ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತಿಗಳಿಗೆ ರಂಗಭೂಮಿ ತಾತ್ಸಾರ

‘ಅಮ್ಮ– 75 ಮಾಲೆ’ಯ ಕಾರ್ಯಕ್ರಮ: ರಂಗ ಸಂಘಟಕ ಬಿ.ಜಯಪ್ರಕಾಶ ಗೌಡ ವಿಷಾದ
Last Updated 14 ಫೆಬ್ರುವರಿ 2017, 6:51 IST
ಅಕ್ಷರ ಗಾತ್ರ
ಮೈಸೂರು: ಸಾಹಿತಿಗಳು ಹಾಗೂ ರಾಜಕಾರಣಿಗಳು ರಂಗಭೂಮಿಯನ್ನು ನಿಕೃಷ್ಟವಾಗಿ ಕಾಣುತ್ತಿದ್ದಾರೆ ಎಂದು ರಂಗ ಸಂಘಟಕ ಬಿ.ಜಯಪ್ರಕಾಶ ಗೌಡ ವಿಷಾದ ವ್ಯಕ್ತಪಡಿಸಿದರು.
 
ನಾಕುತಂತಿ ಪ್ರಕಾಶನ ಮತ್ತು ಅಮ್ಮನ ಗೆಳೆಯರ ಬಳಗವು ನಟನ ರಂಗಮಂದಿರದಲ್ಲಿ ಭಾನುವಾರ ಏರ್ಪಡಿಸಿದ್ದ ‘ಅಮ್ಮ– 75 ಮಾಲೆ’ಯ ಕಾರ್ಯಕ್ರಮದಲ್ಲಿ ಲೇಖಕಿ ವಿಜಯಾ ಅವರ ‘ರಂಗ ಸಮ್ಮಾನ’ ಮತ್ತು ‘ನುಡಿ ಬೆಡಗು’ ಕೃತಿಗಳ ಬಿಡುಗಡೆ ಕಾರ್ಯಕ್ರಮದಲ್ಲಿ ‘ರಂಗ ಸಮ್ಮಾನ’ ಕೃತಿ ಕುರಿತು ಅವರು ಮಾತನಾಡಿದರು.
 
ಹಿಂದಿನ ಕಾಲದ ಸಾಹಿತಿಗಳು ವೃತ್ತಿರಂಗಭೂಮಿಯ ಜತೆಗೆ ನಿಕಟ ಸಂಪರ್ಕವನ್ನು ಇಟ್ಟುಕೊಂಡಿದ್ದರು. ಗುಬ್ಬಿ ವೀರಣ್ಣನವರ ನಾಟಕ ಕಂಪನಿಯ ಜತೆಗೆ ಅ.ನ.ಕೃಷ್ಣರಾಯರಂತಹ ಸಾಹಿತಿ ಗಳು ನಾಟಕಗಳನ್ನು ಬರೆದುಕೊಟ್ಟಿದ್ದಿದೆ. ‘
 
ಜಗಜ್ಯೋತಿ ಬಸವೇಶ್ವರ’ ನಾಟಕ ಇದಕ್ಕೆ ಉತ್ತಮ ಉದಾಹರಣೆ. ಕುದುರೆಯ ಮೇಲೆ ಕುಳಿತ ಬಸವೇಶ್ವರನ ಪ್ರಸಿದ್ಧ ಚಿತ್ರವು ರಚನೆಗೊಂಡಿದ್ದೂ ಈ ಸಂದರ್ಭದಲ್ಲಿಯೇ. ಇಂತಹ ಅನೇಕ ಉದಾಹರಣೆಗಳನ್ನು ಅಂದಿನ ಕಾಲದ ಸಾಹಿತಿಗಳ ಜತೆಗೆ ನೀಡಬಹುದು. ಆದರೆ, ಈಗಿನ ಕಾಲದ ಸಾಹಿತಿಗಳು ಬದಲಾಗಿದ್ದಾರೆ. ಅವರಿಗೆ ರಂಗಭೂಮಿ ಎಂದರೆ ತಾತ್ಸಾರ; ಅದನ್ನು ಪ್ರತ್ಯೇಕವಾಗಿ ಕಾಣುತ್ತಾರೆ. ಅದರೊಂದಿಗೆ ತೊಡಗಿಸಿಕೊಳ್ಳಲು ಲೆಕ್ಕಾಚಾರ ಎಣಿಸುತ್ತಾರೆ ಎಂದು ಹೇಳಿದರು.
 
 ಸಾಹಿತಿಗಳೀಗ ರಾಜಕಾರಣಿಗಳ ಪಾದ ತೊಳೆಯಲು ಕಾದು ನಿಂತಿರು ತ್ತಾರೆ. ರಾಜಕಾರಣಿಗಳ ಮನೆಬಾಗಿಲನ್ನು ಕಾಯುವುದೇ ಅವರ ವೃತ್ತಿಯಾಗಿದೆ. ಯಾವುದಾದರೂ ಅಕಾಡೆಮಿಗೆ ಅಧ್ಯಕ್ಷರಾಗಲೊ, ಯಾವುದಾದರೂ ಹುದ್ದೆ ಪಡೆಯಲೊ, ಪ್ರಶಸ್ತಿ ಪಡೆಯಲೊ ಹಪಹಪಿಸುತ್ತಿರುತ್ತಾರೆ. ಅವರ ಆದರ್ಶವೆಲ್ಲ ಅಲ್ಲಿ ಬಂದ್ ಆಗುತ್ತವೆ ಎಂದು ಟೀಕಿಸಿದರು.
 
ಅಂದಿನ ಕಾಲದಂತಹ ನಾಟಕ ಕಂಪನಿಗಳೂ ಈಗ ಇಲ್ಲ. ಪ್ರೇಕ್ಷಕರ ಹಣದಿಂದ ಮಾತ್ರವೇ ಕಂಪನಿ ನಡೆಯುತ್ತಿದ್ದ ಕಾಲವಿತ್ತು. ಎಲ್ಲ ಕಲಾವಿದರಿಗೆ ಊಟ, ಅವರ ಮಕ್ಕಳ ಶಿಕ್ಷಣ, ಕಂಪನಿಯ ನಿರ್ವಹಣೆ ಎಲ್ಲವೂ ನಾಟಕ ನೋಡಲು ಪ್ರೇಕ್ಷಕರು ನೀಡುವ ಹಣದಿಂದಲೇ ನಡೆಯುತ್ತಿತ್ತು. ಆದರೆ, ಈಗ ನಾಟಕ ಮಾಡುವವರು ಸರ್ಕಾರದ ಅನುದಾನಗಳನ್ನು ಬಯಸುತ್ತಿದ್ದಾರೆ. ಇದರಿಂದ ಆದರ್ಶ, ಮೌಲ್ಯಗಳೊಂದಿಗೆ ರಾಜಿಯಾಗಬೇಕಾಗುತ್ತದೆ ಎಂದು ವಿಶ್ಲೇಷಿಸಿದರು.
 
ಗುಬ್ಬಿ ವೀರಣ್ಣ, ಸುಬ್ಬಯ್ಯ ನಾಯ್ಡು, ಆರ್‌.ನಾಗೇಶ್‌ ಅವರಂಥ ರಂಗಕರ್ಮಿ ಗಳು ನಮಗೆ ಆದರ್ಶರಾಗಬೇಕು. ಹಿರಣ್ಣಯ್ಯ ಅವರಂಥ ಕಲಾವಿದರು ನಮಗೀಗ ಬೇಕು. ಇವರೆಲ್ಲರ ಚಿತ್ರಣವನ್ನು ವಿಜಯಾ ಅವರು ತಮ್ಮ ಕೃತಿಯಲ್ಲಿ ಪರಿಣಾಮಕಾರಿಯಾಗಿ ಕಟ್ಟಿ ಕೊಟ್ಟಿದ್ದಾರೆ ಎಂದು ಅವರು ತಿಳಿಸಿದರು.
 
‘ಪ್ರಜಾವಾಣಿ’ ಸಹ ಸಂಪಾದಕಿ ಸಿ.ಜಿ.ಮಂಜುಳಾ ಅವರು ‘ನುಡಿ ಬೆಡಗು’ ಕೃತಿ ಕುರಿತು ಮಾತನಾಡಿ, ‘ತುಷಾರ’ ಹಾಗೂ ‘ಸುದ್ದಿ ಸಂಗಾತಿ’ ಪತ್ರಿಕೆಗಳಲ್ಲಿ ವಿಜಯಾ ಅವರು 70ರ ದಶಕದಿಂದ ಬರೆದಿರುವ ಲೇಖನಗಳ ಸಂಗ್ರಹ ಗಮನಾರ್ಹವಾಗಿದೆ. ಅವರು ಅಂದು ಬರೆದಿರುವ ಅನೇಕ ವಿಚಾರಗಳು ಇಂದಿಗೂ ಪ್ರಸ್ತುತವಾಗಿವೆ. ಮಹಿಳೆ, ರಾಜಕಾರಣ, ಸಾಮಾಜಿಕ ವಿಡಂಬನೆಯನ್ನು ಅತ್ಯಂತ ಪರಿಣಾಮಕಾರಿ ಹಾಗೂ ಆತ್ಮೀಯವಾಗಿ ಲೇಖಕಿ ಬರೆದಿದ್ದಾರೆ ಎಂದು ಹೇಳಿದರು.
 
ಸಾಹಿತಿ ಕಾಳೇಗೌಡ ನಾಗವಾರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಚಲನಚಿತ್ರ ನಿರ್ದೇಶಕ ಬಿ.ಸುರೇಶ ಆಶಯ ಭಾಷಣ ಮಾಡಿದರು. ನಟನ ನಿರ್ದೇಶಕ ಮಂಡ್ಯ ರಮೇಶ್‌ ಸ್ವಾಗತಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT