ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿ.ಎಂ ನೇತೃತ್ವದಲ್ಲಿ ಸಭೆ; ಪ್ರತಿಭಟನೆ ಸ್ಥಗಿತ

ದಿಡ್ಡಳ್ಳಿ ನಿರಾಶ್ರಿತರ ಹೋರಾಟ ಭಾಗಶಃ ಯಶಸ್ವಿ; ಅರ್ಧ ಗೆಲುವು ಸಿಕ್ಕಿದೆ: ದೊರೆಸ್ವಾಮಿ ಹೇಳಿಕೆ
Last Updated 15 ಫೆಬ್ರುವರಿ 2017, 11:12 IST
ಅಕ್ಷರ ಗಾತ್ರ

ಮಡಿಕೇರಿ: ವಿರಾಜಪೇಟೆ ತಾಲ್ಲೂಕಿನ ಚನ್ನಯ್ಯನಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಿಡ್ಡಳ್ಳಿಯಲ್ಲಿ ಗುಡಿಸಲು ತೆರವು ಸಮಸ್ಯೆ ಇತ್ಯರ್ಥಪಡಿಸಲು ಶೀಘ್ರವೇ ಸಭೆ ಕರೆಯುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ ಹಿನ್ನೆಲೆಯಲ್ಲಿ ಮಂಗಳವಾರ ನಡೆಯಬೇಕಿದ್ದ ಪ್ರತಿಭಟನೆಯನ್ನು ನಿರಾಶ್ರಿತರು ಕೈಬಿಟ್ಟರು.

ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌. ದೊರೆಸ್ವಾಮಿ ಅವರಿಗೆ ಮುಖ್ಯಮಂತ್ರಿಯೇ ಕರೆ ಮಾಡಿ ಸಭೆಯ ಕರೆಯುವ ಭರವಸೆ ನೀಡಿರುವುದು ದಿಡ್ಡಳ್ಳಿ ನಿರಾಶ್ರಿತರಲ್ಲಿ ಸಂತಸಕ್ಕೆ ಕಾರಣವಾಗಿದೆ. ಎರಡು ತಿಂಗಳ ಈ ಹೋರಾಟದಲ್ಲಿ ನಿರಾಶ್ರಿತರಿಗೆ ಎರಡನೇ ಹಂತದ ಜಯ ಲಭಿಸಿದೆ.

ನಗರದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌. ದೊರೆಸ್ವಾಮಿ ಮಾತನಾಡಿ, ‘ದಿಡ್ಡಳ್ಳಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಬೇಡಿ. ನ್ಯಾಯಯುತ ಹೋರಾಟದ ಸ್ಥಳದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಸರಿಯಲ್ಲ’ ಎಂದು ಎಚ್ಚರಿಸಿದರು.

ಮಾಲೀಕರೂ ಹೊರಗಿನವರೇ?:  ಹೊರಗಿನಿಂದ ಕೊಡಗು ಜಿಲ್ಲೆಗೆ ಬಂದವರು ಸಾವಿರಾರು ಎಕರೆ ಕಾಫಿ ತೋಟ ಖರೀದಿಸಿದ್ದಾರೆ. ಒತ್ತುವರಿಯನ್ನೂ ಮಾಡಿದ್ದಾರೆ. ಅವರೆಲ್ಲರೂ ಹೊರಗಿನವರಲ್ಲವೇ? ಅವರ ಒತ್ತುವರಿಯನ್ನು ಏಕೆ ತೆರವು ಮಾಡುತ್ತಿಲ್ಲ ಎಂದು ದೊರೆಸ್ವಾಮಿ ಪ್ರಶ್ನಿಸಿದರು.

ದಿಡ್ಡಳ್ಳಿಯ ರಕ್ಷಿತಾರಣ್ಯವಾಗಿದ್ದರೆ ದಿಡ್ಡಳ್ಳಿ ನಿರಾಶ್ರಿತರಿಗೆ ಬಿಟ್ಟುಕೊಡಲು ರಾಜ್ಯ ಸರ್ಕಾರ ಕೇಂದ್ರಕ್ಕೆ ಪತ್ರ ಬರೆಯಲಿ ಎಂದು ಮನವಿ ಮಾಡಿದರು.‘ಸಿ’ ಅಂಡ್‌ ‘ಡಿ’ ಜಮೀನಿನಲ್ಲಿ ಅರಣ್ಯ ಬೆಳಸದಿದ್ದರೆ ಜಮೀನನ್ನು ವಾಪಸ್‌ ಪಡೆದುಕೊಳ್ಳಲಾಗುವುದು ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅರಣ್ಯ ಇಲಾಖೆಗೆ ಎಚ್ಚರಿಸಿದ್ದು ದಿಡ್ಡಳ್ಳಿ ಹೋರಾಟದಲ್ಲಿ ನಮಗೆ ಅರ್ಧ ಗೆಲುವು ಸಿಕ್ಕಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಹಿರಿಯ ವಕೀಲ ಎ.ಕೆ. ಸುಬ್ಬಯ್ಯ ಮಾತನಾಡಿ, ‘ಮತ್ತೊಮ್ಮೆ ಜಿಲ್ಲಾಡಳಿತ ದುರುದ್ದೇಶದಿಂದ ನಿಷೇಧಾಜ್ಞೆ ಜಾರಿ ಮಾಡಿ ಆದಿವಾಸಿಗಳ ಹಕ್ಕು ಕಸಿದುಕೊಳ್ಳುವ ಪ್ರಯತ್ನ ಮಾಡುತ್ತಿದೆ. ಜಿಲ್ಲಾಧಿಕಾರಿ ಕಾನೂನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಮುಖ್ಯಮಂತ್ರಿ ಸಭೆಯ ಕರೆಯುವ ಭರವಸೆ ನೀಡಿದ್ದು ಸದ್ಯಕ್ಕೆ ಪ್ರತಿಭಟನೆ ಕೈಬಿಡಲಾಗಿದೆ’ ಎಂದು ಮಾಹಿತಿ ನೀಡಿದರು.

ಈ ಪ್ರಕರಣದಲ್ಲಿ ರಾಜ್ಯಮಟ್ಟದಲ್ಲಿ ಸಮಸ್ಯೆ ಪರಿಹರಿಸುವ ಪ್ರಾಮಾಣಿಕ ಪ್ರಯತ್ನಗಳು ನಡೆಯುತ್ತಿವೆ. ಆದರೆ, ಜಿಲ್ಲಾಮಟ್ಟದಲ್ಲಿ ಆದಿವಾಸಿಗಳ ವಿರುದ್ಧ ಪಿತೂರಿ ನಡೆಯುತ್ತಿದೆ. ಡೋಂಗಿ ಪರಿಸರವಾದಿಗಳು, ಅರಣ್ಯ ಇಲಾಖೆ ಅಧಿಕಾರಿಗಳು ಸರ್ಕಾರವನ್ನೇ ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ ದೂರಿದರು.

‘ದಿಡ್ಡಳ್ಳಿಯಲ್ಲಿ ಯಾವ ಕಾರಣದಿಂದ ಪುನರ್ವಸತಿ ಕಲ್ಪಿಸಲು ಸಾಧ್ಯವಾಗುವುದಿಲ್ಲ ಎಂಬುದಕ್ಕೆ ವಿವರಣೆಯ ಅಗತ್ಯವಿದೆ. ಅದು ಪೈಸಾರಿ ಜಾಗ ಎಂಬುದಕ್ಕೆ ನಮ್ಮಲ್ಲಿ ಸೂಕ್ತ ದಾಖಲೆಗಳಿವೆ. ದಿಡ್ಡಳ್ಳಿಯು ‘ರಕ್ಷಿತಾರಣ್ಯ ಪ್ರದೇಶ’ವೆಂದು ಈ ಹಿಂದೆ ಅರಣ್ಯ ಇಲಾಖೆಯ ಅಧಿಕಾರಿಗಳು ವಾದಿಸುತ್ತಿದ್ದರು. ಇದೀಗ ಸುರಕ್ಷತಾ ವಲಯ ಎನ್ನುತ್ತಿದ್ದಾರೆ. ಸುರಕ್ಷತಾ ವಲಯವೇ ಆಗಿದ್ದರೆ ತೆರವು ಸ್ಥಳದಲ್ಲೇ ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸಬೇಕು’ ಎಂದು ಆಗ್ರಹಿಸಿದರು.

ವರ್ಗವಾಗದ ಭೂಕಬಳಿಕೆ ಪ್ರಕರಣ: ದೊರೆಸ್ವಾಮಿ ಅಸಮಾಧಾನ

ಮಡಿಕೇರಿ: ‘ರಾಜ್ಯದಲ್ಲಿ ಭೂಕಬಳಿಕೆ ಪ್ರಕರಣ ಸಂಬಂಧ ವಿಶೇಷ ನ್ಯಾಯಾಲಯ ಸ್ಥಾಪಿಸಿ 9 ತಿಂಗಳು ಕಳೆದರೂ ಇದುವರೆಗೂ ಒಂದೇ ಒಂದು ಪ್ರಕರಣವನ್ನೂ ಸಂಬಂಧಪಟ್ಟ ಅಧಿಕಾರಿಗಳು ವರ್ಗಾಯಿಸಿಲ್ಲ’ ಎಂದು ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌. ದೊರೆಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.

‘ಬೇರೆ ಬೇರೆ ನ್ಯಾಯಾಲಯದಲ್ಲಿ ಬಿದ್ದು ಹೋಗಿರುವ ಭೂಕಬಳಿಕೆ ಪ್ರಕರಣಗಳನ್ನು ವಿಶೇಷ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಿ, ಆರು ತಿಂಗಳೊಳಗೆ ಇತ್ಯರ್ಥ ಪಡಿಸಬೇಕೆಂಬ ಸರ್ಕಾರದ ಉದ್ದೇಶ ಈಡೇರಿಲ್ಲ. 40 ವರ್ಷದಲ್ಲಿ ರಾಜ್ಯದಾದ್ಯಂತ ಭೂಮಿ ದರೋಡೆಯೇ ನಡೆದಿದೆ. ಆದರೂ, ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ’ ಎಂದು ಆಪಾದಿಸಿದರು.

‘ವಿಶೇಷ ನ್ಯಾಯಾಲಯ ಸ್ಥಾಪನೆಗೆ ಸಾಕಷ್ಟು ಚಳವಳಿಗಳು ನಡೆದಿದ್ದವು. ಅಧಿಕಾರಿಗಳ ಬೇಜವಾಬ್ದಾರಿಯಿಂದ ಉದ್ದೇಶ ಈಡೇರಿಲ್ಲ. ಸರ್ಕಾರ ಸುಗ್ರೀವಾಜ್ಞೆ ತಂದು ಎಲ್ಲ ಒತ್ತುವರಿಯನ್ನು ಏಕಕಾಲದಲ್ಲಿ ತೆರವು ಮಾಡಲಿ’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT