ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಗ್ನೇಯ ಶಿಕ್ಷಕರ ಕ್ಷೇತ್ರ: ರಮೇಶ್‌ ಬಾಬುಗೆ ಜಯ

Last Updated 7 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ
ಬೆಂಗಳೂರು: ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ನಡೆದ ಉಪ ಚುನಾವಣೆಯಲ್ಲಿ  ಜೆಡಿಎಸ್‌ನ ರಮೇಶ್‌ಬಾಬು ಜಯಗಳಿಸಿದ್ದಾರೆ.  ಈ ಕ್ಷೇತ್ರವನ್ನು ಬಿಜೆಪಿ ಯಿಂದ  ಜೆಡಿಎಸ್‌ ಕಸಿದುಕೊಂಡಿದೆ.
 
ಜೆಡಿಎಸ್‌ನ ರಮೇಶ್ ಬಾಬು 1,611 ಮತಗಳ ಅಂತರದಿಂದ ಸಮೀಪದ ಸ್ಪರ್ಧಿ ಬಿಜೆಪಿಯ ಪಿ.ಆರ್‌. ಬಸವರಾಜು (ಪೆಪ್ಸಿ) ಅವರನ್ನು ಸೋಲಿಸಿದರು. ಕಾಂಗ್ರೆಸ್ ಅಭ್ಯರ್ಥಿ ನಿರಂಜನ್ ಠೇವಣಿ ಕಳೆದುಕೊಂಡರು. ರಮೇಶ್‌ ಬಾಬು 7,810 ಮತಗಳನ್ನು ಪಡೆದರೆ ಬಸವರಾಜು 6,199 ಮತ ಗಳಿಸಿದರು.  
 
ಮೊದಲ ಸುತ್ತಿನ ಪ್ರಾಶಸ್ತ್ಯ ಮತದಲ್ಲಿ ಯಾವ ಅಭ್ಯರ್ಥಿಯೂ ಶೇ 50ಕ್ಕಿಂತ ಹೆಚ್ಚು ಮತಗಳನ್ನು ಪಡೆಯದ ಕಾರಣ 2ನೇ ಪ್ರಾಶಸ್ತ್ಯದ ಮತ ಎಣಿಕೆ ನಡೆಯಿತು.
 
ಅಂತಿಮವಾಗಿ ರಮೇಶ್ ಬಾಬು ಗೆಲುವಿನ ನಗೆ ಬೀರಿದರು. ಮಂಗಳವಾರ ಬೆಳಗಿನ ಜಾವ ಫಲಿತಾಂಶ ಪ್ರಕಟಿಸಲಾಯಿತು. ಒಟ್ಟು 1,237 ಮತಗಳು ಅಸಿಂಧುವಾದವು. 22 ನೋಟಾ ಮತಗಳು ಚಲಾವಣೆಯಾಗಿದ್ದವು. ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿಯ ರಮೇಶಬಾಬು 20 ವರ್ಷದಿಂದ ಜೆಡಿಎಸ್‌ನಲ್ಲಿದ್ದು, ಮೊದಲ ಬಾರಿಗೆ ಚುನಾವಣೆ ಎದುರಿಸಿದ್ದಾರೆ.
 
ಏಳು ವರ್ಷದಿಂದ ಪಕ್ಷದ ರಾಜ್ಯ ವಕ್ತಾರರಾಗಿ ಕೆಲಸ ಮಾಡುತ್ತಿರುವ ಅವರು, ಜೆಡಿಎಸ್‌ ವಿದ್ಯಾರ್ಥಿ ಘಟಕ, ಯುವ ಘಟಕ, ವಕೀಲರ ಘಟಕಗಳಲ್ಲಿ ಪದಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಪಟ್ಟಣ ಸಹಕಾರಿ ಬ್ಯಾಂಕುಗಳ ಮಹಾ ಮಂಡಳದಲ್ಲಿ ನಿರ್ದೇಶಕರೂ ಆಗಿದ್ದಾರೆ.
 
**
‘ವಿಧಾನಸಭೆ ಚುನಾವಣೆಗೆ ದಿಕ್ಸೂಚಿ’
‘ಆಗ್ನೇಯ ಶಿಕ್ಷಕರ ಕ್ಷೇತ್ರದ ಫಲಿತಾಂಶ ವಿಧಾನಸಭೆಗೆ ಮುಂದಿನ ವರ್ಷ ನಡೆಯುವ ಚುನಾವಣೆಯ ದಿಕ್ಸೂಚಿ’ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ವಿಶ್ಲೇಷಿಸಿದ್ದಾರೆ.
 
‘ಈ ಮಾತನ್ನು ನಾನು ಹೇಳುತ್ತಿಲ್ಲ. ಈ ಚುನಾವಣೆ ಪ್ರಚಾರದ ವೇಳೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರೇ ಹೇಳಿದ್ದಾರೆ. ಅವರ ಹೇಳಿಕೆಯನ್ನೇ ಪುನರುಚ್ಚರಿಸುತ್ತಿದ್ದೇನೆ’ ಎಂದು ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
 
‘ಈ ಚುನಾವಣೆ ನಮ್ಮ ಆತ್ಮವಿಶ್ವಾಸ ಹೆಚ್ಚಿಸಿದೆ. 33 ತಾಲ್ಲೂಕುಗಳ ಶಿಕ್ಷಕ ಮತದಾರರು ಕೊಟ್ಟಿರುವ ತೀರ್ಪು ವಿಧಾನಸಭೆ ಚುನಾವಣೆಯಲ್ಲಿ ಸಾಮಾನ್ಯ ಮತದಾರರ ಒಲವು ಎತ್ತ ಕಡೆ ಇರಬಹುದು ಎಂಬುದನ್ನು ತೋರಿಸುತ್ತದೆ’ ಎಂದೂ ಕುಮಾರಸ್ವಾಮಿ ವ್ಯಾಖ್ಯಾನಿಸಿದರು.
 
‘ಜೆಡಿಎಸ್‌ ಎಲ್ಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಳಿದ್ದರು. ಅವರಿಗೆ ಆಗ್ನೇಯ ಶಿಕ್ಷಕರ ಕ್ಷೇತ್ರದ ಮತದಾರರು ಉತ್ತರ ಕೊಟ್ಟಿದ್ದಾರೆ. ಶಿಕ್ಷಕರ ಕ್ಷೇತ್ರ ನಮ್ಮ ಗುತ್ತಿಗೆ ಎನ್ನುವ ಅಹಂ ಬಿಜೆಪಿ ನಾಯಕರಿಗೆ ಇತ್ತು. ಅವರಿಗೂ ಮತದಾರರು ಪಾಠ ಕಲಿಸಿದ್ದಾರೆ' ಎಂದು ಕುಮಾರಸ್ವಾಮಿ ಹೇಳಿದರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT