ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಸಾಹಿತ್ಯ ಭವನಕ್ಕೆ ₹ 10 ಲಕ್ಷ ಅನುದಾನ

ಗುಡಿಬಂಡೆ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ, ನಗರದ ಬೀದಿಗಳಲ್ಲಿ ಸಮ್ಮೇಳನಾಧ್ಯಕ್ಷರ ಮೆರವಣಿಗೆ
Last Updated 14 ಫೆಬ್ರುವರಿ 2017, 6:15 IST
ಅಕ್ಷರ ಗಾತ್ರ
ಗುಡಿಬಂಡೆ : ತಾಲ್ಲೂಕು ಕನ್ನಡ ಸಾಹಿತ್ಯ ಭವನಕ್ಕೆ ಸಂಸದರ ನಿಧಿಯಿಂದ ₹ 10 ಲಕ್ಷ ಬಿಡುಗಡೆ ಮಾಡುವುದಾಗಿ ಸಂಸದ ವೀರಪ್ಪಮೋಯ್ಲಿ ಭರವಸೆ ನೀಡಿದರು. ಪಟ್ಟಣದ ತಾಲ್ಲೂಕು ಕಚೇರಿ ಆವರಣದಲ್ಲಿ ಸೋಮವಾರ ಅಮಾನಿ ಬೈರ ಸಾಗರ ವೇದಿಕೆಯಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಹಮ್ಮಿಕೊಂಡಿದ್ದ 5ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.
 
ಕನ್ನಡ ಭಾಷೆಗೆ ಶಾಸ್ತ್ರಿಯ ಸ್ಥಾನ ಮಾನಕ್ಕಾಗಿ ಸಾಕಷ್ಟು ಪ್ರಯತ್ನಗಳನ್ನು ಮಾಡಿದ್ದೇನೆ. ಕನ್ನಡ ಸಾಹಿತ್ಯ ಪರಿಷತ್‌ ಕಟ್ಟುವಲ್ಲಿ ಭಾರತ ರತ್ನ ಸರ್.ಎಂ.ವಿಶ್ವೇಶ್ವರಯ್ಯ ಅವರ ಪಾತ್ರ ಬಹಳ ಮುಖ್ಯವಾದುದು ಎಂದು ತಿಳಿಸಿದರು. 1ನೇ ತರಗತಿಯಿಂದ 4ನೇ ತರಗತಿ ವರೆಗೆ ರಾಜ್ಯದಲ್ಲಿ ಕಡ್ಡಾಯವಾಗಿ ಕನ್ನಡ ಭಾಷೆಯನ್ನಾಗಿ ಮಾಡುವಂತೆ ಮುಖ್ಯಮಂತ್ರಿಯಾಗಿದ್ದಾಗ ಶ್ರಮಿಸಿದ್ದೇನೆ ಎಂದು ತಿಳಿಸಿದರು.
 
ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಮಾತನಾಡಿ, ಈ ಬಾರಿ ಸಮ್ಮೇಳನದ ಅಧ್ಯಕ್ಷರನ್ನಾಗಿ ಜಿ.ಎನ್.ರಾಜಶೇಖರ್ ನಾಯ್ಡು ಅವರನ್ನು ಮಾಡಿರುವುದು ಸಂತಸ ತಂದಿದೆ. ತಾಲ್ಲೂಕಿನಲ್ಲಿ ಎಲ್ಲ ಭಾಗದ ರಸ್ತೆಗಳ ಅಭಿವೃದ್ಧಿ ಮಾಡಿದ್ದೇನೆ. ತಾಲ್ಲೂಕಿನಲ್ಲಿ ಈಗಾಗಲೇ ಸುಮಾರು ₹ 40 ರಿಂದ ₹ 50 ಕೋಟಿ ರಸ್ತೆಗಳ ನಿರ್ಮಾಣಕ್ಕಾಗಿ ಅನುದಾನ ಮೀಸಲಿಟ್ಟಿದ್ದೇನೆ ಎಂದು ತಿಳಿಸಿದರು.
 
ಪಟ್ಟಣದಲ್ಲಿ ಕನ್ನಡ ಭವನ ಕಟ್ಟಲು ನಿವೇಶನ ಮತ್ತು ₹ 5 ಲಕ್ಷ ಶಾಸಕರ ನಿಧಿಯಿಂದ ನೀಡುವುದಾಗಿ ಈಗಾಗಲೇ ಆಶ್ವಾಸನೆ ನೀಡಿದ್ದೇನೆ. ಕೂಡಲೇ ಭವನ ನಿರ್ಮಾಣ ಮಾಡುತ್ತೇನೆ ಎಂದು ತಿಳಿಸಿದರು.
 
ಕಸಾಪ ತಾಲ್ಲೂಕು ಘಟಕ ಅಧ್ಯಕ್ಷೆ ಅನುರಾಧ ಆನಂದ್ ಮಾತನಾಡಿ, ತಾಲ್ಲೂಕಿನಲ್ಲಿ ಕನ್ನಡ ಕಾರ್ಯಕ್ರಮಗಳನ್ನು ಮಾಡಲು ಕಟ್ಟಡದ ಕೊರತೆಯಿದ್ದು, ಆದಷ್ಟು ಬೇಗ ನಿವೇಶನ ಮತ್ತು ಕನ್ನಡ ಭವನ ಅಗತ್ಯವಿದೆ. ಈ ಕನ್ನಡ ಭವನ ನಿರ್ಮಾಣಕ್ಕಾಗಿ ಸಂಸದರು, ಶಾಸಕರು ಸಮ್ಮೇಳನಾಧ್ಯಕ್ಷರ ಹಾಗೂ ಜನ ಪ್ರತಿನಿಧಿಗಳು ಸಹಕಾರ ಅಗತ್ಯವಿದ್ದು ಕನ್ನಡ ಭವನ ನಿರ್ಮಾಣಕ್ಕೆ ಕೈಜೊಡಿಸಬೇಕು ಎಂದು ಮನವಿ ಮಾಡಿದರು.
 
ತಾಲ್ಲೂಕಿನಲ್ಲಿ ಕನ್ನಡ ಶಾಲೆಗಳನ್ನು ಮುಚ್ಚಿದ್ದು, ಕೂಡಲೇ ಅದನ್ನು ತೆರೆಯಬೇಕು. ಈಗಾಗಲೇ ತಾಲ್ಲೂಕಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ. ಮನೆಗೊಂದು ಕವಿಗೋಷ್ಠಿ, ಶಾಲೆಗೊಂದು ಕನ್ನಡ ಕಾರ್ಯಕ್ರಮ, ನಿರಂತರವಾಗಿ ಕನ್ನಡದ ಕಾರ್ಯಕ್ರಮಗಳನ್ನ ಹಮ್ಮಿಕೊಂಡು ಬರುತ್ತಿದ್ದೇವೆ ಎಂದು ತಿಳಿಸಿದರು.

ತಹಸೀಲ್ದಾರ್ ಜಿ.ನಂಜಪ್ಪ, ಸಾರ್ವಜನಿಕ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಟಿ.ಅಶ್ವತ್ಥರೆಡ್ಡಿ, ತಾಲ್ಲೂಕು ಕಸಾಪ ಅಧ್ಯಕ್ಷೆ ಡಿ.ಅನುರಾಧ ಆನಂದ್  ಧ್ವಜಾರೋಹಣ ನೆರವೇರಿಸಿದರು.
 
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ನಗರದಿಂದ ವಿವಿಧ ಜನಪದ ಕಲಾ ತಂಡಗಳಿಂದ  ಸಮ್ಮೇಳನಾಧ್ಯಕ್ಷರ ಹಾಗೂ ಭುವನೇಶ್ವರಿದೇವಿಯ ಮೆರವಣಿಗೆ ಮಾಡಲಾಯಿತು.
ಸ್ಥಳಿಯ ಕವಿಗಳಾದ ಪ್ರಿಂಟಿಂಗ್ ಪ್ರೆಸ್ ಸುಬ್ಬರಾಯಪ್ಪ ಅವರ ‘ಸೂರ್ಯ ಕಾಂತಿ’ ಮತ್ತು ದೂರವಾಣಿ ವಿ. ಗಂಗಾಧರ್ ಅವರ ‘ಏನೆಂದು ಕರೆಯಲಿ’  ಕವನ ಸಂಕಲನಗಳನ್ನು ಬಿಡುಗಡೆ ಮಾಡಲಾಯಿತು.
 
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ಅಧ್ಯಕ್ಷ ಕೈವಾರ ಶ್ರೀನಿವಾಸ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಜಿ.ಆರ್. ಗಾಯಿತ್ರಿ ನಂಜುಂಡಪ್ಪ, ಎಂ.ಆರ್.ವರಲಕ್ಷ್ಮಿ, ಎ.ವಿ.ಟಿ.ನಾರಾಯಣಸ್ವಾಮಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ವರಲಕ್ಷ್ಮಿ, ಉಪಾಧ್ಯಕ್ಷ ಬೈರಾರೆಡ್ಡಿ, ಪಂ.ಪಂ ಅಧ್ಯಕ್ಷ ಜಿ.ಎಸ್. ಚಂದ್ರಶೇಖರ್, ಉಪಾಧ್ಯಕ್ಷೆ ವೆಂಕಟಲಕ್ಷ್ಮಮ್ಮ, ಬಿ.ಇ.ಒ ವೆಂಕಟರಮಣಪ್ಪ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎ.ಬಿ.ಪ್ರದೀಪ್ ಕುಮಾರ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರವಿಕುಮಾರ್,ವೈ.ಎಲ್.ಹನುಮಂತ ರಾವ್, ಸ.ನ.ನಾಗೇಂದ್ರ, ರಾಜ್ಯ ಹಾಲು ಒಕ್ಕೂಟ ಮಹಾಮಂಡಳಿ ನಿರ್ದೆಶಕ ಕೆ.ಅಶ್ವತ್ಥರೆಡ್ಡಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಹೆಚ್.ನರಸಿಂಹರೆಡ್ಡಿ, ಎನ್.ನರಸರೆಡ್ಡಿ, ಎಸ್.ನರಸಿಂಹಮೂರ್ತಿ, ಕಸ್ತೂರಿ ಜಗನ್ನಾಥ್, ರಫಿಕ್, ಆರ್.ವೆಂಕಟಾಚಲಯ್ಯ. ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಅಧ್ಯಕ್ಷ ಜಿ.ವಿ.ಆನಂದ್, ಶ್ರೀನಿವಾಸ್ ಯಾದವ್,  ಜಿ.ಎನ್.ಶ್ರೀನಿವಾಸ ನಾಯ್ಡು, ಬಿ.ಮಂಜುನಾಥ್ ಸೇರಿದಂತೆ ಮತ್ತಿತರರು ತಾಲ್ಲೂಕು ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು.
 
ಕಳೆದ ನಾಲ್ಕು ವರ್ಷಗಳಿಂದ  ಕನ್ನಡ ಸಾಹಿತ್ಯ ಪರಿಷತ್ತಿನಿಂದ ಸಮ್ಮೇಳನಗಳ ಮೂಲಕ ಬೇಡಿಕೆಗಳ ಈಡೇರಿಕೆಗೆ ಅಧಿಕಾರಿಗಳ ಮೂಲಕ ಸರ್ಕಾರಕ್ಕೆ ಸಮರ್ಪಿಸಿದ್ದೇವೆ. ಇವುಗಳಲ್ಲಿ ಕೆಲ ಬೇಡಿಕೆ ಮಾತ್ರ ಈಡೇರಿವೆ ಎಂದು ಸಮ್ಮೇಳನದ ಅಧ್ಯಕ್ಷ  ಜಿ.ಎನ್.ರಾಜಶೇಖರ್ ನಾಯ್ಡು  ತಿಳಿಸಿದರು. ಸಲ್ಲಿಸಿದ್ದ ಬೇಡಿಕೆಗಳಲ್ಲಿ ಗುಡಿಬಂಡೆ ಪ್ರತ್ಯೇಕ ವಿಧಾನಸಭಾ ಕ್ಷೇತ್ರ, ತಾಲ್ಲೂಕಿಗೆ ಶಾಶ್ವತ ನೀರಾವರಿ ಯೋಜನೆ ಬೇಡಿಕೆ ಉಳಿದುಕೊಂಡಿವೆ. ಇದಕ್ಕೆ ಸರ್ಕಾರ  ಕುಂಟು ನೆಪ ನೀಡುತ್ತಿದೆ ಎಂದು ತಿಳಿಸಿದರು.
 
ಗುಡಿಬಂಡೆಗೆ ಪ್ರತ್ಯೇಕ ವಿಧಾನಸಭೆ ಕ್ಷೇತ್ರ  ಅಗತ್ಯ

ಬಾಗೇಪಲ್ಲಿ ಕ್ಷೇತ್ರದಲ್ಲಿ ಶಾಸಕರಾಗಲು ನಮ್ಮೂರಿನ ಮತಗಳೇ ಅತಿ ಮುಖ್ಯವಾಗಿದೆ. ಗುಡಿಬಂಡೆ ಪ್ರತ್ಯೇಕ ವಿಧಾನಸಭಾ ಕ್ಷೇತ್ರದ ಕೂಗು ನಿರಂತರ ಮೊಳಗಬೇಕು. ಶಾಶ್ವತ ನೀರಾವರಿ ಯೋಜನೆಗೆ ಚಿತ್ರಾವತಿ ನದಿ ಪುನಶ್ಚೇತನದ ಬಗ್ಗೆ ಸರ್ಕಾರದೊಂದಿಗೆ ನೇರವಾಗಿ ಮಾತುಕತೆ ನಡೆಸುತ್ತಿದ್ದೇನೆ. ಈ ಬಾರಿ ಬಜೆಟ್‌ನಲ್ಲಿ ವಿಶೇಷ ಅನುದಾನದ ವ್ಯವಸ್ಥೆಮಾಡುವುದಾಗಿ ಗ್ರಾಮೀಣಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವ ಸಚಿವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT