ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲಕ್ಷಿತ ಸಮುದಾಯ ಸಾಹಿತ್ಯದ ಜೀವಾಳ

ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಡಾ.ಸಣ್ಣರಾಮ ಮನದಾಳದ ಮಾತು
Last Updated 4 ಫೆಬ್ರುವರಿ 2017, 7:54 IST
ಅಕ್ಷರ ಗಾತ್ರ
ಶಿವಮೊಗ್ಗ: ಭಾರತೀಯ ಸಂಸ್ಕೃತಿ, ಕೃಷಿ ವ್ಯವಸ್ಥೆ, ಗ್ರಾಮೀಣ ಬದುಕಿನ ಮೇಲೆ ಬಿರುಗಾಳಿಯಂತೆ ಅಪ್ಪಳಿಸಿದ ಜಾಗತೀಕರಣದ ಹೆಸರೆತ್ತಿದರೆ ಸಾಕು ಕಣ್ಣುಗಳಲ್ಲೇ ಕೆಂಡ ಕಾರುತ್ತಾರೆ.
 
ಶೋಷಿತರು, ದಮನಿತರ ನೋವಿಗೆ ಬರಹಗಳ ಮೂಲಕ ಧ್ವನಿಯಾಗುತ್ತಾರೆ. ವರ್ಣ ವ್ಯವಸ್ಥೆ, ಜಾತಿ ಪದ್ಧತಿ ಹುಟ್ಟುಹಾಕಿದ ಸನಾತನ ಧರ್ಮದ ವಿರುದ್ಧ ಸಣ್ಣಗೆ ಗುಡುಗುತ್ತಾರೆ. ಅಂಬೇಡ್ಕರ್‌ ಅವರ ತತ್ವಾದರ್ಶ ಉಸಿರಾಗಿಸಿಕೊಂಡಿದ್ದಾರೆ. ಸದಾ ಬಂಡಾಯದ ಕಹಳೆ ಮೊಳಗಿಸುತ್ತಲೇ ತಣ್ಣಗೆ ಸಾಹಿತ್ಯ ಕೃಷಿಯಲ್ಲಿ ತೊಡಗುತ್ತಾರೆ.
 
 –ಅವರೇ ಡಾ.ಸಣ್ಣರಾಮ. ನಗರದ ಕುವೆಂಪು ರಂಗಮಂದಿರದಲ್ಲಿ ಇಂದು (ಶನಿವಾರ) ಮತ್ತು ನಾಳೆ (ಭಾನುವಾರ) ನಡೆಯುವ ಜಿಲ್ಲಾ 11ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರು.
 
1991ರಲ್ಲಿ ಕೇಂದ್ರದ ಅಂದಿನ ಪಿ.ವಿ.ನರಸಿಂಹರಾವ್ ನೇತೃತ್ವದ ಸರ್ಕಾರ ಜಾಗತೀಕರಣಕ್ಕೆ ದೇಶದ ಬಾಗಿಲು ತೆರೆದಾಗ ಸಾಹಿತಿ, ಪ್ರಾಧ್ಯಾಪಕ ಡಾ.ಸಣ್ಣರಾಮ ಕೂಡ ಆಘಾತಕ್ಕೆ ಒಳಗಾಗಿದ್ದರು. ಆ ನಂತರದ ಅವರ ಬಹುತೇಕ ಬರಹಗಳು ಜಾಗತೀಕರಣಕ್ಕೆ ಮುಖಾಮುಖಿಯಾಗೇ ಸಾಗಿವೆ.
 
ಜಾಗತೀಕರಣ ಎನ್ನುವುದು ಬಹುಮುಖ ಚಲನೆ. ಅದು ಜಗತ್ತಿನ ಎಲ್ಲೆಡೆ ನಿರಾತಂಕವಾಗಿ ನುಗ್ಗುತ್ತದೆ. ಎಲ್ಲಿ ಅಡ್ಡಿ ಎದುರಾಗುತ್ತದೆಯೋ ಆ ಮಾರ್ಗ ಬದಲಾಯಿಸುತ್ತದೆ. ಪ್ರತಿರೋಧ ತೋರದ ಎಲ್ಲ ಕ್ಷೇತ್ರಗಳನ್ನು ನಾಶ ಮಾಡಿಬಿಡುತ್ತದೆ. ಭಾರತೀಯ ಸಂಸ್ಕೃತಿಯಲ್ಲಿ ಅಂತರ್ಗತವಾಗಿರುವ ಶಾಂತಿ, ನೆಮ್ಮದಿ, ಜೀವನ ವಿಧಾನ, ತಾಳ್ಮೆ, ಸಹಾನುಭೂತಿ, ಮೌಲ್ಯಗಳನ್ನು ಹೊಸಕಿಹಾಕುತ್ತದೆ ಎಂದು ಸಣ್ಣರಾಮ ಅವರು ಜಾಗತೀಕರಣದ ಅಪಾಯ ಬಿಚ್ಚಿಟ್ಟರು.
 
ಜಾಗತೀಕರಣ ಎನ್ನುವುದು ವೇಗದ ಚಲನೆ. ಭಾರತೀಯ ಜನ ಸಮುದಾಯ ಈ ಚಲನೆಗೆ ಬೇಗನೆ ಒಗ್ಗುವುದಿಲ್ಲ. ಭಾರತೀಯರ ನಿಧಾನಗತಿಯ ಆಲೋಚನೆ, ವ್ಯವಸ್ಥೆಯ ಮಂದಗತಿಯ ಚಲನೆಯ ಫಲವಾಗಿ ಬಹುದೊಡ್ಡ ಕಂದಕ ನಿರ್ಮಾಣವಾಗಿದೆ. ಬೆಲೆ ಕುಸಿತ, ಉತ್ಪಾದನಾ ವೆಚ್ಚ ಹೆಚ್ಚಳ, ರೈತರ ಆತ್ಮಹತ್ಯೆ ಪ್ರಕರಣಗಳು ಜಾಗತೀಕರಣದ ಫಲ. ಇತರೆ ದೇಶಗಳಲ್ಲಿ ಹಲವು ಶತಮಾನಗಳ ಹಿಂದೆಯೇ ನಗರೀಕರಣ ಗೊಂಡ ಸಮುದಾಯ ಗಳಿವೆ. ಭಾರತ ಗ್ರಾಮೀಣ ತಳಪಾಯದ ಮೇಲೆ ನಿರ್ಮಾಣವಾದ ದೇಶ. ಹಾಗಾಗಿ, ಜಾಗತೀಕರಣ ಶಾಪವಾಗಿದೆ ಎಂದು ವಿಶ್ಲೇಷಿಸುತ್ತಾರೆ. 
 
ಭಾರತೀಯರು ಎಂತಹ ಸವಾಲು ಗಳನ್ನಾದರೂ ಎದುರಿಸುವ ಸಾಮರ್ಥ್ಯ ಹೊಂದಿದ್ದಾರೆ. ಯಾವುದೇ ಒಂದು ಹೊಸ ಸಂಸ್ಕೃತಿ, ಪದ್ಧತಿಗೆ ಮುಖಾಮುಖಿಯಾದಾಗ ಅನುಸಂಧಾನ ವಾಗುತ್ತದೆ. ಇಲ್ಲವೇ ಮರುಹುಟ್ಟು ಪಡೆಯುತ್ತದೆ. ಜಾಗತೀಕರಣದ ಕೂಸು ಮಾರಾಟ ಮಹಲುಗಳಿಗೆ ಪರ್ಯಾಯ ವಾಗಿ ರೈತ ಸಂತೆಗಳು ಹುಟ್ಟಿಕೊಂಡಂತೆ ಇಂದು ಜಾಗತೀಕರಣದ ದಾಳಿಗೆ ಸಿಲುಕಿದರೂ ಮತ್ತೆ ಮರುಹುಟ್ಟು ಪಡೆಯುತ್ತಿರುವ ವ್ಯವಸ್ಥೆ ಕುರಿತು ಮೆಚ್ಚುಗೆಯನ್ನೂ ವ್ಯಕ್ತಪಡಿಸುತ್ತಾರೆ.
 
ಜಾಗತೀಕರಣವೂ ಸೇರಿದಂತೆ ವ್ಯವಸ್ಥೆಯ ಕುರಿತು ಸೂಕ್ಷ್ಮ ಸಂವೇದನೆ ಹೊಂದಿರುವ ಡಾ.ಸಣ್ಣರಾಮ ಅವರು ಸಮ್ಮೇಳನದ ಹಿನ್ನೆಲೆಯಲ್ಲಿ ‘ಪ್ರಜಾವಾಣಿ’ ಜತೆ ಮನಬಿಚ್ಚಿ ಮಾತನಾಡಿದರು.
 
* ಜಾಗತೀಕರಣದ ಪ್ರವಾಹ ತಡೆಯಲು ಸಾಧ್ಯವಿಲ್ಲವೇ?
ಇದೆ. ನಮ್ಮನ್ನು ಆಳುವ ಸರ್ಕಾರಗಳು ಸಮಾಜಮುಖಿ ಚಿಂತನೆ ನಡೆಸಬೇಕು. ಕಾರ್ಪೋರೇಟ್‌ ಮುಖಿ ಆಗಬಾರದು. 25 ವರ್ಷಗಳ ಹಿಂದೆ ಕೇಂದ್ರ ಸರ್ಕಾರ ಸಮಾಜಮುಖಿಯಾಗಿ ಆಲೋಚಿಸಿದ್ದರೆ ದೇಶಕ್ಕೆ ಇಂತಹ ಪರಿಸ್ಥಿತಿ ಎದುರಾಗುತ್ತಿರಲಿಲ್ಲ. ಹಾಗಾಗಿ, ಸಾಹಿತ್ಯದ ಮೂಲಕ ನನ್ನಂಥವರು ಈ ಕುರಿತು ಚಿಂತನೆ ಮಾಡಿದೆವು. ಕಾವ್ಯ, ಕಥೆ, ಕಾದಂಬರಿಗಳಲ್ಲೂ ಜಾಗತೀ ಕರಣದ ವಿರುದ್ಧ ಗಟ್ಟಿ ಧ್ವನಿ ಎತ್ತಲಾಯಿತು. 
 
* ಬದಲಾದ ಕಾಲಘಟ್ಟದಲ್ಲಿ ಇಂದು ಸಾಹಿತ್ಯ ಜನಾಭಿಪ್ರಾಯ ರೂಪಿಸುವ ಶಕ್ತಿ ಉಳಿಸಿಕೊಂಡಿದೆಯೇ?
 ಸಾಹಿತ್ಯ ಪ್ರಭಾವಶಾಲಿಯಾಗಿಯೇ ಇದೆ. ಆದರೆ, ಓದುಗರ ಸಂಖ್ಯೆ ಕಡಿಮೆಯಾಗುತ್ತಿರುವುದು ಕಳವಳಕಾರಿ ವಿಚಾರ. ಸಾಹಿತ್ಯ ಸಮಾಜದ ಜತೆ ನಿರಂತರ ಸಂಬಂಧ ಬೆಸೆಯುತ್ತದೆ. ಸಮಾಜವನ್ನು ರೂಪಿಸುತ್ತದೆ. ಇಂದಿನ ಯುವ ಪೀಳಿಗೆ ಮೊಬೈಲ್‌, ಕಂಪ್ಯೂಟರ್, ಟಿವಿಗಳಲ್ಲೇ ಕಳೆದು ಹೋಗುತ್ತಿದ್ದಾರೆ. ಪುಸ್ತಕ ಸಂಸ್ಕೃತಿ ನಾಶವಾಗುತ್ತದೆ. ನಂಬಿಕೊಂಡು ಬಂದ ಆದರ್ಶಗಳು ಪತನವಾಗುತ್ತಿವೆ. 
 
* ಯುವಕರ ವಿಮುಖತೆಗೆ ಶಿಕ್ಷಣ ವ್ಯವಸ್ಥೆ ಕಾರಣವೇ?
ಖಂಡಿತ. ಇಂದು ಶಿಕ್ಷಣ ವ್ಯಾಪಾರದ ಸರಕಾಗಿದೆ. ಜ್ಞಾನದ ಓದು ಇಂದು ಜೀವನೋಪಾಯದ ಸಾಧನವಾಗಿ ಬದಲಾಗಿದೆ. ತಾಂತ್ರಿಕ ಶಿಕ್ಷಣವೇ ಮುಖ್ಯ ಎನ್ನುವ ಮನೋಭಾವ ನಿರ್ಮಾಣವಾಗಿದೆ. ಮೂಲ ವಿಜ್ಞಾನ, ಸಮಾಜ ವಿಜ್ಞಾನ ಯಾರಿಗೂ ಬೇಡವಾಗಿದೆ. ಆ ವಿಜ್ಞಾನಗಳಲ್ಲಿರುವ ಸಾಂಸ್ಕೃತಿಕ ವಿಚಾರಧಾರೆ, ಪರಂಪರೆಯ ಮೌಲ್ಯ ಅರ್ಥಮಾಡಿ ಕೊಳ್ಳಲಾರದ ಸ್ಥಿತಿ ತಲುಪಿದ್ದಾರೆ. ಎಲ್ಲರಿಗೂ ವೈದ್ಯರು, ಎಂಜಿನಿಯರ್‌ಗಳಾಗುವ ತವಕವಿದೆ. 
 
* ಸರ್ಕಾರಿ ಶಾಲೆಗಳ ಪತನಕ್ಕೆ ಬಲವಾದ ಕಾರಣ ಇದೆಯೇ?
ಮಾತೃ ಭಾಷೆಯನ್ನು ವೃತ್ತಿಮೂಲ ಭಾಷೆಯಾಗಿ ಪರಿವರ್ತನೆ ಮಾಡದಿರುವುದೇ ದೊಡ್ಡ ಹಿನ್ನಡೆ. ಇಂದು ಜ್ಞಾನಕ್ಕಿಂತ ಹೊಟ್ಟೆಪಾಡು ಮುಖ್ಯವಾಗಿದೆ. ಸ್ವಾತಂತ್ರ ಹೋರಾಟದ ಸಮಯದಲ್ಲಿ ಶಿಕ್ಷಣವನ್ನು ವೃತ್ತಿಯ ಮೆಟ್ಟಿಲಾಗಿ ಪರಿಗಣಿಸಿದವರ ಸಂಖ್ಯೆ ತೀರ ಕಡಿಮೆ. ಹಾಗಾಗಿಯೇ, ಬಹುದೊಡ್ಡ ಸಂಖ್ಯೆಯಲ್ಲಿ ಜನರು ಓದನ್ನೇ ಬಹಿಷ್ಕರಿಸಿ ಚಳವಳಿಗೆ ಧುಮುಕಿದರು. ಇಂದು ಪರಿಸ್ಥಿತಿ ಭಿನ್ನ ವಾಗಿದೆ. ಕನ್ನಡ ಶಾಲೆಗಳಲ್ಲಿ ಓದಿದರೆ ಕೆಲಸ ಸಿಗುತ್ತದೆ ಎನ್ನುವ ಭರವಸೆ ಮೂಡಿಸಬೇಕು. ಐಟಿ, ಬಿಟಿ ಸೇರಿದಂತೆ ಕರ್ನಾಟಕದಲ್ಲಿ ಉದ್ಯೋಗ ನೀಡುವಾಗ ಕನ್ನಡಿಗರಿಗೇ ಮೊದಲ ಆದ್ಯತೆ ನೀಡಬೇಕು. ಕೌಶಲಕ್ಕೆ ಭಾಷೆ ಎಂದೂ ಅಡ್ಡಿಯಲ್ಲ ಎನ್ನುವ ಸತ್ಯ ಮನವರಿಕೆಯಾಗಬೇಕು. ಇಂತಹ ವಿಚಾರಗಳಲ್ಲಿ ಸರ್ಕಾರಕ್ಕೆ ಇಚ್ಛಾಶಕ್ತಿ ಇರಬೇಕು. ಒಂದು ಕಂಪ್ಯೂಟರ್‌ ನೂರು ಜನರ ಕೆಲಸ ಕಸಿಯುತ್ತದೆ ಎನ್ನುವ ವಾಸ್ತವ ಅರ್ಥ ಮಾಡಿಕೊಳ್ಳಬೇಕು. 
 
* ನ್ಯಾಯಾಲಯಗಳಿಗೆ ಮಾತೃ ಭಾಷಾ ಮೌಲ್ಯ ಅರ್ಥವಾಗಿಲ್ಲವೇ?
ಭಾರತದ ಬಹುತೇಕ ರಾಜ್ಯಗಳು ರಚನೆಯಾಗಿರುವುದೇ ಭಾಷಾವಾರು ಪ್ರಾಂತ್ಯಗಳ ಆಧಾರದ ಮೇಲೆ. ಆಯಾ ಭಾಷಿಕರಿಗೆ ಆ ಪ್ರಾಂತ್ಯಗಳಲ್ಲಿ ಪ್ರಾಧಾನ ಸ್ಥಾನ ಸಿಗಲೇ ಬೇಕು. ಮಾತೃಶಿಕ್ಷಣದಲ್ಲಿ ಕಲಿತವರ ಸೃಜನಶೀಲತೆ ಹೇಗಿರುತ್ತದೆ ಎಂದು ಮನೋ ವಿಜ್ಞಾನಿಗಳೇ ವಿಶ್ಲೇಷಿಸಿದ್ದಾರೆ. ಕೇವಲ ಸೀಮಿತ ಹಿನ್ನೆಲೆಯ ವ್ಯಕ್ತಿಗಳಿಂದ ಸಂವಿಧಾನದ ಆಶಯಕ್ಕೆ ಧಕ್ಕೆಯಾಗುತ್ತಿದೆ.
 
* ಭೈರಪ್ಪ ಅವರ ಉಪಸ್ಥಿತಿಗೆ ವಿರೋಧ ಸರಿಯೇ? ಇದು ಎಡ–ಬಲ ಸಂಘರ್ಷವೇ?
ನನ್ನ ಪ್ರಕಾರ ಎಡ–ಬಲ ಎರಡೂ ತಿರಸ್ಕಾರದ ಪರಿಕಲ್ಪನೆಗಳು. ಅದು ದೇಹದ ಪರಿಸ್ಥಿತಿ ಗುರುತಿಸಲಷ್ಟೇ ಸಿಮೀತವಾದರೆ ಚೆನ್ನ. ಇರುವ ಎರಡು ಪ್ರಕಾರ ಸನಾತನ ಸಂಸ್ಕೃತಿಯನ್ನೇ ಪ್ರತಿಪಾದಿಸುವ ಚಿಂತಕರು,  ಪ್ರಗತಿ ಪರ ವಿಚಾರಗಳ ಚಿಂತಕರು. ಭೈರಪ್ಪ ಅವರು ಸನಾತನ ಧರ್ಮದ ಪ್ರತಿಪಾದಕರು. ನಾವು ಅದಕ್ಕೆ ವಿರೋಧಿಗಳು. ನಮ್ಮಂಥವರು ಅವರ ವಿಚಾರ ಒಪ್ಪಿಕೊಳ್ಳುವ ಅಗತ್ಯವಿಲ್ಲ. ಅವರ ಪ್ರಭಾವ ಎಂದಿಗೂ ನಮ್ಮ ಮೇಲೆ ಬೀರುವುದಿಲ್ಲ. ಆದರೆ, ಭೈರಪ್ಪ ಅವರ ಉಪಸ್ಥಿತಿಯನ್ನೇ ವಿರೋಧಿಸುವುದು ತರವಲ್ಲ. ಯಾವತ್ತು ವಿಚಾರಗಳನ್ನು, ವಿಚಾರಗಳಿಂದಲೇ ಎದುರಿಸಬೇಕು. ವ್ಯಕ್ತಿಗತವಾಗಿಯಲ್ಲ. ವೈಚಾರಿಕ ಚಿಂತನೆಗಳ ಪ್ರತಿಪಾದನೆಗೆ ಸಂಘರ್ಷದ ಅಗತ್ಯವಿಲ್ಲ. 
 
* ಶ್ರೀಕಂಠ ಕೂಡಿಗೆ ನಿಮ್ಮ ಗುರುಗಳು. ಗುರುವಿಗಿಂತ ಮುಂಚೆಯೇ ಶಿಷ್ಯನಿಗೆ ಸಮ್ಮೇಳನದ ಅಧ್ಯಕ್ಷತೆ ಒಲಿದಿದೆಯಲ್ಲ?
ಹೌದು. ಸಾಹಿತ್ಯ ಪರಿಷತ್ ಈ ವಿಚಾರ ಹೇಳಿದಾಗ ಕಸಿವಿಸಿಯಾಯಿತು. ಅಳುಕು ಆರಂಭವಾಗಿತ್ತು. ನಂತರ ಕೂಡಿಗೆ ಅವರೇ ಒಪ್ಪಿಕೊಳ್ಳುವಂತೆ ಮನವೊಲಿಸಿದರು. ಹಾರೈಸಿದರು. ಇದು ತುಂಬಾ ಅನಿರೀಕ್ಷಿತ. ಆಶ್ಚರ್ಯ, ಸಂತೋಷ ಎರಡೂ ಆಯಿತು. ಸಾಹಿತಿಗಿಂತ ಬದ್ಧ ಚಳವಳಿಯ ಹಿನ್ನೆಲೆಯಿಂದ ಬಂದ ನನಗೆ ಇಂತಹ ಅವಕಾಶ ಕೊಟ್ಟಿದ್ದಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ. ಜಿಲ್ಲೆಯ ಜನರ ಹೃದಯ ಶ್ರೀಮಂತಿಕೆ ದೊಡ್ಡದು. 
 
* ನಿಮ್ಮ ಆದರ್ಶ ಯಾರು?
ದಲಿತ ಚಳವಳಿಯ ರೂವಾರಿ, ದಸಂಸ ಸ್ಥಾಪಕ ಬಿ.ಕೃಷ್ಣಪ್ಪ ಅವರೇ ನನ್ನ ಆದರ್ಶ. ಅವರ ಜಾತ್ಯತೀತ ಮೌಲ್ಯಗಳಿಗೆ ಆಕರ್ಷಿತನಾಗಿದ್ದೇನೆ. ಕೃಷ್ಣಪ್ಪ ಅವರ ಒಳಗೆ ಅಂಬೇಡ್ಕರ್‌ ಕಂಡಿದ್ದೇನೆ. ಚಳವಳಿಗಳಿಗೆ ಸ್ಫೂರ್ತಿ ಪಡೆದಿದ್ದೇನೆ. ಅಕ್ಷರದ ಮೂಲಕ ಅವರ ಕನಸು ಸಾಕಾರಗೊಳಿಸಲು ಪ್ರಯತ್ನಿಸಿದ್ದೇನೆ.
 
ಸಾಹಿತ್ಯ ಅಲಕ್ಷಿತ ಸಮುದಾಯಗಳ ಜೀವ ದ್ರವ್ಯ. ಹಾಗಾಗಿಯೇ, ಮಾನವೀಯತೆ ಮತ್ತು ಅಲಕ್ಷಿತ ಸಮುದಾಯಗಳೇ ನನ್ನ ಸಾಹಿತ್ಯದ ಜೀವಾಳ. 
 
**
ಕೋಟಿಪುರ ತಾಂಡಾದ ಪ್ರತಿಭೆ
ಸಣ್ಣರಾಮ ಅವರದು ಸೊರಬ ತಾಲ್ಲೂಕಿನ ಆನವಟ್ಟಿ ಸಮೀಪದ ಕೋಟಿಪುರ ತಾಂಡಾ. 195* ರಲ್ಲಿ ಜನನ. ತಂದೆ ಕೀರ್‍ಯಾನಾಯ್ಕ, ತಾಯಿ ಪಾರಿಬಾಯಿ. ಪತ್ನಿ ಹೀರಾಬಾಯಿ. ಪುತ್ರಿಯರು: ರಶ್ಮಿ, ಸುಪರ್ಣಾ. ಪುತ್ರ: ಪ್ರೀತಂ.
 
ಸಣ್ಣರಾಮ ಎಂ.ಎ. ಪಿ.ಎಚ್‌ಡಿ ಪದವೀಧರರು. 1981ರಲ್ಲಿ ಸಹ್ಯಾದ್ರಿ ಕಾಲೇಜಿನಲ್ಲಿ ಅರೆಕಾಲಿಕ ಉಪನ್ಯಾಸಕರಾಗಿ ವೃತ್ತಿ ಜೀವನ ಆರಂಭಿಸಿದ್ದರು. ನಂತರ ಅಲ್ಲೇ ಕಾಯಂ ನೌಕರಿ ಪಡೆದರು. 16 ವರ್ಷ ಸಹ್ಯಾದ್ರಿ ಕಾಲೇಜಿನಲ್ಲಿ, 1998ರಿಂದ ಕುವೆಂಪು ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಮಧ್ಯೆ ಒಂದು ವರ್ಷ ಹೊಸನಗರದ ಕೊಡಚಾದ್ರಿ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದಾರೆ. 2016 ಮೇನಲ್ಲಿ ನಿವೃತ್ತಿಯಾಗಿದ್ದಾರೆ.
 
ಕೆಮ್ಮಾವು (ಕಥಾ ಸಂಕಲನ), ಕಾಮದಹನ (ಕಥಾ ಸಂಕಲನ), ಅಳುನುಂಗಿ ನಗು ಒಮ್ಮೆ (ಅನುಭವ ಕಥನ) ಅವರು ಬರೆದ ಸೃಜನಶೀಲ ಕೃತಿಗಳು. 10 ಸಂಶೋಧನಾ ಕೃತಿಗಳು, * ವಿಚಾರ ಸಾಹಿತ್ಯ ರಚಿಸಿದ್ದಾರೆ. 13 ಸಂಶೋಧನಾರ್ಥಿಗಳಿಗೆ ಪಿಎಚ್‌.ಡಿ ಪಡೆಯಲು ಮಾರ್ಗದರ್ಶಕ ರಾಗಿದ್ದರು. ಬಹುಮುಖ ಪ್ರತಿಭೆಯ ಸಣ್ಣರಾಮ ಅವರು ಕನ್ನಡ ಅಧ್ಯಯನ ಮಂಡಳಿ ಸದಸ್ಯರಾಗಿ, ಪರೀಕ್ಷಾ ಮಂಡಳಿ ಸದಸ್ಯರಾಗಿ, ಸಿಂಡಿಕೇಟ್‌ ಸದಸ್ಯರಾಗಿ, ಕುವೆಂಪು ವಿವಿ ಕಲಾ ವಿಭಾಗದ ಡೀನ್‌ ಆಗಿ, ಅಂಬೇಡ್ಕರ್‌ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ.
 
ದಲಿತ ಸಂಘರ್ಷ ಸಮಿತಿ ಸೇರಿದಂತೆ ಹಲವು ಸಂಘಟನೆಗಳಲ್ಲಿ ತೊಡಗಿಸಿಕೊಂಡು ಸಮಾಜಮುಖಿಯಾಗಿ ಸೇವೆ ಸಲ್ಲಿಸಿದ್ದಾರೆ.  ಸೊರಬ ತಾಲ್ಲೂಕು 3ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಅವರಿಗೆ 2008ರಲ್ಲಿ ರಾಜ್ಯ ಸರ್ಕಾರ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ಪ್ರಸ್ತುತ ಜಾನಪದ ವಿವಿ ಸಿಂಡಿಕೇಟ್‌ ಸದಸ್ಯರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT