ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರ ಘೋಷಿಸಿದರೂ ಅನುದಾನ ನೀಡಿಲ್ಲ

ತೀರ್ಥಹಳ್ಳಿ: ತಾಲ್ಲೂಕು ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಬಿಜೆಪಿ ಸದಸ್ಯರ ಗದ್ದಲ
Last Updated 1 ಫೆಬ್ರುವರಿ 2017, 6:07 IST
ಅಕ್ಷರ ಗಾತ್ರ
ತೀರ್ಥಹಳ್ಳಿ: ತಾಲ್ಲೂಕನ್ನು ಬರ ಪೀಡಿತ ಪ್ರದೇಶವೆಂದು ಸರ್ಕಾರ ಘೋಷಿಸಿದ್ದರೂ ಕುಡಿಯುವ ನೀರಿನ ಕಾಮಗಾರಿಗೆ ಹಣ ಬಿಡುಗಡೆ ಮಾಡಿಲ್ಲ. ಸರ್ಕಾರ ತೇಪೆ ಹಾಕುವ ಕೆಲಸ ಮಾಡುತ್ತಿದೆ ಎಂದು ಮಂಗಳವಾರ ನಡೆದ ತಾಲ್ಲೂಕು ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಬಿಜೆಪಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
 
ಅಧ್ಯಕ್ಷೆ ನವಮಣಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬಿಜೆಪಿ ಸದಸ್ಯರಾದ ಸಾಲೇಕೊಪ್ಪ ರಾಮಚಂದ್ರ, ಬೇಗುವಳ್ಳಿ ಕವಿರಾಜ್‌, ಚಂದವಳ್ಳಿ ಸೋಮಶೇಖರ್‌, ಟಿ.ಮಂಜುನಾಥ್‌ ಬರದ ಮೇಲಿನ ಚರ್ಚೆ ವೇಳೆ ಸರ್ಕಾರದ ಕಾರ್ಯವೈಖರಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
‘ಬೇಸಿಗೆ ಸಮೀಪಿಸಿದಂತೆ ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಬವಣೆ ಹೆಚ್ಚುತ್ತಿದೆ. ಕುಡಿಯುವ ನೀರು ಪೂರೈಕೆಗೆ ಅನುದಾನ ಬಿಡುಗಡೆ ಮಾಡದೇ ಕೇವಲ ಬರ ಪೀಡಿತ ಪ್ರದೇಶವೆಂದು ಘೋಷಣೆ ಮಾಡಿ ಸರ್ಕಾರ ಕೈ ತೊಳೆದುಕೊಂಡಿದೆ. ಬರ ಪರಿಹಾರ ಕಾಮಗಾರಿಗೆ ಸುಮಾರು ₹ 5 ಕೋಟಿ ಪ್ರಸ್ತಾವ ಪಡೆದಿದ್ದರೂ ಹಣ ಬಿಡುಗಡೆ ಮಾಡದೇ ಇರುವುದನ್ನು ನೋಡಿದರೆ ಸರ್ಕಾರ ದಿವಾಳಿ ಆಗಿದೆಯೇ ಎಂಬ ಸಂದೇಹ ಮೂಡುತ್ತದೆ’ ಎಂದು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.
 
‘ಕುಡಿಯುವ ನೀರಿನ ಕಾಮಗಾರಿಗೆ ಸರ್ಕಾರ ಮಂಜೂರು ಮಾಡಿರುವ ₹ 40 ಲಕ್ಷ ಹಣ ಪ್ರತಿ ವರ್ಷ ಬಿಡುಗಡೆಯಾಗುತ್ತದೆ. ಹಿಂದಿನ ಕಾಮಗಾರಿ ಬಳಕೆಗೆ ಎಂದು ಈಗಿನ ಅನುದಾನದಡಿ ಕ್ರಿಯಾ ಯೋಜನೆ ಸಿದ್ಧಪಡಿಸಿರುವುದು ಸರಿಯಲ್ಲ. ಸದಸ್ಯರ ಶಿಫಾರಸ್ಸಿನಂತೆ ಕಾಮಗಾರಿಗೆ ಅನುದಾನ ಲಭಿಸಬೇಕು. ಹೆಚ್ಚಿನ ಅನುದಾನ ಬಿಡುಗಡೆಗೆ ನಿರ್ಣಯ ತೆಗೆದುಕೊಳ್ಳಬೇಕು’ ಎಂದು ಆಗ್ರಹಿಸಿದರು.
 
‘ಮಂಗನ ಕಾಯಿಲೆ ನಿಯಂತ್ರಣಕ್ಕೆ ಕ್ರಮ ತೆಗೆದುಕೊಳ್ಳಲಾಗಿದ್ದು, 19 ರೋಗಿಗಳ ಪೈಕಿ 12 ಮಂದಿಗೆ ರೋಗ ಇರುವುದು ದೃಢಪಟ್ಟಿದೆ. 4 ಮಂದಿ ರಕ್ತ ಪರೀಕ್ಷೆ ಫಲಿತಾಂಶ ಬರಬೇಕಿದೆ. ಮಾಳೂರು ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ರೋಗದ ತೀವ್ರತೆ ಹೆಚ್ಚಿದೆ’ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ. ಕಿರಣ್‌ ಸಭೆಗೆ ಮಾಹಿತಿ ನೀಡಿದರು.
 
‘ಮಂಗನ ಕಾಯಿಲೆ ರೋಗಿಗಳ ಮೇಲೆ ನಿಗಾ ಇಡಲಾಗಿದೆ. ಜೆ.ಸಿ ಆಸ್ಪತ್ರೆಗೆ ತುರ್ತಾಗಿ ಡಯಾಲಿಸಿಸ್‌ ಘಟಕ ನಿರ್ವಹಣೆಗೆ  ಹೆಚ್ಚಿನ ಸೌಲಭ್ಯದ ಅಗತ್ಯವಿದೆ. ಐಸಿಯು ಆರಂಭಕ್ಕೆ ತಾಲ್ಲೂಕು ಪಂಚಾಯ್ತಿಯಿಂದ ಅನುದಾನ ಮಂಜೂರು ಮಾಡಬೇಕು’ ಎಂದು ಜೆ.ಸಿ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಶಿವಪ್ರಕಾಶ್‌ ಸಭೆ ಗಮನಕ್ಕೆ ತಂದರು. ಆಸ್ಪತ್ರೆ ರಾಜ್ಯ ವಲಯಕ್ಕೆ ಸೇರಿದ ಕಾರಣ ಸರ್ಕಾರ ಹೆಚ್ಚು ಅನುದಾನ ಮಂಜೂರು ಮಾಡಬೇಕು ಎಂಬ ನಿರ್ಣಯವನ್ನು ಸಭೆಯಲ್ಲಿ ತೆಗೆದುಕೊಳ್ಳಲಾಯಿತು. 
 
‘ಕಳೆದ ಒಂದು ವರ್ಷದಿಂದ ಪಡಿತರ ಚೀಟಿ ಸಿಗುತ್ತಿಲ್ಲ. ಈಗ ಹೊಸ ಅರ್ಜಿ ಕೊಡಿ ಎಂದರೆ ಜನರ ಗತಿ ಏನಾಗಬೇಕು. ಬಡವರಿಗೆ ಅಕ್ಕಿ ಕೊಡಲಾಗದ ಸರ್ಕಾರ ಕಾರ್ಡ್‌ ನೀಡಲೂ ಮುಂದಾಗುತ್ತಿಲ್ಲ ಎಂದು ಸದಸ್ಯರಾದ ಗೀತಾ ಶೆಟ್ಟಿ, ಚಂದವಳ್ಳಿ ಸೋಮಶೇಖರ್‌ ದೂರಿದರು.
 
‘ಗ್ರಾಮ ಪಂಚಾಯ್ತಿ ಮೂಲಕ ಕಾರ್ಡ್‌ ವಿತರಣೆಗೆ ಕ್ರಮ ತೆಗೆದುಕೊಳ್ಳಲಾಗಿದ್ದು, ಶೀಘ್ರವೇ ಅನುಷ್ಠಾನಗೊಳ್ಳಲಿದೆ’ ಎಂದು ತಹಶೀಲ್ದಾರ್‌ ಧರ್ಮೋಜಿರಾವ್‌ ಉತ್ತರಿಸಿದರು. ಇದರಿಂದ ಸಿಟ್ಟಗೆದ್ದ ಸದಸ್ಯರು, ‘ಸಭೆಯ ದಿಕ್ಕು ತಪ್ಪಿಸಬೇಡಿ. ಮಾಹಿತಿ ಇಲ್ಲದೇ ಉತ್ತರ ನೀಡುವುದು ಸರಿಯಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು. 
 
‘ಕೆಲವು ಗ್ರಾಮ ಪಂಚಾಯ್ತಿ ಕಚೇರಿಗಳಲ್ಲಿ ತಾಂತ್ರಿಕ ಸಮಸ್ಯೆ ಇದೆ. ಅರ್ಜಿ ಸಲ್ಲಿಸಿದವರ ಮಾಹಿತಿ ಪಡೆದು ಮಂಜೂರು ಮಾಡುವ ಪ್ರಕ್ರಿಯೆ ನಡೆಸಬೇಕು’ ಎಂದು ಕಾಂಗ್ರೆಸ್‌ನ ವೀಣಾ ಗಿರೀಶ್‌ ಅಭಿಪ್ರಾಯಪಟ್ಟರು. 
 
ಅರ್ಹತೆ ಇಲ್ಲದೇ ಇರುವ ಅಂತ್ಯೋದಯ ಕಾರ್ಡ್‌ ರದ್ದುಪಡಿಸುವ ಪ್ರಸ್ತಾವಕ್ಕೆ ಕಾಂಗ್ರೆಸ್‌ನ ಕೆಳಕೆರೆ ದಿವಾಕರ್‌ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ‘ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ಅನ್ಯಾಯ ಆಗದಂತೆ ಎಚ್ಚರ ವಹಿಸಲಾಗುವುದು’ ಎಂದು ತಹಶೀಲ್ದಾರ್‌ ಹೇಳಿದರು. 
ಸಭೆಯಲ್ಲಿ ಉಪಾಧ್ಯಕ್ಷೆ ಯಶೋದಾ ಮಂಜುನಾಥ್‌, ಕಾರ್ಯನಿರ್ವಾಹಕ ಅಧಿಕಾರಿ ಧನರಾಜ್‌ ಹಾಜರಿದ್ದರು. 
 
**
ಜೆ.ಸಿ ಆಸ್ಪತ್ರೆಯಲ್ಲಿ ಅನೇಕ ಸೌಲಭ್ಯಗಳ ಕೊರತೆಯಿದೆ. ಸೌಲಭ್ಯ ಕಲ್ಪಿಸಲು ಜನಪ್ರತಿನಿಧಿಗಳು, ದಾನಿಗಳು ಸಹಕರಿಸಬೇಕು
– ಡಾ.ಶಿವಪ್ರಕಾಶ್
ಜೆ.ಸಿ ಆಸ್ಪತ್ರೆ  ವೈದ್ಯಾಧಿಕಾರಿ 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT