ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿಂಗಳಾದರೂ ಬಾರದ ಮೌಲ್ಯಮಾಪನ ಭತ್ಯೆ

ದಾವಣಗೆರೆ ವಿಶ್ವವಿದ್ಯಾಲಯದ ನಿರ್ಲಕ್ಷ್ಯಕ್ಕೆ ಅತಿಥಿ ಉಪನ್ಯಾಸಕರ, ಪ್ರಾಧ್ಯಾಪಕರ ಅಸಮಾಧಾನ
Last Updated 15 ಫೆಬ್ರುವರಿ 2017, 6:41 IST
ಅಕ್ಷರ ಗಾತ್ರ

ದಾವಣಗೆರೆ: ಪದವಿ ಪರೀಕ್ಷೆಗಳ ಉತ್ತರ ಪತ್ರಿಕೆ ಮೌಲ್ಯಮಾಪನ ಪ್ರಕ್ರಿಯೆ ಮುಗಿದು ತಿಂಗಳು ಕಳೆದರೂ ಇದುವರೆಗೂ ಅತಿಥಿ ಉಪನ್ಯಾಸಕರಿಗೆ ಮೌಲ್ಯಮಾಪನ ಭತ್ಯೆ ಬಿಡುಗಡೆಯಾಗಿಲ್ಲ. ಪರಿಣಾಮ, ಇತ್ತ ನಿಯಮಿತವಾಗಿ ತಿಂಗಳ ವೇತನವೂ ಸಿಗದೆ, ಮೌಲ್ಯಮಾಪನ ಭತ್ಯೆಯೂ ಸಿಗದೆ ಅತಿಥಿ ಉಪನ್ಯಾಸಕರು ಕಂಗಾಲಾಗಿದ್ದಾರೆ.

ದಾವಣಗೆರೆ ವಿಶ್ವವಿದ್ಯಾಲಯ ವ್ಯಾಪ್ತಿಯ ಬಿ.ಎ, ಬಿ.ಎಸ್ಸಿ, ಬಿ.ಕಾಂ, ಸೇರಿದಂತೆ ಹಲವು ಪದವಿ ಪರೀಕ್ಷೆಗಳ ಮೌಲ್ಯಮಾಪನವು ಜನವರಿ 2ರಂದು ಆರಂಭವಾಗಿ ಮೂರು ವಾರಗಳಲ್ಲಿ ಮುಕ್ತಾಯವಾಗಿತ್ತು. ವಿಶ್ವವಿದ್ಯಾಲಯ ವ್ಯಾಪ್ತಿಯ ಕಾಲೇಜುಗಳಲ್ಲಿ ಕಾಯಂ ಪ್ರಾಧ್ಯಾಪಕರ ಕೊರತೆಯಿಂದಾಗಿ ಮೌಲ್ಯಮಾಪನ ಪ್ರಕ್ರಿಯೆಗೆ ಅತಿಥಿ ಉಪನ್ಯಾಸಕರನ್ನೇ ಹೆಚ್ಚಿನ ಸಂಖ್ಯೆಯಲ್ಲಿ ಬಳಸಿಕೊಳ್ಳಲಾಗಿತ್ತು.

ಮೌಲ್ಯಮಾಪನ ಮುಗಿದ ಕೂಡಲೇ ಅತಿಥಿ ಉಪನ್ಯಾಸಕರ ಬ್ಯಾಂಕ್‌ ಖಾತೆಗೆ ನೇರವಾಗಿ ಭತ್ಯೆಯ ಹಣ ಹಾಕುವುದಾಗಿ ಭರವಸೆ ನೀಡಿದ್ದ ವಿಶ್ವವಿದ್ಯಾಲಯ ಇದುವರೆಗೂ ಹಣ ಬಿಡುಗಡೆ ಮಾಡಿಲ್ಲ. ನಿತ್ಯ ಬ್ಯಾಂಕ್‌ ಖಾತೆ ಪರೀಕ್ಷೆ ಮಾಡುವುದೇ ಕೆಲಸವಾಗಿದೆ ಎಂದು ಅತಿಥಿ ಉಪನ್ಯಾಸಕರೊಬ್ಬರು ಅಳಲು ತೋಡಿಕೊಂಡರು

‘ದಾವಣಗೆರೆ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಚಿತ್ರದುರ್ಗ ಜಿಲ್ಲೆಯೂ ಒಳಪಡುವುದರಿಂದ ದೂರದ ಊರುಗಳಿಂದ ನೂರಾರು ಮೌಲ್ಯಮಾಪಕರು ಹಾಜರಾಗಿದ್ದೆವು. ಬಸ್, ಆಟೊ ಪ್ರಯಾಣ ದರ, ಊಟ, ವಸತಿ ಹೀಗೆ, ಸಾವಿರಾರು ರೂಪಾಯಿ ಖರ್ಚು ಮಾಡಿದ್ದೆವು.

ಕಷ್ಟಪಟ್ಟು ಹಣ ಹೊಂದಿಸಿಕೊಂಡು ಬಂದು ಮೌಲ್ಯಮಾಪನ ಮಾಡಿದ್ದರೂ ವಿಶ್ವವಿದ್ಯಾಲಯ ಇದುವರೆಗೂ ಭತ್ಯೆ ಬಿಡುಗಡೆ ಮಾಡದಿರುವುದು ನೋವುಂಟು ಮಾಡಿದೆ. ಮೂರರಿಂದ ಐದು ತಿಂಗಳಿಗೊಮ್ಮೆ ಸಂಬಳ ಪಡೆಯುವ ಅತಿಥಿ ಉಪನ್ಯಾಸಕರನ್ನು ಈ ರೀತಿ ನಡೆಸಿಕೊಳ್ಳುವುದು ನ್ಯಾಯವಲ್ಲ’ ಎಂದು ಮತ್ತೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.

ಕೆಲವು ವರ್ಷಗಳ ಹಿಂದೆ ಮೌಲ್ಯಮಾಪನ ಪ್ರಕ್ರಿಯೆ ಮುಗಿದ ದಿನವೇ ಎಲ್ಲರೂ ಒಂದೆಡೆ ಸೇರಿ, ಸಂಭ್ರಮದಿಂದ ಊಟ ಸವಿದು, ಅಂದೇ ಟಿ.ಎ, ಡಿ.ಎ, ಮೌಲ್ಯಮಾಪನ ಭತ್ಯೆಯ ವಿವರ ಸಲ್ಲಿಸಿ ಹಣ ಪಡೆದು ಹಿಂದಿರುಗುತ್ತಿದ್ದೆವು. ಆದರೆ ಪ್ರಸ್ತುತ ವ್ಯವಸ್ಥೆ ಬದಲಾಗಿದೆ. ಹಣ ದುರುಪಯೋಗ ತಡೆ, ತ್ವರಿತ ಸೇವೆ ಹಾಗೂ ಪಾರದರ್ಶಕ ವ್ಯವಸ್ಥೆ ಜಾರಿಗೆ ವಿಶ್ವವಿದ್ಯಾಲಯವು ಮೌಲ್ಯಮಾಪಕರ ಬ್ಯಾಂಕ್‌ ಖಾತೆಗೆ ನೇರವಾಗಿ ಹಣ ಹಾಕುವ ವ್ಯವಸ್ಥೆ ಜಾರಿಮಾಡಿದೆ. ಆದರೆ ಆಶಯಗಳು ಮಾತ್ರ ಈಡೇರಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ ಇತಿಹಾಸ ಮೌಲ್ಯಮಾಪಕರೊಬ್ಬರು.

‘10 ದಿನ ಮೌಲ್ಯಮಾಪನ ಪ್ರಕ್ರಿಯೆಗೆ ಹಾಜರಾಗಿದ್ದು, ದಿನಕ್ಕೆ 32 ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡಿದ್ದೇನೆ. ಎಲ್ಲ ಭತ್ಯೆಗಳೂ ಸೇರಿ ₹ 13 ಸಾವಿರ ಬರಬೇಕು. ಬ್ಯಾಂಕ್‌ ಖಾತೆಯ ವಿವರವನ್ನೂ ಸಲ್ಲಿಸಲಾಗಿದೆ. ಇದುವರೆಗೂ ಹಣ ಬಿಡುಗಡೆಯಾಗಿಲ್ಲ. ಪ್ರತಿ ತಿಂಗಳು ಕಾಯಂ ವೇತನ ಪಡೆಯುವ ಭಾಗ್ಯವೂ ನಮಗಿಲ್ಲ. ಈಗ, ಭತ್ಯೆ ನೀಡುವಲ್ಲೂ ವಿಳಂಬವಾದರೆ ಹೇಗೆ? ಈಗಲಾದರೂ ವಿಶ್ವವಿದ್ಯಾಲಯ ನಿರ್ಲಕ್ಷ್ಯ ಧೋರಣೆ ಕೈಬಿಟ್ಟು ಸಮಸ್ಯೆಗೆ ಸ್ಪಂದಿಸಬೇಕು’ ಎಂದು ದಾವಣಗೆರೆ ಹಾಗೂ ಚಿತ್ರದುರ್ಗ ವ್ಯಾಪ್ತಿಯ ಹಲವು ಅತಿಥಿ ಉಪನ್ಯಾಸಕ ಹಾಗೂ ಪ್ರಾಧ್ಯಾಪಕರು ಒತ್ತಾಯಿಸುತ್ತಾರೆ.

- ಬಾಲಚಂದ್ರ ಎಚ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT