ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮನಸ್ಸನ್ನು ಹಗುರಗೊಳಿಸುವುದೇ ಸಾಹಿತ್ಯ’

‘ಮಕ್ಕಳಲ್ಲಿ ಸಾಹಿತ್ಯದ ಅರಿವು’ ಉಪನ್ಯಾಸ
Last Updated 6 ಫೆಬ್ರುವರಿ 2017, 9:03 IST
ಅಕ್ಷರ ಗಾತ್ರ

ರಾಮನಗರ: ‘ನಮ್ಮಲ್ಲಿ ಸಾಹಿತ್ಯ ಹಾಗೂ ಸಾಹಿತಿಗಳಿಗೆ ಕೊರತೆ ಇಲ್ಲ. ಅದನ್ನು ಸರಿಯಾದ ರೀತಿಯಲ್ಲಿ ಹೇಳುವ ಕೊರತೆ ಇದೆ’ ಎಂದು ವಿಮರ್ಶಕ ಡಾ.ಎಚ್.ಎಸ್‌. ಭುವನೇಶ್ವರ ಹೇಳಿದರು.

ನಗರದ ಪಟೇಲ್‌ ಇಂಗ್ಲಿಷ್‌ ಮಾಧ್ಯಮ ಶಾಲೆಯಲ್ಲಿ ಸಂಸ್ಕೃತಿ ಸೌರಭ ಟ್ರಸ್ಟ್‌ ವತಿಯಿಂದ ಈಚೆಗೆ ಆಯೋಜಿಸಿದ್ದ ‘ಮಕ್ಕಳಲ್ಲಿ ಸಾಹಿತ್ಯದ ಅರಿವು’ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸಾಹಿತ್ಯದ ಓದು ಮನುಷ್ಯನನ್ನು ಸಂಸ್ಕಾರವಂತನನ್ನಾಗಿ ಮಾಡುತ್ತದೆ. ಮನ ಹಗುರಗೊಳಿಸುವುದೇ ಸಾಹಿತ್ಯ. ಆದರೆ, ಇಂದು ಯುವಜನಾಂಗ ಅಂತರ್ಜಾಲಕ್ಕೆ ಮಾರು ಹೋಗಿ ಮೊಬೈಲ್, ಇಂಟರ್ ನೆಟ್ ನಿಂದ ಓದುವ ಹವ್ಯಾಸವನ್ನು ಕಡೆಗಣಿಸುತ್ತಿದೆ. ಕನ್ನಡ  ಸಾಹಿತ್ಯ ಅತ್ಯಂತ ಸಮೃದ್ಧವಾಗಿದೆ’ ಎಂದು ತಿಳಿಸಿದರು.

‘ರಂ.ಶ್ರೀ ಮುಗಳಿ ಹೇಳಿದಂತೆ ರಸಾನುಭವದ ಸುಂದರ ಅಭಿವ್ಯಕ್ತಿಯೇ ಸಾಹಿತ್ಯ. ಸಾಹಿತ್ಯವು ಜನರ ಪ್ರತಿಬಿಂಬ ಹಾಗೂ ಗತಿಬಿಂಬವೂ ಹೌದು. ಸಾಹಿತ್ಯವನ್ನು ಓದುವುದರಿಂದ ನಮ್ಮ ಜೀವನದ ಅಂಕು ಡೊಂಕುಗಳನ್ನು ಸರಿಪಡಿಸಿಕೊಳ್ಳಬಹುದು’ ಎಂದು ತಿಳಿಸಿದರು.

‘12ನೇ ಶತಮಾನದ ವಚನ ಸಾಹಿತ್ಯದಲ್ಲಿರುವ ಶ್ರೀಮಂತಿಕೆ ಪ್ರಪಂಚದ ಇನ್ಯಾವ ಸಾಹಿತ್ಯದಲ್ಲೂ ಇಲ್ಲ. ಜರ್ಮನಿ, ಜಪಾನ್ ದೇಶಗಳಲ್ಲಿ ಅಕ್ಕ ಮಹಾದೇವಿಯವರ ಚರಿತ್ರೆಯನ್ನು ಪಠ್ಯಪುಸ್ತಕಗಳಲ್ಲಿ ಅಳವಡಿಸಿರುವುದೇ ಇದಕ್ಕೆ ಸಾಕ್ಷಿ. ದಾಸ ಸಾಹಿತ್ಯ, ಕೀರ್ತನಾ ಸಾಹಿತ್ಯಗಳಲ್ಲಿರುವ ಅಂಶಗಳನ್ನು ಮನುಷ್ಯ ಅಳವಡಿಸಿಕೊಂಡಲ್ಲಿ ಅತ್ಯಂತ ಸಂಸ್ಕಾರವಂತನಾಗುತ್ತಾನೆ.

ಕನ್ನಡ ಸಾಹಿತ್ಯ ಭಂಡಾರವನ್ನು ಓದುವುದರ ಜೊತೆಗೆ ಅದರಲ್ಲಿನ ಅಂಶಗಳನ್ನು  ಜೀವನ ಶೈಲಿಗೆ  ನಾವು ಅಳವಡಿಸಿಕೊಳ್ಳಬೇಕು’ ಎಂದು ತಿಳಿಸಿದರು. ಕಿರುತೆರೆ ಕಲಾವಿದ ವಿಜಯಕುಮಾರ ಜಿತೂರಿ ಮಾತನಾಡಿ ‘ಕಾವ್ಯಗಳ ಜತೆಯಲ್ಲಿಯೇ ನಮ್ಮ ಜನಪದ ಕಾವ್ಯವೂ ಅತ್ಯಂತ ಸರಳವಾದುದು.

ನಮ್ಮ ಅವಿದ್ಯಾವಂತ ಜನಪದರು ಬೃಹತ್ ಗದ್ಯ ರೂಪವನ್ನು ಅವರ ಆಡು ಭಾಷೆಯಲ್ಲಿ ಕೇವಲ ಮೂರು ಪದದಲ್ಲಿ ಇಡೀ ವೃತ್ತಾಂತವನ್ನು ಹೇಳಿದ್ದಾರೆ. ಜನಪದ ಸಾಹಿತ್ಯವೂ ಅತ್ಯಂತ ಶ್ರೀಮಂತವಾದುದು. ಇಂದಿನ ಮಕ್ಕಳು, ಯುವ ಜನಾಂಗ ಜನಪದ ಸಂಸ್ಕೃತಿಯನ್ನು ಅಳವಡಿಸಿಕೊಳ್ಳಬೇಕು’ ಎಂದು ತಿಳಿಸಿದರು.

ಆಶ್ರಯ ಸಮಿತಿ ಸದಸ್ಯ ಪಿ. ಶಿವಾನಂದ, ಶಾಲೆಯ ಸಂಸ್ಥಾಪಕ ಕಾರ್ಯದರ್ಶಿ ಪಟೇಲ್‌ ಸಿ.ರಾಜು, ಮುಖ್ಯಶಿಕ್ಷಕ ವಿನೋದ್, ಸಾಂಸ್ಕೃತಿಕ ಸಂಘಟಕ ಕಾ. ಪ್ರಕಾಶ್, ಸಂಸ್ಕೃತಿ ಟ್ರಸ್ಟ್‌ ಅಧ್ಯಕ್ಷ ರಾ.ಬಿ. ನಾಗರಾಜ್‌, ಕಾರ್ಯದರ್ಶಿ ಎಚ್.ಬಿ. ಸಿದ್ದರಾಜು ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT