ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರಸಭೆ ಅಲ್ಲಾರೀ.. ಅದು ನರಕಸಭೆ!

ಕೆಳಗಿನತೋಟ ಪ್ರದೇಶದಲ್ಲಿ ಕುಡಿಯುವ ನೀರು ಸಿಗದೆ ಪರಿತಪಿಸುತ್ತಿರುವ ನಾಗರಿಕರ ವ್ಯಥೆ
Last Updated 13 ಫೆಬ್ರುವರಿ 2017, 13:36 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಪಟ್ರೇನಹಳ್ಳಿ ಪಂಚಾಯಿತಿ ಬಿಟ್ಟು ನಮ್ಮ ತೋಟ ನಗರಸಭೆಗೆ ಸೇರಿಕೊಂಡಾಗಿನಿಂದ ಈವರೆಗೆ ನಮಗೆ ಸೊಗಸಿಲ್ಲ ನೋಡಿ. ಕುಡಿಯೋ ಹನಿ ನೀರಿಗೂ ತತ್ವಾರ ಬಂದಿದೆ.

ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರವಾಗಿ 10 ವರ್ಷವಾಗುತ್ತ ಬಂದರೂ ನಮಗಿನ್ನೂ ಕಾಸು ನೀಡಿ ಬಿಂದಿಗೆ ನೀರು ಖರೀದಿಸಿ ಕುಡಿಯುವ ಕರ್ಮ ತಪ್ಪಿಲ್ಲ. ಹೀಗಾಗಿ ತೋಟದ ಜನರೆಲ್ಲ ನಗರಸಭೆಯನ್ನು ನರಕಸಭೆ ಅಂತಲೇ ಕರೀತೀವಿ. ಇನ್ನೂ ಎಷ್ಟು ದಿನಾ ಅಂತ ನಾವೀ ನರಕ ಅನುಭವಿಸಬೇಕು ನೀವೇ ಹೇಳಿ’..?

ನಗರದ ಕೆಳಗಿನತೋಟ ಪ್ರದೇಶದ ವೆಂಕಟರಮಣಪ್ಪ ಬಡಾವಣೆಯಲ್ಲಿ ಕಂಕುಳಲ್ಲಿ ಬಿಂದಿಗೆ ಹೊತ್ತುಕೊಂಡು ಕುಡಿಯುವ ನೀರಿಗಾಗಿ ಟ್ಯಾಂಕರ್‌ ಬೆನ್ನತ್ತಿದ ಮಹಿಳೆಯೊಬ್ಬರನ್ನು ಮಾತಿಗೆಳೆದಾಗ ಹೊರಹಾಕಿದ ವ್ಯಥೆ ಇದು.

ಈ ಪ್ರದೇಶ ಪಟ್ರೇನಹಳ್ಳಿ ಗ್ರಾಮ ಪಂಚಾಯಿತಿಯಿಂದ ಬೇರ್ಪಟ್ಟು ನಗರಸಭೆಗೆ ಸೇರ್ಪಡೆಯಾಗಿ ಸುಮಾರು 25 ವರ್ಷಗಳೇ ಉರುಳಿದರೂ ಈವರೆಗೆ ಈ ಭಾಗದ ಜನರಿಗೆ ನೆಮ್ಮದಿಯಿಂದ ನೀರು ಕುಡಿಯುವ ‘ಭಾಗ್ಯ’ ದೊರೆತಿಲ್ಲ! ನಗರದ ಜನರು ಕುಡಿಯಲು ಬಳಸುವ ಜಕ್ಕಲಮಡಗು ಜಲಾಶಯದ ನೀರನ್ನು ಕೆಳಗಿನ ತೋಟಕ್ಕೆ ಪೂರೈಸಲು ಸುಮಾರು 2 ವರ್ಷಗಳ ಹಿಂದೆಯೇ ಪೈಪ್‌ಲೈನ್ ಅಳವಡಿಸಿದರೂ ಈವರೆಗೆ ಬಡವರಿಗೆ ಮಾತ್ರ ಬಿಂದಿಗೆ ನೀರು ಖರೀದಿಸುವ ಬವಣೆ ತಪ್ಪಿಲ್ಲ.

ತೋಟದ ಜನರಿಗೆ ಇದೀಗ ಜನಪ್ರತಿನಿಧಿಗಳೆಲ್ಲ ‘ಕಣ್ಮುಂದೆ ಕ್ಯಾರೆಟ್‌ ಕಟ್ಟಿ ಕುದುರೆ ಓಡಿಸುವ ಸವಾರ’ನ ರೀತಿ ಕಾಣುತ್ತಿದ್ದಾರೆ. ಕೇವಲ ಪೈಪ್‌ಲೈನ್ ತೋರಿಸಿಯೇ ವರ್ಷಗಳ ಮೇಲೆ ವರ್ಷಗಳನ್ನು ತಳ್ಳುತ್ತಿರುವ ನಗರಸಭೆಯ ಧೋರಣೆಗೆ ಬೇಸತ್ತಿರುವವರು ನಮ್ಮ ಆಕ್ರೋಶವನ್ನು ಯಾವ ರೀತಿ ವ್ಯಕ್ತಪಡಿಸಬೇಕೋ ತಿಳಿಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ.

‘ಕೆಳಗಿನ ತೋಟಕ್ಕೆ ಜಕ್ಕಲಮಡಗು ನೀರಿನ ಪೈಪ್‌ಲೈನ್‌ ಅಳವಡಿಸಿ ಸುಮಾರು 3 ವರ್ಷವಾಗುತ್ತ ಬಂತು. ಒಂದು ತಿಂಗಳ ಹಿಂದೆ ಅದರಲ್ಲಿ ಪರೀಕ್ಷಾರ್ಥ ನೀರು ಹರಿಸಿದ್ದು ಬಿಟ್ಟರೆ ಈವರೆಗೆ ಕುಡಿಯುವ ನೀರು ಪೂರೈಕೆ ಮಾಡಿಲ್ಲ. ಯಾರನ್ನು ಕೇಳಿದರೂ ಗೇಟ್‌ವಾಲ್ವ್‌ ಹಾಕಬೇಕು ಎನ್ನುವ ಕಥೆ ಹೇಳುತ್ತಾರೆ. ನಮಗಂತೂ ನಗರಸಭೆ ವಿಚಾರದಲ್ಲಿ ರೇಜಿಗೆ ಹುಟ್ಟು ಹೋಗಿದೆ’ ಎನ್ನುತ್ತಾರೆ ಆನಂದಪ್ಪ ಬಡಾವಣೆ ನಿವಾಸಿ ಗೋವಿಂದರಾಜು.

‘ನಗರಸಭೆಯ ಯಾವೊಬ್ಬ ಸದಸ್ಯನಿಗೂ ನನ್ನ ಕರ್ತವ್ಯ ಏನು ಎನ್ನುವ ಅರಿವೇ ಇಲ್ಲ. ನಮಗೆ ಕುಡಿಯುವ ನೀರು ಕೊಡಿ ಎಂದು ಕೇಳಿ, ಕೇಳಿ ನಮಗೆ ನಾಚಿಕೆ ಬಂತೇ ವಿನಾ ಸಂಬಂಧಪಟ್ಟವರಂತೂ ನಾಚಿಕೆ ಪಡಲಿಲ್ಲ. ಹೀಗಾಗಿ ಇತ್ತೀಚೆಗೆ ಆ ವಿಚಾರ ಯಾರಿಗೂ ಹೇಳಲು ಹೋಗುತ್ತಿಲ್ಲ. ರೋಸಿ ಹೋಗಿ ಸುಮ್ಮನಾಗಿದ್ದೇವೆ’ ಎಂದು ಬೇಸರ ವ್ಯಕ್ತಪಡಿಸಿದರು.

ಅಭಿವೃದ್ಧಿಯಲ್ಲಿ ರಾಜಕೀಯ?: ‘ಒಣ ರಾಜಕೀಯದಲ್ಲಿ ಜನರನ್ನು ಕಾರಣವಿಲ್ಲದೆ ರಾಜಕಾರಣಿಗಳು ಹೈರಾಣು ಮಾಡುತ್ತಿದ್ದಾರೆ. ಈ ಭಾಗದ ನಗರಸಭೆ ಸದಸ್ಯೆ ಜೆಡಿಎಸ್‌ಗೆ ಸೇರಿದವರು ಎನ್ನುವ ಏಕೈಕ ಕಾರಣಕ್ಕೆ ಶಾಸಕರು ಈ ಭಾಗಕ್ಕೆ ಯಾವುದೇ ಅನುದಾನ ನೀಡದಂತೆ, ಅಭಿವೃದ್ಧಿ ಕಾರ್ಯಗಳು ನಡೆಯದಂತೆ ನೋಡಿಕೊಳ್ಳುತ್ತಿದ್ದಾರೆ.

ಕೆಳಗಿನ ತೋಟದಲ್ಲಿ ಅಷ್ಟೋ ಇಷ್ಟೋ ಡಾಂಬರು ರಸ್ತೆಗಳು ಕಂಡರೆ ಅವು ಬಚ್ಚೇಗೌಡರ ಕಾಲದಲ್ಲಿ ಮಾಡಿದ ಕೆಲಸಗಳು. ಹೊಸ ಶಾಸಕರು ಬಂದ ಬಳಿಕ ಮೂಗಿಗೆ ತುಪ್ಪ ಸವರುವ ಮಾತುಗಳ ಹೊರತಾಗಿ ಇಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ನಾವು ಕಂಡಿಲ್ಲ’ ಎಂದು ಮಾರುತಿ ಬಡಾವಣೆಯ ನಿವಾಸಿ ಅಶೋಕ್‌ ತಿಳಿಸಿದರು.

‘ಈ ಊರಲ್ಲಿ ಎಲ್ಲದ್ರಲ್ಲೂ ರಾಜಕೀಯ ಸ್ವಾಮಿ. ರೈಲ್ವೆ ಗೇಟ್‌ನಿಂದಾಚೆ ಹೋಗಿ ನೋಡಿ ಅಲ್ಲಿ ಕುಡಿಯುವ ನೀರಿಗೆ ಬರವಿಲ್ಲ. ನಮಗೆ ಪೈಪ್‌ಲೈನ್‌ ಇದ್ದರೂ ಕುಡಿಯುವ ನೀರು ಬರುವುದೇ ಇಲ್ಲ. ಟ್ಯಾಂಕರ್‌ನವರ ಬಳಿ ಒಂದು ಬಿಂದಿಗೆಗೆ ₹5 ರಿಂದ ₹ 6 ನೀಡಿ ನೀರು ಖರೀದಿಸಿ ಕುಡಿಯುತ್ತಿದ್ದೇವೆ. ಇನ್ನೂ ಎಷ್ಟು ದಿನಾಂತ ನಮಗೆ ಈ ಶಿಕ್ಷೆ’ ಎಂದು ನೊಂದುಕೊಂಡು ಪ್ರಶ್ನಿಸಿದರು ಅಶೋಕ್‌ ಲೇಔಟ್‌ನ ನಿವಾಸಿ ಮೀನಾಕ್ಷಿ.

ಉಳ್ಳವರು ಕೊಳವೆಬಾವಿ ಕೊರೆಯಿಸಿಕೊಂಡು ಹಾಯಾಗಿದ್ದಾರೆ. ಮಧ್ಯಮ ವರ್ಗದ ಜನರು ಮನೆ ಬಳಕೆಗೆಂದು ಪೂರೈಸುವ ಕೊಳವೆಬಾವಿ ನೀರನ್ನೇ ಫಿಲ್ಟರ್‌ ಮಾಡಿ ಸೇವಿಸುತ್ತಿದ್ದಾರೆ. ಸಂಬಳದ ಕೆಲಸದಲ್ಲಿರುವ ಚಿಕ್ಕ ಕುಟುಂಬದವರು ಫಿಲ್ಟರ್‌ ನೀರಿನ ಡಬ್ಬದ ನೀರನ್ನು ಖರೀದಿಸಿ ಕುಡಿಯುತ್ತಿದ್ದಾರೆ. ಇನ್ನುಳಿದಂತೆ ಬಹುಪಾಲು ಜನರು ಬೆಳಗಾಗುತ್ತಲೇ ಕೈಯಲ್ಲಿ ಕಾಸು, ಬಿಂದಿಗೆ ಹಿಡಿದು ಬಡಾವಣೆಗೆ ನುಗ್ಗುವ ಟ್ಯಾಂಕರ್‌ಗಳನ್ನು ಎದುರು ನೋಡುತ್ತ ನಿಲ್ಲುತ್ತಾರೆ.

ಹಣ ಕೊಟ್ಟು ನೀರು ಖರೀದಿಸುವ ಶಕ್ತಿ ಇಲ್ಲದ ಬಡವರು ನೆರೆಹೊರೆಯ ಹೊಲಗಳಲ್ಲಿರುವ ಬೋರ್‌ವೆಲ್‌ಗಳತ್ತ ಹೆಜ್ಜೆ ಹಾಕುತ್ತಾರೆ. ದೂರದಿಂದ ಬಿಂದಿಗೆ ಹೊತ್ತು ತರಲು, ಕಾಸು ಕೊಡಲು ಶಕ್ತಿ ಇಲ್ಲದವರು ಅನಿವಾರ್ಯವಾಗಿ ಫ್ಲೋರೈಡ್‌ಯುಕ್ತ ನೀರು ಕುಡಿಯುತ್ತಿದ್ದಾರೆ ಎನ್ನುತ್ತಾರೆ ಇಲ್ಲಿನ ಜನರು.

ಏನಂತಾರೆ ನಗರಸಭೆ ಸದಸ್ಯ?

‘ಕೆಳಗಿನ ತೋಟದಲ್ಲಿ ಪೈಪ್‌ಲೈನ್‌ ಮುಖ್ಯ ಮಾರ್ಗದಿಂದ ಸಂಪರ್ಕ ಪಡೆದವರಿಗೆ ಕುಡಿಯುವ ನೀರು ಪೂರೈಕೆಯಾಗುತ್ತಿದೆ. ಕೆಲವೆಡೆ ಮುಖ್ಯ ಮಾರ್ಗಕ್ಕೆ ಸಬ್‌ಲೈನ್‌ಗಳ ಸಂಪರ್ಕ ಕಲ್ಪಿಸುವುದು ಮತ್ತು ಸಬ್‌ಲೈನ್‌ಗಳಿಗೆ ವಾಲ್ವ್‌ ಅಳವಡಿಸುವ ಕೆಲಸ ಬಾಕಿ ಇದೆ.

ಹೀಗಾಗಿ ವಾರ್ಡ್‌ನಾದ್ಯಂತ ಕುಡಿಯುವ ನೀರು ಪೂರೈಸುವ ಕಾರ್ಯ ವಿಳಂಬವಾಗಿದೆ. ಬಾಕಿ ಉಳಿದಿರುವ ಕೆಲಸಗಳು ಮುಗಿಯುತ್ತಿದ್ದಂತೆ ವಾರ್ಡ್‌ಗೆ ಜಕ್ಕಲಮಡಗು ನೀರು ಪೂರೈಕೆಯಾಗಲಿದೆ’ ಎಂದು ನಗರಸಭೆಯ 22ನೇ ವಾರ್ಡ್‌ ಸದಸ್ಯೆ ಎನ್‌.ಶ್ವೇತಾ ಮಂಜುನಾಥ್ ತಿಳಿಸಿದರು.

* ಇನ್ನು ಕೆಲವೆಡೆಗಳಲ್ಲಿ ಜಕ್ಕಲಮಡಗು ನೀರು ಪೂರೈಸುವ ಕೆಲಸ ಬಾಕಿ ಇದೆ. ಅನೇಕ ಕಡೆಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ. ಶೀಘ್ರದಲ್ಲಿಯೇ ಕೆಳಗಿನ ತೋಟಕ್ಕೆ ನೀರು ಪೂರೈಸುತ್ತೇವೆ.
ಉಮಾಕಾಂತ್, ನಗರಸಭೆ ಆಯುಕ್ತ

ಅಂಕಿ ಅಂಶ

10 ವರ್ಷ -  ಜಿಲ್ಲಾ ಕೇಂದ್ರವಾಗಿ. ಇನ್ನೂ ತಪ್ಪದ ನೀರು ಖರೀದಿ

₹5, 6     - ಒಂದು ಬಿಂದಿಗೆ ನೀರಿಗೆ ಬೆಲೆ

2 ವರ್ಷ   - ಹಿಂದೆಯೇ ಪೈಪ್‌ಲೈನ್  ಅಳವಡಿಕೆ

25         - ವರ್ಷ ನಗರಸಭೆಗೆ ಸೇರ್ಪಡೆಯಾಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT