ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರಂಗದ ಕನ್ನಡಿಯಲ್ಲಿ...

Last Updated 14 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಕನ್ನಡಿ ಮನುಷ್ಯನ ಅದ್ಭುತ ಆವಿಷ್ಕಾರ. ತನ್ನ ಬಿಂಬದರ್ಶನಕ್ಕೆ ಅವನು ಅದನ್ನು ಬಳಸಲು ಆರಂಭಿಸಿದ ದಿನ ಮನುಕುಲದ ಚರಿತ್ರೆಯಲ್ಲಿ ಹೊಸದೊಂದು ಯುಗವೇ ಆರಂಭವಾಯಿತೆನ್ನಬಹುದು. ತನ್ನ ತಾನರಿವ ಮೊದಲ ಪ್ರಯತ್ನವೇ ಕನ್ನಡಿಯ ಮುಂದೆ ನಿಲ್ಲುವ ಪ್ರಯತ್ನ. ಅವನ ಚಿಂತನೆಯ ಹರಹು ಹೊಸ ದಿಕ್ಕನ್ನೂ, ಸರಿಯಾದ ದಿಕ್ಕನ್ನೂ ಹಿಡಿದದ್ದು, ಅವನನ್ನು ಪ್ರಾಣಿಸಂಕುಲದಿಂದ ಭಿನ್ನವಾಗಿ ನಿಲ್ಲುವಂತೆ ಮಾಡಿದ್ದು ಈ ದರ್ಪಣಚಿಂತನೆ.

ಪ್ರಾಣಿಗಳು ಕನ್ನಡಿಯನ್ನು ಕಂಡಾಗ ಗಲಿಬಿಲಿಗೊಳ್ಳುತ್ತವೆ; ತಮ್ಮ ಪ್ರತಿಸ್ಪರ್ಧಿ ಎಂದು ಭಾವಿಸಿ ಅವು ಆಕ್ರಮಣಕ್ಕೂ ಹೇಸುವುದಿಲ್ಲ. ಒಂದು ಜಾನಪದಕಥೆಯ ನೆನಪಾಗುತ್ತದೆ. ರಾಜನೊಬ್ಬ ತನ್ನ ತೋಟವು ಮಂಗಗಳ ಹಾವಳಿಯಿಂದ ನಾಶವಾಗುವುದನ್ನು ಕಂಡು ಏನೆಲ್ಲ ಉಪಾಯ ಮಾಡಿದರೂ ವಿಫಲನಾದಾಗ ಬುದ್ಧಿವಂತನೊಬ್ಬ ಒಂದಷ್ಟು ಕನ್ನಡಿಗಳನ್ನೂ ಕಿರುಗತ್ತಿಗಳನ್ನೂ ತೋಟದಲ್ಲಿ ಇಡಲು ಸೂಚಿಸುತ್ತಾನೆ.

ಕೆಲ ಹೊತ್ತಿನಲ್ಲೆ ಮಂಗಗಳು ಮರದಿಂದಿಳಿದು ಕೆಲವು ಕನ್ನಡಿಗಳನ್ನೂ, ಕೆಲವು ಕಿರುಗತ್ತಿಗಳನ್ನೂ, ಮತ್ತೆ ಹಲವು ಎರಡನ್ನೂ ಹಿಡಿದು ಪ್ರತಿಬಿಂಬ, ನಿಜಬಿಂಬಗಳಿಂದ ಗಲಿಬಿಲಿಗೊಂಡು ಕಿರುಚಾಡಿ ಭಯವಿಹ್ವಲಗೊಂಡು ಕಿರುಗತ್ತಿಗಳನ್ನು ಬಳಸಿ ಕಾದಾಡಿ ಸತ್ತುಬಿದ್ದುವಂತೆ. ನಮ್ಮಲ್ಲಿಯೂ ಅಂತಹವರಿದ್ದಾರೆ – ಕನ್ನಡಿಯನ್ನು ಮುಂದೆ ಹಿಡಿದಾಗಲೂ ಸ್ವಸ್ವರೂಪವನ್ನು ಮರೆತು, ಮತ್ತೇನನ್ನೋ ಕಂಡವರು, ಕೇಳಿದವರು.

ಅವರೇ ಪುರಾಣದ ರಾಕ್ಷಸರೆಂಬ ನಕಾರಾತ್ಮಕ ಮಾದರಿಯ ಪ್ರತಿಮೆಗಳು. ಸಾಕ್ಷಾತ್ ಬ್ರಹ್ಮನೇ ಎದುರಿಗೆ ಬಂದು ‘ಬೇಕಾದ್ದನ್ನು ಕೇಳಿಕೊ’ ಎಂದರೆ ಅವರು ಬೇಡಿದ್ದು ವಿಚಿತ್ರ ಬಗೆಯ ಸಾವು, ದೀರ್ಘ ನಿದ್ರೆ ಮೊದಲಾದವುಗಳನ್ನು. ಆ ವಿಚಾರ ಅಂದಿಗಿರಲಿ. ಇಂದು ಎಲ್ಲರೂ ಕನ್ನಡಿಯಲ್ಲಿ ತಮ್ಮ ಬಿಂಬವನ್ನು ಕಾಣುವ ಉದ್ದೇಶವೇನು? ತನ್ನನ್ನು ತಾನು ಕಾಣುವ ತವಕವೇಕೆ? ಪ್ರತಿಯೊಬ್ಬ ಮನುಷ್ಯನೂ ತನಗೆ ತಾನೇ ಸುಂದರನೇ, ಸ್ವೀಕಾರಾರ್ಹನೇ ಆಗಿರುತ್ತಾನೆ.

ಮತ್ತು ಅದನ್ನು ಗಟ್ಟಿಮಾಡಿಕೊಳ್ಳಲೋ ಎಂಬಂತೆ ಮತ್ತೆ ಮತ್ತೆ ತನ್ನನ್ನು ತಾಣು ಕನ್ನಡಿಯಲ್ಲಿ ನೋಡಿಕೊಳ್ಳುತ್ತಾನೆ. ತಾನು ಚೆಂದ ಕಾಣುತ್ತೇನೆಂದು ಭಾವಿಸಲಷ್ಟೇ ಅವನು ಕನ್ನಡಿಯಲ್ಲಿ ಬಿಂಬವನ್ನು ನೋಡಿಕೊಳ್ಳುವುದಲ್ಲ. ತನ್ನ ಚೆಂದವನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನವನ್ನೂ ಅವನು ಕನ್ನಡಿಯ ಮುಂದೆ ನಿಂತು ಮಾಡುತ್ತಾನೆ.

ರಸ್ತೆಬದಿಯಲ್ಲಿ ನಿಲ್ಲಿಸಿದ ವಾಹನದ ಕನ್ನಡಿಯನ್ನೂ ತನಗೆ ಬೇಕಾದಂತೆ ತಿರುಗಿಸಿಕೊಂಡು ಸ್ವರೂಪ ತಿದ್ದಿಕೊಳ್ಳುವ ಪ್ರಯತ್ನ ಮಾಡುತ್ತಾನೆಂದರೆ ತಾನು ಚೆಂದ ಕಾಣಬೇಕೆಂಬ ಅಭೀಪ್ಸೆ ಅವನಲ್ಲಿ ಅದೆಷ್ಟು ಬಲವಾಗಿದ್ದಿರಬೇಕು! ಬಾಲ್ಯದಲ್ಲಿ ತಲೆಬಾಚಿಕೊಳ್ಳುವುದೇ ಶಿಕ್ಷೆಯಾದರೆ ಯೌವನದಲ್ಲಿ ಕ್ರಾಪು ಕೂರುತ್ತಿಲ್ಲವೆಂಬ ಆತಂಕ, ಮುಪ್ಪಿನಲ್ಲಿ ತಲೆಯೂ ಬೋಳಾಯಿತೆಂಬ ಚಿಂತೆ! ಬಾಹ್ಯದೇಹದ ಸ್ವರೂಪ, ಸೌಂದರ್ಯ ಬದಲಾದಂತೆ ಅಂತರಂಗದ ನಮ್ಮತನವೆಂಬ ಸೌಂದರ್ಯವೂ ಬದಲಾಗುತ್ತಿರುತ್ತದೆ.

ಸೌಂದರ್ಯದ ಬಾಹ್ಯಮುಖ ಕನ್ನಡಿಯಲ್ಲಿ ಕಾಣುವಂತಹದ್ದು, ಅಂತರಂಗದ ಸೌಂದರ್ಯ ಆತ್ಮಸಾಕ್ಷಿಗೆ ಮಾತ್ರ ಕಾಣುವಂತಹದ್ದು. ಆದರೆ ಒಂದಂತೂ ಶಾಶ್ವತ ಸತ್ಯ. ಕನ್ನಡಿಯಲ್ಲಿ ಕಂಡಾತ ಬದಲಾಗುತ್ತಲೇ ಇರುತ್ತಾನೆ. ಹಾಗೆಯೇ  ಬಿಂಬವನ್ನು ನೋಡಿಕೊಳ್ಳುವ ಪ್ರಯತ್ನದಲ್ಲಿ ಉತ್ತಮಿಕೆ ಸಾಧಿಸಬೇಕೆಂಬ ಸೂಕ್ಷ್ಮಪ್ರಜ್ಞೆ ಅಡಗಿರುವುದನ್ನು ಗಮನಿಸಬೇಕು. ಅಂದರೆ ದಿನದಿಂದ ದಿನಕ್ಕೆ, ವರ್ಷದಿಂದ ವರ್ಷಕ್ಕೆ ಉನ್ನತಿಯನ್ನು ಸಾಧಿಸಬೇಕೆಂಬ ಹಂಬಲ ಇರುತ್ತದೆ. ನಮ್ಮ ಜೀವನದ ಪಯಣದಲ್ಲಿ ನಮ್ಮ ಸಾಧನೆಗಳನ್ನು ಸಿದ್ಧಿಗಳನ್ನು ಅಳೆಯುವ ಅನೇಕ ಕನ್ನಡಿಗಳಿವೆ.

ಜೀವನ ಎಂಬುದು ಪ್ರಗತಿಪಥ. ಅಡಿಯಿಡುತ್ತ ಮುನ್ನಡೆವ ಪ್ರಯಾಣ. ಸಾಧಿಸಿರುವುದೆಷ್ಟು ಎಂಬುದರ ಅಳತೆ ಮಾಡುವವರು ಸುತ್ತಲಿನವರು. ಹೊರಗಣ ಜಗತ್ತಿಗೆ ಕಾಣುವುದು ಆಸ್ತಿ-ಪಾಸ್ತಿ, ವಿದ್ಯೆ (ಪದವಿ), ಪ್ರತಿಷ್ಠೆಗಳು. ಆದರೆ ಒಳಗಿನ ಪ್ರಗತಿ ಯಾರ ಕಣ್ಣಿಗೂ ಕಾಣದು. ಕಣ್ಣಿಗೆ ಕಂಡಷ್ಟೇ ಸತ್ಯ ಎನ್ನುತ್ತದೆ ಜಗತ್ತು. ಆದರೆ ಅದು ಅರ್ಧ ಸತ್ಯ. ಅಂತರಂಗದ ಏಳುಬೀಳುಗಳು ಹೊರಗೆ ಕಾಣುವುದಿಲ್ಲ.

ದುಷ್ಟಭಾವನೆ, ದುಷ್ಟ ಆಲೋಚನೆಗಳು, ಹೊರಜಗತ್ತಿಗೆ ಕಾಣದಂತೆ ಮಾಡಿದ ಕೃತ್ಯಗಳು ಆತ್ಮಸಾಕ್ಷಿಯಲ್ಲಿ ಮುದ್ರಿತವಾಗುಳಿಯುತ್ತವೆ. ಜಗತ್ತಿಗೆ ಕಾಣುವುದು ಹೊರಗಿನ ತೋರಣ. ನಮಗೇ ತಿಳಿದಿರುವುದು ಅಂತರಂಗದ ಹೂರಣ. ನೆನ್ನೆಗಿಂತ ಇಂದು ನಾವೆಷ್ಟು ಉತ್ತಮರಾಗಿದ್ದೇವೆ ಎಂಬ ಅರಿವು ಮೂಡಿಸಿಕೊಳ್ಳುವ ಜವಾಬ್ದಾರಿ ವ್ಯಕ್ತಿಗೆ ಮೀಸಲು. ತೋರಣ-ಹೂರಣಗಳೆರಡನ್ನೂ ಸಿಹಿಯಾಗಿಸಿಕೊಂಡ ಸರ್ವಾಂಗಸುಂದರ ವ್ಯಕ್ತಿತ್ವ ನಮ್ಮದಾಗಬೇಕು.

ಇದು ಹೇಗೆ? ತಿದ್ದಿ ತೀಡಿದ ಕ್ರಾಪು ಬಾಗದಿದ್ದರೆ ಅದಕ್ಕೆ ನೀರನ್ನೋ ತೈಲವನ್ನೋ ಕೊನೆಗೆ ವಿಶೇಷ ಕ್ರೀಮನ್ನೋ ಹಚ್ಚಿ ಕೊನೆಗೂ ಬಾಗಿಸಿ ಬೇಕಾದಂತೆ ಬಾಚಿಕೊಳ್ಳುತ್ತೇವೆ. ಹಾಗೆಯೇ ಅಂತರಂಗದ ಓರೆಕೋರೆಗಳನ್ನೂ ತಿದ್ದಿ ತೀಡಿ ವಿಶೇಷ ಪ್ರಯತ್ನಗಳಿಂದ ಸರಿಪಡಿಸಿಕೊಳ್ಳಬೇಕು. ಆದುದರಿಂದ ಇಡೀ ಬದುಕು ಒಂದು ಸಾಧನೆಯಾಗಿ ಪರಿವರ್ತಿತವಾಗುವುದನ್ನು ಭಾವಿಸಿ ಅದನ್ನು ಒಪ್ಪಿಕೊಳ್ಳಬೇಕು. ನಿತ್ಯವೂ ಅದನ್ನು ಗಮನಿಸಬೇಕು.

ದೇಹಧಾರಿಗಳಾದ ಸಂತರೂ ಮಹಾತ್ಮರೂ ಇದನ್ನೇ ಮಾಡಿದ್ದು. ಶ್ರೀರಾಮಕೃಷ್ಣರ ಅದ್ವೈತಸಾಧನೆಯ ಗುರು ತೋತಾಪುರಿ. ಇವರಿಗೆ ಮೈ ಮೇಲಿನ ಬಟ್ಟೆಯ ಹಂಗೂ ಕೂಡ ಇಲ್ಲ. ಸನ್ಯಾಸದ ಸಂಪ್ರದಾಯದಂತೆ ಇವರ ಬಳಿ ದಂಡ ಕಮಂಡಲಗಳಿದ್ದವು. ಅದು, ಆ ಕಮಂಡಲ ಹಿತ್ತಾಳೆಯದು; ತೋತಾಪುರಿ ಅದನ್ನು ದಿನವೂ ಚೆನ್ನಾಗಿ ತಿಕ್ಕಿ ತೊಳೆದು ಫಳಫಳ ಹೊಳೆಯುವಂತೆ ಇಟ್ಟುಕೊಂಡಿರುತ್ತಿದ್ದರಂತೆ.

ಅದ್ವೈತದ ತುರೀಯ ಅನುಭವ ನಿರ್ವಿಕಲ್ಪ ಸಮಾಧಿ. ಆ ಸಮಾಧಿಸ್ಥಿತಿಯನ್ನು ಸ್ವತಃ ತಾನು ಅನುಭವಿಸಿ, ತನ್ನ ಶಿಷ್ಯ ರಾಮಕೃಷ್ಣರಿಗೂ ಮಾಡಿಸಿದವರು ತೋತಾಪುರಿ. ಅವರು ಧ್ಯಾನದ ಮಹತ್ವ ಕುರಿತು ಹೇಳುವಾಗ ತನ್ನ ಕಮಂಡಲುವಿನ ಉದಾಹರಣೆ ಕೊಡುತ್ತಿದ್ದರಂತೆ.

ಎಂತಹ ಸಿದ್ಧನೇ ಆದರೂ ಸಾಧನೆಯನ್ನು ಬಿಡಬಾರದು. ಏಕೆಂದರೆ ಪಾತ್ರೆಗಳು ಕಿಲುಬು ಹಿಡಿಯುವಂತೆ ಮನಸ್ಸೂ ಕೂಡ ಮಲಿನವಾಗಬಹುದು ಎಂದು.  ಈ ಬಹುಮುಖ್ಯ ಅಂಶವನ್ನು ಗಮನಿಸಬೇಕು. ಜೊತೆಗೆ ಪರಿವರ್ತನೆ ಎಂಬುದು ಸಕಾರಾತ್ಮಕವೂ ಆಗಿರಬೇಕು.

ಬದುಕಿನ ಬೆಳವಣಿಗೆ ಸಾಪೇಕ್ಷ. ಹೊರಗೆ ನಿಂತು ನೋಡಿದಾಗ ಒಳಗಿನ ಬೆಳವಣಿಗೆ, ಒಳಗಿನ ಸಾಕ್ಷೀಭಾವದಿಂದ ನೋಡಿದಾಗ ಹೊರಗಿನ ಬೆಳವಣಿಗೆ ಕಾಣದು. ವ್ಯಕ್ತಿ-ಸಮಾಜ ಎಂಬ ಎರಡು ಭಿನ್ನ ಕೇಂದ್ರಬಿಂದುಗಳ ಸುತ್ತಲಿನ ವರ್ತುಲಾಕಾರದಲ್ಲಿ ಬೆಳೆಯುತ್ತದೆ ಬಾಳು. ನಮ್ಮ ದೃಷ್ಟಿ ಹಾಗೂ ಪ್ರಗತಿ – ಎರಡಕ್ಕೂ ಸಮನ್ವಯ ಸಾಧಿಸುವಂತಾದರೆ ನಮ್ಮ ಬಾಳು ಸಾರ್ಥಕ.

ಜೀವನವನ್ನು ಮುಂಬರಿದು ಬದುಕುತ್ತೇವೆ, ಅವಲೋಕನದಲ್ಲಿ ಹಿಂದೆ ಸರಿದು ಅದನ್ನು ಅರ್ಥ ಮಾಡಿಕೊಳ್ಳುತ್ತೇವೆ! ಎಂಥ ವಿಚಿತ್ರ ಅಲ್ಲವೆ? ಅರ್ಥಮಾಡಿಕೊಂಡಿದ್ದೇವೆಂದು ಭಾವಿಸಿ ಮುನ್ನಡೆದು ಅನರ್ಥಗಳಿಗೆ ಎಡೆಮಾಡಿಕೊಳ್ಳಲು ಕಾರಣ ಈ ವಿಪರ್ಯಾಸ. ವಾಹನಗಳ ಕನ್ನಡಿಯ ಮೇಲೆ ಒಂದು ಸೂಚನೆ ಮುದ್ರಿತವಾಗಿರುತ್ತದೆ, ‘ಕನ್ನಡಿಯಲ್ಲಿ ಕಾಣುವ ವಸ್ತುಗಳು ವಾಸ್ತವಕ್ಕಿಂತ ಹೆಚ್ಚು ಹತ್ತಿರದಲ್ಲಿರುತ್ತವೆ; ಎಚ್ಚರ!’.

ಬದುಕೂ ಅಂತಯೇ ನಾವು ನೋಡಿದ್ದು ನೋಡುತ್ತಿರುವುದು ದೂರದಲ್ಲಿದೆ ಎಂದು ಭಾವಿಸುತ್ತಿರುತ್ತೇವೆ. ಆದರೆ ಅದು ಸನಿಹವೇ ಆಗಿರುತ್ತದೆ. ಮತ್ತೊಂದು ಆಲೋಚನೆ ನಮ್ಮನ್ನು ಆಗಾಗ ಕಾಡುವುದು, ‘ಮಾಡಿದ ತಪ್ಪುಗಳನ್ನೆಲ್ಲ ತಿದ್ದಿಕೊಂಡು ಮತ್ತದೇ ಹಾದಿಯಲ್ಲಿ ನಡೆಯಬಹುದಾದರೆ ಎಷ್ಟು ಚೆನ್ನಿತ್ತು!’ ಆದರೆ ಜೀವನ ಹಿಮ್ಮುಖವಾಗಿ ಹರಿಯಲಾರದು; ಎಂಥದೇ ಓರೆಕೋರೆಗಳಿದ್ದರೂ ಏರುಪೇರುಗಳಿದ್ದರೂ ಮುಂದಕ್ಕೇ ಸಾಗಬೇಕು. ಹಾಗೆಯೇ ಸಾಗುತ್ತೇವೆ.

ಕಾಲ ಸಾಣೆ ಹಿಡಿಯುತ್ತಾನೆ. ವ್ಯಕ್ತಿತ್ವದ ಮೊನಚುಗಳೆಲ್ಲ ಹದಗೊಳ್ಳುತ್ತವೆ. ಹೊರಗಿನ, ವ್ಯಕ್ತಬದುಕಿನಲ್ಲಿ ನಮ್ಮ ಪದವಿ ಪ್ರತಿಷ್ಠೆಗಳು ಸಮಾಜವೆಂಬ ಕನ್ನಡಿಯಿಂದ ಪ್ರತಿಬಿಂಬಿತಗೊಂಡರೆ, ಶಾಂತಿ ಸಮಾಧಾನ ಆತ್ಮತೃಪ್ತಿಗಳೆಂಬವು ಅಂತರಂಗದ ಆತ್ಮಸಾಕ್ಷಿಯೆಂಬ ದರ್ಪಣದಿಂದ ಬಿಂಬಿತವಾಗುತ್ತವೆ.

ಹೊರಗಿನ ಬೆಡಗು ಬಿತ್ತರವಾಗಲು ಹೇಗೆ ಕನ್ನಡಿ ಸಹಾಯ ಮಾಡುತ್ತದೊ ಹಾಗೇ ಅಂತರಂಗದ ಐಸಿರಿ ಬಿತ್ತರವಾಗಲು ಆತ್ಮಸಾಕ್ಷಿ ನೆರವು ನೀಡುತ್ತದೆ. ಅಂತರಂಗ-ಬಹಿರಂಗ ಶುದ್ಧಿಗಳತ್ತ ಸಮಾನ ಗಮನ ಹರಿಸಬೇಕು. ಕನ್ನಡಿಯಲ್ಲಿ ಕಾಣುವಾತ ತಾನು ಪ್ರೀತಿ, ಗೌರವ, ವಿಶ್ವಾಸಗಳಿಗೆ ಅರ್ಹನಾಗಬೇಕು - ಇದು ಕನ್ನಡಿಯ ಮುಂದೆ ನಿಲ್ಲುವ ಪ್ರತಿಯೊಬ್ಬ ವ್ಯಕ್ತಿಯ ಅಪೇಕ್ಷೆ. ಬಾಳಿನ ತೋರಣ ಹೂರಣಗಳೆರಡನ್ನೂ ಬೆಳಗುವ ಬೆಳಕಾಗುವುದೇ ವ್ಯಕ್ತಿತ್ವದರ್ಪಣದ ಗುರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT