ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂತಾ ಮತ್ತು ಸಿನಿಮಾ ಅಯಸ್ಕಾಂತ

Last Updated 2 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಚಿಕ್ಕಂದಿನಲ್ಲೇ ಸಿನಿಮಾ ಸಂಗೀತದ ಸೆಳೆತಕ್ಕೆ ಸಿಕ್ಕ ಕಾಂತಾ ಕನ್ನಲಿ, ನಿರ್ದೇಶಕನಾಗಬೇಕೆಂಬ ಕನಸು ಹೊತ್ತು 14 ವರ್ಷದ ಹಿಂದೆ ಗಾಂಧಿನಗರಕ್ಕೆ ಬಂದವರು. ನುರಿತ ನಿರ್ದೇಶಕರ ಜತೆ ಪಳಗಿ ನಿರ್ದೇಶನದ ತಂತ್ರಗಳನ್ನು ಕಲಿತು ‘ಜಲ್ಸಾ’ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಇಂದು (ಜ. 3) ತೆರೆ ಕಾಣುತ್ತಿರುವ ಆ ಚಿತ್ರ ಹಾಗೂ ತಮ್ಮ ಸಿನಿಪಯಣದ ಬಗ್ಗೆ ಅವರು ‘ಚಂದನವನ’ ಬಳಗದೊಂದಿಗೆ ಮಾತನಾಡಿದ್ದಾರೆ.

ಸಿನಿಮಾ ಸೆಳೆತಕ್ಕೆ ಒಳಗಾಗಿದ್ದು ಹೇಗೆ?
ಚಿಕ್ಕಂದಿನಿಂದಲೇ ನನಗೆ ಸಿನಿಮಾ ಸಂಗೀತವೆಂದರೆ ಪಂಚಪ್ರಾಣ. ಸಿನಿಮಾ ಸೆಳೆತಕ್ಕೆ ಸಿಗಲು ಇದೇ ಕಾರಣವಾಯಿತು. ಓದು ಮುಗಿದು, ಕಂಪೆನಿಯೊಂದರಲ್ಲಿ ದುಡಿಯುತ್ತಿದ್ದರೂ ಸಿನಿಮಾವೇ ಪ್ರಪಂಚವಾಗಿತ್ತು. ಕಡೆಗೂ ಕೆಲಸ ಬಿಟ್ಟು ಅದರತ್ತ ದೃಷ್ಟಿ ನೆಟ್ಟೆ; ನಿರ್ದೇಶಕನಾಗಬೇಕೆಂಬ ಕನಸು ಕಂಡೆ.  ನಿರ್ದೇಶಕ ಶರಣ್ ಕುಮಾರ್ ಕಬ್ಬೂರು ಅವರಿಗೆ ಸಹಾಯಕನಾಗಿ ಕೆಲಸ ಮಾಡುವ ಮೂಲಕ ನನ್ನ ಸಿನಿಮಾ ಜರ್ನಿ ಶುರುವಾಯಿತು. ಬಳಿಕ, ಎಂ.ಡಿ. ಶ್ರೀಧರ್, ಇಂದ್ರಜಿತ್ ಲಂಕೇಶ್ ಸೇರಿದಂತೆ ಕೆಲವರ ಜತೆ ಪಳಗಿದೆ. ಆದರೆ, ಪ್ರೊಡಕ್ಷನ್ ಸೇರಿದಂತೆ ಒಟ್ಟಾರೆ ಸಿನಿಮಾ ನಿರ್ವಹಣೆಯ ಪೂರ್ಣ ಪಾಠ ಕಲಿತಿದ್ದು ಶಶಾಂಕ್ ಸರ್ ಬಳಿ. ಅವರ ‘ಕೃಷ್ಣ ಲೀಲಾ’ ಮತ್ತು ‘ಬಚ್ಚನ್’ ಚಿತ್ರಗಳಿಗೆ ಸಹ ನಿರ್ದೇಶಕನಾಗಿ ಕೆಲಸ ಮಾಡಿದೆ. ಹೀಗೆ ಹದಿನಾಲ್ಕು ವರ್ಷದ ಪರಿಶ್ರಮದ ಫಲವಾಗಿ ‘ಜಲ್ಸಾ’ ತಯಾರಾಗಿದೆ.

‘ಜಲ್ಸಾ’ದಲ್ಲಿ ಏನೆಲ್ಲಾ ಇದೆ?
‘ಜಲ್ಸಾ’ ಎಂದರೆ ಸಂಭ್ರಮಾಚರಣೆ. ಶೀರ್ಷಿಕೆಯಲ್ಲಿರುವ ಜೋಶ್ ಕಥೆಯಲ್ಲೂ ಇದೆ. ಮನರಂಜನೆಗೆ ಬೇಕಾದ ಎಲ್ಲಾ ಅಂಶಗಳೂ ಇರುವ ಪಕ್ಕಾ ಲವ್‌ ಸ್ಟೋರಿಯ ಚಿತ್ರವಿದು. ‘ದುಡ್ಡೇ ದೊಡ್ಡಪ್ಪ’ ಎನ್ನುವ ಹುಡುಗ ಮತ್ತು ‘ಪ್ರೀತಿಯೇ ಪ್ರಪಂಚ’ ಎನ್ನುವ ಹುಡುಗಿಯ ಪ್ರೇಮ ಪಯಣವೇ ‘ಜಲ್ಸಾ’.  ವಿಭಿನ್ನ ನೆಲೆಯ ಇಬ್ಬರೂ ಹೇಗೆ ಒಂದಾಗುತ್ತಾರೆ ಎಂಬುದೇ ಕಥೆಯ ತಿರುಳು. ಇದರೊಳಗೆ ಹಾಸ್ಯ, ಹಾಡು, ಹೊಡೆದಾಟ ಹಾಗೂ ಮುದ ನೀಡುವ ಮಾತುಗಳು ಅಡಕವಾಗಿವೆ. ಸಬ್ಜೆಕ್ಟ್ ಜತೆಗೆ ಪಾತ್ರಗಳನ್ನೂ ರಿಲೇಟ್ ಮಾಡಿಕೊಂಡು ನೋಡಬಹುದಾದ ಚಿತ್ರವಿದು. ಯಾವ ಸ್ಟಾರ್ ಸಿನಿಮಾಗೂ ಕಡಿಮೆ ಇಲ್ಲದಂತೆ ಅದ್ದೂರಿಯಾಗಿ, ಕಲರ್‌ಫುಲ್ ಆಗಿ ನಿರ್ಮಿಸಿದ್ದೇವೆ.

ಕಥೆಗೆ ಸ್ಫೂರ್ತಿ ಏನು? ನಿಮ್ಮ ಅನುಭವವೇನಾದರೂ ಬೆರೆತಿದೆಯಾ?
ಚಿತ್ರದ ನಾಯಕ ನಿರಂಜನ್ ಒಡೆಯರ್ ಅವರ ಬೇರೊಂದು ಪ್ರಾಜೆಕ್ಟ್‌ಗೆ ಕೆಲಸ ಮಾಡುವ ಸಲುವಾಗಿ ಅವರನ್ನು ಭೇಟಿ ಮಾಡಿದ್ದೆ. ಆಗವರು ಸ್ವತಂತ್ರವಾಗಿ ಸಿನಿಮಾ ನಿರ್ದೇಶನ ಮಾಡುವಂತೆ ಹೇಳಿದರು. ಪುತ್ರನನ್ನು ನಾಯಕ ನಟನನ್ನಾಗಿ ಪರಿಚಯಿಸುವ ಸಲುವಾಗಿ, ಅವರ ತಂದೆ– ತಾಯಿ ಬಂಡವಾಳ ಹಾಕಲು ಮುಂದಾದರು. ಆಗ ಹೊಳೆದಿದ್ದೇ ‘ಜಲ್ಸಾ’. ಕಥೆಗೆ ಅಂತಿಮ ರೂಪ ನೀಡುವಲ್ಲಿ ನಿರಂಜನ್ ಅವರ ಕೊಡುಗೆಯೂ ಇದೆ. ಈ ಚಿತ್ರಕ್ಕೆ ಈಗಿನ ಕಾಲದ ಯುವ ಮನಸುಗಳೇ ಸ್ಫೂರ್ತಿ.



ಬಿಡುಗಡೆಗೂ ಮುಂಚೆಯೇ ಚಿತ್ರದ ಹಕ್ಕು ಮಾರಾಟವಾಗಿದೆಯಂತೆ?
ಹೌದು. ಹಿಂದಿಗೆ ಡಬ್ಬಿಂಗ್ ರೈಟ್ಸ್ ಮಾರಾಟವಾಗಿದೆ. ಚಿತ್ರದ ಟ್ರೇಲರ್ ಮತ್ತು ಆಡಿಯೊ ನೋಡಿದ ಮಹಾರಾಷ್ಟ್ರದವರೊಬ್ಬರು, ಇಲ್ಲಿನ ವಿತರಕರ ಮೂಲಕ ನಮ್ಮನ್ನು ಸಂಪರ್ಕಿಸಿ ಉತ್ತಮ ಮೊತ್ತ ಕೊಟ್ಟು ಚಿತ್ರದ ಹಕ್ಕನ್ನು ಖರೀದಿಸಿದರು. ಬಿಡುಗಡೆಗೆ ಮುಂಚೆ ಚಿತ್ರಕ್ಕೆ ಒಳ್ಳೆಯ ಬೋಣಿಯಾಗಿರುವುದು ನಮ್ಮ ತಂಡದ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿದೆ.

ಮೊದಲ ಚಿತ್ರದಲ್ಲಿ ನಟನೇ ನಿರ್ಮಾಪಕನ ಸ್ಥಾನವನ್ನಲಂಕರಿಸಿದ್ದಾಗ, ಕಥೆಯಲ್ಲಿ ನಿರ್ದೇಶಕನ ಹಿಡಿತ ತಪ್ಪುತ್ತದೆ ಎಂಬ ಸಾಮಾನ್ಯ ಮಾತಿದೆ. ಈ ಕುರಿತು ನಿಮ್ಮ ಅಭಿಪ್ರಾಯವೇನು?
ಈ ಮಾತನ್ನು ಅಕ್ಷರಶಃ ಒಪ್ಪಬಹುದು. ಯಾಕೆಂದರೆ, ಕಥೆಗಳನ್ನು ಕಂಕುಳಲ್ಲಿಟ್ಟುಕೊಂಡು ನಿರ್ಮಾಪಕರಿಗಾಗಿ ಹುಡುಕಾಡುವ ಹೊಸಬರನ್ನು ನೋಡಿದ್ದೇನೆ. ಚಿತ್ರಕ್ಕೆ ಬಂಡವಾಳ ಹಾಕುವವರು ಸಿಕ್ಕರೆ, ಅವರ ಅಣತಿಯಂತೆ ಕಥೆಯಲ್ಲಿ ಎಂತಹ ರಾಜಿಗೂ ನಿರ್ದೇಶಕರು ತಯಾರಿರುತ್ತಾರೆ. ಎಷ್ಟೋ ವೇಳೆ ನಿರ್ಮಾಪಕರೇ ನಾಯಕ ನಟರೂ ಆಗುತ್ತಾರೆ. ಆಗ ಕಥೆಯ ಆಶಯಕ್ಕಿಂತ, ನಾಯಕನ ವೈಭವೀಕರಣಕ್ಕೆ ಹೆಚ್ಚು ಆದ್ಯತೆ ಕೊಡಬೇಕಾದ ಅನಿವಾರ್ಯತೆಯಲ್ಲಿ ನಿರ್ದೇಶಕ ಸಿಲುಕುತ್ತಾನೆ. ನನಗೆ ಅಂತಹ ಯಾವುದೇ ಅನಿವಾರ್ಯತೆಗಳಿರಲಿಲ್ಲ. ನನ್ನ ಕೆಲಸ ಗಮನಿಸಿಯೇ ನಿರ್ಮಾಪಕರು ನನಗೆ ಸಿನಿಮಾ ನಿರ್ದೇಶಿಸುವಂತೆ ಹೇಳಿದರು. ಚಿತ್ರಕಥೆಗೆ ಪೂರಕವಾಗಿ ನಾಯಕ ನಟನ ಪಾತ್ರ ಬಯಸುವುದನ್ನು ನಿರಂಜನ್ ಅವರಿಗೆ ವಿವರಿಸಿದೆ. ಎಲ್ಲಾ ರೀತಿಯಲ್ಲೂ ತರಬೇತಿ ಪಡೆದು ನಟಿಸಿದ್ದಾರೆ. ರಾಜಿ ಮಾಡಿಕೊಳ್ಳದೆ ಸಿನಿಮಾ ಮಾಡಿದ್ದೇನೆ. ನಮ್ಮಿಬ್ಬರಿಗೂ ಇದು ಮೊದಲ ಚಿತ್ರ. ರಾಜಿಗಿಂತ ಯಶಸ್ಸಿನ ಮಂತ್ರವೇ ನಮ್ಮನ್ನು ಚಿತ್ರರಂಗದಲ್ಲಿ ಉಳಿಸುವುದು.

ಮುಂದಿನ ಪ್ರಾಜೆಕ್ಟ್‌ಗಳು?
ನಾಲ್ಕೈದು ಕಥೆಗಳು ರೆಡಿ ಇವೆ. ಈ ಪೈಕಿ ಒಂದು ಕಥೆಯನ್ನು ಸಿನಿಮಾ ಮಾಡಲು ನಿರ್ಮಾಪಕರೊಬ್ಬರು ಆಸಕ್ತಿ ತೋರಿದ್ದಾರೆ. ಒಂದು ಸುತ್ತಿನ ಮಾತುಕತೆಯೂ ಆಗಿದೆ. ಕಮರ್ಷಿಯಲ್ ಚಿತ್ರಗಳ ಜತೆಗೆ, ಈ ನೆಲದ ಸೊಗಡು ಹೇಳುವ ಕಲಾತ್ಮಕ ಚಿತ್ರಗಳನ್ನು ಮಾಡಬೇಕೆಂಬ ಆಸೆಯೂ ಇದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT