ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಭವದ ಗರಗ ಮಡಿವಾಳೇಶ್ವರ ರಥೋತ್ಸವ

ತೇರು ಎಳೆದು ಕೃತಾರ್ಥರಾದ ಭಕ್ತರು; ಜಿಲ್ಲೆಯ ವಿವಿಧೆಡೆಗಳಿಂದಲೂ ಜಾತ್ರೆಗೆ ಬಂದ ಜನತೆ; ಬಿಗಿ ಪೊಲೀಸ್‌ ಬಂದೋಬಸ್ತ್‌
Last Updated 15 ಫೆಬ್ರುವರಿ 2017, 12:52 IST
ಅಕ್ಷರ ಗಾತ್ರ

ಧಾರವಾಡ:  ಜಿಲ್ಲೆಯ ಪ್ರಮುಖ ರಥೋತ್ಸವಗಳಲ್ಲಿ ಒಂದಾದ ತಾಲ್ಲೂಕಿನ ಗರಗ ಮಡಿವಾಳೇಶ್ವರರ ರಥೋತ್ಸವ ಸೋಮವಾರ ಸಾವಿರಾರು ಭಕ್ತರ ಹರ್ಷೋದ್ಘಾರಗಳ ಮಧ್ಯೆ ವಿಜೃಂಭಣೆಯಿಂದ ನಡೆಯಿತು.

ತಾಲ್ಲೂಕಿನಲ್ಲಿಯೇ ಅತ್ಯಂತ ದೊಡ್ಡ ಜಾತ್ರೆ ಎಂದು ಕರೆಯಲ್ಪಡುವ ಈ ಜಾತ್ರೆಗೆ ಜಿಲ್ಲೆಯ ವಿವಿಧ ಊರುಗಳು ಸೇರಿದಂತೆ ತಾಲ್ಲೂಕಿನ ಉಪ್ಪಿನ ಬೆಟಗೇರಿ, ಕೋಟೂರು, ತಡಕೋಡ, ಹಂಗರಕಿ, ಮರೇವಾಡ, ಪುಡಕಲಕಟ್ಟಿ, ಹೆಬ್ಬಳ್ಳಿ, ಅಮ್ಮಿನಬಾವಿ ಮುಂತಾದ ಕಡೆಗಳಿಂದಲೂ ಜನ ಬಂದಿದ್ದರು. ಜಾತ್ರಾ ಮಹೋತ್ಸವದ ಮುನ್ನಾ ದಿನವಾದ ಭಾನುವಾರವೇ ಅನೇಕ ಊರುಗಳಿಂದ ರೈತಾಪಿ ವರ್ಗದವರು ಚಕ್ಕಡಿ, ಟ್ರ್ಯಾಕ್ಟರ್‌ಗಳಲ್ಲಿ ತೆರಳಿದ್ದರು.

ದೇವಸ್ಥಾನದ ಮುಂಭಾಗದಲ್ಲಿನ ಹೊಲ, ಗದ್ದೆಗಳನ್ನು ಜಾತ್ರೆ ಅಂಗವಾಗಿ ಹಸನು ಮಾಡಲಾಗಿತ್ತು. ಹೊಲದ ಖುಲ್ಲಾ ಜಾಗದಲ್ಲಿ ಸಾವಿರಾರು ಭಕ್ತರು ಟೆಂಟ್‌ಗಳನ್ನು ಹಾಕಿಕೊಂಡು ರಥೋತ್ಸವ ಸಮಯದವರೆಗೂ ಅಲ್ಲೇ ವಾಸವಿದ್ದು, ರಥೋತ್ಸವದಲ್ಲಿ ಪಾಲ್ಗೊಂಡರು. ಟೆಂಟ್‌ಗಳಲ್ಲಿಯೇ ವಿಶೇಷ ಭೋಜನ ಕೂಡ ಸವಿದರು.  ಗದ್ದುಗೆ ಆವರಣದಲ್ಲಿ ಅನೇಕ ಮಕ್ಕಳ ಆಟಿಕೆ ಸಾಮಾನುಗಳ ಅಂಗಡಿಗಳು, ಚಹಾ ಅಂಗಡಿಗಳು, ಮನರಂಜನಾ ಕ್ರೀಡೆಗಳ ಟೆಂಟ್‌ಗಳು ಸೇರಿದಂತೆ ಹತ್ತು, ಹಲವಾರು ಅಂಗಡಿಗಳು ಬೀಡು ಬಿಟ್ಟಿದ್ದವು. ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡ ಸಾರ್ವಜನಿಕರು ಮನರಂಜನಾ ಕ್ರೀಡೆಗಳಲ್ಲಿ ಪಾಲ್ಗೊಂಡು ಸಂತಸಪಟ್ಟರು.

ಸಂಜೆ 4.30ರ ಸುಮಾರಿಗೆ ಕರ್ತೃ ಗದ್ದುಗೆಯಿಂದ ಬೃಹದಾಕಾರದ ತೇರು ಎಳೆಯಲ್ಪಟ್ಟಿತು. ತೇರು ಸಾಗುವ ಎಡ ಮತ್ತು ಬಲ ಬದಿಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಭಕ್ತರು, ತೇರಿಗೆ ಉತ್ತತ್ತಿ, ಬಾಳೆಹಣ್ಣು, ನಿಂಬೆಹಣ್ಣುಗಳನ್ನು ತೂರಿ ಮಡಿವಾಳೇಶ್ವರರಿಗೆ ಭಕ್ತಿಯ ನಮನ ಸಲ್ಲಿಸಿದರು. ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ಜನತೆ ತೇರನ್ನು ಎಳೆಯುವ ಮೂಲಕ ಕೃತಾರ್ಥರಾದರು. ತೇರು ಎಳೆಯುತ್ತಿದ್ದಂತೆ ಹರ....ಹರ...ಮಹಾದೇವ.... ಶ್ರೀ ಮಡಿವಾಳೇಶ್ವರರಿಗೆ... ಜೈ... ಎನ್ನುವ ಘೋಷಣೆಗಳನ್ನು ಕೂಗಿದರು. 

100 ಸಿಬ್ಬಂದಿ:  ದೊಡ್ಡ ಜಾತ್ರೆಯಾಗಿರುವುದರಿಂದ ಯಾವುದೇ ಗಲಾಟೆ ಸಂಭವಿಸಬಾರದು ಎಂಬ ಉದ್ದೇಶದಿಂದ ಗರಗ ಪೊಲೀಸ್‌ ಠಾಣೆ ವತಿಯಿಂದ ಬಿಗಿ ಬಂದೋಬಸ್ತ್‌ ಮಾಡಲಾಗಿತ್ತು.  ಡಿಎಆರ್‌ ಹಾಗೂ ಕೆಎಸ್‌ಆರ್‌ಪಿ ಸೇರಿದಂತೆ ಸುಮಾರು 100ಕ್ಕೂ ಅಧಿಕ ಜನ ಪೊಲೀಸರನ್ನು ಬಂದೋಬಸ್ತ್‌ಗಾಗಿ ನಿಯೋಜಿಸಲಾಗಿತ್ತು.  ಈ ಬಾರಿಯ ಜಾತ್ರಾ ಮಹೋತ್ಸವದಲ್ಲಿ ಸುಮಾರು 70–80 ಸಾವಿರ ಜನ ಪಾಲ್ಗೊಂಡಿದ್ದರು ಎಂದು ಗರಗ ಠಾಣೆ ಪಿಎಸ್‌ಐ ಸಂಗಮೇಶ ಪಾಲಭಾವಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT