ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆದಾಯದ ಮೇಲಿನ ತೆರಿಗೆ ಇಳಿಕೆ

ಮಧ್ಯಮ ವರ್ಗದವರಿಗೆ ತುಸು ನೆಮ್ಮದಿ * ಹಿರಿಯ ನಾಗರಿಕರಿಗೆ ಕೊಡುಗೆ
Last Updated 1 ಫೆಬ್ರುವರಿ 2017, 19:44 IST
ಅಕ್ಷರ ಗಾತ್ರ

ನವದೆಹಲಿ: ಈ ಬಾರಿ ಬಜೆಟ್‌ನಲ್ಲಿ ವಾರ್ಷಿಕ ₹2.5 ಲಕ್ಷದಿಂದ ₹5 ಲಕ್ಷದವರೆಗಿನ  ಆದಾಯದ ಮೇಲಿನ  ತೆರಿಗೆಯನ್ನು ಶೇ 10ರಿಂದ ಶೇ 5ಕ್ಕೆ ಇಳಿಸಲಾಗಿದೆ.

ಆದರೆ ಆದಾಯ ತೆರಿಗೆ ಮಿತಿಯನ್ನು ₹ 3 ಲಕ್ಷಕ್ಕೆ ಏರಿಸಬಹುದೆಂಬ ನಿರೀಕ್ಷೆ ಹುಸಿಯಾಗಿದೆ.

ತೆರಿಗೆದಾರರರ  ತೆರಿಗೆ ಹೊರೆಯನ್ನು ಅರ್ಧದಷ್ಟು ತಪ್ಪಿಸಲಿರುವ ಈ ನಿರ್ಧಾರ ಮಧ್ಯಮ ವರ್ಗದವರಲ್ಲಿ ತುಸು ನೆಮ್ಮದಿ ಮೂಡಿಸಿದೆ. ₹5 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿದವರಿಗೆ  ₹7,725 ಉಳಿತಾಯವಾಗಲಿದ್ದು, ₹5 ಲಕ್ಷಕ್ಕಿಂತ ಮೇಲಿನ ಎಲ್ಲ  ಆದಾಯ ವರ್ಗದವರಿಗೆ ಗರಿಷ್ಠ ₹12,500 ಉಳಿತಾಯವಾಗಲಿದೆ.

ಹೆಚ್ಚುವರಿ ತೆರಿಗೆ: ವಾರ್ಷಿಕ ₹50 ಲಕ್ಷದಿಂದ ₹1 ಕೋಟಿ ವರೆಗಿನ  ಆದಾಯದ ಮೇಲೆ ಶೇ 10 ರಷ್ಟು  ಹೆಚ್ಚುವರಿ ತೆರಿಗೆ ವಿಧಿಸಲಾಗಿದೆ.
₹1 ಕೋಟಿಗಿಂತ ಹೆಚ್ಚು ಆದಾಯದ ಮೇಲೆ  ವಿಧಿಸಲಾಗುತ್ತಿದ್ದ  ಶೇ 15 ಹೆಚ್ಚುವರಿ ತೆರಿಗೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಯಥಾಸ್ಥಿತಿ ಕಾಪಾಡಿಕೊಳ್ಳಲಾಗಿದೆ. ತೆರಿಗೆ ದರ ವಿನಾಯ್ತಿಯಿಂದಾಗಿ ಸರ್ಕಾರದ ಬೊಕ್ಕಸದ ಮೇಲೆ ಪ್ರತಿವರ್ಷ ₹15,500 ಕೋಟಿ ಹೆಚ್ಚುವರಿ ಹೊರೆ ಬೀಳಲಿದೆ. ಆದರೆ, ಮತ್ತೊಂದೆಡೆ ಹೆಚ್ಚುವರಿ ತೆರಿಗೆ ಸಂಗ್ರಹದಿಂದ ₹2,700 ಕೋಟಿ ವರಮಾನ ಬರಲಿದೆ.

ಹಿರಿಯ ನಾಗರಿಕರಿಗೂ ಇದೆ ಕೊಡುಗೆ: 60 ವರ್ಷಕ್ಕೂ ಹೆಚ್ಚಿನ ಹಿರಿಯ ನಾಗರಿಕರ ₹3 ಲಕ್ಷದವರೆಗೆ ಆದಾಯಕ್ಕೆ ಯಾವುದೇ ತೆರಿಗೆ ವಿಧಿಸಿಲ್ಲ.  80 ವರ್ಷ ಮೇಲಿನ ಅತ್ಯಂತ ಹಿರಿಯ ನಾಗರಿಕರ ತೆರಿಗೆ ಆದಾಯ ಮಿತಿಯನ್ನು ₹5 ಲಕ್ಷಕ್ಕೆ ಏರಿಸಲಾಗಿದೆ.

ಎರಡೂ ವಿಭಾಗದಲ್ಲಿ ₹5 ಲಕ್ಷದಿಂದ ₹10 ಲಕ್ಷದವರೆಗಿನ ಆದಾಯಕ್ಕೆ ಶೇ 20ರಷ್ಟು ತೆರಿಗೆ ವಿಧಿಸಲಾಗಿದೆ. ₹10 ಲಕ್ಷಕ್ಕೂ ಹೆಚ್ಚಿನ ಆದಾಯದ ಮೇಲಿನ ತೆರಿಗೆ ದರವನ್ನು ಶೇ 30ಕ್ಕೆ ನಿಗದಿಗೊಳಿಸಲಾಗಿದೆ.

ತೆರಿಗೆ ವ್ಯಾಪ್ತಿ ವಿಸ್ತಾರ: ತೆರಿಗೆ ವ್ಯಾಪ್ತಿಗೆ ಹೆಚ್ಚಿನ ಜನರನ್ನು ತರಲು ಕೇವಲ ಒಂದು ಪುಟದ ಸರಳ ಆದಾಯ ತೆರಿಗೆ ಮಾಹಿತಿ ಸಲ್ಲಿಕೆ ಅರ್ಜಿಯನ್ನು (ಐಟಿ ರಿಟರ್ನ್ಸ್‌) ಮುದ್ರಿಸುವುದಾಗಿ ಸಚಿವ ಜೇಟ್ಲಿ ತಿಳಿಸಿದ್ದಾರೆ.

‘ವಾಣಿಜ್ಯ ಆದಾಯ ಹೊರತುಪಡಿಸಿ ₹5 ಲಕ್ಷದವರೆಗೆ  ವೈಯಕ್ತಿಕ ಆದಾಯ ಹೊಂದಿರುವ ವ್ಯಕ್ತಿಗಳು ಈ ಒಂದು ಪುಟದ ಅರ್ಜಿ ತುಂಬಬೇಕಾಗುತ್ತದೆ.  ಮೊದಲ ಬಾರಿಗೆ ತೆರಿಗೆ ಮಾಹಿತಿ ಸಲ್ಲಿಸುವ ತೆರಿಗೆದಾರರಿಗೆ ಕೆಲವು ವಿನಾಯ್ತಿಗಳನ್ನು ನೀಡಲಾಗುವುದು’ ಎಂದು ಅವರು ತಿಳಿಸಿದರು.

ಹೆಚ್ಚಿನ ಜನರು ತೆರಿಗೆ ವ್ಯಾಪ್ತಿಗೆ ತರಲು ಶೇ 5ರಷ್ಟು ಅತ್ಯಂತ ಕಡಿಮೆ ತೆರಿಗೆ ದರ ನಿಗದಿ ಮಾಡಲಾಗಿದೆ. ಜನರು ತೆರಿಗೆಯಿಂದ ತಪ್ಪಿಸಿಕೊಳ್ಳುವ ಬದಲು ಅತ್ಯಂತ ಕಡಿಮೆ ಪ್ರಮಾಣದ ತೆರಿಗೆ ಪಾವತಿಸುವ ಮೂಲಕ ದೇಶ ಕಟ್ಟುವ ಕಾರ್ಯದಲ್ಲಿ ಕೈಜೋಡಿಸಬೇಕು ಎಂದು ಜೇಟ್ಲಿ ಮನವಿ ಮಾಡಿದರು.

* ನೌಕರ ವರ್ಗದ ನಿರೀಕ್ಷೆಗಳನ್ನು ಈಡೇರಿಸುವಲ್ಲಿ ಬಜೆಟ್‌ ವಿಫಲವಾಗಿದೆ. ಪ್ರಾಮಾಣಿಕವಾಗಿ ತೆರಿಗೆ ಪಾವತಿಸು ವವರಿಗೆ ಇನ್ನೂ ಸ್ವಲ್ಪ ವಿನಾಯ್ತಿ ನೀಡಬಹುದಿತ್ತು.
–ಎಂ.ಕೆ.ನರಸಿಂಹ ಮೂರ್ತಿ, ಪ್ರಧಾನ ಕಾರ್ಯದರ್ಶಿ ಅಖಿಲ ಭಾರತ ಬ್ಯಾಂಕ್‌ ನೌಕರರ ಸಂಘಟನೆ (ಐಎನ್‌ಬಿಇಎಫ್‌) ಕರ್ನಾಟಕ ಘಟಕ

ಯಾರು ಹೆಚ್ಚು, ಯಾರು ಕಡಿಮೆ?
* ₹3.5 ಲಕ್ಷ ಆದಾಯ ಹೊಂದಿದ ವ್ಯಕ್ತಿ ₹5,150 ಬದಲು ₹2,575 ತೆರಿಗೆ ಪಾವತಿಸಿದರೆ ಸಾಕು

* ₹5ಲಕ್ಷದಿಂದ ₹50 ಲಕ್ಷ ಆದಾಯ ಹೊಂದಿದವರ ತೆರಿಗೆಯಲ್ಲಿ ₹12,500 ಕಡಿಮೆಯಾಗಲಿದೆ
* ₹50 ರಿಂದ ₹1 ಕೋಟಿ ಆದಾಯ ಹೊಂದಿದವರು ಶೇ 10ರಷ್ಟು ಹೆಚ್ಚುವರಿ ತೆರಿಗೆ ಪಾವತಿಸಬೇಕಾಗುತ್ತದೆ
* ₹60 ಲಕ್ಷ ಆದಾಯ ಹೊಂದಿದ ವ್ಯಕ್ತಿ ₹15,91,865ರ ತೆರಿಗೆ ಬದಲಾಗಿ ₹17,36,889 ತೆರಿಗೆ ಪಾವತಿಸಬೇಕಾಗುತ್ತದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT