ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಡಾರ ರುಬೆಲ್ಲಾಗೆ ಬೇಕು ಕಡಿವಾಣ

Last Updated 3 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ದಡಾರ (Measles) ಕಾಯಿಲೆ ತೀವ್ರ ಸೋಂಕಿನ ಮಾರಣಾಂತಿಕ ಕಾಯಿಲೆ. ಎಷ್ಟೋ ಮಕ್ಕಳು ಇದಕ್ಕೆ ಬಲಿಯಾಗುತ್ತಿದ್ದಾರೆ. ದಡಾರ ವೈರಾಣವು ಪ್ಯಾರಾಮಿಕ್ಸೂ ವೈರಿಡೆಯೇ ಕುಟುಂಬಕ್ಕೆ ಸೇರಿದ್ದು ಮಾನವನೇ ಈ ವೈರಾಣುವಿನ ಆಶ್ರಯದಾತ. ಈ ಮೊದಲು ದಡಾರ ವೈರಾಣು 15 ವರ್ಷ ಒಳಗಿನ ಮಕ್ಕಳಲ್ಲಿ ಶೇ. 90ರಷ್ಟು  ಮಕ್ಕಳಿಗೆ ಹರಡುತ್ತಿತ್ತು. 1963ರಲ್ಲಿ ಮೊದಲ ಬಾರಿಗೆ ದಡಾರ ಲಸಿಕೆ ನೀಡಲು ಪ್ರಾರಂಭಿಸಿದ ನಂತರ ರೋಗದ ಹರಡುವ ಪ್ರಮಾಣ ಇಳಿಮುಖವಾಗುತ್ತ ಬಂದಿತು. ದಡಾರ ವೈರಾಣವು ಶ್ವಾಸಕೋಶದ ಮೇಲ್ಟದರವನ್ನು ಸಾಯಿಸುವುದಲ್ಲದೆ, ಚರ್ಮದ ಮೇಲಿನ ಸೂಕ್ಷ್ಮ ರಕ್ತನಾಳಗಳು ಊದಿಕೊಳ್ಳುವುದರಿಂದ  ಚರ್ಮದ ಮೇಲೆ ಕೆಂಪುಬಣ್ಣದ ಚುಕ್ಕೆಗಳು ಕಾಣಿಸುವುವು.

ಹರಡುವಿಕೆ: ರೋಗಪೀಡಿತ ವ್ಯಕ್ತಿಯು ಕೆಮ್ಮಿದಾಗ, ಸೀನಿದಾಗ ಅತನ ಶ್ವಾಸಕೋಶದಿಂದ ಸ್ರವಿಸುವ ಹನಿಗಳಿಂದ ಮತ್ತೊಬ್ಬರಿಗೆ ಹರಡುವುದು. ಈ ಹನಿಗಳು ಒಂದು ಗಂಟೆಯ ತನಕ ಗಾಳಿಯಲ್ಲಿ ಇರುತ್ತವೆ.

ರೋಗಲಕ್ಷಣಗಳು: ಮಕ್ಕಳು ರೋಗಿಯ ಸಂಪರ್ಕದಲ್ಲಿ ಬಂದ 8–10 ದಿನಗಳಲ್ಲಿ ತೀವ್ರ ಜ್ವರ, ಬಾಯಿ ಒಳಭಾಗದಲ್ಲಿ ಕೆಂಪು ಚುಕ್ಕೆಗಳು (Koplik spots) ಕಾಣಿಸಿಕೊಳ್ಳುತ್ತವೆ. ಕೆಮ್ಮ ನೆಗಡಿಗಳು ಬಾಧಿಸುತ್ತವೆ.  ಜ್ವರ ಬಂದ ಮೂರು ದಿನಗಳ ನಂತರ ಚರ್ಮದ ಮೇಲೆ ಕೆಂಪು ಚುಕ್ಕೆಗಳು ಮೊದಲು ಹಣೆಯ ಮತ್ತು ಕಿವಿಯ ಹಿಂಭಾಗದಿಂದ ಶುರುವಾಗಿ ಮುಖ ಕುತ್ತಿಗೆ ಹಾಗೂ ಬೆನ್ನಿನಿಂದ ಕೈ ಕಾಲುಗಳಿಗೆ ಕ್ರಮಬದ್ಧವಾಗಿ ಹರಡುತ್ತವೆ. ಅಂಗೈ ಹಾಗೂ ಅಂಗಾಲುಗಳಲ್ಲಿ ಕೂಡ ಕೆಂಪುಚುಕ್ಕೆಗಳು ಕಾಣಿಸಿಕೊಳ್ಳುತ್ತವೆ. ಚರ್ಮದ ಮೇಲೆ ಕೆಂಪುಚುಕ್ಕೆಗಳು ಕಾಣಿಸಿದ ನಂತರ ಜ್ವರ–ಶೀತ ಕ್ರಮೇಣ ಕಡಿಮೆ ಅಗುತ್ತಾ ಬರುತ್ತದೆ. ಚರ್ಮದ ಕೆಂಪು ಚುಕ್ಕೆಗಳು ಏಳು ದಿವಸದ ನಂತರ ಕ್ರಮೇಣ ಅದೇ ಕ್ರಮದಲ್ಲಿ ಮರೆಯಾಗುತ್ತವೆ. ತೀವ್ರ ತರಹದ ದಡಾರ ಇದ್ದಲ್ಲಿ ಮಾತ್ರ ಕುತ್ತಿಗೆಯ ಹಾಗೂ ತಲೆಯ ಹಿಂಭಾಗದಲ್ಲಿ ದುಗ್ದರಸ ಗ್ರಂಥಿಗಳು (lymph nodes) ದೊಡ್ಡದಾಗುವುವು.

ಪತ್ತೆ ಹಚ್ಚುವ ಬಗ್ಗೆ: ಚರ್ಮದ ಮೇಲೆ ಕೆಂಪು ಚುಕ್ಕೆ ಬಂದ ಎರಡು ದಿವಸಗಳಲ್ಲಿ, ರಕ್ತದಲ್ಲಿ IgM antibodyಗಳು ಕಂಡು ಬರುತ್ತಿವೆ; ಇವು ಒಂದು ತಿಂಗಳ ತನಕ ರಕ್ತದಲ್ಲಿ ಇರುವುವು. IgG antibody ರೋಗ ಬಂದ ಒಂದು ವಾರದಲ್ಲಿ ಕಾಣಿಸಿಕೊಳ್ಳುವುವು; 15–30 ದಿನಗಳ ನಂತರ ಇವು ನಾಲ್ಕು ಪಟ್ಟು ಹೆಚ್ಚಾಗಿದ್ದರೆ ಆಗ ದಡಾರ ಎಂದು ಖಚಿತಪಡಿಸಿಕೊಳ್ಳಬಹುದು.

ರೋಗಿಯ ರಕ್ತ ಅಥವಾ ಮೂತ್ರ ಅಥವಾ ಶ್ವಾಸಕೋಶದಿಂದ  ಸ್ರವಿಸುವ ಹನಿಗಳಿಂದ  ಕಲ್ಚರ್‌ ಮಾಡಿ ವೈರಾಣವನ್ನು ಪತ್ತೆ ಹಚ್ಚಬಹುದು. ಇದು ಸದ್ಯ  ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮಾಡಲಾಗುವುದು. ಒಂದೇ ಒಂದು ಮೀಸಲ್ಸ್ ಪ್ರಕರಣ ಬಂದರೂ ಅದರ ರಕ್ತ, ಮೂತ್ರ, ಕಫದ ಮಾದರಿಗಳನ್ನು ಸಮೀಪದ ಸರ್ಕಾರಿ ಆರೋಗ್ಯ ಕೇಂದ್ರದ ಮೂಲಕ  ಬೆಂಗಳೂರಿನ ಆಸ್ಪತ್ರೆಗೆ ಕಳುಹಿಸುವ ವ್ಯವಸ್ಥೆ ಚಾಲ್ತಿಯಲ್ಲಿದೆ.  PCR ಪರೀಕ್ಷೆಯಿಂದಲೂ ರೋಗವನ್ನು ಪತ್ತೆ ಹಚ್ಚಬಹುದು.

ರೋಗದ ತೀವ್ರತೆಯು ರೋಗ ನಿರೋಧಕ ಶಕ್ತಿ ಹಾಗೂ ವೈರಾಣುವಿನ ಸಾಮರ್ಥ್ಯದ ಮೇಲೆ ಅವಲಂಬಿತವಾಗಿರುತ್ತದೆ. ಐದು ವರ್ಷದ ಒಳಗಿನ ಹಾಗೂ 20 ವರ್ಷ ಮೇಲ್ಪಟ್ಟ ವ್ಯಕ್ತಿಗಳಲ್ಲಿ ಹಾಗೂ ಪೌಷ್ಟಿಕಾಂಶ ಕಡಿಮೆ ಇರುವ ಮಕ್ಕಳಲ್ಲಿ ಹೆಚ್ಚಾಗಿರುತ್ತದೆ.

ನ್ಯೂಮೋನಿಯಾ, ಕಿವಿ ಒಡೆದು ಸೋರುವುದು,  ವಾಂತಿ–ಭೇದಿಗಳು ಸಾಮಾನ್ಯವಾಗಿ ಕಂಡು ಬರುವವು. ಸಾವಿರದಲ್ಲಿ ಒಂದರಿಂದ ಮೂವರಿಗೆ ಮೆದುಳು ಜ್ವರ (Encephalitis) ಕೂಡ ಆಗಬಹುದು. ಇದು ಚರ್ಮದ ಮೇಲೆ ಕೆಂಪು ಚುಕ್ಕಿ ಕಾಣಿಸಿದಾಗಲೇ ಪ್ರಾರಂಭವಾಗುವುದು. ಮೆದುಳು ಜ್ವರದವರಲ್ಲಿ ಶೇ. 15ರಷ್ಟು ಜನ ಸಾಯುತ್ತಾರೆ. ಕಿವುಡುತನಕ್ಕೂ ಒಳಗಾಗಬಹುದು. ಹೃದಯದ ಮೇಲೂ ಪರಿಣಾಮ ಬೀರುವುದು. ಆದರೆ ಇದು ಅತಿ ವಿರಳ.

ದಡಾರ ಬೇನೆಯಿಂದ ಗುಣಮುಖ ಹೊಂದಿದ 7–10 ವರ್ಷದ ನಂತರ, ವಿಕೃತಗೊಂಡ ದಡಾರ ವೈರಾಣುವು ದೇಹದ ನರಗಳಲ್ಲಿ ಬಹಳಷ್ಟು ವರ್ಷ ಉಳಿದುಕೊಂಡು ನಂತರ ವೈರಾಣವು ತನ್ನ ಶಕ್ತಿ ವೃದ್ಧಿಸಿಕೊಂಡು ನರವ್ಯೂಹದಲ್ಲಿನ ಕಣಗಳನ್ನು ನಾಶಪಡಿಸುತ್ತಾ ಹೋಗುತ್ತದೆ. ಆದರೆ ಇದು ಅತಿ ವಿರಳ. ಅತಿ ಸಣ್ಣ ವಯಸ್ಸಿನಲ್ಲಿ (ಅಂದರೆ <2 ವರ್ಷ) ದಡಾರ ಬೇನೆ ಬಂದಲ್ಲಿ SSPE ಆಗುವ ಸಾಧ್ಯತೆ ಹೆಚ್ಚು. ಅದರಲ್ಲೂ ಗಂಡುಮಕ್ಕಳಲ್ಲಿ ಇದು ಹೆಚ್ಚು. ದಡಾರಕ್ಕೆ ತುತ್ತಾದ 10 ವರ್ಷಗಳ ನಂತರ SSPE ರೋಗಲಕ್ಷಣಗಳು ಕಾಣಲು ಪ್ರಾರಂಭವಾಗುವುವು. ದಡಾರವನ್ನು ತಡೆಗಟ್ಟಬೇಕಾದರೆ ದಡಾರ–ಲಸಿಕೆ ಒಂದೇ ಉಪಾಯ.

ರೋಗ ತಡೆಗಟ್ಟುವಿಕೆ: ಈ ಮೊದಲು ಮೀಸಲ್ಸ್‌ನ ಮೊದಲನೆಯ ಡೋಸ್ ಅನ್ನು 9–12 ತಿಂಗಳಲ್ಲಿ ನೀಡಬೇಕೆಂದು ನಮ್ಮ ರಾಷ್ಟ್ರೀಯ ಲಸಿಕಾ ವೇಳಾಪಟ್ಟಿಯಲ್ಲಿ ಇತ್ತು. ಆದರೆ ದಡಾರ ಪ್ರಕರಣಗಳು ಹೆಚ್ಚು ಕಂಡು ಬಂದ ಹಿನ್ನಲೆಯಲ್ಲಿ ಸರ್ಕಾರವು ಎರಡನೆಯ ಡೋಸ್‌ ಅನ್ನು 16–18 ವಾರದಲ್ಲಿ ನೀಡಲು ಪ್ರಾರಂಭಿಸಿತ್ತು. ದಡಾರ ಬೇನೆ ಕಾಣಿಸಿಕೊಂಡ 72 ತಾಸುಗಳಲ್ಲಿ ದಡಾರ ಲಸಿಕೆಯನ್ನು ಕೊಡಿಸಿದರೆ ಅದರ ತೀವ್ರತೆಗಳನ್ನು ಕಡಿಮೆ ಮಾಡಬಹುದು. ದಡಾರ ಬೇನೆಗೆ ತುತ್ತಾದ ಆರು ದಿನಗಳಲ್ಲಿ Immunoglobulin ನೀಡಿದರೆ ಬೇನೆಯನ್ನು ತಪ್ಪಿಸಬಹುದು ಅಥವಾ ತೀವ್ರತೆ ಕಡಿಮೆ ಮಾಡಬಹುದು.

ದಡಾರ–ರುಬೆಲ್ಲಾ ಲಸಿಕಾ ಅಭಿಯಾನ: ನಿಯತವಾಗಿ ಲಸಿಕೆ ನೀಡಿದರೂ ಸಹ ರೋಗದ ಪ್ರಕರಣಗಳು ಹೆಚ್ಚಾಗುತ್ತಿದನ್ನು ಮನಗಂಡು ಭಾರತ ಸರ್ಕಾರವು ಈ ವರ್ಷ ಫೆಬ್ರುವರಿ 7ರಿಂದ 28ರ ವರೆಗೆ ದಡಾರ–ರುಬೆಲ್ಲಾ ಲಸಿಕಾ ಅಭಿಯಾನವನ್ನು ಕೈಗೊಂಡಿದೆ.

ದಡಾರ–ರುಬೆಲ್ಲಾ ಲಸಿಕೆಯು ದಡಾರ ಮತ್ತು ರುಬೆಲ್ಲಾ ಕಾಯಿಲೆಗಳಿಂದ ರಕ್ಷಣೆ ನೀಡುತ್ತದೆ. MR ಲಸಿಕೆಯನ್ನು ವಿಶೇಷ ಅಭಿಯಾನದ ಮೂಲಕ ರಾಜ್ಯದ ಒಂಬತ್ತು ತಿಂಗಳಿಂದ 15 ವರ್ಷದೊಳಗಿನ ಎಲ್ಲ ಮಕ್ಕಳಿಗೂ ನೀಡಲಾಗುತ್ತದೆ. ಈ ಅಭಿಯಾನವು ರಾಜ್ಯದ ಎಲ್ಲಾ ಶಾಲೆಗಳಲ್ಲಿ, ಅಂಗನವಾಡಿ ಕೇಂದ್ರಗಳಲ್ಲಿ ಮತ್ತು ಎಲ್ಲ ಸರ್ಕಾರಿ ಆರೋಗ್ಯ ಸಂಸ್ಥೆಗಳಲ್ಲಿ ಹಮ್ಮಿಕೊಳ್ಳಲಾಗುತ್ತದೆ. ಈ ಹಿಂದೆ ಲಸಿಕೆ ಪಡೆದಿದ್ದರೂ ಅಭಿಯಾನದ ಸಂದರ್ಭದಲ್ಲಿ MR ಲಸಿಕೆಯನ್ನು ನೀಡಬೇಕಾಗುತ್ತದೆ. ಸಾರ್ವಜನಿಕರು ತಮ್ಮ ಪ್ರದೇಶದಲ್ಲಿರುವ ಒಂಬತ್ತು ತಿಂಗಳಿಂದ 15 ವರ್ಷದ ಮಕ್ಕಳನ್ನು ಸಮೀಪದ ಲಸಿಕಾ ಕೇಂದ್ರಗಳಿಗೆ ಕರೆದುಕೊಂಡು ಹೋಗಬೇಕು. ಶಾಲೆಗೆ ಹೋಗುವ ತಮ್ಮ ಮಕ್ಕಳಿಗೆ ಶಾಲೆಯಲ್ಲಿ ದಡಾರ–ರುಬೆಲ್ಲಾ ಲಸಿಕೆಯನ್ನು ಪಡೆಯಲು ಅನುಮತಿಯನ್ನೂ ನೀಡಬೇಕು.

ಯಾವುದೇ ಅಡ್ಡಿ ಪರಿಣಾಮ ಕಂಡು ಬಂದಲ್ಲಿ ಸೂಕ್ತ ಚಿಕಿತ್ಸೆಯನ್ನು ಪಡೆಯಿರಿ. ಇನ್ನಿತರ ಪಾಲಕರಿಗೂ ಸಹ ತಮ್ಮ ಮಕ್ಕಳಿಗೆ ಲಸಿಕೆ ಪಡೆಯಲು ಉತ್ತೇಜನ ನೀಡಿ, ಲಸಿಕಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತಿಳಿಸಬೇಕು.
*
ರುಬೆಲ್ಲಾ: ‘ಮೂರು ದಿನದ ಮೀಸಲ್ಸ್’ 
ರುಬೆಲ್ಲಾ ಇದಕ್ಕೆ ‘ಜರ್ಮನ್ ಮೀಸಲ್ಸ್’ ಅಥವಾ ‘ಮೂರು ದಿನದ ಮೀಸಲ್ಸ್’ ಎಂದೂ ಕರೆಯುತ್ತಾರೆ. ಇದು ಮಕ್ಕಳಲ್ಲಿ ಸಾಮಾನ್ಯವಾಗಿ ಹೆಚ್ಚು ತೊಂದರೆಯನ್ನು ಉಂಟುಮಾಡುವುದಿಲ್ಲ. ಆದರೆ ವಯಸ್ಕರಲ್ಲಿ  ತೊಂದರೆಗಳನ್ನು ಉಂಟುಮಾಡುವುದು. ರುಬೆಲ್ಲಾ ವೈರಾಣುವು ಮನುಷ್ಯನಲ್ಲಿ ಮಾತ್ರ ಜೀವಿಸಬಲ್ಲದು.

ರುಬೆಲ್ಲಾ ಲಸಿಕೆ ಕಂಡು ಹಿಡಿಯುವ ಮೊದಲು ರುಬೆಲ್ಲಾ ಬೇನೆಯಿಂದ ಸಾಕಷ್ಟು ಸಾವು–ನೋವುಗಳಾಗುತ್ತಿದ್ದವು. 1969ರಲ್ಲಿ ರುಬೆಲ್ಲಾ ಲಸಿಕೆಯನ್ನು ಕಂಡುಹಿಡಿಯಲಾಯಿತು. ಇದಾದ ಮೇಲೆ ರುಬೆಲ್ಲಾ ಪ್ರಕರಣಗಳು ಕಡಿಮೆ ಆಗುತ್ತಹೋದವು. ಲಸಿಕೆ ನೀಡುವ  ಪ್ರಕರಣಗಳು ಹೆಚ್ಚುತ್ತಾ ಹೋದಂತೆ ರುಬೆಲ್ಲಾ ಲಸಿಕೆಯನ್ನು ಎರಡು ಡೋಸ್‌ಗಳಲ್ಲಿ ನೀಡಲು ನಿರ್ಧರಿಸಲಾಯಿತು. ಆದರೆ ನಮ್ಮ ದೇಶದಲ್ಲಿ ಇದೇ ಮೊದಲ ಬಾರಿಗೆ ಸರ್ಕಾರದ ವತಿಯಿಂದ ರುಬೆಲ್ಲಾ ಲಸಿಕೆಯನ್ನು ದಡಾರ ಲಸಿಕೆಯೊಂದಿಗೆ ಸೇರಿಸಿ MR ಲಸಿಕಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.

ರುಬೆಲ್ಲಾ ವೈರಾಣುವಿನ ಸಂಪರ್ಕಕ್ಕೆ ಬಂದ 14ರಿಂದ 21 ದಿನಗಳಲ್ಲಿ ವ್ಯಕ್ತಿಗೆ ಜ್ವರ, ಗಂಟಲು ಕೆರೆತ, ಕಣ್ಣುಗಳು ಕೆಂಪಾಗಿ ಕಾಣುವುದು, ತಲೆನೋವು, ಮೈ ಕೈ ನೋವು, ಹಸಿವು ಕಡಿಮೆ ಆಗುವುದು, ದುಗ್ಧರಸಗ್ರಂಥಿಗಳಲ್ಲಿ ಊತ ಕಾಣಿಸಿಕೊಳ್ಳುವುದು. ಮೈ ಮೇಲೆ ಸಣ್ಣ ಸಣ್ಣ ಕೆಂಪು ಬಣ್ಣದ ಬೊಕ್ಕೆಗಳು ಮೊದಲು ಮುಖ ಹಾಗೂ ಕುತ್ತಿಗೆ ನಂತರ ಕೈ ಕಾಲುಗಳಲ್ಲಿ ಕಂಡು ಬರುವುದು. ಅದೇ ಸಮಯದಲ್ಲಿ ಬಾಯಿಯಲ್ಲಿಯೂ ಕೂಡ ಗುಲಾಬಿಬಣ್ಣದ ಸಣ್ಣ ಸಣ್ಣ ಬೊಕ್ಕೆಗಳು ಕಾಣುತ್ತವೆ.  ಸಾಮಾನ್ಯವಾಗಿ ಈ ಬೊಕ್ಕೆಗಳು ಮೂರು ದಿನಗಳಲ್ಲಿ ಮಾಯವಾಗುತ್ತವೆ. ಶೇ. 25-40ರಷ್ಟು ಮಕ್ಕಳಲ್ಲಿ ಬೊಕ್ಕೆಗಳು ಇರುವುದಿಲ್ಲ. 

ತಲೆಯ ಹಿಂದಿನ, ಕಿವಿಯ ಹಿಂದಿನ ಹಾಗು ಕುತ್ತಿಗೆಯ ಮುಂಭಾಗದಲ್ಲಿನ ದುಗ್ಧರಸಗ್ರಂಥಿಗಳು ಮುಖ್ಯವಾಗಿ ಊದುಕೊಂಡಿರುತ್ತವೆ. ಶೇ. 90ರಷ್ಟು ಗರ್ಭಿಣಿಯ ಭ್ರೂಣಕ್ಕೆ ಇದು ಹಾನಿಯನ್ನು ಉಂಟುಮಾಡುತ್ತದೆ.  ಈ ರೋಗವು ಸಾಮಾನ್ಯವಾಗಿ ದಡಾರ ರೋಗಲಕ್ಷಣಗಳಿಗೆ ಹೋಲುವುದುಂಟು. ಆದರೆ ಇದರಲ್ಲಿ Kopik Spots ಇರುವುದಿಲ್ಲ. ಅಲ್ಲದೆ ದಡಾರನಲ್ಲಿದ್ದ ಹಾಗೆ ಪ್ರಾರಂಭಿಕ ರೋಗಲಕ್ಷಣಗಳು ಇರುವುದಿಲ್ಲ; ಮತ್ತು ರುಬೆಲ್ಲಾದ ಲಕ್ಷಣಗಳು ಬೇಗ ಮಾಯಾವಾಗುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT