ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುವೆಂಪು ಕನ್ನಡದ ಸಾಂಸ್ಕೃತಿಕ ಚೈತನ್ಯ

ಅಪರೂಪದ ಆಲೋಚನೆ ಬರಹದಲ್ಲಿ ಸಾಕಾರಗೊಳಿಸಿದ ಕವಿ: ಚಂದ್ರಮೌಳಿ
Last Updated 2 ಫೆಬ್ರುವರಿ 2017, 6:25 IST
ಅಕ್ಷರ ಗಾತ್ರ
ಸಾಗರ: ಕನ್ನಡ ಸಾಹಿತ್ಯದಲ್ಲಿ ಮೊದಲ ಬಾರಿಗೆ ಜೀವಕೇಂದ್ರಿತ ಆಲೋಚನಾ ಕ್ರಮವನ್ನು ಮಂಡಿಸಿದ ಕುವೆಂಪು ಕನ್ನಡದ ಸಾಂಸ್ಕೃತಿಕ ಚೈತನ್ಯ ಮತ್ತು ವಿವೇಕ ಪ್ರಜ್ಞೆಯಾಗಿದ್ದಾರೆ ಎಂದು ಇಂದಿರಾಗಾಂಧಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಸಹ ಪ್ರಾಧ್ಯಾಪಕ ಪ್ರೊ.ಬಿ.ಎಲ್.ರಾಜು ಹೇಳಿದರು.
 
ಇಲ್ಲಿನ ಪವಿತ್ರ ಸಭಾಂಗಣದಲ್ಲಿ ಬೆಂಗಳೂರಿನ ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಯೋಗದೊಂದಿಗೆ ಮಂಗಳವಾರ ಏರ್ಪಡಿಸಿದ್ದ ‘ಕುವೆಂಪು ಓದು’ ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು.
 
ಕನ್ನಡ ಸಾಹಿತ್ಯದ ಮೂಲಕ ಕನ್ನಡದ ಎದೆಯ ಧ್ವನಿಯನ್ನು ನುಡಿಸಿದವರು ಕುವೆಂಪು. ಸಾಮಾಜಿಕ ನ್ಯಾಯದ ಪ್ರಶ್ನೆಯನ್ನು ಕೇಂದ್ರವಾಗಿರಿಸಿಕೊಂಡು ಸಮಷ್ಠಿಯ ವಿವೇಕ ಮತ್ತು ಪ್ರಜ್ಞೆಯನ್ನು ಸಾಹಿತ್ಯದ ಪ್ರಧಾನ ಭೂಮಿಕೆಗೆ ತಂದಿರುವುದು ಕುವೆಂಪು ಅವರ ವಿಶೇಷತೆ ಎಂದು ವಿಶ್ಲೇಷಿಸಿದರು.
 
ನಮ್ಮ ಸಾಮಾಜಿಕ, ರಾಜಕೀಯ ಬದುಕಿನ ವಿನ್ಯಾಸಗಳನ್ನು ಕುವೆಂಪು ಅವರ ಚಿಂತನೆಗಳ ಮೂಲಕ ಪುನರ್‌ ರಚಿಸಿಕೊಳ್ಳುವ ತುರ್ತು ಇದೆ. ಇಲ್ಲದಿದ್ದರೆ ಕುವೆಂಪು ಅವರು ‘ಜ್ಞಾನಪೀಠ’ದ ಮ್ಯೂಸಿಯಂನ ಸ್ಮಾರಕವಾಗುವ ಅಪಾಯವಿದೆ ಎಂದು ಹೇಳಿದರು.
 
ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕ ಇಂದು ಕುವೆಂಪು ಅವರ ಹೆಸರನ್ನು ಮರೆಮಾಚುವಷ್ಟು ಜಡಗೊಂಡಿದೆ. ಕುವೆಂಪು ಅವರ ಅಲೋಚನೆಗಳನ್ನು ಪರಿಕರವಾಗಿ ಇಟ್ಟುಕೊಂಡೇ ಇಂತಹ ಜಡಗೊಂಡ ಸ್ಥಿತಿಯಿಂದ ಬಿಡುಗಡೆ ಪಡೆಯಬೇಕು ಎಂದು ಅಭಿಪ್ರಾಯಪಟ್ಟರು.
ಕನ್ನಡ ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷರಾದ ಕೆ.ವಿ.ನಾರಾಯಣ ಅವರು ಕರ್ನಾಟಕದ ಯುವ ತಲೆಮಾರಿನ ಆಲೋಚನೆ ಮತ್ತು ಕ್ರಿಯಾಶೀಲತೆಗೆ ಸಾಣೆ ಹಿಡಿಯುವ ರೂಪದಲ್ಲಿ ‘ಕುವೆಂಪು ಓದು’ ಎನ್ನುವ ಚಳವಳಿಯನ್ನೆ ಆರಂಭಿಸಿದ್ದಾರೆ. ಅದರ ಭಾಗವಾಗಿ ಇಂದಿನ ಕಾರ್ಯಾಗಾರ ನಡೆಯುತ್ತಿದೆ ಎಂದು ತಿಳಿಸಿದರು.
 
ಕಾರ್ಯಾಗಾರವನ್ನು ಉದ್ಘಾಟಿಸಿದ ನಿವೃತ್ತ ಪ್ರಾಂಶುಪಾಲ ವಿ.ಚಂದ್ರಮೌಳಿ ಮಾತನಾಡಿ, ಕುವೆಂಪು ಅವರ ಸಮಗ್ರ ದೃಷ್ಟಿಕೋನವನ್ನು ಯುವಜನರು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡರೆ ಸಂಕುಚಿತ ಮನೋಭಾವದಿಂದ ದೂರಾಗಬಹುದು ಎಂದರು.
 
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಎ.ಬಿ.ಜಗದೀಶ್‌ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಸ್‌.ವಿ.ಹಿತಕರ ಜೈನ್‌, ಕಾರ್ಯಾಗಾರದ ಸಂಚಾಲಕ ಗಿರೀಶ್‌ ಪಟೇಲ್‌ ಬಿ.ಎಸ್‌, ಉಪನ್ಯಾಸಕ ಎಸ್‌.ಎಂ.ಗಣಪತಿ ಇನ್ನಿತರರು ಹಾಜರಿದ್ದರು. ರೂಪಾದೇವಿ ನಿರೂಪಿಸಿದರು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT