ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಮಿಳುನಾಡು ರಾಜ್ಯಪಾಲರ ನಡೆ ಸಂವಿಧಾನ ವಿರೋಧಿ

ಸಂಪಾದಕೀಯ
Last Updated 12 ಫೆಬ್ರುವರಿ 2017, 20:33 IST
ಅಕ್ಷರ ಗಾತ್ರ

ತಮಿಳುನಾಡಿನ ರಾಜಕಾರಣ ಕ್ಷಣಕ್ಷಣಕ್ಕೂ ಅನಿರೀಕ್ಷಿತ, ವಿಚಿತ್ರ ತಿರುವುಗಳನ್ನು ಪಡೆದುಕೊಳ್ಳುತ್ತಲೇ ಇದೆ.  ಇದರ ಪರಿಣಾಮವಾಗಿ ಆಡಳಿತ ಯಂತ್ರಕ್ಕೆ ಗರ ಬಡಿದಂತಾಗಿದೆ. ಇದಕ್ಕೆ ಆಡಳಿತಾರೂಢ ಎಐಎಡಿಎಂಕೆ ಪಕ್ಷದೊಳಗೆ ಅಧಿಕಾರಕ್ಕಾಗಿ ನಡೆಯುತ್ತಿರುವ ಕಿತ್ತಾಟ, ರಾಜಕೀಯ ಪ್ರಹಸನ ಎಷ್ಟು ಕಾರಣವೋ ಅದಕ್ಕಿಂತ ಹೆಚ್ಚು, ಉಸ್ತುವಾರಿ ರಾಜ್ಯಪಾಲ ಸಿ.ಎಚ್‌.ವಿದ್ಯಾಸಾಗರ ರಾವ್‌ ಅವರ ನಡವಳಿಕೆ  ಮತ್ತು ಕಾದು ನೋಡುವ ತಂತ್ರವೇ ಕಾರಣ.

ಪಕ್ಷ ರಾಜಕಾರಣದಲ್ಲಿ ಒಬ್ಬರನ್ನೊಬ್ಬರು ಕಾಲೆಳೆಯುವುದು, ಅಧಿಕಾರಕ್ಕೆ ಏರಲು ಬಗೆಬಗೆಯ ಕಸರತ್ತು ಮಾಡುವುದು ಸ್ವಾಭಾವಿಕ. ಅದು ಸರಿಯೋ ತಪ್ಪೋ ಎಂಬುದು ಪ್ರಜೆಗಳ ತೀರ್ಮಾನಕ್ಕೆ ಬಿಟ್ಟದ್ದು. ಆದರೆ ವಿದ್ಯಾಸಾಗರ ರಾವ್‌  ಈ ಸನ್ನಿವೇಶವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ.  ಎಐಎಡಿಎಂಕೆ ಶಾಸಕಾಂಗ ಪಕ್ಷದ ನಾಯಕಿಯಾಗಿ ಆಯ್ಕೆಯಾಗಿರುವ ವಿ.ಕೆ.ಶಶಿಕಲಾ ಅವರಿಗೆ ಮುಖ್ಯಮಂತ್ರಿಯಾಗಲು ಆಹ್ವಾನ ನೀಡದೆ ಸತಾಯಿಸುತ್ತಿದ್ದಾರೆ. ರಾಜ್ಯಪಾಲರ ಈ ನಡೆ ಸಂವಿಧಾನಕ್ಕೆ ಮಾಡುತ್ತಿರುವ ಅಪಚಾರ, ಶಾಸಕಾಂಗ ವ್ಯವಸ್ಥೆಗೆ ಮಾಡುತ್ತಿರುವ ಅವಮಾನ. ರಾಜಭವನದಲ್ಲಿ ಕುಳಿತು ರಾಜಕಾರಣ ಮಾಡುವುದು ಖಂಡನೀಯ. ತಮಿಳುನಾಡು ವಿಧಾನಸಭೆಯಲ್ಲಿ ಎಐಎಡಿಎಂಕೆಗೆ ನಿಚ್ಚಳ ಬಹುಮತ ಇದೆ. ಜಯಲಲಿತಾ ನಿಧನದ ನಂತರ ಪನ್ನೀರ್‌ ಸೆಲ್ವಂ  ಮುಖ್ಯಮಂತ್ರಿ ಹುದ್ದೆಗೇರಿದ್ದರು. 

ಎರಡು ತಿಂಗಳ ಬಳಿಕ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ  ಶಶಿಕಲಾ ಅವರು ನಾಯಕಿಯಾಗಿ ಆಯ್ಕೆಯಾಗಿದ್ದಾರೆ.  ಇದರ ಬೆನ್ನಲ್ಲೇ ಪನ್ನೀರ್‌ ಸೆಲ್ವಂ ಕೊಟ್ಟ ರಾಜೀನಾಮೆ ಅಂಗೀಕಾರವೂ ಆಗಿದೆ.   ಅವರು ಏನಿದ್ದರೂ ಈಗ ಬದಲಿ ವ್ಯವಸ್ಥೆ ಆಗುವ ತನಕ ನಿತ್ಯದ ಆಡಳಿತ ನೋಡಿಕೊಂಡು ಹೋಗಬೇಕಾದ ಉಸ್ತುವಾರಿ ಮುಖ್ಯಮಂತ್ರಿ ಮಾತ್ರ. ಇವೆಲ್ಲ ನಡೆದು ಒಂದು ವಾರವೇ ಕಳೆದಿದೆ. ಶಶಿಕಲಾ ಅವರು ರಾಜ್ಯಪಾಲರನ್ನು ಭೇಟಿಯಾಗಿ ಸರ್ಕಾರ ರಚಿಸುವ ಹಕ್ಕು ಮಂಡಿಸಿದ್ದಾರೆ. ಹೀಗಿರುವಾಗ ಅವರನ್ನು ಮುಖ್ಯಮಂತ್ರಿಯಾಗಿ ನೇಮಕ ಮಾಡುವುದನ್ನು ಬಿಟ್ಟು ರಾಜ್ಯಪಾಲರಿಗೆ ಬೇರೆ ಆಯ್ಕೆಗಳಿಲ್ಲ. ‘ಶಶಿಕಲಾ ಆಯ್ಕೆ ಸರಿಯೇ, ಅವರು ಮುಖ್ಯಮಂತ್ರಿ ಹುದ್ದೆಗೆ ಅರ್ಹರೇ ಅಲ್ಲವೇ’ ಎಂಬುದನ್ನು  ನಿರ್ಧರಿಸುವ ಕೆಲಸ ರಾಜ್ಯಪಾಲರದಲ್ಲ.  ಶಶಿಕಲಾ ವಿರುದ್ಧ ಜನಾಭಿಪ್ರಾಯ ರೂಪುಗೊಳ್ಳುತ್ತಿದೆ ಎನ್ನುವುದೇನೋ ನಿಜ. ಅವರು ಮುಖ್ಯಮಂತ್ರಿ ಹುದ್ದೆಗೆ ಸರಿಯಾದ ವ್ಯಕ್ತಿಯಲ್ಲ ಎನ್ನುವ ವಾದವೂ ಇದೆ. ಆದರೆ ಅದನ್ನೆಲ್ಲ ಪರಿಗಣಿಸಿ ತೀರ್ಮಾನ ತೆಗೆದುಕೊಳ್ಳುವ ಅಧಿಕಾರವನ್ನು ರಾಜ್ಯಪಾಲರಿಗೆ ನಮ್ಮ ಸಂವಿಧಾನ ನೀಡಿಲ್ಲ. ಆದಾಗ್ಯೂ, ಬಹುಮತ ಹೊಂದಿದ ಪಕ್ಷದ ಶಾಸಕಾಂಗ  ನಾಯಕಿಯನ್ನು ಸರ್ಕಾರ ರಚನೆಗೆ ಆಹ್ವಾನಿಸದೆ ರಾಜ್ಯಪಾಲರು ದಿನ ನೂಕುತ್ತಿದ್ದಾರೆ. ಆ ಮೂಲಕ ತಮ್ಮ ಹುದ್ದೆಯ ಘನತೆ, ಗೌರವವನ್ನೇ ಹಾಳು ಮಾಡಿದ ರಾಜ್ಯಪಾಲರ ಸಾಲಿಗೆ ಸೇರಿದ್ದಾರೆ.

ಶಶಿಕಲಾ ಮೇಲಿನ ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನ ತೀರ್ಪು ಬಾಕಿ ಇದೆ. ಅಲ್ಲದೆ, ‘ತಮ್ಮಿಂದ ಬಲವಂತವಾಗಿ ರಾಜೀನಾಮೆ ಬರೆಸಿಕೊಳ್ಳಲಾಯಿತು’ ಎಂದು ಪನ್ನೀರ್‌ ಸೆಲ್ವಂ ದೂರಿದ್ದಾರೆ. ಆದರೆ ಸರ್ಕಾರ ರಚಿಸಲು ಶಶಿಕಲಾ ಅವರಿಗೆ ಆಹ್ವಾನ ಕೊಡದೇ ಇರುವುದಕ್ಕೆ ಇವು ಸಕಾರಣಗಳಲ್ಲ. ಬಹುಮತದ ಬಗ್ಗೆ ಅನುಮಾನ ಇದ್ದರೆ ಇಂತಿಷ್ಟು ದಿನಗಳಲ್ಲಿ ಸದನದ ಒಳಗೆ ಬಹುಮತ ಸಾಬೀತು ಮಾಡುವಂತೆ ಗಡುವು ನಿಗದಿಪಡಿಸಲು ರಾಜ್ಯಪಾಲರಿಗೆ ಅಧಿಕಾರವಿದೆ. ಆದರೆ ವಿದ್ಯಾಸಾಗರ ರಾವ್‌ ಅದನ್ನು ಚಲಾಯಿಸದೆ ಸುಮ್ಮನಿದ್ದಾರೆ. ಹಾಗೆ ನೋಡಿದರೆ ಎಐಎಡಿಎಂಕೆ ಒಳಗೆ ಬಿಕ್ಕಟ್ಟು ಹೆಚ್ಚಲು ಅವರೇ ಕಾರಣ. ಆ ರಾಜ್ಯದಲ್ಲಿ ರಾಜಕಾರಣ ಕ್ಷಿಪ್ರಗತಿಯಲ್ಲಿ ಬದಲಾಗುತ್ತಿದ್ದಾಗ ಅವರು ಚೆನ್ನೈಗೆ ಧಾವಿಸಬೇಕಾಗಿತ್ತು. ಸಂವಿಧಾನಾತ್ಮಕ ಬಿಕ್ಕಟ್ಟು ಸೃಷ್ಟಿಯಾಗದಂತೆ ನೋಡಿಕೊಂಡು ಆಡಳಿತ ಯಂತ್ರಕ್ಕೆ ಸಮರ್ಪಕವಾದ ಮಾರ್ಗದರ್ಶನ ಮಾಡಬೇಕಾಗಿತ್ತು. ಅದನ್ನು ಬಿಟ್ಟು ಮುಂಬೈನಲ್ಲಿ ಕುಳಿತಿದ್ದರು. ಅವರು ಮೂಲತಃ ಮಹಾರಾಷ್ಟ್ರ ರಾಜ್ಯಪಾಲರು. ತಮಿಳುನಾಡಿನದು ಅವರಿಗೆ ಹೆಚ್ಚುವರಿ ಹೊಣೆ. ಆದರೆ ಎಲ್ಲಿ ತಮ್ಮ ಅಗತ್ಯ ಹೆಚ್ಚಿದೆಯೋ ಅತ್ತ ಗಮನ ಕೊಡುವುದು ಅವರ ಕರ್ತವ್ಯ.

ಆ ಜವಾಬ್ದಾರಿ ನಿಭಾಯಿಸುವಲ್ಲಿ ಅವರು ವಿಫಲರಾಗಿದ್ದಾರೆ. ಶಶಿಕಲಾ ಮುಖ್ಯಮಂತ್ರಿ ಹುದ್ದೆಗೆ ಏರುವುದು ಕೇಂದ್ರದಲ್ಲಿ ಅಧಿಕಾರ ಹಿಡಿದಿರುವ ಬಿಜೆಪಿಗೆ ಇಷ್ಟ ಇಲ್ಲದೇ ಇರಬಹುದು. ಅದು ಅನೇಕ ಸಂದರ್ಭಗಳಲ್ಲಿ ಬಹಿರಂಗವೂ ಆಗಿದೆ. ಹೀಗಾಗಿಯೇ ಈಗ  ತಮಿಳುನಾಡಿನಲ್ಲಿ ನೆಲೆ ಕಂಡುಕೊಳ್ಳಲು ಅದು ರಾಜ್ಯಪಾಲರ ಮೂಲಕ ರಾಜಕಾರಣ ಮಾಡುತ್ತಿದೆ ಎಂಬ ಅನುಮಾನ ಮೂಡಿದೆ. ರಾಜ್ಯಪಾಲ ಹುದ್ದೆಯ ದುರುಪಯೋಗ ಮುಂದೊಂದು ದಿನ ಅದಕ್ಕೇ ತಿರುಗುಬಾಣ ಆದೀತು. ಆದ್ದರಿಂದ ಈಗಲೂ ಕಾಲ ಮಿಂಚಿಲ್ಲ. ಸಂವಿಧಾನದ ಆಶಯವನ್ನು ಕಟ್ಟುನಿಟ್ಟಾಗಿ ಪಾಲಿಸಲು ರಾಜ್ಯಪಾಲರಿಗೆ ಸೂಚಿಸಿ, ಜನತಂತ್ರದ ಆಶಯವನ್ನು ಅದು ಎತ್ತಿಹಿಡಿಯಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT