ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನೀರು, ಆರೋಗ್ಯ ಸಮಸ್ಯೆ ಪರಿಹರಿಸಿ’

ಹುನಗುಂದ ತಾಲ್ಲೂಕು ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಅಂಗಡಿ ಸೂಚನೆ
Last Updated 6 ಫೆಬ್ರುವರಿ 2017, 8:38 IST
ಅಕ್ಷರ ಗಾತ್ರ

ಹುನಗುಂದ: ತಾಲ್ಲೂಕಿನ ಯಾವುದೇ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ತೊಂದರೆ ಬಾರದಂತೆ ಸೂಕ್ತ ಎಚ್ಚರಿಕೆ ವಹಿಸಬೇಕು ಎಂದು ತಾಲ್ಲೂಕು ಪಂಚಾಯ್ತಿ ಇಒ ಡಾ.ಎಸ್.ಎಚ್.ಅಂಗಡಿ ಸಂಬಂಧಿಸಿದ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಸಾಮಾನ್ಯ ಸಭೆಯಲ್ಲಿ ಕೆಲವು ಸದಸ್ಯರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರು. ಆಗ ನೀರು ಸರಬರಾಜು ಇಲಾಖೆ ಎಇಇ ಎಸ್.ಎಂ.ನಾಯಕ ಮಾತನಾಡಿ, 40 ಕೊಳವೆಬಾವಿ ಕೊರೆದಿದೆ. ಶೇ 50ರಷ್ಟು ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದೇವೆ ಎಂದರು.

ಆದರೂ ಕಂದಗಲ್ಲ, ಮರಟಗೇರಿ, ಗೋನಾಳ ಎಸ್.ಕೆ.ಚಿಕ್ಕೋತಗೇರಿ, ಹಿರೇಓತಗೇರಿ, ವಜ್ಜಲ, ಭೀಮನಗಡ, ಗುಡೂರ, ಸೂಳೇಭಾವಿ ಮುಂತಾದ ಕಡೆ ನೀರಿನ ಸಮಸ್ಯೆ ವ್ಯಾಪಕವಾಗಿದೆ. ಶೀಘ್ರ ಕ್ರಮ ಜರುಗಿಸಬೇಕು ಎಂದು ಸದಸ್ಯರಾದ ಮಹಾಂತೇಶ ಕಡಿವಾಲ, ಬಸವರಾಜ ಗೋತಗಿ, ಅರವಿಂದ ಈಟಿ, ಮಹಾಂತೇಶ ಪಾಟೀಲ ಒತ್ತಾಯ ಮಾಡಿದರು.

ಈ ನಡುವೆ ಮತ್ತೊಬ್ಬ ಸದಸ್ಯ ಅನೀಲ ನಾಡಗೌಡ, ಶಾಶ್ವತ ಕುಡಿಯುವ ನೀರಿನ ಕೆಲವು ಯೋಜನೆಗಳು ಮಂದಗತಿಯಲ್ಲಿವೆ. ಕಾಲಮಿತಿಯಲ್ಲಿ ಕಾಮಗಾರಿಗಳು ಮುಗಿಯಬೇಕು ಎಂದರು. ಇದಕ್ಕೆ ನಾಯಕ ಕ್ರಮಕೈಗೊಳ್ಳುವ ಭರವಸೆ ನೀಡಿದರು.

ಬಿಇಒ ಅಶೋಕ ಭಜಂತ್ರಿ ಇಲಾಖೆ ಮಾಹಿತಿ ನೀಡಿ, ತಾಲ್ಲೂಕಿನ 15 ಕೇಂದ್ರಗಳಲ್ಲಿ 694 ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ವಿಶೇಷ ತರಗತಿ ನಡೆಸುತ್ತಿದ್ದೇವೆ. ಅದರಂತೆ ಎಸ್.ಎಸ್.ಎಲ್.ಸಿ.ಪರೀಕ್ಷೆ ಸುಧಾರಣೆಗೆ ಕ್ರಮ ಕೈಕೊಂಡಿದ್ದು 18 ಕೇಂದ್ರಗಳಲ್ಲಿ 2 ಅನ್ನು ಕಡಿಮೆ ಮಾಡಿದೆ. ಈ ಮಧ್ಯ ನಂದವಾಡಗಿ ಸದಸ್ಯ ಅರವಿಂದ ಈಟಿ ನಂದವಾಡಗಿ ಕೇಂದ್ರ ರದ್ದತಿ ಸರಿಯಲ್ಲ ಎಂದು ಆಕ್ಷೇಪ ಎತ್ತಿದರು.

ತಾಲ್ಲೂಕಿನ ಕೆಲ ಶಾಲೆಗಳಲ್ಲಿ ಕಂಡುಬಂದ ಕುಡಿಯುವ ನೀರು ಮತ್ತು ಶೌಚಾಲಯ ಸಮಸ್ಯೆಗಳಿಗೆ ಪರಿಹಾರ ಕೈಗೊಳ್ಳುತ್ತೇವೆ. ಗುಣಮಟ್ಟದ ಶಿಕ್ಷಣಕ್ಕಾಗಿ ಸಾಕಷ್ಟು ಕ್ರಮ ತೆಗದುಕೊಂಡಿದ್ದೇವೆ ಎಂದು ಸಭೆಗೆ ಹೇಳಿದರು.

ಸಾರ್ವಜನಿಕ ಆರೋಗ್ಯದ ಕಡೆಗೆ ಹೆಚ್ಚು ಗಮನ ಹರಿಸಿದ್ದು, ಸಾಂಕ್ರಾಮಿಕ ರೋಗಗಳು ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದೆ. ತಾಲ್ಲೂಕಿನ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಇದೆ. ಆದರೂ ಸರದಿಯ ಪ್ರಕಾರ ವ್ಯವಸ್ಥೆ ಕಲ್ಪಸಲಾಗುತ್ತಿದೆ ಎಂದು ಟಿಎಚ್ಒ ಡಾ.ಕುಸುಮಾ ಮಾಗಿ ಸಭೆಗೆ ತಿಳಿಸಿದರು.

ತಾಲ್ಲೂಕು ಪಂಚಾಯ್ತಿ ಸದಸ್ಯರು, ಜನಪ್ರತಿನಿಧಿಗಳು ಮತ್ತು ಗ್ರಾಮಸ್ಥರು ದೂರವಾಣಿ ಮಾಡಿದರೆ ಅಧಿಕಾರಿಗಳು ಉದಾಸೀನ ಮಾಡಬಾರದು. ಅವರ ಸಮಸ್ಯೆ ಮತ್ತು ದೂರುಗಳನ್ನು ಆಲಿಸಿ ಸೂಕ್ತ ಕ್ರಮ ಜರುಗಿಸಬೇಕು ಎಂದು ಇಒ ಅಂಗಡಿ ಪಿಡಿಒ, ಕಾರ್ಯದರ್ಶಿಗಳು ಮತ್ತು ಅಧಿಕಾರಿಗಳಿಗೆ ಸೂಚಿಸಿದರು.

ನಂತರ ಇತರ ಇಲಾಖೆಗಳು ಮುಖ್ಯಸ್ಥರು ಅಭಿವೃದ್ಧಿ ಮಾಹಿತಿಯನ್ನು ಸಭೆಗೆ ತಿಳಿಸಿದರು. ಅಧ್ಯಕ್ಷ ಅಮೀನಪ್ಪ ಸಂದಿಗವಾಡ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಉಮಾದೇವಿ ಗೌಡರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT