ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಭ್ರಮದ ಉಳುಮೇಶ್ವರಸ್ವಾಮಿ ರಥೋತ್ಸವ

ಅರಕಲಗೂಡು ತಾಲ್ಲೂಕು ಮಲ್ಲಿಪಟ್ಟಣ: ಜನಪದ ವಾದ್ಯ, ಸುಗ್ಗಿ ಕುಣಿತದ ಮೆರುಗು
Last Updated 11 ಫೆಬ್ರುವರಿ 2017, 6:59 IST
ಅಕ್ಷರ ಗಾತ್ರ

ಅರಕಲಗೂಡು: ತಾಲ್ಲೂಕಿನ ಮಲ್ಲಿಪಟ್ಟಣದ ಇತಿಹಾಸ ಪ್ರಸಿದ್ಧ ಉಳುಮೇಶ್ವರ ಸ್ವಾಮಿ ದೇವಾಲಯದ ಬ್ರಹ್ಮ ರಥೋತ್ಸವವು ಶುಕ್ರವಾರ ಅಪಾರ ಭಕ್ತರ ಸಮ್ಮುಖದಲ್ಲಿ ಸಡಗರದಿಂದ ನೆರವೇರಿತು.

ರಥೋತ್ಸವದ ಅಂಗವಾಗಿ ಬೆಳಿಗ್ಗೆ ದೇವಾಲಯದಲ್ಲಿ ಮೂಲ ವಿಗ್ರಹಕ್ಕೆ ಪಂಚಾಮೃತ ಅಭಿಷೇಕ, ರುದ್ರ ಪಾರಾಯಣ, ಬಿಲ್ವಾರ್ಚನೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ, ರಥಕ್ಕೆ ಬಲಿ ಪ್ರದಾನ ನಡೆದವು. ಬಳಿಕ ಧವನ ಗಂಧೋತ್ಸವ ನಡೆಸಲಾಯಿತು. ಉತ್ಸವದಲ್ಲಿ ಬಂದ ದೇವರ ಮೂರ್ತಿಗಳನ್ನು ಮಹಾನ್ಯಾಸ ಪೂರ್ವಕವಾಗಿ ಅಲಂಕರಿಸಿದ ರಥದಲ್ಲಿ ಕುಳ್ಳಿರಿಸಿ ವಿವಿಧ ಧಾರ್ಮಿಕ ಕಾರ್ಯಗಳನ್ನು ನಡೆಸಲಾಯಿತು.

ತಹಶೀಲ್ದಾರ್ ಪ್ರಸನ್ನಮೂರ್ತಿ ರಥಕ್ಕೆ ಪೂಜೆ ಸಲ್ಲಿಸಿ ರಥಾರೋಹಣಕ್ಕೆ ಚಾಲನೆ ನೀಡಿದರು. ನೆರೆದಿದ್ದ ಅಪಾರ ಸಂಖ್ಯೆಯ ಭಕ್ತರು ಶಿವನಾಮ ಸ್ಮರಣೆ ಮಾಡುತ್ತ  ರಥಬೀದಿಯಲ್ಲಿ ತೇರನ್ನು ಎಳೆದು ಸಂಭ್ರಮಿಸಿದರು. ರಥಕ್ಕೆ ಬಾಳೆ ಹಣ್ಣು ದವನ ಪತ್ರಗಳನ್ನು ತೂರಿ ಭಕ್ತರು ಭಕ್ತಿ ಭಾವ ಮೆರೆದರು. ಮಲೆನಾಡು ಭಾಗದ ಜನಪದ ವಾದ್ಯಗಳು, ಸುಗ್ಗಿ ಕುಣಿತ ರಥೋತ್ಸವಕ್ಕೆ ಮೆರಗು ನೀಡಿದವು.

ರಥವನ್ನು ಊರ ಹೊರ ಭಾಗದವರೆಗೆ ಎಳೆದು ನಿಲ್ಲಿಸಿದ ನಂತರ ಗ್ರಾಮಸ್ಥರು ಹಾಗೂ ಅಕ್ಕಪಕ್ಕದ ಗ್ರಾಮಗಳಿಂದ ಬಂದ ಭಕ್ತರು ನೀಡಿದ ಹಣ್ಣುಕಾಯಿ ಅರ್ಪಣೆ ಮಾಡಲಾಯಿತು. ನಂತರ ವಸಂತ ಸೇವೆ, ಅನ್ನದಾಸೋಹ ನಡೆದವು.

ಜಾತ್ರೆಯಲ್ಲಿ ವಿವಿಧ ಆಟಿಕೆಗಳು, ಅಲಂಕಾರಿಕ ವಸ್ತುಗಳ ಹಾಗೂ ತಿಂಡಿ ತಿನಿಸುಗಳ ಮಾರಾಟ ನಡೆಯಿತು.
ಜಿಲ್ಲಾ ಪಂಚಾಯತಿ ಸದಸ್ಯ ಎಸ್‌.ಪಿ.ರೇವಣ್ಣ, ಗ್ರಾಮ ಪಂಚಾಯತಿ ಅಧ್ಯಕ್ಷೆ ರೇಖಾ ಸದಾನಂದ, ತಾ.ಪಂ. ಸದಸ್ಯೆ ವೀಣಾ ಸಿದ್ದಯ್ಯ, ಗ್ರಾ.ಪಂ. ಮಾಜಿ ಅಧ್ಯಕ್ಷ ಡಾ.ವಿಶ್ವನಾಥ್, ಕಾಫಿ ಬೆಳೆಗಾರ ವೆಂಕಟೇಶ್, ಬ್ರಾಹ್ಮಣ ಸಮಾಜದ ಪ್ರಮುಖರಾದ ಎಂ.ಎಸ್.ರವೀಂದ್ರ, ನಿವೃತ್ತ ಅಂಚೆ ನೌಕರ ಚಂದ್ರಶೇಖರ್ ಇದ್ದರು.

ಸಂಜೆ 6ಕ್ಕೆ ರಥವನ್ನು ಸ್ವಸ್ಥಾನಕ್ಕೆ ಎಳೆದು ತಂದ ಬಳಿಕ ಶಾಂತೋತ್ಸವ ಹಾಗೂ ಮಹಾಮಂಗಳಾರತಿ ನಡೆದವು. ಪೌರಾಣಿಕ ನಾಟಕ ಪ್ರದರ್ಶನ ನಡೆಯಿತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT