ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ ಸಂಸತ್ತಿನಲ್ಲಿ ಎಚ್‌–1ಬಿ ವೀಸಾ ಕಾಯ್ದೆ ತಿದ್ದುಪಡಿಗೆ ಮಂಡನೆ

Last Updated 31 ಜನವರಿ 2017, 10:37 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಅಮೆರಿಕ ಸಂಸತ್ತಿನಲ್ಲಿ ಎಚ್‌–1ಬಿ ವೀಸಾ ಕಾಯ್ದೆಗೆ ತಿದ್ದುಪಡಿ ತರಲು ಮಸೂದೆ ಮಂಡಿಸಲಾಗಿದೆ. ಇದರಿಂದ ಭಾರತೀಯ ಐಟಿ ತಂತ್ರಜ್ಞರಿಗೆ ಮತ್ತು ವೃತ್ತಿಪರ ಕಾರ್ಮಿಕರಿಗೆ ಭಾರಿ ಹಿನ್ನಡೆಯಾಗಲಿದೆ. ಅಂತೆಯೆ ಅಮೆರಿಕದ ಈ ನಡೆಯಿಂದ ಭಾರತೀಯ ಷೇರು ಪೇಟೆಯು 4% ನಾಟಕೀಯ ಕುಸಿತ ಕಂಡಿದೆ.

ಮಸೂದೆಗೆ ಅನುಮೋದನೆ ದೊರೆತಲ್ಲಿ ಅಮೆರಿಕ ಕಂಪನಿಗಳಿಗೆ ವಿದೇಶದಿಂದ ಹೊರಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳುವ ನೌಕರರ ನೇಮಕಾತಿಗೆ ಹಿನ್ನಡೆಯಾಗಲಿದೆ. ಅಲ್ಲದೇ ಎಚ್‌–1ಬಿ ವೀಸಾ ಹೊಂದಿರುವವರ ವೇತನದ 1,30,00 ಅಮೆರಿಕನ್‌ ಡಾಲರ್‌ಗೆ ಹೆಚ್ಚಳ ಮಾಡಲು ಶಿಫಾರಸ್ಸು ಮಾಡಲಾಗಿದೆ.

’ಮಾರುಕಟ್ಟೆ ನೀತಿ ಅನ್ವಯ ಈ ನಿಯಮಗಳಿಗೆ ಬದ್ಧವಾಗಿರುವ ಕಂಪನಿಗಳಿಗೆ ಆದ್ಯತೆ ನೀಡಲಾಗುವುದು’ ಎಂದು ಕಾಯ್ದೆ ಮಂಡಿಸಿರುವ ಸಂಸತ್‌ ಸದಸ್ಯೆ ಝೋಇ ಲೊಫ್ಗ್ರೇನ್‌ ತಿಳಿಸಿದ್ದಾರೆ. ಇದರಿಂದ ಅಮೆರಿಕನ್ನರಿಗೆ ಉದ್ಯೋಗವಕಾಶ ಹೆಚ್ಚಲಿದೆ ಮತ್ತು ಹೊರಗುತ್ತಿಗೆಗೆ ಕಡಿವಾಣ ಬೀಳಲಿದೆ ಎಂದಿದ್ದಾರೆ.

2017 ರ ಪರಿಣಿತಿ ಮತ್ತು ಪಾರದರ್ಶಕ ಕಾಯ್ದೆ (ಹೈ ಸ್ಕಿಲ್ಡ್‌ ಇಂಟಿಗ್ರಿಟಿ ಆ್ಯಂಡ್‌ ಫೇರ್‌ನೆಸ್‌ ಆಕ್ಟ್‌) ಅಡಿ ನಡೆಸಿರುವ ಸಮೀಕ್ಷೆ ಆಧಾರಿಸಿ ಸಿಬ್ಬಂದಿಗಳ ಮಾಸಿಕ ವೇತನವನ್ನು ದ್ವಿಗುಣಗೊಳಿಸುವ ಕರಾರಿಗೆ ಬದ್ಧವಾಗಿರುವ ಕಂಪೆನಿಗಳಿಗೆ ವೀಸಾ ನೀಡಲು ಚಿಂತಿಸಲಾಗುತ್ತಿದೆ. ಸದ್ಯ ಅತಿ ಕಡಿಮೆ ವೇತನ ನೀಡುತ್ತಿರುವ ಕಂಪೆನಿಗಳ ಪರವಾನಿಗೆ ರದ್ದುಗೊಳಿಸಲಾಗುವುದು. ಪ್ರಸ್ತುತ 60 ಸಾವಿರ ಅಮೆರಿಕನ್‌ ಡಾಲರ್‌ ಮಾಸಿಕ ವೇತನ ನೀಡುತ್ತಿರುವ ಕಂಪೆನಿಗಳು ಕನಿಷ್ಠ 1,30,000 ಡಾಲರ್‌ಗೆ ಹೆಚ್ಚಿಸಲು ಕಾಯ್ದೆಗೆ ತಿದ್ದುಪಡಿ ತರಲು ಸಂಸತ್ತಿನಲ್ಲಿ ಚರ್ಚಿಸಲಾಗುವುದು.  1989 ರಲ್ಲಿ ರಚಿಸಿದ್ದ ಈ ಕಾಯ್ದೆಯಲ್ಲಿ ಈವರೆಗೂ ಯಾವುದೇ ಬದಲಾವಣೆ ಆಗಿರಲಿಲ್ಲ.

‘ಎಚ್‌–1ಬಿ ವೀಸಾದ ಪ್ರಮುಖ ಉದ್ದೇಶವಾದ ವಿಶ್ವದ ಶ್ರೇಷ್ಠ ಕೆಲಸಗಾರರನ್ನು ಅಮೆರಿಕ ಕಂಪೆನಿಗಳಿಗೆ ನೇಮಿಸಿಕೊಳ್ಳುವುದು ಮತ್ತು ದೇಶದಲ್ಲಿರುವ ಪ್ರತಿಭಾನ್ವಿತರಿಗೆ ಸೂಕ್ತ ಮಾರ್ಗದರ್ಶನ ಕೊಡಿಸಿ, ಉತ್ತಮ ಸಂಬಳದೊಂದಿಗೆ ಉದ್ಯೋಗವಕಾಶ ಹೆಚ್ಚಿಸುವ ಗುರಿ ಹೊಂದಿದ್ದೇವೆ’ ಎಂದು ಲೊಫ್ಗ್ರೆನ್‌ ಹೇಳಿದ್ದಾರೆ.

ವೀಸಾ ಪಡೆಯಲು ವಿದ್ಯಾರ್ಥಿಗಳಿಗೆ ಹಾಗೂ ತಾತ್ಕಾಲಿಕ ವೀಸಾದಾರರಿಗೆ ನಿಯಮಗಳನ್ನು ಸಡಿಲಿಸಲಾಗಿದೆ. ಫಲಾನುಭವಿಗಳ ಭತ್ಯೆಯಲ್ಲಿ ಕಡಿತಗೊಳ್ಳುವ ಹಣಕ್ಕೆ ಸಿಬ್ಬಂದಿ ಗಮನಕ್ಕೆ ತರುವುದನ್ನು ಈ ಕಾಯ್ದೆಯಲ್ಲಿ ಸೇರಿಸಲಾಗಿದೆ. ಇದರಿಂದ ತೆರಿಗೆ, ವೇತನ ಕಡಿತದ ಕಾರಣ ತಿಳಿಯಲು ನೆರವಾಗುತ್ತದೆ.

’ಕಾಯ್ದೆಗೆ ತಿದ್ದುಪಡಿ ತರುವುದರಿಂದ ಎಚ್‌–1ಬಿ ಮತ್ತು ಎಲ್‌–1 ವೀಸಾ ಯೋಜನೆಗಳಲ್ಲಿರುವ ಲೋಪದೋಷಗಳಿಗೆ ಕಡಿವಾಣ ಹಾಕಬಹುದಾಗಿದೆ. ಅಮೆರಿಕ ನೌಕಕರರಿಗೆ ಮತ್ತು ವೀಸಾ ಹೊಂದಿರುವವರಿಗೆ ಇದರಿಂದ ಅನುಕೂಲವಾಗಲಿದೆ’ ಎಂದು ಸಂಸತ್‌ ಪ್ರತಿನಿಧಿ ಶೆರೊಡ್‌ ಬ್ರೌನ್‌ ಹೇಳಿದ್ದಾರೆ. ಎಚ್‌–1ಬಿ ವೀಸಾಗೆ ಅರ್ಜಿ ಸಲ್ಲಿಸುವವರು ಕೆಲಸ ಲಭ್ಯವಿರುವ ಬಗ್ಗೆ ಮಾಹಿತಿ ಸಂಗ್ರಹಿಸಿ ಆ ಕೆಲಸಕ್ಕೆ ಸ್ಥಳೀಯರಿಗಿಂತ ಹೆಚ್ಚು ಅರ್ಹತೆ ಹೊಂದಿರಬೇಕು ಎಂದು ತಿದ್ದುಪಡಿಗೊಳಿಸಿರುವ ಕಾಯ್ದೆಯಲ್ಲಿ ಮಂಡಿಸಲಾಗಿದೆ.

ಅಧ್ಯಕ್ಷೀಯ ಚುನಾವಣೆಗೂ ಮುನ್ನ ಚುನಾವಣೆ ಭಾಷಣಗಳಲ್ಲಿ ಎಚ್‌–1ಬಿ ವೀಸಾ ಯೋಜನೆಗೆ ತಿದ್ದುಪಡಿ ಹಾಗೂ ಉದ್ಯೋಗವಕಾಶದಲ್ಲಿ ಅಮೆರಿಕನ್ನರಿಗೆ ಪ್ರಥಮ ಆದ್ಯತೆ ನೀಡಲಾಗುವುದು ಎಂದು ಹಾಲಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಘೋಷಿಸಿದ್ದರು.

ರಾಷ್ಟ್ರೀಯ ಕಾರ್ಮಿಕ ಇಲಾಖೆ ಮತ್ತು ಆಂತರಿಕ ಭದ್ರತಾ ವಿಭಾಗವು ವೀಸಾ ಅಕ್ರಮಗಳ ಮೇಲೆ ನಿಗಾ ಇರಿಸಲಿದೆ. ಕಾಯ್ದೆ ನಿಯಮಗಳನ್ನು ಉಲ್ಲಂಘಿಸುವ ಕಂಪೆನಿಗಳ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT