ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಿಷ್ಠ ಆದಾಯ ಖಾತರಿ ಚಿಂತನೆ ಸರ್ಕಾರದ ಕ್ರಾಂತಿಕಾರಿ ಆಲೋಚನೆ

Last Updated 3 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಬಡವರಿಗೆ ಕನಿಷ್ಠ ಆದಾಯದ  ಖಾತರಿ (ಯುಬಿಐ) ನೀಡುವ ಪರಿಕಲ್ಪನೆ ಬಗ್ಗೆ ಆರ್ಥಿಕ ಸಮೀಕ್ಷೆಯಲ್ಲಿ  ಇದೇ ಮೊದಲ ಬಾರಿಗೆ ಉಲ್ಲೇಖಿಸಲಾಗಿದೆ. ಇದರಿಂದ ಬಡತನ ನಿವಾರಣೆ ಕಾರ್ಯಕ್ರಮಗಳ ಕುರಿತು ಹೊಸ ಚರ್ಚೆಗೆ ಮುನ್ನುಡಿ ಬರೆದಂತಾಗಿದೆ.

ಸಾಮಾಜಿಕ ಭದ್ರತೆ ಯೋಜನೆಯ  ಈ ಚಿಂತನೆ ಹೊಸದೇನೂ ಅಲ್ಲ. ಆದರೆ, ಕೇಂದ್ರ ಸರ್ಕಾರದ ಮಟ್ಟದಲ್ಲಿ ಇಂತಹದ್ದೊಂದು ಆಲೋಚನೆ ಪರಿಶೀಲನೆಗೆ ಕೈಗೆತ್ತಿಕೊಂಡಿರುವುದು ಪ್ರಮುಖ ಬೆಳವಣಿಗೆಯಾಗಿದೆ.  ‘ಸರ್ವರಿಗೂ ಮೂಲ ಆದಾಯ’ (Universal basic income) ಎನ್ನುವ ಈ ಪರಿಕಲ್ಪನೆಯನ್ನು ಭಾರತದ ಸಂದರ್ಭದಲ್ಲಿ ಬಡತನ ನಿವಾರಣೆಗೆ ಅನ್ವಯಿಸಿ ಹೇಳಬಹುದಾಗಿದೆ.

ಇದೊಂದು ಕ್ರಾಂತಿಕಾರಕ ಆಲೋಚನೆಯಾಗಿದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಕೇಂದ್ರ ಸರ್ಕಾರವೊಂದೇ ನಿರ್ವಹಿಸುವ 950ರಷ್ಟು ಬಡತನ ನಿರ್ಮೂಲನಾ ಯೋಜನೆಗಳಿವೆ. ಈ ಎಲ್ಲ ಕಾರ್ಯಕ್ರಮಗಳ ಉದ್ದೇಶಗಳು ಚೆನ್ನಾಗಿವೆ. ಆದರೆ, ಅವುಗಳ ಜಾರಿ ವಿಷಯದಲ್ಲಿ ಸಾಕಷ್ಟು ಲೋಪದೋಷಗಳಿವೆ. 

ಬಹುತೇಕ ಯೋಜನೆಗಳು ಜಾರಿ ವಿಳಂಬ, ಸೋರಿಕೆ ಮುಂತಾದ ವೈಫಲ್ಯಗಳಿಂದ ಸೊರಗಿವೆ. ಅರ್ಹ ಫಲಾನುಭವಿಗಳನ್ನು ತಲುಪಲು ವಿಫಲವಾಗಿವೆ.  ತಮ್ಮ ಜೀವನಾವಶ್ಯಕ ಅಗತ್ಯಗಳನ್ನು ಈಡೇರಿಸಿಕೊಳ್ಳಲು ಎಲ್ಲ ಫಲಾನುಭವಿಗಳಿಗೆ ಸಮಾನ ನೆಲೆಯಲ್ಲಿ ಹಣಕಾಸಿನ ನೆರವು ಒದಗಿಸುವುದು  ಮತ್ತು  ಬಡವರು ತಮ್ಮ ಆರ್ಥಿಕ ಆಯ್ಕೆಗಳನ್ನು ನಿಗದಿಪಡಿಸಿಕೊಳ್ಳಲು ಅವರನ್ನು ಸಬಲರನ್ನಾಗಿಸುವುದೇ ಈ ಚಿಂತನೆಯ ಮೂಲ ಆಶಯವಾಗಿದೆ.

ಸಾಮಾಜಿಕ ಭದ್ರತಾ ಯೋಜನೆಗಳಿಗೂ  ಇದು ಪರ್ಯಾಯವಾಗಿರಲಿದೆ. ಈ ಯೋಜನೆಯಡಿ ನೀಡುವ ಹಣವನ್ನು ಬಡವರಿಗೆ ಬಡ್ಡಿರಹಿತವಾಗಿ ನೀಡುವ ಸಾಲ ಎಂದೂ ಸರ್ಕಾರ ಪರಿಗಣಿಸಬಹುದಾಗಿದೆ. ಮಹಾತ್ಮ ಗಾಂಧಿ ಅವರ ಮಾತಿನಲ್ಲಿಯೇ ಹೇಳುವುದಾದರೆ, ‘ಪ್ರತಿಯೊಬ್ಬರ ಕಣ್ಣೀರನ್ನು ಒರೆಸುವ’ ಸದಾಶಯ ಈ ಯೋಜನೆಯಲ್ಲಿ ಅಡಕವಾಗಿದೆ. ಜೀವನಾವಶ್ಯಕ ಸರಕುಗಳನ್ನು ಖರೀದಿಸುವ ಬಡವರಿಗೆ ಅವರ ಬ್ಯಾಂಕ್‌ ಖಾತೆಗೆ ನೇರವಾಗಿ ಹಣ ಪಾವತಿಸುವುದು ಈ ವ್ಯವಸ್ಥೆಯ ಮುಖ್ಯ ಉದ್ದೇಶವಾಗಿದೆ.

ಸಬ್ಸಿಡಿ ಬದಲಾಗಿ ಫಲಾನುಭವಿಗಳಿಗೆ ನೇರವಾಗಿ ನಗದು ವರ್ಗಾಯಿಸುವುದರಿಂದ ಒಟ್ಟು ಆಂತರಿಕ ಉತ್ಪನ್ನದಲ್ಲಿ (ಜಿಡಿಪಿ) ಶೇ 2.7ರಷ್ಟು ಉಳಿತಾಯ ಮಾಡಲು ಸಾಧ್ಯವಿದೆ. ಬಡತನ ನಿರ್ಮೂಲನೆ ಕಾರ್ಯಕ್ರಮಗಳಿಗೆ ಸದ್ಯಕ್ಕೆ ದುರ್ಬಳಕೆ, ಸೋರಿಕೆಯಂತಹ ಅನಿಷ್ಟಗಳು ಅಂಟಿಕೊಂಡಿವೆ. ಬಹುತೇಕ ಯೋಜನೆಗಳ ಪ್ರಯೋಜನಗಳು ಅನರ್ಹರ ಪಾಲಾಗುತ್ತಿವೆ. ಈ ಲೋಪದೋಷಗಳನ್ನು ಸರಿಪಡಿಸಿ, ಬಡತನದ ಪ್ರಮಾಣವನ್ನು ಗಣನೀಯವಾಗಿ  ಇಳಿಸಲೂ ಇದು ನೆರವಾಗಲಿದೆ.

ಹೊಸ ಚಿಂತನೆ ಕಾರ್ಯಗತಗೊಳಿಸುವ ಹಾದಿ ಏನೂ ಸುಗಮವಾಗಿಲ್ಲ.  ವ್ಯಕ್ತಿ ಅಥವಾ  ಕುಟುಂಬವೊಂದು ಘನತೆಯ ಜೀವನ ನಡೆಸಲು ಬೇಕಾಗುವ ಕನಿಷ್ಠ ಪ್ರಮಾಣದ ಹಣವನ್ನು ಸರ್ಕಾರವು ಫಲಾನುಭವಿಗಳಿಗೆ ನೇರವಾಗಿ ನೀಡುವ ಈ ಯೋಜನೆ ಜಾರಿಯಲ್ಲಿ ಹತ್ತಾರು ಅಡಚಣೆಗಳಿವೆ. ಒಂದು ವೇಳೆ ಹೊಸ ವ್ಯವಸ್ಥೆ ಜಾರಿಗೆ ಬಂದರೆ, ಆಹಾರಧಾನ್ಯ, ಇಂಧನ, ರಸಗೊಬ್ಬರ ಮತ್ತಿತರ ಸರಕುಗಳ ಮಾರಾಟಗಾರರಿಗೆ ನೀಡಲಾಗುತ್ತಿರುವ ಸಬ್ಸಿಡಿ ಹೊರೆ  ಕಡಿಮೆಯಾಗಲಿದೆ.

ಬಡವರಿಗೆ ಪಡಿತರ ವ್ಯವಸ್ಥೆ ಮೂಲಕ ವಿತರಿಸಲಾಗುವ ಅಗ್ಗದ  ಗೋಧಿ, ಅಕ್ಕಿ ಮತ್ತಿತರ ಧಾನ್ಯಗಳನ್ನು ಪೂರೈಸಲು ಇರುವ ಆಡಳಿತಾತ್ಮಕ ವ್ಯವಸ್ಥೆಗೆ ಮಾಡುವ ವೆಚ್ಚ  ತಗ್ಗಲಿದೆ. ನಗದು ನೇರ ವರ್ಗಾವಣೆಯಿಂದ ಫಲಾನುಭವಿಗಳು ದುಡಿಯುವುದನ್ನೇ ಮರೆತು ಆಲಸಿಗಳಾಗುವ, ಕುಡಿತಕ್ಕೆ ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇದೆ ಎನ್ನುವುದು ಕೆಲಮಟ್ಟಿಗೆ ನಿಜ.

ಆದರೆ, ಎಲ್ಲ ಕಾಲಕ್ಕೂ ಎಲ್ಲರೂ ಹಾಗೆ ಮಾಡಲಾರರು. ಮಧ್ಯಪ್ರದೇಶದಲ್ಲಿನ ಪ್ರಾಯೋಗಿಕ ಯೋಜನೆ ಯಶಸ್ಸು ಆಧಾರವಾಗಿರಬೇಕಷ್ಟೆ. ಇದೇ ನೆಪ ಮುಂದಿಟ್ಟುಕೊಂಡು, ವ್ಯವಸ್ಥೆಯಲ್ಲಿನ ಸ್ಥಾಪಿತ ಹಿತಾಸಕ್ತಿಗಳು ಆರಂಭದಲ್ಲಿಯೇ ಈ ಯೋಜನೆ ಹಳಿತಪ್ಪಿಸಲು ಹವಣಿಸುವ ಸಾಧ್ಯತೆ ಇದ್ದೇ ಇದೆ. 

ಈ ಯೋಜನೆ ಜಾರಿಗೆ ಸದ್ಯಕ್ಕೆ ಕಾಲ ಪಕ್ವವಾಗಿಲ್ಲ ಎಂದರೂ, ಆ ಬಗ್ಗೆ ಚರ್ಚೆಗೆ ಅವಕಾಶ ಕಲ್ಪಿಸಿರುವುದು ಸರಿಯಾದ ನಡೆಯಾಗಿದೆ. ಯೋಜನೆಯ ಯಶಸ್ಸಿಗೆ ಫಲಾನುಭವಿಗಳ ಬಳಿ ಜನಧನ್‌ ಖಾತೆ, ಆಧಾರ್‌ ಸಂಖ್ಯೆ ಮತ್ತು ಮೊಬೈಲ್‌ ಫೋನ್‌ ಇರಬೇಕಾಗಿದೆ.

ಈ ಯೋಜನೆಯ ವೆಚ್ಚ ಹಂಚಿಕೆ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಹಮತಕ್ಕೆ ಬರಬೇಕಾಗಿದೆ. ಸರ್ಕಾರ ಈ ನಿಟ್ಟಿನಲ್ಲಿ ಯುಕ್ತಾಯುಕ್ತತೆಯಿಂದ ಆಲೋಚಿಸಿ ಕಾರ್ಯಪ್ರವೃತ್ತವಾಗಬೇಕಾಗಿದೆ. ಅತ್ಯಂತ ಹಿಂದುಳಿದ ಪ್ರದೇಶಗಳಲ್ಲಿ ಈ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಿ ಅದರ ಸಾಧನೆ ಮತ್ತು ವೈಫಲ್ಯಗಳನ್ನು ಗುರುತಿಸಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT