ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಶಾಲೆಗಳನ್ನು ಉನ್ನತೀಕರಣಗೊಳಿಸಿ

ಮಿಡಿಗೇಶಿ: 6ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಕೇಶವರೆಡ್ಡಿ ಹಂದ್ರಾಳ ಒತ್ತಾಯ
Last Updated 16 ಫೆಬ್ರುವರಿ 2017, 10:55 IST
ಅಕ್ಷರ ಗಾತ್ರ
ಮಧುಗಿರಿ: ಗ್ರಾಮಾಂತರ ಪ್ರದೇಶಗಳಲ್ಲಿ ನಾಯಿ ಕೊಡೆಗಳಂತೆ ತಲೆ ಎತ್ತುತ್ತಿರುವ ಕಾನ್ವೆಂಟ್ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಭವಿಷ್ಯ ಡೋಲಾಯಮಾನ ಸ್ಥಿತಿಗೆ ತಲುಪಿದೆ ಎಂದು 6ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಕೇಶವರೆಡ್ಡಿ ಹಂದ್ರಾಳ ವಿಷಾದಿಸಿದರು.
 
ತಾಲ್ಲೂಕಿನ ಮಿಡಿಗೇಶಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಬುಧವಾರ ನಡೆದ 6ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
 
ಸರ್ಕಾರಿ ಶಾಲೆಗಳನ್ನು ಎಲ್ಲ ರೀತಿ ಉನ್ನತೀಕರಿಸಿದ್ದೇ ಆದಲ್ಲಿ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸಲು ಮುಂದಾಗುತ್ತಾರೆ. ಇಂದು ಉನ್ನತ ಹುದ್ದೆಯಲ್ಲಿರುವವರು ಬಹುತೇಕ ಸರ್ಕಾರಿ ಶಾಲೆಯಲ್ಲೇ ಓದಿದವರು. ಇಂದು ಜಾಗತಿಕ ಮಟ್ಟದಲ್ಲಿ ಆಗುತ್ತಿರುವ ಪರಿಸರ ಮತ್ತು ಹವಾಮಾನ ವೈಪರೀತ್ಯಗಳು ನಮ್ಮ ಕೃಷಿಯ ಮೇಲೆ ಅತ್ಯಂತ ಕೆಟ್ಟ ಪರಿಣಾಮ ಬೀರಿದ ಕಾರಣ ಆರ್ಥಿಕ ಬದಲಾವಣೆಗಳು ಕೆರೆ, ಕಟ್ಟೆ, ಕಾಲುವೆ ಇನ್ನೂ ಅನೇಕ ಸಾಂಪ್ರದಾಯಿಕ ಜಲಮೂಲಗಳ ನಾಶ, ವಿಪರೀತ ರಾಸಾಯನಿಕ ಗೊಬ್ಬರಗಳ ಬಳಕೆ, ಮಾರುಕಟ್ಟೆ ಸೌಲಭ್ಯಗಳ ಕೊರತೆ ಹೀಗೆ ಹತ್ತು ಹಲವು ಸಮಸ್ಯೆಗಳು ರೈತರನ್ನು ಹೈರಾಣು ಮಾಡಿವೆ ಎಂದರು.
 
ಈ ಎಲ್ಲ ಸಮಸ್ಯೆ ನಿವಾರಣೆಗೆ ಹೆಣ್ಣು ಮಕ್ಕಳ ಸಬಲೀಕರಣ ಅಗತ್ಯವಾಗಿದ್ದು, ಆರ್ಥಿಕವಾಗಿ ಸ್ವಾತಂತ್ರರಾಗಲು, ಸ್ವಾವಲಂಬಿಗಳಾಗಲು ಜನಪ್ರತಿನಿಧಿಗಳು, ಅಧಿಕಾರಿಗಳು ತ್ರಿಕರಣ ಪೂರ್ವಕವಾಗಿ ಶ್ರಮಿಸಬೇಕಿದೆ. ಆಗ ಮಾತ್ರ ಗ್ರಾಮೀಣರ ಬದುಕು ಹಸನಾಗಲಿದೆ ಎಂದು ಹೇಳಿದರು. 
 
ಬಿಬಿಎಂಪಿ ಕಸವನ್ನು ನಮ್ಮ ತಾಲ್ಲೂಕಿಗೆ ತಂದು ಸುರಿಯುವುದು ಬೇಡ. ಅಲ್ಲಿನ ಕಸ ಅಲ್ಲೇ ಹಾಕಿಕೊಳ್ಳಲಿ. ಈ ವಿಚಾರದಲ್ಲಿ ನಾವು ಸತ್ಯಾಗ್ರಹ ಮಾಡಲೂ ಹಿಂಜರಿಯಬಾರದು. ನಾವಿಂದು ಕಷ್ಟದಲ್ಲಿ ಮುಳುಗಿರುವುದಕ್ಕೆ ಗಾಂಧಿ ಮತ್ತು ಅಂಬೇಡ್ಕರ್‌ ಅವರನ್ನು ಮರೆತಿರುವುದೇ ಕಾರಣ ಎಂದರು.
 
ಒತ್ತಾಯಗಳು: ಪ್ರತಿ ಊರಿನಲ್ಲೂ ಒಂದೊಂದು ಗ್ರಂಥಾಲಯ, ಹೋಬಳಿಗೊಂದು ರೈತರ ನೆರವಿಗೆ ಮಾಹಿತಿ ಕೇಂದ್ರ, ಸರ್ಕಾರಿ ಶಾಲೆ, ರಸ್ತೆ, ಆಸ್ಪತ್ರೆ, ಸಾರ್ವಜನಿಕ ವಲಯದ ಉದ್ದಿಮೆಗಳನ್ನು ಬಲಪಡಿಸಬೇಕು. ಶಾಲಾ ಕಾಲೇಜುಗಳಲ್ಲಿ ಪೌಷ್ಟಿಕ ಮತ್ತು ಗುಣಮಟ್ಟದ ಆಹಾರ ನೀಡುವಂತಾಗಬೇಕು. ತಾಲ್ಲೂಕಿನ ಮೈದನಹಳ್ಳಿ ಕೃಷ್ಣಮೃಗ ವನ್ಯಧಾಮವನ್ನು ತ್ವರಿತವಾಗಿ ಅಭಿವೃದ್ಧಿ ಪಡಿಸಬೇಕು. ಗೊಡ್ಡು ಸಂಪ್ರದಾಯಗಳಿಂದ ಹೆಣ್ಣು ಮಕ್ಕಳಿಗೆ ಆಗುತ್ತಿರುವ ಮೌಢ್ಯಾಚರಣೆ ತಡೆಗಟ್ಟಲು ಪ್ರತಿಯೊಬ್ಬರೂ ಪಣ ತೊಡಬೇಕು ಎಂದು ಸಲಹೆ ನೀಡಿದರು.
 
ಸಾಹಿತಿ ಪ್ರಧಾನ್‌ ಗುರುದತ್ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ‘ಪೋಷಕರು ಅವರಿಷ್ಟದಂತೆ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಬಹುದೆಂಬ ತೀರ್ಪಿನಿಂದಾಗಿ ಕನ್ನಡ ಭಾಷೆಗೆ ಕೊಡಲಿ ಪೆಟ್ಟು ಬಿದ್ದಂತಾಗಿದೆ ಎಂದು ಅವರು ಹೇಳಿದರು.
 
ಶಾಸಕ ಕೆ.ಎನ್.ರಾಜಣ್ಣ ಮಾತನಾಡಿ, ಕನ್ನಡ ಭಾಷೆ ಬಗ್ಗೆ ವೇದಿಕೆಗಳಲ್ಲಿ ಮಾತನಾಡುವ ಧಾಟಿ ಕೃತಿಯಲ್ಲಿ ನೋಡಲು ಸಾಧ್ಯವಾಗುತ್ತಿಲ್ಲವೆಂದು ಅನಿಸಿಕೆ ವ್ಯಕ್ತಪಡಿಸಿ, ಸಾಹಿತ್ಯ ಸಮ್ಮೇಳನಗಳಲ್ಲಿ ಕನ್ನಡದ ಅಭಿವೃದ್ಧಿ ಬಗ್ಗೆ ನಿರ್ಣಯಗಳನ್ನು ಕೈಗೊಳ್ಳಲಾಗುತ್ತದೆ. ಆದರೆ ಅದನ್ನು ಅನುಷ್ಠಾನಗೊಳಿಸುವಲ್ಲಿ ವಿಫಲರಾಗುತ್ತೇವೆ ಎಂದರು. 
 
2017ರ ಡಿ.31ರೊಳಗೆ ತುಮಕೂರು ಮತ್ತು ಮಧುಗಿರಿಯಲ್ಲಿ ನಿರ್ಮಾಣವಾಗುತ್ತಿರುವ ಕನ್ನಡ ಭವನಗಳನ್ನು ಪೂರ್ಣಗೊಳಿಸಿ ಲೋಕಾರ್ಪಣೆಗೊಳಿಸುವುದಾಗಿ ಭರವಸೆ ನೀಡಿದರು. ಸಮ್ಮೇಳನಾಧ್ಯಕ್ಷರ ಮೆರವಣಿಗೆ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ವಿವಿಧ ಸಾಂಸ್ಕೃತಿಕ ಕಲಾತಂಡಗಳೊಂದಿಗೆ ಅದ್ಧೂರಿಯಾಗಿ ನಡೆಯಿತು.
 
ಜಿಲ್ಲಾ ಪಂಚಾಯಿತಿ ಸದಸ್ಯರುಗಳಾದ ಶಾಂತಲಾ ರಾಜಣ್ಣ, ಜಿ.ಜೆ.ರಾಜಣ್ಣ, ತುಮುಲ್ ಅಧ್ಯಕ್ಷ ಕೊಂಡವಾಡಿ ಚಂದ್ರಶೇಖರ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಇಂದಿರಾ, ಉಪಾಧ್ಯಕ್ಷ ಲಕ್ಷ್ಮೀನರಸಪ್ಪ, ಪುರಸಭೆ ಅಧ್ಯಕ್ಷೆ ಎಲ್.ರಾಧಾ, ತಹಶೀಲ್ದಾರ್ ಎಚ್.ಶ್ರೀನಿವಾಸ್, ಡಿಡಿಪಿಐ ಕೆ.ಜಿ.ರಾಜೇಂದ್ರ, ಬಿಇಒ ಎಂ.ವಿ.ರಾಜಣ್ಣ, ತಾಲ್ಲೂಕು ಪಂಚಾಯಿತಿ ಇಒ ಎಚ್.ಡಿ.ಮಹಲಿಂಗಯ್ಯ, ಕಸಾಪ ತಾಲ್ಲೂಕು ಅಧ್ಯಕ್ಷ ಚಿ.ಸೂ.ಕೃಷ್ಣಮೂರ್ತಿ, ಪ್ರಧಾನ ಕಾರ್ಯದರ್ಶಿ ಎ.ರಾಮಚಂದ್ರಪ್ಪ, ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವೆಂಕಟರಂಗಾರೆಡ್ಡಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ  ಮಹಾಲಿಂಗೇಶ್, ಕಸಾಪ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಎಂ.ಎಸ್.ಮಲ್ಲಿಕಾರ್ಜುನಯ್ಯ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಲಜಾಕ್ಷಿ, ಉಪಾಧ್ಯಕ್ಷ ಎಸ್.ಎನ್.ರಾಜು, ಹೋಬಳಿ ಘಟಕದ ಅಧ್ಯಕ್ಷ ಹನುಮಂತರೆಡ್ಡಿ  ಇದ್ದರು.
 
* ಗ್ರಾಮೀಣ ಭಾಗದ ವಿದ್ಯಾರ್ಥಿಗಳು ವಿಜ್ಞಾನ ವಿಷಯ ಅಭ್ಯಸಿಸಬೇಕಾದರೆ ಸರಕಾರ ಉನ್ನತ ಶಿಕ್ಷಣದಲ್ಲಿ ಕನ್ನಡ ಮಾಧ್ಯಮವನ್ನು ಜಾರಿಗೊಳಿಸಬೇಕು
-ಬಾ.ಹ.ರಮಾಕುಮಾರಿ, ಜಿಲ್ಲಾ ಕಸಾಪ ಅಧ್ಯಕ್ಷೆ
 
* ನಮ್ಮ ರಾಜ್ಯದಲ್ಲಿ ಹೊಸ ಚಲನಚಿತ್ರಗಳ ಬಿಡುಗಡೆ ಬಗ್ಗೆ ಮಾತನಾಡಿಕೊಳ್ಳುತ್ತಾರೆ. ಸಾಹಿತಿಗಳು ಬರೆದ ಪುಸ್ತಕಗಳ ಬಿಡುಗಡೆ ಬಗ್ಗೆ ಅವರಿಗೆ ಅರಿವು ಇರುವುದಿಲ್ಲ 
-ಅನಿತಾಲಕ್ಷ್ಮಿ, ಉಪವಿಭಾಗಾಧಿಕಾರಿ
 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT