ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಡಿಎಸ್‌, ಬಿಜೆಪಿ ಬೆಂಬಲಿತರಿಗೆ ಅಧಿಕಾರ

ಕೋಲಾರ ಎಪಿಎಂಸಿ ಅಧ್ಯಕ್ಷ– ಉಪಾಧ್ಯಕ್ಷ ಚುನಾವಣೆ: ಕಾಂಗ್ರೆಸ್‌ಗೆ ಮುಖಭಂಗ
Last Updated 15 ಫೆಬ್ರುವರಿ 2017, 10:13 IST
ಅಕ್ಷರ ಗಾತ್ರ
ಕೋಲಾರ: ತೀವ್ರ ಕುತೂಹಲ ಕೆರಳಿಸಿದ್ದ ಸ್ಥಳೀಯ ಎಪಿಎಂಸಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಗಾದಿಗೆ ನಗರದಲ್ಲಿ ಮಂಗಳವಾರ ನಡೆದ ಚುನಾವಣೆಯಲ್ಲಿ ಜೆಡಿಎಸ್‌ ಮೇಲುಗೈ ಸಾಧಿಸಿದ್ದು, ಪಕ್ಷೇತರ ಶಾಸಕ ವರ್ತೂರು ಪ್ರಕಾಶ್‌ ಬೆಂಬಲಿತ ಕಾಂಗ್ರೆಸ್‌ ಬಣ ಮುಖಭಂಗ ಅನುಭವಿಸಿತು.
 
ಜೆಡಿಎಸ್‌ ಬೆಂಬಲಿತ ಬಿ.ವೆಂಕಟೇಶ್‌ ಹಾಗೂ ಬಿಜೆಪಿ ಬೆಂಬಲಿತ ಭಾಗ್ಯಮ್ಮ ಅವರು ಕ್ರಮವಾಗಿ ಅಧ್ಯಕ್ಷ ಮತ್ತು ಉಪಾ ಧ್ಯಕ್ಷ ಗಾದಿಗೆ ಅವಿರೋಧ ಆಯ್ಕೆಯಾದರು.
 
ಪೂರ್ವ ನಿಗದಿಯಂತೆ ನಗರದ ಹೊರವಲಯದ ಎಪಿಎಂಸಿ ಕಚೇರಿಯಲ್ಲಿ ತಹಶೀಲ್ದಾರ್‌ ವಿಜಯಣ್ಣ ಬೆಳಿಗ್ಗೆ 10 ಗಂಟೆಗೆ ಚುನಾವಣಾ ಪ್ರಕ್ರಿಯೆ ಆರಂಭಿಸಿದರು. ಮಾಜಿ ಸಚಿವ ಕೆ.ಶ್ರೀನಿವಾಸಗೌಡ ಹಾಗೂ ಪಕ್ಷದ ಮುಖಂಡರ ಸೂಚನೆಯಂತೆ ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್‌ ಬೆಂಬಲಿತ ಟಮಕ ಕ್ಷೇತ್ರದ ಬಿ.ವೆಂಕಟೇಶ್‌ ಮತ್ತು ಉಪಾಧ್ಯಕ್ಷಗಾದಿಗೆ ಬಿಜೆಪಿ ಬೆಂಬಲಿತ ಹುತ್ತೂರು ಕ್ಷೇತ್ರದ ಭಾಗ್ಯಮ್ಮ ನಾಮಪತ್ರ ಸಲ್ಲಿಸಿದರು.
 
 ಕಾಂಗ್ರೆಸ್‌ ಪಾಳಯದಿಂದ ಅಧ್ಯಕ್ಷಗಾದಿಗೆ ಹಸಾಳ ಕ್ಷೇತ್ರದ ಸಿ.ಎಂ.ಮಂಜುನಾಥ್‌ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸುಗಟೂರು ಕ್ಷೇತ್ರದ ವೆಂಕಟೇಶಪ್ಪ ಉಮೇದುವಾರಿಕೆ ಸಲ್ಲಿಸಿದರು. ನಂತರ ಅಭ್ಯರ್ಥಿಗಳ ನಾಮಪತ್ರ ಪರಿಶೀಲಿಸಿದ ತಹಶೀಲ್ದಾರ್‌ ನಾಲ್ಕೂ ನಾಮಪತ್ರಗಳು ಊರ್ಜಿತವಾಗಿವೆ ಎಂದು ಘೋಷಿಸಿ ಉಮೇದುವಾರಿಕೆ ಹಿಂಪಡೆಯಲು ಒಂದು ತಾಸು ಕಾಲಾವಕಾಶ ನೀಡಿದರು.
 
ಅಧ್ಯಕ್ಷ ಹಾಗೂ ಉಪಾಧ್ಯಕ್ಷಗಾದಿಗೆ 9 ನಿರ್ದೇಶಕರ ಬೆಂಬಲದ ಅಗತ್ಯವಿತ್ತು. 6 ಸದಸ್ಯ ಬಲ ಹೊಂದಿದ್ದ ಕಾಂಗ್ರೆಸ್‌ಗೆ ಅಧಿಕಾರ ಹಿಡಿಯಲು ಇನ್ನೂ ಮೂವರು ನಿರ್ದೇಶಕರ ಬೆಂಬಲ ಅಗತ್ಯವಿತ್ತು. ಆದರೆ, ಅಷ್ಟು ಸಂಖ್ಯೆಯ ನಿರ್ದೇಶಕರ ಬೆಂಬಲ ಸಿಗುವುದಿಲ್ಲ ಎಂದು ಅರಿತ ಕಾಂಗ್ರೆಸ್‌ ಬೆಂಬಲಿತ ನಿರ್ದೇಶಕರು, ‘ಭಾಗ್ಯಮ್ಮ ಅವರ ನಾಮಪತ್ರ ಹಿಂತೆಗೆಸಿ ನಮಗೆ ಉಪಾಧ್ಯಕ್ಷ ಸ್ಥಾನ ಬಿಟ್ಟು ಕೊಡಿ. ಮುಂದಿನ ಅವಧಿಯ ಚುನಾವಣೆಯಲ್ಲೂ ಇದೇ ಒಪ್ಪಂದದಂತೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ಹಂಚಿಕೊಳ್ಳೋಣ. ಉಪಾಧ್ಯಕ್ಷಗಾದಿ ಬಿಟ್ಟು ಕೊಟ್ಟರೆ ಮಂಜುನಾಥ್‌ ಅವರ ನಾಮಪತ್ರ ಹಿಂತೆಗೆಸುತ್ತೇವೆ’ ಎಂದು ಜೆಡಿಎಸ್‌ ಬೆಂಬಲಿತ ನಿರ್ದೇಶಕರಿಗೆ ಮನವಿ ಮಾಡಿದರು.
 
ಇದಕ್ಕೆ ಒಪ್ಪದ ಜೆಡಿಎಸ್‌ ಬೆಂಬಲಿತರು, ‘ಚುನಾವಣೆ ಹೊಸ್ತಿಲಲ್ಲಿ ಉಪಾಧ್ಯಕ್ಷ ಸ್ಥಾನ ಕೇಳಿದರೆ ಹೇಗೆ. ಈಗಾಗಲೇ ಪಕ್ಷದ ವರಿಷ್ಠರು ನಿರ್ಧಾರ ಮಾಡಿದ್ದಾರೆ. ಭಾಗ್ಯಮ್ಮ ಪಕ್ಷ ಬೆಂಬಲಿಸಿದ ಅಭ್ಯರ್ಥಿಯಾಗಿದ್ದರೆ  ಉಮೇದುವಾರಿಕೆ ಹಿಂಪಡೆಯುವಂತೆ ಹೇಳಬಹುದಿತ್ತು. ಆದರೆ, ಅವರು ಬಿಜೆಪಿ ಬೆಂಬಲಿತರು. ಹೀಗಾಗಿ ಅವರಿಗೆ ನಾಮಪತ್ರ ಹಿಂತೆಗೆದುಕೊಳ್ಳಿ ಎಂದು ಹೇಳಲು ಆಗುವುದಿಲ್ಲ’ ಎಂದು ಕಾಂಗ್ರೆಸ್‌ ಬೆಂಬಲಿತರು ಬೇಡಿಕೆಯನ್ನು ನಯವಾಗಿ ತಿರಸ್ಕರಿಸಿದರು.
 
ಜೆಡಿಎಸ್‌ ಬೆಂಬಲಿತ ನಿರ್ದೇಶಕ ಡಿ.ಎಲ್‌.ನಾಗರಾಜ್‌ ಮಾತನಾಡಿ, ‘ಈ ಬಾರಿಯ ಚುನಾವಣೆಯಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲು ಸಹಕರಿಸಿ. ನಿಮ್ಮ ಪಕ್ಷದ ಅಭ್ಯರ್ಥಿಗಳ ಉಮೇದುವಾರಿಕೆ ಹಿಂಪಡೆದು ಸಹಕಾರ ನೀಡಿದರೆ ಮುಂದಿನ ಅವಧಿಯ ಚುನಾವಣೆಯಲ್ಲಿ ಕಾಂಗ್ರೆಸ್‌ ಬೆಂಬಲಿತರಾಗಿ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಅಭ್ಯರ್ಥಿ ಬೆಂಬಲಿಸುತ್ತೇವೆ. ಮಾತು ತಪ್ಪುವುದಿಲ್ಲ’ ಎಂದು ಹೇಳಿದರು.
 
ಇದಕ್ಕೆ ಒಪ್ಪಿದ ಕಾಂಗ್ರೆಸ್‌ ಬೆಂಬಲಿ ತರು ತಮ್ಮ ಪಾಳಯದ ಅಭ್ಯರ್ಥಿಗಳ ನಾಮಪತ್ರ ಹಿಂಪಡೆದರು. ಜೆಡಿಎಸ್‌ ಮತ್ತು ಬಿಜೆಪಿ ಬೆಂಬಲಿತರ ಆಯ್ಕೆಯಾದರು. ತಹಶೀಲ್ದಾರ್‌  ಆಯ್ಕೆ  ಘೋಷಿಸುತ್ತಿದ್ದಂತೆ ಜೆಡಿಎಸ್‌ ಕಾರ್ಯ ಕರ್ತರು ವಿಜಯೋತ್ಸವ ಆಚರಿಸಿದರು.
 
ನಡೆಯದ ಶಾಸಕರ ಜಾದೂ

ತಾಲ್ಲೂಕು ಪಂಚಾಯಿತಿ ಹಾಗೂ ಕೋಲಾರ ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷಗಾದಿ  ಚುನಾವಣೆ ವೇಳೆ ಜೆಡಿಎಸ್‌ ಸದಸ್ಯರನ್ನು ಕಾಂಗ್ರೆಸ್‌ನತ್ತ ಸೆಳೆದು ರೋಚಕ ಫಲಿತಾಂಶಕ್ಕೆ ಕಾರಣವಾಗಿದ್ದ ಪಕ್ಷೇತರ ಶಾಸಕ ವರ್ತೂರು ಪ್ರಕಾಶ್‌, ಎಪಿಎಂಸಿ ಚುನಾವಣೆಯಲ್ಲೂ ಅದೇ ಪ್ರಯತ್ನಕ್ಕೆ ಮುಂದಾಗಿದ್ದರು. ಜೆಡಿಎಸ್‌ ಬೆಂಬಲಿತ ನಿರ್ದೇಶಕರನ್ನು ಕೈ ಪಾಳಯದತ್ತ ಸೆಳೆಯಲು ಅವರು ಕಡೆ ಗಳಿಗೆವರೆಗೂ ಪ್ರಯತ್ನ ನಡೆಸಿದ್ದರು.

ಈ ಕಾರಣಕ್ಕಾಗಿಯೇ ಜೆಡಿಎಸ್‌ ಮುಖಂಡರು ತಮ್ಮ ಪಕ್ಷ ಬೆಂಬಲಿತ ನಿರ್ದೇಶಕರನ್ನು ಮೂರ್‌್ನಾಲ್ಕು ದಿನಗಳಿಂದ ಮೈಸೂರಿನತ್ತ ಪ್ರವಾಸಕ್ಕೆ ಕಳುಹಿಸಿದ್ದರು. ಅಲ್ಲದೇ, ಶಾಸಕ ವರ್ತೂರು ಪ್ರಕಾಶ್‌ ಮತ್ತು ಬೆಂಬಲಿಗರ ಸಂಪರ್ಕಕ್ಕೆ ಸಿಗದಂತೆ ಎಚ್ಚರ ವಹಿಸಿದ್ದರು.

ಸೋಮವಾರ (ಫೆ.13) ರಾತ್ರಿವರೆಗೂ ಬೆಂಗಳೂರಿನ ದೇವನಹಳ್ಳಿ ಬಳಿಯ ರೆಸಾರ್ಟ್‌ನಲ್ಲೇ ಇದ್ದ ಜೆಡಿಎಸ್‌ ಬೆಂಬಲಿತ ನಿರ್ದೇಶಕರು ಚುನಾವಣೆಗೆ ಕೆಲ ತಾಸುಗಳಷ್ಟೇ ಬಾಕಿ ಇರುವಾಗ ನಗರಕ್ಕೆ ಬಂದರು. ಮಾಜಿ ಸಚಿವ ಕೆ.ಶ್ರೀನಿವಾಸಗೌಡರ ನಿವಾಸದಲ್ಲಿ ಸಭೆ ಸೇರಿದ ಜೆಡಿಎಸ್‌ ಮುಖಂಡರು ಹಾಗೂ ನಿರ್ದೇಶಕರು ಎಪಿಎಂಸಿಯ ಅಧಿಕಾರದ ಗದ್ದುಗೆ ಹಿಡಿಯಲು ರಣತಂತ್ರ ರೂಪಿಸಿದರು.

ಚುನಾವಣೆಯನ್ನು ಪ್ರತಿಷ್ಠೆಯಾಗಿ ಪರಿಗಣಿಸಿದ್ದ ವರ್ತೂರು ಪ್ರಕಾಶ್‌, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಒತ್ತಡ ತಂದು ತಮ್ಮ ಆಪ್ತರನ್ನು ಎಪಿಎಂಸಿ ಆಡಳಿತ ಮಂಡಳಿಗೆ ನಾಮನಿರ್ದೇಶಿತ ನಿರ್ದೇಶಕರಾಗಿ ಮಾಡುವಲ್ಲಿ ಯಶ ಕಂಡಿದ್ದರು. ಆದರೆ, ಜೆಡಿಎಸ್‌ ನಾಯಕರ ಚುನಾವಣಾ ರಣತಂತ್ರದ ಎದುರು ವರ್ತೂರು ಪ್ರಕಾಶ್‌ ಅವರ ಜಾದೂ ನಡೆಯಲಿಲ್ಲ.
 
ಮೂವರು ನಿರ್ದೇಶಕರ ನೇಮಕ
ಕೋಲಾರ: ಇಲ್ಲಿನ ಎಪಿಎಂಸಿಗೆ ಮೂರು ಮಂದಿ ನಾಮನಿರ್ದೇಶಿತ ನಿರ್ದೇಶಕರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಕೋಲಾರದ ಸೈಯದ್‌ ಉಲ್ಲಾ, ವಕ್ಕಲೇರಿಯ ಎಸ್.ವಿ.ಅಮೃತಾ ಅಬ್ಬಯಣ್ಣ ಮತ್ತು ವೇಮಗಲ್‌ನ ವಿ.ಬಿ.ಉದಯಶಂಕರ್‌ ಅವರನ್ನು ನಿರ್ದೇಶಕರಾಗಿ ನೇಮಕ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT