ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೃತ್ತಿ ನಾಟಕ ಕಂಪೆನಿಯೂ ನಾಟಕವೇ ವೃತ್ತಿಯೂ...

Last Updated 30 ಜನವರಿ 2017, 19:30 IST
ಅಕ್ಷರ ಗಾತ್ರ

ಒಂದು ಕಾಲದ ‘ದಕ್ಷಿಣದ ಮ್ಯಾಂಚೆಸ್ಟರ್’ ಎನಿಸಿಕೊಂಡಿದ್ದ ದಾವಣಗೆರೆ, ಕೈಗಾರಿಕೆಗೆ ಹೆಸರುವಾಸಿ. ಕಾರ್ಮಿಕರ ದೊಡ್ಡ ಉದ್ಯೋಗ ಕೇಂದ್ರವೂ ಹೌದು. ಇಲ್ಲಿ ದುಡಿಯುವ ಕಾರ್ಮಿಕ ವರ್ಗವೇ ಇಲ್ಲಿನ  ರಂಗಭೂಮಿ ಪರಂಪರೆಯನ್ನು ಪೋಷಿಸುತ್ತಾ ಬಂದಿತ್ತು. ಆದರೆ, ಈಗ ಇಂತಹ ರಂಗವೈಭವ ದಾವಣಗೆರೆಯಲ್ಲಿದೆಯೇ? ಎಲ್ಲಿಯೂ ಇಲ್ಲ; ಇಲ್ಲಿಯೂ ಇಲ್ಲ ಎಂಬ ಸರಳೀಕರಣದ ಮಾತಿಗಷ್ಟೇ ಸೀಮಿತ.

‘ನಾಟಕದ ದುಡ್ಡಿನಲ್ಲೇ ಕಂಪೆನಿ ನಡೆಸುತ್ತಿದ್ದೇನೆ’ ಎಂಬ ಮಾತನ್ನು ಈಗ ಯಾವ ವೃತ್ತಿ ನಾಟಕದ ಕಂಪೆನಿ ಮಾಲೀಕನೂ ಧೈರ್ಯದಿಂದ ಹೇಳುತ್ತಿಲ್ಲ.  ಇನ್ನೊಂದೆಡೆ, ಹೊಸ ನಾಟಕದ ಬಗ್ಗೆ ಕೇಳುವುದೇ ಬೇಡ. ಹೊಸ ನಟರು ರೂಪುಗೊಳ್ಳುತ್ತಿಲ್ಲ. ನಾಟಕ ಕಂಪೆನಿ ಮಾಲೀಕರ ಮಕ್ಕಳು ಬೇರೆ, ಬೇರೆ ವ್ಯವಹಾರಗಳಲ್ಲಿ ಮುಳುಗಿ ಹೋಗಿದ್ದಾರೆ.ಕಲಾವಿದರ ಮಕ್ಕಳು, ‘ಅಪ್ಪ–ಅಮ್ಮನ ಕಷ್ಟ ನನಗೆ ಬೇಡ’ ಎಂದು ರಂಗಭೂಮಿಯಿಂದ ದೂರ ಸರಿದುನಿಂತಿದ್ದಾರೆ.

ವೃತ್ತಿ ರಂಗಭೂಮಿ ಇಂತಹ ಬಿಕ್ಕಟ್ಟನ್ನು ಎದುರಿಸುತ್ತಿರುವಾಗ ಈ ರಂಗಭೂಮಿ ಏಕೆ ಬೇಕು? ಬೇಕಾದರೆ ಅದು ಈಗ ಹೇಗಿರಬೇಕು? ಸ್ವರೂಪ, ವಿನ್ಯಾಸಗಳೇನು? ಈ ರೀತಿಯ ಹಲವು ಪ್ರಶ್ನೆಗಳಿಗೆ ಇದೇ ರಂಗದಲ್ಲಿ ಕೆಲಸ ಮಾಡುವವರು ಒಮ್ಮತದ ತೀರ್ಮಾನಕ್ಕೆ ಬರಲು ಇದುವರೆಗೂ ಸಾಧ್ಯವಾಗಿಲ್ಲ. ಹಾಗಾಗಿ, ವೃತ್ತಿ ರಂಗಭೂಮಿ ಎನ್ನುವುದು ಸರ್ಕಾರಿ ಕೃಪಾಪೋಷಿತ ಮಂಡಳಿಯಾಗಿಯೇ ಉಳಿದುಕೊಂಡು ಬಂದಿದೆ.

ಈ ಪ್ರಶ್ನೆಗಳಿಗೆ ದಾವಣಗೆರೆಯ ರಂಗಕರ್ಮಿ ಮಲ್ಲಿಕಾರ್ಜುನ ಕಡಕೋಳ ‘ದಾವಣಗೆರೆ ಜಿಲ್ಲೆ ಒಂದರಲ್ಲೇ ವರ್ಷಕ್ಕೆ 350–380 ನಾಟಕಗಳು ಪ್ರದರ್ಶನಗೊಳ್ಳುತ್ತವೆ. ಅದೂ ಎರಡು ವರ್ಷಗಳಿಗೊಮ್ಮೆ ನಡೆಯುವ ದುರ್ಗಮ್ಮನ ಜಾತ್ರೆ ಸಂದರ್ಭದಲ್ಲಿ. ದಾವಣಗೆರೆ ಸುತ್ತಮುತ್ತಲಿನ ಊರುಗಳಲ್ಲಿ 15 ದಿವಸದಲ್ಲಿ 25ಕ್ಕೂ ಹೆಚ್ಚು ನಾಟಕಗಳು ರಂಗವೇರುತ್ತವೆ. ಪ್ರತಿ ಊರಿನವರು ಹಬ್ಬ, ಹರಿದಿನಗಳಲ್ಲಿ ಪ್ರತಿ ವರ್ಷ ಕನಿಷ್ಠ ಎರಡು ನಾಟಕ ಆಡಿಸುತ್ತಾರೆ. ಈ ಎಲ್ಲಾ ನಾಟಕಗಳು ವೃತ್ತಿ ಕಂಪೆನಿ ನಾಟಕಗಳು. ಅವರು ಯಾರೂ ಲಂಕೇಶ, ಕಾರ್ನಾಡ್‌, ಸುಬ್ಬಣ್ಣ ಅವರ ನಾಟಕಗಳನ್ನು ಆಡುವುದಿಲ್ಲ’ ಎನ್ನುತ್ತಾರೆ.

‘ವೃತ್ತಿ ರಂಗಭೂಮಿ ಒಂದು ಪರಂಪರೆ. ಅದು ಬಹುತ್ವದ ಜನಸಂಸ್ಕೃತಿ. ಅದು ಪ್ರಜಾಸತ್ತಾತ್ಮಕವಾಗಿ ಇರುವಂತಹದ್ದು, ಬಹುಜನರಿಗೆ ಬೇಕಾಗಿರುವಂತಹದ್ದು. ಆದರೆ, ವೃತ್ತಿರಂಗಭೂಮಿಯಲ್ಲಿರುವ ಆಧುನಿಕೋತ್ತರ ಭಾವನೆಗಳು ಸರಿ ಇಲ್ಲ. ದ್ವಂದ್ವಾರ್ಥದ ಸಂಭಾಷಣೆ, ಸಿನಿಮಾ ಹಾಡುಗಳಿಗೆ ನೃತ್ಯ ಮಾಡುವುದು ಆಗುತ್ತಿದೆ. ಇದು ವೃತ್ತಿ ನಾಟಕವೇ ಎಂಬ ಪ್ರಶ್ನೆಯೂ ಉದ್ಭವಿಸುತ್ತದೆ. ವೃತ್ತಿ ನಾಟಕವನ್ನು ಹಾಳು ಮಾಡುವುದಕ್ಕೆ ಒಂದು ರೀತಿಯಲ್ಲಿ ನಾವೇ ಕಾರಣರಾಗಿದ್ದೇವೆ’ ಎನ್ನುತ್ತಾರೆ ಅವರು.

ಸಮನ್ವಯ ಪ್ರಯತ್ನ
ಹವ್ಯಾಸಿ ಹಾಗೂ ವೃತ್ತಿ ರಂಗಭೂಮಿ ಸಮನ್ವಯಗೊಳಿಸುವ ಪ್ರಯತ್ನಗಳು ಅಲ್ಲಲ್ಲಿ ನಡೆದಿವೆ. ಗುಬ್ಬಿ ವೀರಣ್ಣ ಅವರ ‘ಸದಾರಮೆ’ ನಾಟಕಕ್ಕಿಂತ ಮೈಸೂರು ರಂಗಾಯಣ ಕಲಾವಿದರ ‘ಸದಾರಮೆ’ ಅತ್ಯುತ್ತಮವಾಗಿ ಮೂಡಿಬಂದಿದೆ ಎಂದು  ಹಲವು ರಂಗಾಸಕ್ತರು ಹೇಳುತ್ತಾರೆ. ‘ಸದಾರಮೆ’ಯನ್ನು ವೃತ್ತಿ ರಂಗಭೂಮಿಯವರು ಆಡಿದಾಗಲೂ ಜನ ಸೇರಿದ್ದಾರೆ. ರಂಗಾಯಣದವರು ಮಾಡಿದಾಗಲೂ ಜನ ಸೇರುತ್ತಿದ್ದಾರೆ. ಅಂದರೆ ಇದು ಎಲ್ಲಾ ಕಾಲಕ್ಕೂ ಬೇಕಾಗಿದೆ. ಇದನ್ನು ನೋಡಿದರೆ ವೃತ್ತಿ ರಂಗಭೂಮಿ ಜನರಿಂದ ದೂರ ಸರಿಯುತ್ತಿಲ್ಲ ಎನ್ನುವುದು ತಿಳಿಯುತ್ತದೆ.

ಜನರಿಗೆ ಏನು ಬೇಕು ಎನ್ನುವುದು ನಾಟಕ ಆಡುವವರಿಗೆ ಹಾಗೂ ಆಡಿಸುವವರಿಗೆ ಗೊತ್ತಾಗಬೇಕು. ಎಷ್ಟೋ ಸಂದರ್ಭದಲ್ಲಿ (ವೃತ್ತಿ ನಾಟಕ ಕಂಪೆನಿ) ಅವರಿಗೆ ಬಹಳ ಹಣ ಖರ್ಚಾಗುತ್ತದೆ ಎಂದು ಹೇಳಲಾಗುತ್ತದೆ. ಆದರೆ, ಹವ್ಯಾಸಿಗಳಿಗೆ ಕೊಡುವ ಕಾಲು ಭಾಗ ಹಣ ಕೊಡುವುದಿಲ್ಲ. ರಾಜ್ಯದಲ್ಲಿ ಇರುವುದೇ 25 ವೃತ್ತಿ ನಾಟಕ ಕಂಪೆನಿಗಳು.

ವರ್ಷಕ್ಕೆ ₹2 ಕೋಟಿ ಅನುದಾನ ಸಾಕಾಗುತ್ತದೆ. ಸರ್ಕಾರ ಮಾಡಬೇಕಾದ ಕೆಲಸ ಅಂದರೆ ಅದು ಹೇಗೆ ಖರ್ಚಾಗುತ್ತದೆ ಎನ್ನುವುದನ್ನು ಪರಿಶೀಲಿಸುವುದು. ಕಂಪೆನಿಗಳು ಸುಮ್ಮನೆ ಲೆಕ್ಕಪತ್ರ ತೋರಿಸಿದರೆ ಸಾಕಾಗುವುದಿಲ್ಲ. ಕೊನೆ ಪಕ್ಷ ವರ್ಷಕ್ಕೆ ಒಂದು ಹೊಸ ನಾಟಕ ಆಡಿಸಬೇಕು ಎಂಬ ನಿಬಂಧನೆ ಹಾಕಬೇಕಿದೆ.

ವೃತ್ತಿ ರಂಗಭೂಮಿಯಲ್ಲಿ ಕೇವಲ ದ್ವಂದ್ವಾರ್ಥದ ಸಂಭಾಷಣೆ, ನೃತ್ಯ ಇರುತ್ತವೆ ಎಂದು ಹೇಳುತ್ತಾರೆ. ಬರೀ ನಾಟಕದಲ್ಲಿ ಮಾತ್ರನಾ? ಸಿನಿಮಾದಲ್ಲಿ ಅದಕ್ಕಿಂತಲೂ ಕೆಟ್ಟ ಸಂಭಾಷಣೆ, ನೃತ್ಯಗಳು, ವೇಷಭೂಷಣಗಳು ಬರುತ್ತಿವೆ. ಹವ್ಯಾಸಿ ನಾಟಕಗಳಲ್ಲೂ ಈಗ ಇದೇ ಆಗುತ್ತಿದೆ. ವೃತ್ತಿ ನಾಟಕಗಳಲ್ಲೂ ಅತ್ಯುತ್ತಮ ಭಾಷೆ, ರೂಪಕಗಳಿವೆ. ಅದನ್ನು ಮಾಧ್ಯಮಗಳು ಏಕೆ ಎತ್ತಿ ತೋರಿಸುವುದಿಲ್ಲ.

ಹವ್ಯಾಸಿ ನಾಟಕವೊಂದು 36 ವರ್ಷಕ್ಕೆ 500 ಪ್ರಯೋಗ ಆಗಿದ್ದೇ ದೊಡ್ಡ ಸಾಧನೆ ಎಂದು ಹೇಳಲಾಗುತ್ತದೆ. ಆದರೆ, ನಿರಂತರವಾಗಿ 500, 1000 ಪ್ರಯೋಗವಾದ ನಾಟಕಗಳನ್ನು ಮಾಧ್ಯಮಗಳೇಕೆ ಬಿಂಬಿಸುವುದಿಲ್ಲ? ಜನರು ಸುಮ್ಮನೇ ನೋಡುತ್ತಿದ್ದಾರೆಯೇ? ಈ ಬಗ್ಗೆ ‘ನಾಟಕದ ನಾಜೂಕಯ್ಯ’ಗಳು ಏಕೆ ಮಾತನಾಡುವುದಿಲ್ಲ?

ಕಂಚಿಕೆರೆ ಶಿವಣ್ಣ ಅವರ ಶ್ರೀಜಯಲಕ್ಷ್ಮೀ ನಾಟಕ ಕಂಪೆನಿ ಸ್ವಾತಂತ್ರ್ಯ ಚಳವಳಿಗೆ ₹48ಸಾವಿರ ನಿಧಿ ಸಂಗ್ರಹಿಸಿಕೊಟ್ಟಿತ್ತು. ಆದರೆ, ಹವ್ಯಾಸಿಗಳು ನಾಟಕ ಪ್ರದರ್ಶನಕ್ಕೆ ಸರ್ಕಾರ ನೀಡಿದ ಹಣದಲ್ಲೇ ಸ್ವಲ್ಪ ತಾವಿಟ್ಟುಕೊಳ್ಳುತ್ತಾರೆಂಬ ಆರೋಪ ಇದೆ. ಈ ಮಧ್ಯೆ ವೃತ್ತಿ ನಾಟಕ ಕಂಪೆನಿಗೂ ಹಾಗೂ ವೃತ್ತಿ ರಂಗಭೂಮಿಗೂ ವ್ಯತ್ಯಾಸ ಇದೆಯೇ? ಎಂಬ ಪ್ರಶ್ನೆ ರಂಗಭೂಮಿ ವಲಯದಲ್ಲಿ ಈಗ ಬಹು ಚರ್ಚಿತ ವಿಷಯ. ಈಗ ವೃತ್ತಿ ನಾಟಕ ಕಂಪೆನಿ ಎಂಬುದು ತನ್ನ ಆಯಾಮ ವಿಸ್ತರಿಸಿಕೊಂಡಿದೆ ಎಂಬ ವಾದವನ್ನು ರಂಗ ವಿಮರ್ಶಕ ಗುಡಿಹಳ್ಳಿ ನಾಗರಾಜ ಮುಂದಿಡುತ್ತಾರೆ.

‘ಯಾವ ಕಲಾವಿದರಿಗೆ ರಂಗಭೂಮಿ, ನಟನೆ, ಹಾರ್ಮೋನಿಯಂ, ನೇಪಥ್ಯವೇ ವೃತ್ತಿ ಆಗಿರುತ್ತದೆಯೋ ಅದೆಲ್ಲವೂ ವೃತ್ತಿರಂಗಭೂಮಿಯೇ; ಒಂದು ಕಾಲಕ್ಕೆ ನಾಟಕ ಕಂಪೆನಿ ಮಾತ್ರ ಇತ್ತು. 1950ರ ದಶಕದ ನಂತರ ಹವ್ಯಾಸಿ ರಂಗಭೂಮಿ ಬಂತು. ಆದರೆ, ಹವ್ಯಾಸಿ ರಂಗಭೂಮಿಯ ಪ್ರಯೋಗಶೀಲತೆ ಹಳ್ಳಿಗಳಲ್ಲಿ ಪರಿಣಾಮ ಬೀರಲಿಲ್ಲ. ನಗರ, ಪಟ್ಟಣಗಳಲ್ಲಿ, ಗಣೇಶೋತ್ಸವಗಳಲ್ಲಿ ಕೂಡ ವೃತ್ತಿ ರಂಗಭೂಮಿ ಶೈಲಿಯಲ್ಲೇ ನಾಟಕ ಮಾಡಲಾಗುತ್ತಿತ್ತು.

ಶೈಲೀಕರಣದ ಪರಿಣಾಮ ಅಷ್ಟು ಗಾಢವಾಗಿತ್ತು. 20 ವರ್ಷಗಳಿಂದ ಈಚೆಗೆ ವೃತ್ತಿ ನಾಟಕ ಕಂಪೆನಿಯಲ್ಲಿ ಹೊಸ ನಾಟಕಗಳು ಬಂದಿಲ್ಲ. ಯಾವ ಸಮಕಾಲೀನ ವಸ್ತುವನ್ನೂ ಈ ರಂಗಭೂಮಿ ತೆಗೆದುಕೊಳ್ಳಲಿಲ್ಲ. 1880ರಿಂದ ಸ್ವಾತಂತ್ರ್ಯ ಹೋರಾಟಕ್ಕೆ ಸ್ಪಂದಿಸಿದ್ದು, ಕರ್ನಾಟಕ ಏಕೀಕರಣಕ್ಕೆ ಶ್ರಮಿಸಿದ್ದು, ರಾಮಾಯಣ, ಮಹಾಭಾರತ ಕಥೆಗಳನ್ನು ಜನಸಾಮಾನ್ಯರಿಗೆ ತೆಗೆದುಕೊಂಡು ಹೋಗಿದ್ದು, ರಾಷ್ಟ್ರೀಯ ಸಂಗೀತವನ್ನು ರಂಗಸಂಗೀತ ರೂಪದಲ್ಲಿ ತಲುಪಿಸಿದ್ದು, ಈ ಎಲ್ಲಾ ಕೊಡುಗೆ ವೃತ್ತಿರಂಗಭೂಮಿಯದ್ದು.

1990ರವರೆಗೆ ವೃತ್ತಿರಂಗಭೂಮಿಗೆ ಸರ್ಕಾರದ ನೆರವು ಇರಲಿಲ್ಲ. ಚಿಂದೋಡಿ ಲೀಲಾ ಅವರೇ ಅಧ್ಯಕ್ಷರಾದಾಗ ವೃತ್ತಿರಂಗಭೂಮಿಗೆ ಕಾಯಕಲ್ಪ ಕಲ್ಪಿಸಲು ಹೊಸ ಯೋಜನೆ ರೂಪಿಸಿದರು. ಅಲ್ಲಿಯ ತನಕವೂ ಜನರ ಹಣದಿಂದಲೇ ವೃತ್ತಿರಂಗಭೂಮಿ ನಡೆದಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸರ್ಕಾರ ನೀಡಿದ ₹300 ಕೋಟಿ ಬಜೆಟ್‌ನಲ್ಲಿ ಕೇವಲ ₹2 ಕೋಟಿ ಕಾಯಕಲ್ಪ ಯೋಜನೆಗೆ ಹೋಗುತ್ತಿದೆ.

ಈಗ 20ರಿಂದ 25 ವರ್ಷಗಳಿಂದ ಹವ್ಯಾಸಿ ರಂಗಭೂಮಿ ಒಂದು ಕಡೆ ಇದ್ದರೆ, ವೃತ್ತಿರಂಗಭೂಮಿ ಇನ್ನೊಂದು ಕಡೆ ಇತ್ತು. ಹಳ್ಳಿಗಾಡಿನಲ್ಲಿ ನಾಟಕ ಮಾಡುವವರು ಹವ್ಯಾಸಿಗಳು. ಆದರೆ, ಅವರಿಗೆ ನಾಟಕ ಕಲಿಸುವವರು ವೃತ್ತಿ ರಂಗಭೂಮಿಯವರು. ಅವರಿಗೆ ಅದು ವೃತ್ತಿ. ನಟಿಯರಿಗೂ ಅದು ವೃತ್ತಿಯೇ. ಹವ್ಯಾಸಿ, ವೃತ್ತಿ ಕಲಾವಿದರ ಸಮ್ಮಿಶ್ರಣ ಎಂದು ಹೇಳಬಹುದು. ಸುಭದ್ರಮ್ಮ ಮನ್ಸೂರ್‌ ಎಂಬ ದೊಡ್ಡ ನಟಿ 15 ವರ್ಷ ಮಾತ್ರ ವೃತ್ತಿ ನಾಟಕ ಕಂಪೆನಿಯಲ್ಲಿ ಕೆಲಸ ಮಾಡಿದ್ದು, ಉಳಿದ  55 ವರ್ಷ ಹಳ್ಳಿ ನಾಟಕಗಳಲ್ಲೇ ನಟಿಸಿದ್ದಾರೆ. ಅವರನ್ನು ಏನು ಅಂತ ಕರೆಯೋಣ? ಅವರ ವೃತ್ತಿ, ನಾಟಕ ಎಂದೇ ಕರೆಯಬೇಕು.

ಈಗ ಹೊಸ ನಾಟಕಗಳು ಖಂಡಿತಾ ಇಲ್ಲ. ಸಮಕಾಲೀನ ಜೀವನಕ್ಕೆ ಸ್ಪಂದಿಸುವ ನಾಟಕಗಳು ಯಾವುವೂ ಇಲ್ಲ. ವೃತ್ತಿ ನಾಟಕ ಕಂಪೆನಿಗಳ ದೊಡ್ಡ ಕೊಡುಗೆ ಇದೆ ಎಂದು ಹೇಳಿ 1990ರಿಂದ ಕಾಯಕಲ್ಪ ಯೋಜನೆ ಆರಂಭಿಸಲಾಯಿತು. ವರ್ಷಕ್ಕೆ ₹5 ಲಕ್ಷದಿಂದ 15 ಲಕ್ಷ ಕಂಪೆನಿಗಳಿಗೆ ಹಿರಿತನದ ಆಧಾರದ ಮೇಲೆ ಅನುದಾನ ನೀಡಲಾಗುತ್ತಿದೆ.

ಈಗ ರಾಜ್ಯದ 25ರಿಂದ 27 ಕಂಪೆನಿಗಳಿಗಷ್ಟೇ ಈ ಅನುದಾನ ಸಿಗುತ್ತಿದೆ. ಅದರಲ್ಲಿ ಕಾಯಕಲ್ಪ ಯೋಜನೆ ನಿಲ್ಲಿಸಿಬಿಟ್ಟರೆ 5ರಿಂದ 6 ಕಂಪೆನಿಗಳಷ್ಟೇ ಉಳಿಯಲು ಸಾಧ್ಯ. ಉಳಿದ ಕಂಪೆನಿಗಳಿಗೆ ಸರ್ಕಾರವೇ ಆಧಾರ.

ರೆಪರ್ಟರಿಗಳು ಬಂದಿವೆ. ಅರೆವೃತ್ತಿ ನಾಟಕ ಕಂಪೆನಿಗಳೂ ಬಂದಿವೆ. ಕಿನ್ನರ ಮೇಳ, ಶಿವಸಂಚಾರ, ನೀನಾಸಂ, ರಂಗಾಯಣಗಳು ಬಂದವು. ಅಭಿಯನ ತರಂಗ, ಜಮುರಾ, ಸಮಸ್ತರು ಇದ್ದಾರೆ. ಡ್ರಾಮಾ ಡಿಪ್ಲೊಮಾ ಮಾಡಿಕೊಂಡ ನೂರಾರು ಕಲಾವಿದರು ಇದ್ದಾರೆ. ಇವರೆಲ್ಲರೂ ನಾಟಕವನ್ನೇ ವೃತ್ತಿ ಮಾಡಿಕೊಂಡಿದ್ದಾರೆ. ಇವರೆಲ್ಲರಿಗೆ ರಂಗಭೂಮಿ ವೃತ್ತಿಯೇ. ವೃತ್ತಿರಂಗಭೂಮಿ ಆಯಾಮ ವಿಸ್ತರಿಸಿಕೊಂಡಿದೆ. ನೀನಾಸಂ ಅದೂ ವೃತ್ತಿರಂಗಭೂಮಿ. 2ರಿಂದ 3 ತಿಂಗಳು ನಾಟಕ ಸಿದ್ಧಪಡಿಸಿಕೊಳ್ಳುತ್ತಾರೆ. ವರ್ಷದಲ್ಲಿ 6 ತಿಂಗಳು ತಿರುಗಾಟದಲ್ಲೇ ಇರುತ್ತಾರೆ.

ವೃತ್ತಿ ನಾಟಕ ಕಂಪೆನಿಗಳು. ಒಟ್ಟಾರೆ ವೃತ್ತಿರಂಗಭೂಮಿಯ ಒಂದು ಭಾಗ. ಈಗ 30ರಿಂದ 40 ವರ್ಷಗಳ ಹಿಂದೆ ಹೀಗಿರಲಿಲ್ಲ. ಈಗ ಒಟ್ಟು ಕನ್ನಡ ರಂಗಭೂಮಿಯಲ್ಲಿ ವೃತ್ತಿ ಕಂಪೆನಿ ನಾಟಕದ ಚಟುವಟಿಕೆ ಶೇ 20ರಷ್ಟು ಇರಬಹುದು.  

ಕೆಲವರು ಸುಮ್ಮನೆ ವೈಭವೀಕರಣ ಮಾಡುತ್ತಾರೆ. ನಾವು ಏಕೆ ಈ ಬಗ್ಗೆ ಗಮನ ಹರಿಸಬೇಕು ಎಂದರೆ ಇದು ತೀರಾ ಕಡೆಗಣಿಸಲಾಗಿದೆ. ಇಲ್ಲಿ ಪ್ರತಿಭಾವಂತ ನಟರಿದ್ದಾರೆ.

ದಾಖಲೀಕರಣ ವಿಮರ್ಶೆಯಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿದ್ದಾರೆ ಎಂಬ ಕಾರಣಕ್ಕೆ. ಆದರೆ, ದ್ವಂದ್ವಾರ್ಥದ ಸಂಭಾಷಣೆ, ಅಪ್ರಸ್ತುತ ನಾಟಕ ಆಡುತ್ತಾರೆ. ಶೀಲ, ಅಶ್ಲೀಲ ಎಂಬ ಗುಂಗಿನಲ್ಲೇ ಇದ್ದಾರೆ. ಇವು ಯಾವ ಕಾಲಕ್ಕೆ ಪ್ರಸ್ತುತ?

ಈಗ ಕಾಯಕಲ್ಪ ಯೋಜನೆ ನೀಡಿದರೂ ಅವರು ಸಮಕಾಲೀನ ಸಮಸ್ಯೆಗಳಿಗೆ ಸ್ಪಂದಿಸುವಂತಹ ಯಾವುದೇ ನಾಟಕ ಬರೆಯಲಿಲ್ಲ. ರೈತನ ಸಾವಿನ ಬಗ್ಗೆ, ಮರ್ಯಾದೆಗೇಡು ಹತ್ಯೆಗಳ ಕುರಿತು ಒಂದೇ ಒಂದು ನಾಟಕ ರಚನೆಯಾಗಲಿಲ್ಲ. ಸುಧಾರಣೆ ಎಂದರೆ ಸಿನಿಮಾ ಶೈಲಿಯ ನೃತ್ಯ, ದ್ವಂದ್ವಾರ್ಥದ ಸಂಭಾಷಣೆ ಸ್ವಲ್ಪ ಕಡಿಮೆ ಮಾಡಿರಬಹುದು ಅಷ್ಟೇ. ಈಗಲೂ ಹಳೆಯ ನಾಟಕಗಳನ್ನೇ ಆಡುತ್ತಿದ್ದಾರೆ. ರೆಪರ್ಟರಿ ಹುಡುಗರು ರಂಗದ ಮೇಲೆ ಬಂದರೆ ಪಾದರಸದಂತಹ ಅಭಿನಯ ನೀಡುತ್ತಾರೆ.

ಜನಪದ ಕಳೆದುಹೋಗಿದೆ; ನಟನೆ ಎಲ್ಲಿದೆ ಎನ್ನುವವರು ಈ ರಂಗ ರೆಪರ್ಟರಿಗಳಿಂದ ಬರುವ ನಟರು ಪ್ರದರ್ಶಿಸುವ ಅಭಿನಯಕ್ಕೆ ಏನು ಹೇಳುತ್ತಾರೆ? ಒಟ್ಟಾರೆ ವೃತ್ತಿರಂಗಭೂಮಿ ಆಯಾಮ ವಿಸ್ತರಿಸಿಕೊಂಡಿದೆ. ಮೊದಲು ವಾಚಿಕ ಅಭಿನಯ ಪ್ರಧಾನವಾಗಿತ್ತು. ಈಗ ಇಡೀ ದೇಹಭಾಷೆಯನ್ನೇ ಬಳಸಲಾಗುತ್ತಿದೆ.

‘₹ 40 ಲಕ್ಷ ಕಳೆದುಕೊಂಡೆ’
ಹವ್ಯಾಸಿ ರಂಗಭೂಮಿಗೆ ರಂಗಾಯಣ, ಶಿವಸಂಚಾರ, ನೀನಾಸಂ ಸಂಸ್ಥೆಗಳಿರುವಂತೆ  ವೃತ್ತಿಪರ ರಂಗಾಯಣ ಬೇಕು. ಅದು ಕರ್ನಾಟಕದ ಮಧ್ಯಭಾಗದಲ್ಲಿರುವ ದಾವಣಗೆರೆಯಲ್ಲೇ ಆರಂಭವಾಗಬೇಕು ಎಂಬ ಅಭಿಪ್ರಾಯ ದಾವಣಗೆರೆ ಕೆಬಿಆರ್‌ ಡ್ರಾಮಾ ಕಂಪೆನಿಯ ಮಾಲೀಕ ಚಿಂದೋಡಿ ಚಂದ್ರಧರ್ ಅವರದ್ದು.

ವೃತ್ತಿ ನಾಟಕ ಕಂಪೆನಿಗೆ ಸರ್ಕಾರ ನೇರವಾಗಿ ಅನುದಾನ ನೀಡುವುದಕ್ಕಿಂತ ಹೆಚ್ಚಾಗಿ ಅಪರೋಕ್ಷವಾಗಿ ಹೇಗೆ ಸಹಾಯ ಮಾಡಬಹುದು ಎಂಬುದಕ್ಕೆ ಹಲವು ಉದಾಹರಣೆಗಳನ್ನು ಅವರು ನೀಡುತ್ತಾರೆ.

ಎಲ್ಲಾ ಕಂಪೆನಿಗಳಿಗೆ ರಂಗ ಪರಿಕರಗಳನ್ನು ಸರ್ಕಾರವೇ ನೀಡಬೇಕು. ರೈತರಿಗೆ ಹೇಗೆ ರಿಯಾಯ್ತಿ ದರದಲ್ಲಿ ವಿದ್ಯುತ್‌ ನೀಡಲಾಗುತ್ತದೆ, ಅದೇ ರೀತಿ ಕಂಪೆನಿಗಳಿಗೆ ನೀಡಬೇಕು. ಒಂದು ಊರಿನಲ್ಲಿ ನಾಟಕ ಆಡಬೇಕಾದರೆ ಎಂಟು ಬಗೆಯ ಪರವಾನಗಿ ಪಡೆದುಕೊಳ್ಳಬೇಕು. ಅವೆಲ್ಲವೂ ಏಕಗವಾಕ್ಷಿಯಲ್ಲಿ ಸಿಗಬೇಕು. ಪರವಾನಗಿ ನೀಡುವುದು ಒಂದು ತಿಂಗಳಾದರೆ 30 ಜನರನ್ನು ತಿಂಗಳ ಪೂರ್ತಿ ಸಾಕುವುದು ಕಂಪೆನಿ ಮಾಲೀಕನಿಗೆ ಕಷ್ಟವಾಗುತ್ತದೆ. ಹಾಗಾಗಿ 8ರಿಂದ 10 ದಿನಗಳಲ್ಲಿ ಪರವಾನಗಿ ನೀಡಬೇಕು.

ಪೊಲೀಸ್, ಲೋಕೋಪಯೋಗಿ ಇವೆರಡೇ ಇಲಾಖೆಗಳ ಅನುಮತಿ ಸಾಕು. ಹಾಕಿರುವ ಟೆಂಟ್‌ ಸುರಕ್ಷತೆ ಪರಿಶೀಲಿಸಲು ಲೋಕೋಪಯೋಗಿ ಇಲಾಖೆ ಎಂಜಿನಿಯರ್, ಕಾನೂನು ಸುವ್ಯವಸ್ಥೆ ಗಮನಿಸಲು ಪೊಲೀಸ್ ಇಲಾಖೆ ಒಪ್ಪಿಗೆ ನೀಡಬೇಕು.

‘ಅಮ್ಮಾಜಿ (ಚಿಂದೋಡಿ ಲೀಲಾ) ಅವರ ನಂತರ 8 ವರ್ಷಗಳಿಂದ ಕಂಪೆನಿ ನಡೆಸುತ್ತಿದ್ದೇನೆ. ಇಷ್ಟು ವರ್ಷಗಳಲ್ಲಿ ₹40 ಲಕ್ಷಕ್ಕಿಂತ ಹೆಚ್ಚಿನ ಹಣ ಕಳೆದುಕೊಂಡಿದ್ದೇನೆ. ಏಕೆಂದರೆ ಅವರು ಕಟ್ಟಿದ ಕಂಪೆನಿ, ಅವರು 73 ವರ್ಷ ಕಾಲ ದುಡಿದು ಗಳಿಸಿ ನನಗೆ ಕೊಟ್ಟು ಹೋಗಿದ್ದು; ಅದನ್ನೇ ತೆಗೆದು ಕಂಪೆನಿಗೆ ಹಾಕುತ್ತಿದ್ದೇನೆ. ಅವರು ಕಟ್ಟಿದ ಕೆಬಿಆರ್‌ ಡ್ರಾಮಾ ಕಂಪೆನಿ ಇಲ್ಲಿಯವರೆಗೆ ನಡೆದುಬಂದಿದೆ. ಇತರೆ ಕಂಪೆನಿಗೆ ಕೊಟ್ಟಷ್ಟು ಅನುದಾನವನ್ನು ಸರ್ಕಾರ ಅವರೇ ಕಟ್ಟಿದ ಕಂಪೆನಿಗೆ ನೀಡುತ್ತಿಲ್ಲ.

ಇದು ಯಕ್ಷಪ್ರಶ್ನೆಯಾಗಿದೆ. ಅನುದಾನ ಕೊಡುವ ‘ಕಾಯಕಲ್ಪ’ ಯೋಜನೆ ಅವರು ಅಧ್ಯಕ್ಷೆಯಾಗಿದ್ದಾಗ ಜಾರಿಗೆ ತಂದಿದ್ದು, ಉಳಿದ ಕಂಪೆನಿಗಳಿಗೆ ವಾರ್ಷಿಕವಾಗಿ ₹8 ಲಕ್ಷದಿಂದ ₹10 ಲಕ್ಷ ಅನುದಾನ ಸಿಗುತ್ತಿರುವಾಗ ನಮ್ಮ ಕಂಪೆನಿಗೆ ಅಲ್ಪ ಅನುದಾನ ಏಕೆ?’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಚಿಂದೋಡಿ ಚಂದ್ರಧರ್.

‘ತಾಲ್ಲೂಕಿಗೊಂದು ಸರ್ಕಾರಿ ಸಾಮ್ಯದಲ್ಲಿರುವ, ಸಾರ್ವಜನಿಕರಿಗೆ ಅನುಕೂಲವಾಗುವ  200X100 ಅಡಿ ಸ್ಥಳಾವಕಾಶವನ್ನು ರಂಗಭೂಮಿಗಾಗಿ ಮೀಸಲಿಡಬೇಕು. ಈ ರೀತಿಯ ಜಾಗ ಇಲ್ಲದಿರುವುದರಿಂದ ಬಹಳಷ್ಟು ನಗರಗಳಲ್ಲಿ ನಾಟಕ ಆಡಲು ನಮಗೆ ಸಾಧ್ಯವಾಗಲಿಲ್ಲ’ ಎನ್ನುತ್ತಾರೆ ಅವರು. ರಂಗಭೂಮಿ ಕಲಾವಿದರಲ್ಲಿ ಚಂದ್ರಧರ್ ಮಾಡಿಕೊಳ್ಳುವ ಬಿನ್ನಹ ಹೀಗಿದೆ.

‘ನಿಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಿ, ಅವರನ್ನು ಪದವೀಧರರನ್ನಾಗಿ ಮಾಡಿ, ಕೆಲಸ ಸಿಗುವವರೆಗೂ ರಂಗಭೂಮಿಯಲ್ಲಿ ದುಡಿಯಲು ಹೇಳಿ. ನೀವು ಮಾಡಿದಂತಹ ವೃತ್ತಿಯನ್ನೇ ಮಾಡಲು ಹೇಳಿ. ಗಂಡಿರಲಿ, ಹೆಣ್ಣಿರಲಿ ಅಲ್ಪಕಾಲವಾದರೂ ಮುಖಕ್ಕೆ ಬಣ್ಣ ಬಳಿದುಕೊಳ್ಳಲಿ. ಇದರಿಂದ ರಂಗಭೂಮಿ ಬಗ್ಗೆ ಗೌರವ ಹೆಚ್ಚುತ್ತದೆ. ಸರ್ಕಾರಿ ಸಂಬಳಕ್ಕಿಂತ ಹೆಚ್ಚಿನ ಹಣ ಸಿಗುತ್ತದೆ. ಊಟದ ವ್ಯವಸ್ಥೆ ಆಗುತ್ತದೆ. ಮಾನಸಿಕವಾಗಿ ಧೈರ್ಯ ಬರುತ್ತದೆ. ಸಾರ್ವಜನಿಕರ ಸಂಪರ್ಕ ಸಿಗುತ್ತದೆ...’

‘ರೆಪರ್ಟರಿಯಲ್ಲಿ ಕಲಿತವರು, ವೃತ್ತಿ ನಾಟಕ ಕಂಪೆನಿಗೂ ಬಂದಿದ್ದಾರೆ. ಆದರೆ, ಅವರ ಧ್ಯಾನವೆಲ್ಲ ಚಿತ್ರರಂಗದಲ್ಲಿ. ಅವರಿಗೆ ಹವ್ಯಾಸಿ, ಕಂಪೆನಿ ಎರಡರ ಅನುಭವ ಬೇಕು. ಆದರೆ, ಕಂಪೆನಿಯಲ್ಲೇ ನೆಲೆ ನಿಲ್ಲಬೇಕು ಎಂಬುದಿಲ್ಲ. ಚಿಂದೋಡಿ ಲೀಲಾ ಅವರು ಕಂಪೆನಿಯಲ್ಲಿದ್ದೂ ಸಿನಿಮಾ ರಂಗದಲ್ಲಿ ಕೆಲಸ ಮಾಡಿದರು. ಇದೇ ಗಟ್ಟಿ ಎಂದು ಇಲ್ಲೇ ನೆಲೆ ನಿಂತರು’ ಎಂದು ಸ್ಮರಿಸಿಕೊಳ್ಳುತ್ತಾರೆ ಚಂದ್ರಧರ್.

ವೃತ್ತಿ ರಂಗಭೂಮಿಗೆ ಹೊಸ ನಟ, ನಟಿಯರು ಬರುತ್ತಿಲ್ಲ. ಕಲಾವಿದರ ಮಗ ನಟನಾದರಂತೂ ಆತ ಇದರ ಉಸಾಬರಿಗೆ ಬರುವುದಿಲ್ಲ. ನಟಿಯರಿಗೆ ಸ್ವಲ್ಪ ಬೇಡಿಕೆ ಇದೆ. ಹಳ್ಳಿಗಳಲ್ಲಿ ಹಬ್ಬ–ಹರಿದಿನಗಳಲ್ಲಿ ಆಡುವ ನಾಟಕಗಳಿಗೆ ನಟಿಯರ ಬೇಡಿಕೆ ಇದೆ. ದಾವಣಗೆರೆ ಜಿಲ್ಲೆಯಲ್ಲಿ 35ರಿಂದ 40 ಕಲಾವಿದೆಯರಿದ್ದಾರೆ. ಪ್ರತಿ ನಾಟಕಕ್ಕೆ ಅವರಿಗೆ ಸರಾಸರಿ ₹10 ಸಾವಿರ ಸಿಗುತ್ತದೆ. ಇದೇ ಇವರ ಜೀವನಾಧಾರ.

ಚಿಕಿತ್ಸೆಗೂ ಹಣ ಇರಲಿಲ್ಲ
ಅರ್ಧ ಶತಮಾನ ಕಾಲ ಅರ್ಧ ಕರ್ನಾಟಕಕ್ಕೂ ಹೆಚ್ಚಿನ ಪ್ರದೇಶದಲ್ಲಿ ನಟ, ನಾಟಕಕಾರ, ಕಂಪೆನಿ ಮಾಲೀಕನಾಗಿ ಬೆಳೆದವರರು ಓಬಳೇಶ್. ಡಾ.ರಾಜಕುಮಾರ್ ದಾವಣಗೆರೆಯಲ್ಲಿ ಕ್ಯಾಂಪ್ ಮಾಡಿದಾಗ ‘ಎಚ್ಚಮ ನಾಯಕ’ದಲ್ಲಿ ಅಚಾನಕ್ಕಾಗಿ ‘ಚಾಂದಖಾನ್’ ಪಾತ್ರ ಪೋಷಣೆ ಮಾಡುವ ಅವಕಾಶ ಸಿಕ್ಕಿತು ಇವರಿಗೆ. ಅವರ ಅದ್ಭುತ ನಟನೆ ಅವರ ಜೀವನದ ದಿಕ್ಕನ್ನೇ ಬದಲಿಸಿತು ಎಂದು ನೆನೆಯುತ್ತಾರೆ ಹಿರಿಯ ರಂಗಾಸಕ್ತ ಐರಣಿ ಬಸವರಾಜ್.

ಕಲಬುರ್ಗಿಯ ಶರಣ ಬಸವೇಶ್ವರ ದಾಸೋಹಕ್ಕೆಂದು ಆ ಕಾಲದಲ್ಲಿ ಓಬಳೇಶ್ ಅವರ ಓಂಕಾರೇಶ್ವರ ನಾಟ್ಯ ಸಂಘ ₹ 6.50 ಲಕ್ಷ ಸಂಗ್ರಹಿಸಿ ದೇವಾಲಯಕ್ಕೆ ಅರ್ಪಿಸಿತ್ತು.ಅಂದಿನ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಹಾಗೂ ಇತರ ಮುಖಂಡರು ವಿಶೇಷ ಕಾರ್ಯಕ್ರಮ ಏರ್ಪಡಿಸಿ ಮೂರು ತೊಲದ ಚಿನ್ನದ ಪದಕ ನೀಡಿ ಓಬಳೇಶ್ ಅವರನ್ನು ಗೌರವಿಸಿದ್ದರು. ಇಂತಹ ರಂಗ ದಾಖಲೆ ಹೊಂದಿದ್ದ ನಟ 1985ರಲ್ಲಿ ಅನಾರೋಗ್ಯದಿಂದ ದಾವಣಗೆರೆ ಸರ್ಕಾರಿ ಆಸ್ಪತ್ರೆಗೆ ಸೇರಿದಾಗ ಚಿಕಿತ್ಸೆಗೂ ಹಣ ಇಲ್ಲದೆ ಸಾವು ಕಂಡರು!

ಇರುವುದೇ ಎರಡು!
ದಾವಣಗೆರೆಯಲ್ಲಿ ಈಗ ಇರುವುದು ಎರಡು ವೃತ್ತಿ ನಾಟಕ ಕಂಪೆನಿಗಳು. ಶ್ರೀಜಯಲಕ್ಷ್ಮಿ ನಾಟಕ ಸಂಘ ಹಾಗೂ ಕೆ.ಬಿ.ಆರ್‌ ಡ್ರಾಮಾ ಕಂಪೆನಿ.

***
ಕಂಚಿಕೆರೆ ಶಿವಣ್ಣ

ನಾಟಕ ಕಂಪೆನಿ ಕಟ್ಟಿ, ಆಸ್ತಿ ಕಳೆದುಕೊಂಡ ಕಂಚಿಕೆರೆ ಶಿವಣ್ಣ ವೃತ್ತಿರಂಗಭೂಮಿಯ ಅದ್ಭುತ ನಟ. ಹುಟ್ಟಿದ್ದು ಶ್ರೀಮಂತಿಕೆಯ ಮನೆಯಲ್ಲಿ, ಆದರೆ ಬೆಳೆದಿದ್ದು ಕಷ್ಟಗಳ ಜತೆ.

ಶಿವಣ್ಣ ಅವರ ತಾತ ಕಟ್ಟಿದ ಶ್ರೀಜಯಲಕ್ಷ್ಮಿ ನಾಟಕ ಸಂಘ ದಾವಣಗೆರೆಯ ಮೊದಲ ವೃತ್ತಿನಾಟಕ ಕಂಪೆನಿ. ತಾತನ ನಾಟಕ ಕಂಪೆನಿಯು ಬೆಂಕಿಗೆ ಆಹುತಿಯಾದಾಗ ಕಷ್ಟಗಳು ಆರಂಭವಾದವು. ಕಾಲೇಜು ವಿದ್ಯಾಭ್ಯಾಸ ಮೊಟಕುಗೊಳಿಸಿ ಬಸ್‌ ಏಜಂಟರಾಗಿ ಕೆಲ ಕಾಲ ದುಡಿದರು. ಅವರೊಳಗಿನ ಕಲಾವಿದನ ಕಣ್ಣ ಮುಂದೆ ಸದಾ ನಾಟಕದ ಪಾತ್ರಗಳೇ ಕುಣಿಯುತ್ತಿದ್ದವು. ಕೆಲಸ ಬಿಟ್ಟು ಸೀದಾ ರಂಗದ ಚೌಕಿಮನೆಗೆ ಬಂದು ನಿಂತು ಬಿಟ್ಟರು. ಅನೇಕ ಕಂಪೆನಿಗಳಲ್ಲಿ ಮುಖ್ಯಪಾತ್ರ ವಹಿಸಿದರು.

ಕಂಪೆನಿಯಲ್ಲೇ ಪರಿಚಯವಾದ ನಟಿ ಕಮಲಾ ಅವರನ್ನು ವಿವಾಹವಾದರು. ಕಷ್ಟ–ನಷ್ಟ ಉದ್ದಕ್ಕೂ ಅವರನ್ನು ಹಿಂಬಾಲಿಸಿಕೊಂಡೇ ಬಂತು. ತಾತ ಕಟ್ಟಿದ ಕಂಪೆನಿಯನ್ನು 1995ರಲ್ಲಿ ವಜ್ರಮಹೋತ್ಸವದ ಗಡಿ ದಾಟಿಸಿದರು. ಈಗ ಇವರ ಮಕ್ಕಳು ರಂಗದ ಬಂಡಿ ಎಳೆಯುತ್ತಿದ್ದಾರೆ. ಇಂತಹ ರಂಗಸಾಧಕನಿಗೆ ಸರ್ಕಾರದಿಂದ ಸಿಕ್ಕ ಗೌರವ ಮಾತ್ರ ಅತ್ಯಲ್ಪ. ಈಚೆಗಷ್ಟೇ ನಾಟಕ ಅಕಾಡೆಮಿ ಅವರ ಕುರಿತು ಪುಸ್ತಕ ತಂದು, ವಿಚಾರ ಸಂಕಿರಣ ಏರ್ಪಡಿಸಿ, ಸನ್ಮಾನಿಸಿದೆ.

***
ಚಿಂದೋಡಿ ಲೀಲಾ

ಅಭಿನಯವನ್ನೇ ವೃತ್ತಿಯಾಗಿ ಸ್ವೀಕರಿಸಿ ಅರ್ಧ ಶತಮಾನ ನಟಿಯಾಗಿ, ಕಂಪೆನಿ ಮಾಲೀಕರಾಗಿ ರಂಗಭೂಮಿ ಇತಿಹಾಸದಲ್ಲಿ ಶಾಶ್ವತವಾಗಿ ಉಳಿದವರು ಚಿಂದೋಡಿ ಲೀಲಾ.

ಕಲಾವಿದ ಚಿಂದೋಡಿ ವೀರಪ್ಪ ಅವರ ಎಂಟು ಮಕ್ಕಳ ಪೈಕಿ ಕೊನೆಯವರೇ  ಲೀಲಾ. ಇವರ ಅಭಿನಯದ ‘ಹಳ್ಳಿ ಹುಡುಗಿ’ ಆರು ಸಾವಿರ ಪ್ರದರ್ಶನ ಕಂಡಿದ್ದು ದಾಖಲೆ.

‘ಪೊಲೀಸನ ಮಗಳು’ ನಾಟಕ ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ಸತತ 1,200 ಪ್ರದರ್ಶನಗಳೊಂದಿಗೆ ವಿಶ್ವ ದಾಖಲೆ ಸ್ಥಾಪಿಸಿದೆ. 25ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ ಚಿಂದೋಡಿ ಲೀಲಾ ಅವರಿಗೆ ನಾಟಕ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಹಾಗೂ ಪ್ರದ್ಮಶ್ರೀ ಗೌರವ ಒಲಿದು ಬಂದಿದ್ದವು. ಇವರ ನಿಧನದ ನಂತರ ಮಗ ಚಿಂದೋಡಿ ಚಂದ್ರಧರ ಕಂಪೆನಿ ಮಾಲೀಕರಾದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT