕಾಗಿ ಕೆರೆಯ ದಕ್ಷಿಣ ದಿಕ್ಕಿನ ಒಡ್ಡನ್ನೇ ಒಡೆದು ನೀರು ಖಾಲಿ ಮಾಡುವ ಕೃತ್ಯ ನಡೆಯಿತು. ಆದರೆ, ಬೋನ್ಹಾಳ ಗ್ರಾಮಸ್ಥರು ದಿಟ್ಟ ಹೋರಾಟ ಮಾಡಿ ಕೆರೆ ಉಳಿಸಿದರು ಎನ್ನುತ್ತಾರೆ ಬೋನ್ಹಾಳ ಗ್ರಾಮದ ರೈತರು.

ನಂತರ ಕೆರೆ ಅಭಿವೃದ್ಧಿಯನ್ನು ಸರ್ಕಾರ ಕೃಷ್ಣ ಭಾಗ್ಯ ಜಲನಿಗಮಕ್ಕೆ ವಹಿಸಿಕೊಟ್ಟಿತು. ಇದರಿಂದ ಕೆರೆಯಲ್ಲಿ ಮೀನುಗಾರರ ಕಾಟ ಹೆಚ್ಚಿತು. ಮೀನುಗಾರರಿಂದಾಗಿ ಪಕ್ಷಿಗಳಿಗೆ ತೊಂದರೆಯಾಗುತ್ತಿತ್ತು. ಈ ಸಂದರ್ಭದಲ್ಲಿ ಅನೇಕ ವರ್ಷ ವಿದೇಶಿ ಪಕ್ಷಿಗಳು ಇತ್ತ ಬಂದಿರಲಿಲ್ಲ.

ಎಚ್ಚೆತ್ತ ಸ್ಥಳೀಯರು ಮೀನುಗಾರರಿಂದ ಪಕ್ಷಿಧಾಮಕ್ಕಾಗುತ್ತಿರುವ ಧಕ್ಕೆ ತಪ್ಪಿಸುವಂತೆ ಜಿಲ್ಲಾಡಳಿತದ ಮೊರೆ ಹೋದರು. ಆಗ ಸರ್ಕಾರ ಪಕ್ಷಿಧಾಮವನ್ನು ರಕ್ಷಿಸುವಂತೆ ಅರಣ್ಯ ಇಲಾಖೆಗೆ ಆದೇಶಿಸಿತು. ಕಾನೂನು ಕ್ರಮ ಬಿಗಿಗೊಂಡಾಗ ಮೀನುಗಾರರು ಅರಣ್ಯ ಇಲಾಖೆ ವಿರುದ್ಧ ಹೈಕೋರ್ಟ್‌ನಲ್ಲಿ ರಿಟ್‌ ಸಲ್ಲಿಸಿದರು. ಆದರೆ, ನ್ಯಾಯಾಲಯ ಅಮೂಲ್ಯ ಪಕ್ಷಿಧಾಮ ರಕ್ಷಿಸುವಂತೆ ಆದೇಶಿಸಿತು. ಅಂದಿನಿಂದ ಬೋನ್ಹಾಳ ಕೆರೆಯ ಒಡಲಿನಲ್ಲಿ ಪಕ್ಷಿಗಳ ಕಲರವ ನಿಧಾನವಾಗಿ ಅನುರಣಿಸುತ್ತಾ ಬಂದಿದೆ.

ಈಗ ಕೆರೆಯಲ್ಲಿ 10 ಸಾವಿರ ದೇಸಿ ಪಕ್ಷಿಗಳನ್ನು ರಾಜ್ಯ ಪಕ್ಷಿತಜ್ಞರು ಗುರುತಿಸಿದ್ದಾರೆ. ಚಳಿಗಾಲದಲ್ಲಿ ಬೋನ್ಹಾಳ ಕೆರೆಯ ಒಡಲು ವಿದೇಶ ಪಕ್ಷಿಗಳಿಂದ ತುಂಬುತ್ತದೆ.ನವೆಂಬರ್‌ನಿಂದ ಜನವರಿ ತಿಂಗಳಲ್ಲಿ ಅರ್ಜಂಟೈನಾ, ನೈಜೀರಿಯಾ. ಸೈಬೀರಿಯಾ ಹಾಗೂ ಶ್ರೀಲಂಕಾದಿಂದ ಅನೇಕ ಪ್ರಬೇಧದ ಪಕ್ಷಿಗಳು ಇಲ್ಲಿಗೆ ವಲಸೆ ಬಂದು ಸಂತಾನೋತ್ಪತ್ತಿ ಮಾಡುತ್ತವೆ ಎಂಬುದಾಗಿ ಪಕ್ಷಿತಜ್ಞರೂ ಆಗಿರುವ ಭಾಸ್ಕರರಾವ್‌ ಮುಡಬೂಳ ಹೇಳುತ್ತಾರೆ.

‘ಪ್ರತಿ ವರ್ಷದ ಜನವರಿಯಲ್ಲಿ ರಾಜಹಂಸ (ಫ್ಲೆಮಿಂಗೋ), ಬ್ಯಾಹ್ಮಿಡಕ್‌, ಕ್ಯಟಲ್ ಇಗ್ರಿಬಿ, ವೈಟ್‌ ನೆಕೆಡ್‌ ಸ್ಟ್ರೋಕ್, ವೈಟ್ಲಿಬಿಸ್, ಬ್ಲಾಕ್‌ ಲಿಬಿಸ್‌, ಬಾರ್‌ ಹೆಡ್ಡಡ್‌ ಗುಜ್, ಕಾಮನ್ ಟೇಲ್, ಇರಿಟೇಲ್, ಟಫ್ಟೆಡ್, ಪೋಚಾರ್ಡ್‌ ಇಂಡಿಯನ್‌ ಶಾಗ್, ಸ್ನೇಕ್‌ ಬರ್ಡ್, ಕಾಮನ್‌ ಪೋಚಾರ್ಡ್, ಇಂಡಿಯನ್‌ ಮೋರ್‌ ಹೆನ್ನ, ಕುಟಲಾರ್ಜ್ ಕಾರ್ಮೊರೆಂಟ್, ಲಿಟಲ್‌ ಕಾರ್ಮೋರೆಂಟ್, ಪ್ವೆಡ್, ಕಿಂಗ್‌ ಫಿಷರ್ ಇತ್ಯಾದಿ ಹಕ್ಕಿಗಳು ಬೋನ್ಹಾಳ ಕೆರೆಯಲ್ಲಿ ಸಂತಾನೋತ್ಪತ್ತಿಗೆ ಬರುತ್ತವೆ. ಆಗ ಬೋನ್ಹಾಳ ಕೆರೆ ಸೌಂದರ್ಯ ಇನ್ನೂ ಮನಮೋಹಕವಾಗಿರುತ್ತದೆ.

ಕೆರೆ ಸುಮಾರು 15 ಅಡಿ ಆಳ ಇದೆ. ಹಾಗಾಗಿ ಪ್ರವಾಸೋದ್ಯಮ ಇಲಾಖೆ ಇಲ್ಲಿ ಪೆಡಲ್‌ ಬೋಟಿಂಗ್‌ ವ್ಯವಸ್ಥೆ ಮಾಡಿದೆ. ಆದರೆ, ಪಕ್ಷಿಗಳು ನೆಲೆಗೊಳ್ಳುವ ಸ್ಥಳದತ್ತ ದೋಣಿ ವಿಹಾರ ನಿಷಿದ್ಧ. ಉಳಿದ ಕೆರೆ ವಿಶಾಲ ಜಲರಾಶಿಯಲ್ಲಿ ದೋಣಿ ವಿಹಾರ ಮಾಡಬಹುದು. ಆದರೆ, ದೋಣಿ ವಿಹಾರ ಮಾಡುವವರಿಗೆ ಇಲಾಖೆ ಲೈಫ್‌ ಜಾಕೆಟ್‌ ವ್ಯವಸ್ಥೆ ಮಾಡಿಲ್ಲ. ಐದುನೂರು ಮೀಟರ್‌ ದೂರದವರೆಗೆ ದೋಣಿ ವಿಹಾರ ಮಾಡಬೇಕಾಗುತ್ತದೆ. ಈ ಸಂದರ್ಭದಲ್ಲಿ ದುರಂತ ಸಂಭವಿಸಿದರೆ ಬದುಕುಳಿಯುವುದು ಕಷ್ಟ ಎನ್ನುತ್ತಾರೆ ಪ್ರವಾಸಿಗರು.

ಕೆರೆ ಅಭಿವೃದ್ಧಿಗೆ ₹ 1.50ಕೋಟಿ ಅನುದಾನ: ಜಿಲ್ಲಾಡಳಿತ ಈಚೆಗೆ ಬೋನ್ಹಾಳ ಕೆರೆ ಅಭಿವೃದ್ಧಿ ಹಾಗೂ ಕೆರೆ ಸ್ವಾಸ್ಥ್ಯದ ಬಗ್ಗೆ ವಿಶೇಷ ಕಾಳಜಿ ತೆಗೆದುಕೊಂಡಿದೆ. ಹಾಗಾಗಿ, ಪ್ರವಾಸೋದ್ಯಮ ಇಲಾಖೆಗೆ ₹1.50ಕೋಟಿ ಅನುದಾನ ನೀಡಿದೆ. ಬೋನ್ಹಾಳ ಕೆರೆಯನ್ನು ರಾಜ್ಯದ ಪ್ರಮುಖ ಪಕ್ಷಿಧಾಮವನ್ನಾಗಿಸುವ ನಿಟ್ಟಿನಲ್ಲಿ ವಸತಿಗೃಹ, ಜಂಗಲ್‌ ಲಾಡ್ಜ್‌, ನಡುಗಡ್ಡೆ, ವೀಕ್ಷಣಾ ಗೋಪುರ, ಕ್ಯಾಂಟೀನ್‌, ಮ್ಕಕಳ ಉದ್ಯಾನ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೆರೆ ಅಂಗಳದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಸಿ.ಸತೀಶ್‌ ಹೇಳುತ್ತಾರೆ.

ಹಿನ್ನೀರಿನಲ್ಲಿ ಮೀನುಗಾರಿಕೆ, ಪಕ್ಷಿಬೇಟೆ
ಬೋನ್ಹಾಳ ಕೆರೆಯಲ್ಲಿ ಮೀನುಗಾರಿಕೆಯನ್ನು ಸರ್ಕಾರ ನಿಷೇಧಿಸಿದೆ. ಆದರೂ ಕೆರೆ ಹಿನ್ನೀರಿನಲ್ಲಿ ಮೀನುಗಾರಿಕೆ ನಡೆದಿದೆ. ರಾತ್ರಿ ಸಂದರ್ಭದಲ್ಲಿ ಬಲೆ ಹಾಕಿ ಮೀನುಗಾರಿಕೆಯನ್ನು ನಡೆಸುತ್ತಾ ಬರಲಾಗಿದೆ. ಇದು ಪಕ್ಷಿಧಾಮದ ಸಿಬ್ಬಂದಿಗೆ ಗೊತ್ತಿದ್ದರೂ ಜಾಣ ಕುರುಡು ಪ್ರದರ್ಶಿಸುತ್ತಾರೆ. ಮೀನುಗಾರರು ಹಾಕಿರುವ ಬಲೆಗೆ ಎಷ್ಟೋ ಪಕ್ಷಿಗಳು ಬಿದ್ದಿವೆ. ಒಂದು ರೀತಿಯಲ್ಲಿ ಕೆರೆ ಹಿನ್ನೀರಿನಲ್ಲಿ ಪಕ್ಷಿಬೇಟೆಯೂ ನಡೆದಿದೆ ಎನ್ನುತ್ತಾರೆ ಇಲ್ಲಿನ ಸ್ಥಳೀಯರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT