ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಯಲ್ಲಿ ನೀರೂರಿಸುವ ಮಾಂಸಾಹಾರಿ ಖಾದ್ಯಗಳು

Last Updated 3 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಮಾಂಸದ ಖಾದ್ಯಗಳನ್ನು ನೋಡಿದ ತಕ್ಷಣ ಮಾಂಸಾಹಾರಿಗಳ ಬಾಯಲ್ಲಿ ನೀರು ಸುರಿಯುತ್ತದೆ.  ಚಿಕನ್‌,  ಮಟನ್‌ ಮತ್ತು ಮೀನಿನ ಮಾಂಸದ ಅಡುಗೆಗಳು ಅಸಂಖ್ಯ. ಉತ್ತರಕನ್ನಡ ಜಿಲ್ಲೆಯ ಶಿರಸಿಯವರಾದ ನಂದಿತಾ ತಾಂಡೇಲ್‌  ಕೆಲವೊಂದು ಅಂಥ ಮಾಂಸದ ಅಡುಗೆಗಳ ತಯಾರಿಸುವ ವಿಧಾನವನ್ನು ಇಲ್ಲಿ ತಿಳಿಸಿದ್ದಾರೆ.

ಕ್ರಿಸ್ಪಿ ಚಿಕನ್‌ 

ಬೇಕಾಗುವ ಸಾಮಾಗ್ರಿಗಳು

ಚಿಕನ್ ಲೆಗ್ ಪೀಸ್‌ - 10
ಬ್ರೆಡ್ ಚೂರುಗಳು - 2 ಕಪ್
ನಿಂಬೆ ರಸ - 3 ಚಮಚ
ಹಸಿ ಮೆಣಸಿನಕಾಯಿ - 5
ಕಾಳು ಮೆಣಸಿನ ಪುಡಿ - 3 ಚಮಚ
ಪುದೀನಾ ಸೊಪ್ಪು - ಅರ್ಧ ಕಟ್ಟು
ಕೊತ್ತಂಬರಿ ಸೊಪ್ಪು - ಅರ್ಧ ಕಟ್ಟು

ಮೈದಾ ಹಿಟ್ಟು - ಒಂದೂವರೆ ಕಪ್
ಮೊಟ್ಟೆಯ ಬಿಳಿಭಾಗ - 2
ಶುಂಠಿ-ಬೆಳ್ಳುಳ್ಳಿ ಪೇಸ್ಟ್ - 3 ಚಮಚ
ನೀರು - ಒಂದು ಕಪ್
ಎಣ್ಣೆ - ಕರಿಯಲು
ಉಪ್ಪು - ರುಚಿಗೆ ತಕ್ಕಷ್ಟು

ತಯಾರಿಸುವ ವಿಧಾನ
ಚಿಕನ್ ಲೆಗ್ ಪೀಸ್ ಚೆನ್ನಾಗಿ ತೊಳೆದ ನಂತರ ಅದನ್ನು ಚಾಕುವಿನಿಂದ ನಡುವೆ ಸೀಳುವ ರೀತಿಯಲ್ಲಿ ಗೆರೆ ಹಾಕಿ.   ನಂತರ ಇದರ ಮೇಲೆ ಉಪ್ಪು ಸವರಿ. ಹಸಿಮೆಣಸಿನ ಕಾಯಿಯನ್ನು ಜಜ್ಜಿ ಅದಕ್ಕೆ ಹಾಕಿ. ಇದಕ್ಕೆ ನಿಂಬೆರಸ ಹಿಂಡಿ ಹಾಕಿ. ನಂತರ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಕಾಳು ಮೆಣಸಿನ ಪುಡಿ, ಕೊತ್ತಂಬರಿ ಮತ್ತು ಪುದೀನಾ ಸೊಪ್ಪಿನ ಪೇಸ್ಟ್ ಹಾಕಿ ಮಿಕ್ಸ್ ಮಾಡಿ. ಸುಮಾರು ಒಂದು ಗಂಟೆ ಹಾಗೇ ನೆನೆಯಲು ಬಿಡಿ.

ಮೈದಾ ಹಿಟ್ಟಿಗೆ 2 ಮೊಟ್ಟೆಗಳ ಬಿಳಿ ಹಾಕಿ. ಅದಕ್ಕೆ ಜಜ್ಜಿದ ಹಸಿ ಮೆಣಸಿಕಾಯಿ, ಸ್ವಲ್ಪ ಕಾಳುಮೆಣಸಿನ ಪುಡಿ ಮತ್ತು ಸ್ವಲ್ಪ ಬಿಸಿ ನೀರು ಹಾಕಿ ಮಿಕ್ಸ್ ಮಾಡಿ ಇಟ್ಟುಕೊಳ್ಳಿ. ಪ್ಯಾನ್‌ನಲ್ಲಿ ಎಣ್ಣೆಯನ್ನು ಹಾಕಿ ಕಾಯಿಸಿ.  ಚಿಕನ್ ಲೆಗ್ ಪೀಸ್ ಅನ್ನು ಮೈದಾ ಹಿಟ್ಟಿನಲ್ಲಿ ಅದ್ದಿ, ಬ್ರೆಡ್ ಚೂರಿನಲ್ಲಿ ಹೊರಳಾಡಿಸಿ ಎಣ್ಣೆಗೆ ಹಾಕಿ ಫ್ರೈ ಮಾಡಿ. ಚಿಕನ್ ಕಂದುಬಣ್ಣಕ್ಕೆ ಬರುವಾಗ ಎಣ್ಣೆಯಿಂದ ತೆಗೆದು ಸವಿಯಿರಿ.
*

ಮಟನ್‌ ಖೀಮಾ - ಪರೋಟ
ಬೇಕಾಗುವ ಸಾಮಾಗ್ರಿಗಳು
ಮಟನ್ ಖೀಮಾ - 1 ಕೆ. ಜಿ, ಮೊಸರು -1 ಕಪ್, ಜೀರಿಗೆ ಪುಡಿ - 2 ಚಮಚ
ಖಾರದ ಪುಡಿ - 2 ಚಮಚ, ಗರಂ ಮಸಾಲ - 2 ಚಮಚ, ಅರಿಶಿಣಪುಡಿ - 1ಚಮಚ, ಈರುಳ್ಳಿ - 3, ಶುಂಠಿ-ಬೆಳ್ಳುಳ್ಳಿ ಪೇಸ್ಟ್ - 2 ಚಮಚ
ಹಸಿ ಮೆಣಸಿನಕಾಯಿ - 4, ಉಪ್ಪು - ರುಚಿಗೆ, ನೀರು -1 ಕಪ್, ಎಣ್ಣೆ - 2 ಚಮಚ
ಪರೋಟಕ್ಕೆ
ಮೈದಾ ಹಿಟ್ಟು - 3 ಕಪ್
ಉಪ್ಪು - ರುಚಿಗೆ
ಎಣ್ಣೆ - 4 ಚಮಚ

ತಯಾರಿಸುವ ವಿಧಾನ
ತೊಳೆದ ಖೀಮಾಕ್ಕೆ ಮೊಸರು, ಅರಿಶಿಣಪುಡಿ, ಖಾರದ ಪುಡಿ ಮತ್ತು ರುಚಿಗೆ ತಕ್ಕ ಉಪ್ಪು ಹಾಕಿ ಮಿಕ್ಸ್ ಮಾಡಿ. ಈ ಮಿಶ್ರಣವನ್ನು ಸುಮಾರು ಒಂದು ಗಂಟೆ ಹಾಗೆಯೇ ನೆನೆಯಲು ಬಿಡಿ.

ಪ್ಯಾನ್‌ನಲ್ಲಿ ಎಣ್ಣೆ ಹಾಕಿ ಅದರಲ್ಲಿ ಈರುಳ್ಳಿ ಫ್ರೈ ಮಾಡಿ. ಈ ಫ್ರೈಗೆ ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಹಾಕಿ ಪುನಃ 2-3 ನಿಮಿಷ ಫ್ರೈ ಮಾಡಿ. ನೆನೆಯಲು ಬಿಟ್ಟು ಇರುವ ಖೀಮಾ ಇದಕ್ಕೆ ಹಾಕಿ. ಕೊತ್ತಂಬರಿ ಪುಡಿ, ಗರಂ ಮಸಾಲ, ಜೀರಿಗೆ ಪುಡಿ ಹಾಕಿ ಸ್ವಲ್ಪ ಉಪ್ಪು ಹಾಕಿ ಸ್ವಲ್ಪ ನೀರು ಸೇರಿಸಿ ಅರ್ಧ ಗಂಟೆ ಬೇಯಿಸಿ. ಮಧ್ಯೆ ಮಧ್ಯೆ ಸೌಟಿನಿಂದ ತಿರುವುತ್ತಿರಿ. ಖೀಮಾ ಡ್ರೈ ರೀತಿ ಆದ ಮೇಲೆ ಗ್ಯಾಸ್ ಆಫ್‌ ಮಾಡಿ.

ಪರೋಟ ತಯಾರಿಸುವ ವಿಧಾನ
ನೀರು ಹಾಕಿ ಮೈದಾಹಿಟ್ಟನ್ನು ಪರೋಟದ ಹದಕ್ಕೆ ಕಲಸಿ. ಅವುಗಳನ್ನು ಚಪಾತಿ ಉಂಡೆಯ ಹಾಕಿ ಕಟ್ಟಿ, ನಂತರ ಬೆರಳಿನಿಂದ ತಟ್ಟಿ. ಅದರಲ್ಲಿ ಖೀಮಾ ಡ್ರೈ ಹಾಕಿ ಪುನಃ ಉಂಡೆ ಕಟ್ಟಿ ತಟ್ಟಿ. ಬಂಡಿಯ ಮೇಲೆ ಪರೋಟಾ ಬೇಯಿಸುವ ಹಾಗೆ ಬೇಯಿಸಿ. ಇಷ್ಟು ಮಾಡಿದರೆ ಘಮಘಮಿಸುವ ಮಟನ್‌ ಖೀರ್‌ ಪರೋಟಾ ಸಿದ್ಧವಾಗುತ್ತದೆ.
*


ಮಟನ್ ಬಿರಿಯಾನಿ

ಬೇಕಾಗುವ ಸಾಮಗ್ರಿಗಳು
ಬಾಸುಮತಿ ಅಕ್ಕಿ - 1 ಕೆ.ಜಿ.
ಮಟನ್ - 1 ಕೆ.ಜಿ.
ಶುಂಠಿ, ಬೆಳ್ಳುಳ್ಳಿ ಪೇಸ್ಟ್ - 2 ಚಮಚ
ಟೊಮೆಟೊ- 1
ಈರುಳ್ಳಿ - 2 ದೊಡ್ಡದು

ದಾಲ್ಚಿನ್ನಿ, ಗೋಡಂಬಿ,
ಏಲಕ್ಕಿ, ಲವಂಗ - ಎಲ್ಲವೂ ಸ್ವಲ್ಪ
ತುಪ್ಪ - 3 ಚಮಚ
ಗರಂ ಮಸಲಾ ಪುಡಿ - 2 ಚಮಚ
ಪುದಿನಾ - 1 ಕಟ್ಟು
ಲಿಂಬೆ ಹಣ್ಣಿನ ರಸ - 2 ಚಮಚ

ತಯಾರಿಸುವ ವಿಧಾನ
ಮೊದಲು ಅನ್ನ ಮಾಡಿಟ್ಟುಕೊಳ್ಳಿ. ಒಂದು ಪ್ಯಾನ್‌ನಲ್ಲಿ ಸ್ವಲ್ಪ ಎಣ್ಣೆ ಹಾಕಿ ಟೊಮೆಟೊ ಮತ್ತು ಈರುಳ್ಳಿಯನ್ನು ಚೆನ್ನಾಗಿ ಬೇಯಿಸಿಕೊಳ್ಳಿ. ಮೇಲೆ ತಿಳಿಸಿರುವ ಎಲ್ಲ ಮಸಾಲೆ ಸಾಮಗ್ರಿಗಳನ್ನು ಒಂದೊಂದಾಗಿ ಅದರಲ್ಲಿ ಹುರಿಯುತ್ತಾ ಬನ್ನಿ. ನಂತರ ಅದಕ್ಕೆ ಶುಂಠಿ-ಬೆಳ್ಳುಳ್ಳಿ ಪೇಸ್ಟ್‌ ಹಾಕಿ.
ಇದಾದ ಮೇಲೆ ಗರಂ ಮಸಾಲ ಮತ್ತು ಖಾರದ ಪುಡಿಯನ್ನು ಮಿಕ್ಸ್‌ ಮಾಡಿ. ಇವೆಲ್ಲವೂ ಫ್ರೈ ಆದ ಮೇಲೆ ಸ್ವಲ್ಪ ನೀರನ್ನು ಸೇರಿಸಿ, ಕುದಿಸಿ. ಇದಕ್ಕೆ ಅನ್ನ ಸೇರಿಸಿ ಬೆಂದ ಮೇಲೆ ನಿಂಬೆ ರಸ ಹಾಕಿ.
*


ನೀರೂರಿಸುವ ಮೀನಿನ ಫ್ರೈ

ಕೇರಳ ಸ್ಟೈಲ್‌ ಮೀನಿನ ಫ್ರೈ
ಬೇಕಾಗುವ ಸಾಮಾಗ್ರಿ
ಇಷ್ಟದ ಮೀನು -10
ಈರುಳ್ಳಿ-  1
ನಿಂಬೆರಸ -3  ಚಮಚ
ಬೆಳ್ಳುಳ್ಳಿ - ಒಂದು ಗಡ್ಡೆ
ಹಸಿಮೆಣಸಿನಕಾಯಿ-  6
ಕರಿಮೆಣಸಿನ ಪುಡಿ -  2 ಚಮಚ

ಅರಿಶಿಣಪುಡಿ -ಅರ್ಧ ಚಮಚ
ಕರಿಬೇವಿನ ಎಲೆ - ಒಗ್ಗರಣೆಗೆ
ಎಣ್ಣೆ 2 - ಚಮಚ
ಉಪ್ಪು - ರುಚಿಗೆ

ತಯಾರಿಸುವ ವಿಧಾನ
ಅರಿಶಿಣಪುಡಿ, ಕೆಂಪು ಮೆಣಸಿನ ಪುಡಿ, ಶುಂಠಿ, ಬೆಳ್ಳುಳ್ಳಿ, ಹಸಿಮೆಣಸಿನಕಾಯಿ, ಕರಿಮೆಣಸಿನಪುಡಿ, ಇವುಗಳನ್ನು ಮಿಕ್ಸಿಯಲ್ಲಿ ಹಾಕಿ ಪೇಸ್ಟ್ ತಯಾರಿಸಿಕೊಳ್ಳಿ.

ಮೀನಿನ ತುಂಡುಗಳನ್ನು ಚೆನ್ನಾಗಿ ತೊಳೆಯಿರಿ. ಅದಕ್ಕೆ ಉಪ್ಪು ಮತ್ತು ನಿಂಬೆರಸ ಹಾಕಿ ನೆನೆಸಿ ಕೆಲಕಾಲ ಇಡಿ. 5-10 ನಿಮಿಷದ ನಂತರ ಮೇಲೆ ತಿಳಿಸಿರುವ ಪೇಸ್ಟ್‌ ಅನ್ನು ಹಾಕಿ 25-30 ನಿಮಿಷ ಇಡಿ.

ಎಣ್ಣೆ ಬಿಸಿ ಮಾಡಿದ ಪ್ಯಾನ್‌ನಲ್ಲಿ ಈ ಮೀನನ್ನು ಹಾಕಿ ಫ್ರೈ ಮಾಡಿದರೆ ಮುಗಿಯಿತು. ಕೇರಳ ಸ್ಟೈಲ್‌ ಮೀನಿನ ಫ್ರೈ ರೆಡಿ. ಕೇರಳದಲ್ಲಿ ಹೆಚ್ಚಾಗಿ ಅಡುಗೆಗೆ ತೆಂಗಿನ ಎಣ್ಣೆಯನ್ನು ಬಳಸಲಾಗುತ್ತದೆ. ಆದ್ದರಿಂದ ಅಲ್ಲಿಯದ್ದೇ ರುಚಿ ಬೇಕಿದ್ದರೆ ನೀವೂ ಇದೇ ಎಣ್ಣೆಯನ್ನು ಬಳಸಿದರೆ ಉತ್ತಮ. ಸರ್ವ್‌ ಮಾಡುವಾಗ ಕತ್ತರಿಸಿದ ಈರುಳ್ಳಿ ಇಟ್ಟರೆ ಇನ್ನೂ ಚೆನ್ನ.

ಕರಾವಳಿ ಸ್ಟೈಲ್‌ ಫ್ರೈ
ಬೇಕಾಗುವ ಸಾಮಾಗ್ರಿ
ಮೀನು - 1 ಕೆ.ಜಿ
ಎಣ್ಣೆ - ಫ್ರೈಗೆ , ಕರಿಬೇವು - ಒಗ್ಗರಣೆಗೆ
ಕೊತ್ತಂಬರಿಬೀಜ – 1 ಚಮಚ 
ಗರಂ ಮಸಾಲ - ಅರ್ಧ ಚಮಚ
ಈರುಳ್ಳಿ -1 ದೊಡ್ಡದು
ಶುಂಠಿ - ಒಂದು ತುಂಡು

ಬೆಳ್ಳುಳ್ಳಿ - 5 ಎಸಳು
ಒಣ ಮೆಣಸು - 6
ಮೆಂತ್ಯದ ಕಾಳು -1 ಚಮಚ
ಅರಿಶಿಣ ಪುಡಿ -ಅರ್ಧ ಚಮಚ
ಉಪ್ಪು - ರುಚಿಗೆ

ತಯಾರಿಸುವ ವಿಧಾನ
ತೊಳೆದ ಮೀನಿನ ತುಂಡುಗಳ ಮೇಲೆ ಉಪ್ಪು ಸವರಿ. ಮೇಲೆ ಹೇಳಿರುವ ಎಲ್ಲ ಸಾಮಾಗ್ರಿಗಳನ್ನು ಪೇಸ್ಟ್ ಮಾಡಿ. ಈ ಪೇಸ್ಟ್‌ ಅನ್ನು ಉಪ್ಪು ಸವರಿಟ್ಟ ಮೀನಿನ ತುಂಡುಗಳಿಗೆ ಸವರಿ. 30ರಿಂದ 40 ನಿಮಿಷ ಹಾಗೆಯೇ ಬಿಡಿ. ತವಾದಲ್ಲಿ ಎಣ್ಣೆ ಕಾದ ನಂತರ ಈ ಮೀನಿನ ತುಂಡುಗಳನ್ನು ಹಾಕಿ ಚೆನ್ನಾಗಿ  ಫ್ರೈ ಮಾಡಿ. ಘಮಘಮಿಸುವ ಕರಾವಳಿ ಸ್ಪೆಷಲ್‌ ಫ್ರೈ ಸವಿಯಲು ಸಿದ್ಧ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT