ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳೆಗೇರಿಯ ಜನರ ಬದುಕಿಗೆ ಸಿಗದ ಕಿಮ್ಮತ್ತು

ಬಸವರಾಜ ಮುತ್ತಳ್ಳಿ ಅವರು ಪ್ರತಿನಿಧಿಸುವ ಧಾರವಾಡದ 16ನೇ ವಾರ್ಡ್‌ ಲಕ್ಷ್ಮಿಸಿಂಗನಕೇರಿಯಲ್ಲಿ ನಾಲೆ ಕಸಕ್ಕೆ ಆಧಾರ
Last Updated 3 ಫೆಬ್ರುವರಿ 2017, 6:17 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಮಹಾನಗರ ಪಾಲಿಕೆಯಲ್ಲಿ 16ನೇ ವಾರ್ಡ್‌ ವ್ಯಾಪ್ತಿಗೆ ಒಳಪಡುವ ಲಕ್ಷ್ಮಿಸಿಂಗನಕೇರಿಯನ್ನು ನೀವೊಂದು ಸುತ್ತು ಹಾಕಬೇಕು. ಕೇರಿಯ ಗೌಸಿಯಾ ಮಸೀದಿ ಬಳಿ ಇರುವ ಸಾರ್ವಜನಿಕ ಶೌಚಾಲಯದ ಎದುರಿನ ನಾಲೆ ಇಲ್ಲಿನ ಜನರನ್ನು ನಿತ್ಯ ದುಃಸ್ವಪ್ನವಾಗಿ ಕಾಡುತ್ತಿದೆ.

ಈ ಕೇರಿಯ ಮೇಲ್ಭಾಗದಲ್ಲಿರುವ ಸಂಗೊಳ್ಳಿ ರಾಯಣ್ಣ ನಗರ, ತೇಜಸ್ವಿನಗರ, ರಜತಗಿರಿ, ಮಾಳಮಡ್ಡಿಯ ಕೊಳಚೆ ನೀರೆಲ್ಲ ಬಂದು ಲಕ್ಷ್ಮಿಸಿಂಗನಕೇರಿಯ ನಾಲೆಯನ್ನು ಸೇರಿಕೊಳ್ಳುತ್ತದೆ. ಇಲ್ಲಿ ನಿತ್ಯ ಕಸ ವಿಲೇವಾರಿ ವ್ಯವಸ್ಥೆ ಇಲ್ಲದಿರುವುದರಿಂದ ನಿವಾಸಿಗಳು ತಮ್ಮ ಮನೆಗಳಲ್ಲಿ ಸಂಗ್ರಹವಾದ ಕಸವನ್ನು ತಂದು ನಾಲೆಯಲ್ಲೇ ಚೆಲ್ಲುತ್ತಾರೆ. ಅಲ್ಲಿಗೆ, ನಿಜವಾದ ‘ಕಸ ಸಂಕಟ’ ಆರಂಭಗೊಳ್ಳುತ್ತದೆ.

ಕೊಳಚೆ ನಿರ್ಮೂಲನಾ ಮಂಡಳಿ ಇಲ್ಲಿ ಕಾಂಕ್ರಿಟ್‌ ರಸ್ತೆಯನ್ನು ಹಾಕಿದೆಯಾದರೂ, ನಾಲೆಯ ಮೇಲ್ಭಾಗವನ್ನು ಮುಚ್ಚಿಲ್ಲ. ಇದರಿಂದಾಗಿ ಮಕ್ಕಳು ಆಟವಾಡಲು ಹೋಗಿ ಬೀಳುವುದು ಸಾಮಾನ್ಯವಾಗಿದೆ.

ಎರಡು ತಿಂಗಳ ಹಿಂದೆಯೇ ಇಂಥದೊಂದು ಘಟನೆ ನಡೆದಿತ್ತು. ಆಳವಾದ ನಾಲೆಯಲ್ಲಿ ಎರಡೂವರೆ ವರ್ಷದ ಬಾಲಕನೊಬ್ಬ ಬಿದ್ದಿದ್ದ. ಕಸದಿಂದಲೇ ತುಂಬಿದ್ದ ಕೊಳಚೆ ನೀರಲ್ಲಿ ಸಿಲುಕಿಕೊಂಡಿದ್ದ ಅವನನ್ನು ಮೇಲಕ್ಕೆತ್ತಬೇಕಾದರೆ ಸಾಕಾಯಿತು. ನಾಲೆಯನ್ನು ಮುಚ್ಚಿದ್ದರೆ ಈ ಸಮಸ್ಯೆ ಎದುರಾಗುತ್ತಿರಲಿಲ್ಲ. ಇದರ ಸಹವಾಸವೇ ಬೇಡವೆಂದು ಆ ಬಾಲಕನ ಪೋಷಕರು ಮನೆ ಖಾಲಿ ಮಾಡಿಕೊಂಡು ಹೋದರು ಎಂದು ನಾಲೆಯ ಎದುರಿಗೆ ಕಿರಾಣಿ ಅಂಗಡಿ ಇಟ್ಟುಕೊಂಡಿರುವ ಬೀಬಿ ಆಯಿಷಾ ಅಸಮಾಧಾನ ವ್ಯಕ್ತಪಡಿಸಿದರು.

ಸುಮಾರು ಹತ್ತು ವರ್ಷಗಳ ಹಿಂದಿನ ಸ್ಥಿತಿಗೆ ಹೋಲಿಸಿದರೆ ಸದ್ಯಕ್ಕೆ ಒಂದಷ್ಟು ಪರಿಸ್ಥಿತಿಯೇನೋ ಸುಧಾರಿಸಿದೆ. ಆದರೆ, ಕೊಳಚೆ ಪ್ರದೇಶ ಎಂಬ ಅಸಡ್ಡೆಯಿಂದಲೋ ಏನೋ ಪಾಲಿಕೆಯ ಪೌರಕಾರ್ಮಿಕರು ಇತ್ತ ಸುಳಿಯುವುದೇ ಇಲ್ಲ. ನಾವೇನು ಪಾಪ ಮಾಡೇವ್ರಿ ಎಪ್ಪಾ ಎಂದು ನೀಲವ್ವ ಲಮಾಣಿ ಬೇಸರ ವ್ಯಕ್ತಪಡಿಸಿದರು.

‘ಮನೆಯಲ್ಲಿನ ಕಸ ಹೊರಗೆ ಚೆಲ್ಲಾಕಬೇಕು. ಮಗ್ಗಲು ಚೆಲ್ಲಿದರೆ ಆ ಮನೆಯವರು ತಕರಾರು ಮಾಡ್ತಾರ. ಜಗಳಾನ ಬ್ಯಾಡಂತ ಹೇಳಿ ಎದುರಿನ ನಾಲಾದೊಳಗ ಹಾಕ್ತೀವಿ’ ಎಂದು ನೀಲವ್ವ ಒಪ್ಪಿಕೊಂಡರು. ಸಮಸ್ಯೆ ಉಲ್ಬಣಿಸಲು ಇನ್ನೂ ಒಂದು ಮಹತ್ವದ ಕಾರಣವಿದೆ. ಇಲ್ಲಿನ ಬಹುತೇಕ ಜನಗಳು ವಿವಿಧ ಬಡಾವಣೆಗಳಿಂದ ಕಸವನ್ನು ಎತ್ತಿ ತರುತ್ತಾರೆ. ಅದರಲ್ಲಿ ಮಾರಾಟವಾಗಬಹುದಾದುದನ್ನು ಮಾತ್ರ ಬಿಕರಿ ಮಾಡಿ ಉಳಿದಿದ್ದನ್ನು ನಾಲೆಗೇ ತಂದು ಹಾಕುತ್ತಾರೆ. ಒಂದು ಜೋರು ಮಳೆ ಬಂದರೂ ಸಾಕು. ಕಸವೆಲ್ಲ ಮೋರಿಯಲ್ಲಿ ಸಿಲುಕಿಕೊಂಡು ನೀರು ಮನೆಗಳನ್ನು ಸೇರಿಕೊಳ್ಳುತ್ತದೆ.

‘ಶೇ 90ರಷ್ಟು ಕೊಳೆಗೇರಿಯೇ’
ನಗರಕರ ಕಾಲೊನಿ, ಮಂಜುನಾಥಪುರ, ವೆಂಕಪ್ಪನ ಗುಡಿ, ಗೌಳಿ ಗಲ್ಲಿಯ ಒಂದು ಭಾಗ ನನ್ನ ವಾರ್ಡ್‌ ವ್ಯಾಪ್ತಿಯಲ್ಲಿದ್ದು, ಶೇ 90ರಷ್ಟು ಕೊಳೆಗೇರಿ ಪ್ರದೇಶಗಳೇ ಇವೆ. ನಮ್ಮ ವಾರ್ಡ್‌ ಪೌರಕಾರ್ಮಿಕ ವಾರ್ಡೂ ಅಲ್ಲ, ಗುತ್ತಿಗೆ ಕಾರ್ಮಿಕರ ವಾರ್ಡೂ ಅಲ್ಲ. ತಾತ್ಕಾಲಿಕ ಗುತ್ತಿಗೆ ಕಾರ್ಮಿಕರು ಕೆಲಸ ಮಾಡುತ್ತಿರುವುದರಿಂದ ಅವರಿಂದ ಹೆಚ್ಚಿನ ಕೆಲಸ ನಿರೀಕ್ಷೆ ಮಾಡಲಾಗುವುದಿಲ್ಲ ಎನ್ನುತ್ತಾರೆ 16ನೇ ವಾರ್ಡ್‌ ಪ್ರತಿನಿಧಿಸುವ ಬಿಜೆಪಿಯ ಬಸಪ್ಪ ಮುತ್ತಳ್ಳಿ.

‘ನಿರಂತರ ನೀರು ಪೂರೈಕೆ ಯೋಜನೆ ಪೈಪ್‌ ಹಾಕಿ ಹಾಗೆಯೇ ಬಿಟ್ಟಿದ್ದಾರೆ. ಸಾರ್ವಜನಿಕ ಶೌಚಾಲಯದ ಎದುರಿನ ನಾಲೆಯನ್ನು ಮುಚ್ಚಬೇಕು.  ಮನೆ ಮನೆಗಳಿಂದ ಕಸ ಸಂಗ್ರಹಿಸುವುದೂ ಸಾಧ್ಯವಾಗಿಲ್ಲ. ಹೊಸ ಕಾಂಟ್ರಾಕ್ಟ್‌ ಕೊಡುವುದಾಗಿ ಹೇಳಿದ್ದು, ಮುಂದೆ ಪರಿಸ್ಥಿತಿ ಸುಧಾರಿಸಬಹುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT