ಮಂಗಳವಾರ, 23 ಏಪ್ರಿಲ್ 2024
ADVERTISEMENT
ಈ ಕ್ಷಣ :
ADVERTISEMENT
ADVERTISEMENT
ಇಸ್ರೊ ವಿಶ್ವ ವಿಕ್ರಮ
ಏಕ ರಾಕೆಟ್‌ ಮೂಲಕ 104 ಉಪಗ್ರಹಗಳನ್ನು ಹಾರಿಬಿಟ್ಟ ಬಾಹ್ಯಾಕಾಶ ಸಂಸ್ಥೆ
Last Updated 16 ಫೆಬ್ರುವರಿ 2017, 6:29 IST
ಅಕ್ಷರ ಗಾತ್ರ
ADVERTISEMENT
ಶ್ರೀಹರಿಕೋಟಾ (ಎಪಿ): ಒಂದೇ ರಾಕೆಟ್‌ನಲ್ಲಿ ಏಕಕಾಲಕ್ಕೆ  104 ಉಪಗ್ರಹಗಳನ್ನು ಯಶಸ್ವಿಯಾಗಿ ಸೂರ್ಯಸ್ಥಾಯಿ ಕಕ್ಷೆಗೆ ಸೇರಿಸುವ ಮೂಲಕ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಬುಧವಾರ ವಿಶ್ವ ದಾಖಲೆ ಬರೆದಿದೆ.
ಈವರೆಗೆ, 2014ರಲ್ಲಿ ಒಂದೇ ರಾಕೆಟ್‌ನಲ್ಲಿ 37 ಉಪಗ್ರಹಗಳನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದ್ದ ರಷ್ಯಾದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಹೆಸರಿನಲ್ಲಿ ಈ ದಾಖಲೆ ಇತ್ತು. 2016ರ ಜೂನ್‌ 22ರಂದು ಒಂದೇ ರಾಕೆಟ್‌ನಲ್ಲಿ 20 ಉಪಗ್ರಹಗಳನ್ನು ಇಸ್ರೊ ಕಕ್ಷೆಗೆ ಸೇರಿಸಿತ್ತು. ಅಷ್ಟು ಉಪಗ್ರಹಗಳನ್ನು ಇಸ್ರೊ ಒಮ್ಮೆಲೇ ಕಕ್ಷೆಗೆ ಸೇರಿಸಿದ್ದು ಅದೇ ಮೊದಲು.
ಇಸ್ರೊದ ಧ್ರುವಗಾಮಿ ಉಪಗ್ರಹ ಉಡಾವಣಾ ವಾಹನ (ಪಿಎಸ್‌ಎಲ್‌ವಿ) ಸಿ–37 ಇಲ್ಲಿನ ಸತೀಶ್‌ ಧವನ್ ಬಾಹ್ಯಕಾಶ ಕೇಂದ್ರದಿಂದ ಬುಧವಾರ ಬೆಳಿಗ್ಗೆ 9.28ಕ್ಕೆ ಪಯಣ ಆರಂಭಿಸಿತು.
ಸೂರ್ಯಸ್ಥಾಯಿ ಕಕ್ಷೆಯಲ್ಲಿ 505 ಕಿ.ಮೀ ಎತ್ತರಕ್ಕೆ ತಲುಪಿದ ತಕ್ಷಣ ಪಿಎಸ್‌ಎಲ್‌ವಿ ಮೊದಲು ಭಾರತದ ಕಾಸ್ಟ್ರೊಸ್ಯಾಟ್‌–2 ಉಪಗ್ರಹವನ್ನು ಕಕ್ಷೆಗೆ ಸೇರಿಸಿತು.  714 ಕೆ.ಜಿ ತೂಕವಿದ್ದ ಈ ಉಪಗ್ರಹ ಈ ಕಾರ್ಯಾಚರಣೆಯ ಪ್ರಮುಖ ಪಯಣಿಗ.  ನಂತರ ಭಾರತದ ಐಎನ್‌ಎಸ್–1ಎ ಮತ್ತು ಐಎನ್‌ಎಸ್ –1ಬಿ ನ್ಯಾನೊ ಉಪಗ್ರಹಗಳನ್ನು ಅದೇ ಕಕ್ಷೆಗೆ ಸೇರಿಸಿತು. ನಂತರ ಉಳಿದ 101 ಉಪಗ್ರಹಗಳನ್ನು ಒಂದರ ನಂತರ ಒಂದರಂತೆ ಕಕ್ಷೆಗೆ ಸೇರಿಸಿತು.
28 ನಿಮಿಷಗಳ ಕಾರ್ಯಾಚರಣೆ: ಉಡಾವಣೆ ಆದ ನಂತರದ 17ನೇ ನಿಮಿಷ 29 ಸೆಕೆಂಡ್‌ನಲ್ಲಿ ಕಾಸ್ಟ್ರೊಸ್ಯಾಟ್‌ –2 ಕಕ್ಷೆ ಸೇರಿತು. ಐಎನ್‌ಎಸ್‌–1ಎ ಮತ್ತು 1ಬಿಗಳು ಕ್ರಮವಾಗಿ 17ನೇ ನಿಮಿಷ 39 ಸೆಕೆಂಡ್‌ ಮತ್ತು 40ನೇ ಸೆಕೆಂಡ್‌ನಲ್ಲಿ ಕಕ್ಷೆಗೆ ಸೇರಿದವು. 18ನೇ ನಿಮಿಷ 32 ಸೆಕೆಂಡ್‌ನಲ್ಲಿ ಆರಂಭವಾಗಿ 28ನೇ ನಿಮಿಷ 42 ಸೆಕೆಂಡ್‌ನ ಅವಧಿಯಲ್ಲಿ (ಒಟ್ಟು 590 ಸೆಕೆಂಡ್‌) ಉಳಿದ 101 ನ್ಯಾನೊ ಉಪಗ್ರಹಗಳು ಕಕ್ಷೆಗೆ ಸೇರಿದವು. ಉಡಾವಣೆ ಆದಾಗಿನಿಂದ ಕೊನೆಯ ಉಪಗ್ರಹ ಕಕ್ಷೆಗೆ ಸೇರಿದವರೆಗಿನ ಕಾರ್ಯಾಚರಣೆಯ ಒಟ್ಟು ಅವಧಿ 28 ನಿಮಿಷ 42 ಸೆಕೆಂಡ್‌.
ಭಾರಿ ರಾಕೆಟ್‌
ಸಿ–37, ಪಿಎಸ್‌ಎಲ್‌ವಿ ಸರಣಿಯಲ್ಲೇ ಅತ್ಯಂತ ದೊಡ್ಡ ರಾಕೆಟ್‌. ಒಟ್ಟು 44.4 ಮೀಟರ್ ಎತ್ತರವಿದ್ದ ಈ ರಾಕೆಟ್‌ 320 ಟನ್‌ ತೂಕವಿತ್ತು. ಭಾರಿ ತೂಕವನ್ನು ಹೊತ್ತು ನೆಲದಿಂದ ಜಿಗಿಯಲು ಹೆಚ್ಚು ಶಕ್ತಿ ಬೇಕಾಗುತ್ತದೆ. ಇದಕ್ಕಾಗಿ ರಾಕೆಟ್‌ಗೆ ಹೆಚ್ಚುವರಿಯಾಗಿ ನಾಲ್ಕು/ಆರು/ಎಂಟು ಸಣ್ಣ ರಾಕೆಟ್‌ಗಳನ್ನು ಜೋಡಿಸಿರಲಾಗುತ್ತದೆ. ಇವನ್ನು ಸ್ಟ್ರಾಪ್‌ ಆನ್‌ಗಳು ಎಂದು ಕರೆಯಲಾಗುತ್ತದೆ.  ಇಂತಹ ಎಂಜಿನ್‌ಗಳ ಸಂಯೋಜನೆಗೆ ‘ಎಕ್ಸ್‌ಎಲ್‌’ ಎಂದು ಕರೆಯಲಾಗುತ್ತದೆ. ಇಸ್ರೊ ಈವರೆಗೆ ಎಕ್ಸ್‌ಎಲ್‌ ವ್ಯವಸ್ಥೆ ಇದ್ದ 15 ಪಿಎಸ್‌ಎಲ್‌ವಿಗಳನ್ನು ಬಳಸಿತ್ತು. ಸಿ–37 ಅಂತಹ 16ನೇ ರಾಕೆಟ್‌.
ಇಸ್ರೊ ಸಾಮರ್ಥ್ಯ
‘3–4 ಕೆ.ಜಿ ತೂಕದ 400 ನ್ಯಾನೊ ಉಪಗ್ರಹಗಳನ್ನು ಒಂದೇ ರಾಕೆಟ್‌ನಲ್ಲಿ ಕಕ್ಷೆಗೆ ಸೇರಿಸುವ ಸಾಮರ್ಥ್ಯ ಇಸ್ರೊಗೆ ಇದೆ. ಇಸ್ರೊ ಹೊಸ ತಂತ್ರಜ್ಞಾನವನ್ನೇನೂ ಬಳಸಿಕೊಂಡಿಲ್ಲ. ಆದರೆ ಈಗಿರುವ ತಂತ್ರಜ್ಞಾನದಲ್ಲೇ ಎಂತಹ ಅದ್ಭುತವನ್ನು ಸಾಧಿಸಬಹುದು ಎಂಬುದನ್ನು ತೋರಿಸಿಕೊಟ್ಟಿದೆ’ ಎಂದು ಖ್ಯಾತ ಬಾಹ್ಯಾಕಾಶ ವಿಜ್ಞಾನಿ ಜಿ.ಮಾಧವನ್ ನಾಯರ್‌ ಹೇಳಿದ್ದಾರೆ.
ಭಾರತ ತನ್ನ ಬಾಹ್ಯಾಕಾಶ ಸಂಶೋಧನಾ ಸಾಮರ್ಥ್ಯವನ್ನು  ಹೆಚ್ಚಿಸಿಕೊಳ್ಳುತ್ತಿದೆ ಎಂಬುದನ್ನು ಇದು ಮತ್ತೊಮ್ಮೆ ಸಾಬೀತುಪಡಿಸಿದೆ
ಇದು ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದಲ್ಲಿ ದೇಶ ಹೆಮ್ಮೆಪಡುವಂತಹ ಕ್ಷಣ. ಇದನ್ನು ಸಾಧಿಸಿದ ವಿಜ್ಞಾನಿಗಳಿಗೆ ದೇಶ ವಂದಿಸುತ್ತದೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT