ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡ್ತಿ ಮೀಸಲಾತಿ: ತೀರ್ಪಿಗೆ ತಲೆಬಾಗಿ

ಸಂಗತ
Last Updated 16 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ
ಮಹೇಶ ಸಿ.ಎಚ್.
 
*
ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನೌಕರರ ಬಡ್ತಿ ಮೀಸಲು ಕಾಯ್ದೆಯನ್ನು ಸುಪ್ರೀಂ ಕೋರ್ಟ್‌ ಇತ್ತೀಚೆಗೆ ರದ್ದುಪಡಿಸಿದೆ. ಸಾಮಾನ್ಯ ವರ್ಗದ ನೌಕರರಲ್ಲಿ ಈ ತೀರ್ಪು ಸಂಭ್ರಮವನ್ನುಂಟು ಮಾಡಿದ್ದರೆ, ಮೀಸಲಾತಿಯಲ್ಲಿ ಬಡ್ತಿ ಪಡೆದವರಿಗೆ ಮನೋವ್ಯಥೆಯನ್ನುಂಟು ಮಾಡಿದೆ.  
 
ಯಾವುದೇ ಪಕ್ಷ, ಸರ್ಕಾರ ನಡೆಸುತ್ತಿದ್ದರೂ ಅದು ‘ಸಾಂವಿಧಾನಿಕ ನಿಯಮಗಳ ಅನುಸಾರವೇ ನಾವು ನಡೆದುಕೊಳ್ಳುವೆವು!’ ಎಂದು  ಹೇಳುತ್ತದೆ. ವಿಪರ್ಯಾಸವೆಂದರೆ, ದೇಶದ ಕೆಲವು ಸಂಕೀರ್ಣ ಸಮಸ್ಯೆಗಳ ಬಗ್ಗೆ ಸುಪ್ರೀಂ ಕೋರ್ಟ್‌ ನ್ಯಾಯತೀರ್ಮಾನ ಇತ್ತಾಗಲೆಲ್ಲ ಎಲ್ಲ ಪಕ್ಷಗಳೂ ತಂತಮ್ಮ ರಾಜಕೀಯ ಹಿತಾಸಕ್ತಿಗೆ ಅನುಗುಣವಾಗಿ ತಮ್ಮ ನಿಲುವುಗಳನ್ನು ಪ್ರಕಟಪಡಿಸುವುದು  ದೇಶದ ಜನರಲ್ಲಿ, ವಿಶೇಷವಾಗಿ ಯುವಜನರಲ್ಲಿ ಭ್ರಮನಿರಸನವನ್ನು ಉಂಟು ಮಾಡುತ್ತಿದೆ. ಡಾ. ಬಿ.ಆರ್.ಅಂಬೇಡ್ಕರ್ ಅವರ ಹೆಸರನ್ನು ಮುಂದಿಟ್ಟುಕೊಂಡು ಹೋರಾಡುವವರಿಗೆ ‘ಈ ಮೀಸಲಾತಿಯು ಸಂವಿಧಾನ ಜಾರಿಯಾದ ಹತ್ತು ವರ್ಷಗಳವರೆಗೆ ಮಾತ್ರ ಮುಂದುವರಿಯಬೇಕು’ ಎಂದು ಸುಸ್ಪಷ್ಟವಾಗಿ ಅವರೇ ಹೇಳಿದ ಮಾತು ಅದೇಕೆ ಮರೆತುಹೋಗುತ್ತದೆ? ಪ್ರತಿ ರಾಜಕೀಯ ಪಕ್ಷವೂ ತತ್ಕಾಲೀನ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಏನು ಬೇಕೋ ಅಷ್ಟನ್ನು ಮಾತ್ರ ಮಾಡುತ್ತದೆ. ಯಾವ ಪಕ್ಷಕ್ಕೂ ದೇಶದ ಸುಸ್ಥಿರ ಅಭಿವೃದ್ಧಿ, ಬೌದ್ಧಿಕ ಪರಿಪಕ್ವತೆ, ದಕ್ಷ ಆಡಳಿತ ಬೇಕೇ ಇಲ್ಲ.  
 
ಶತಶತಮಾನಗಳ ಕಾಲ ಕುಲೀನರಿಂದ ಶೋಷಣೆಗೊಳಗಾಗಿದ್ದಾರೆಂಬ ಭಾವನೆಯಿಂದ ದಲಿತರು, ಶೋಷಿತರನ್ನು ಸಮಾಜದ ಮೇಲ್‌ಸ್ತರಕ್ಕೆ ಕೊಂಡೊಯ್ಯುವ ಪ್ರಯತ್ನದ ಭಾಗವಾಗಿ ಸ್ವಾತಂತ್ರ್ಯೋತ್ತರ ಭಾರತದಲ್ಲಿ  ಮೀಸಲಾತಿಯನ್ನು ಜಾರಿಗೆ ತರಲಾಯಿತು. ವಿಚಿತ್ರವೆಂದರೆ ಇಂದು ಪ್ರಬಲ ಕುಲದವರಾದಿಯಾಗಿ ಎಲ್ಲರಿಗೂ ಹಿಂದುಳಿಯುವ ಬಯಕೆ, ಮೀಸಲಾತಿಯ ನೆರಳಿನಡಿಯಲ್ಲಿ ಬದುಕು ಕಂಡುಕೊಳ್ಳುವಾಸೆ! ಅಂದರೆ ಮೀಸಲಾತಿಎಂಬುದು ಒಂದು ‘ಭಾಗ್ಯ’ದ ಮಟ್ಟವನ್ನು ಮುಟ್ಟಿದೆಯೆಂದರೆ ಅಚ್ಚರಿಯಿಲ್ಲ.
 
ಹಿಂದುಳಿದ, ಶೋಷಿತ ಸಮುದಾಯಗಳನ್ನು ಮುಂದೆ ತರುವ ಮೂಲ ಉದ್ದೇಶ  ಮೀಸಲಾತಿಯದು. ವಿಷಾದದ ಸಂಗತಿಯೆಂದರೆ,  ಸಾಮಾನ್ಯ ವರ್ಗದ ಜನರನ್ನೂ ಹಿಂದೆ ಹಾಕುವಷ್ಟು ಸಂಪತ್ತು, ಸ್ಥಾನಮಾನ ದೊರಕಿದ್ದರೂ ಕೇವಲ ಜಾತಿಯ ಹೆಸರಿನಿಂದ ಇನ್ನೂ ಮೀಸಲಾತಿಯನ್ನು ಬಯಸುವ ಸನ್ನಿವೇಶಗಳಿಗೆ ಏನು ಹೇಳಬೇಕು? ಅಖಂಡ ಭಾರತದಲ್ಲಿ ಒಬ್ಬನೇ ಒಬ್ಬ ಶೋಷಿತ ‘ನಾನು ಉಚ್ಛ್ರಾಯ ಸ್ಥಿತಿ ತಲುಪಿದ್ದೇನೆ, ನನಗೆ ಹಾಗೂ ನನ್ನ ಕುಟುಂಬಕ್ಕೆ ಇಂತಹ ಸೌಲಭ್ಯ ಸಾಕು’ ಎಂದ ನಿದರ್ಶನವಿದೆಯೇ? ಸಾಮಾನ್ಯ ವರ್ಗದ ಜನರಲ್ಲಿ ಇಂದಿಗೂ ತುತ್ತು ಕೂಳಿಗೂ ತತ್ವಾರ ಪಡುತ್ತಿರುವ ಜನ ಎಷ್ಟಿಲ್ಲ?  
 
ಜಾತಿಯ ಕಾರಣದಿಂದ ಶೋಷಿತರಾಗಿರುವ ಜನರ ಉದ್ಧಾರಕ್ಕೆಂದೇ ಮೀಸಲಾತಿಯನ್ನು ಜಾರಿಗೊಳಿಸಲಾಗಿದೆ. ಆ ವರ್ಗಕ್ಕೆ ಒಂದಲ್ಲ ಎರಡಲ್ಲ ನೂರೆಂಟು ಸೌಲಭ್ಯಗಳನ್ನು ಉಚಿತವಾಗಿ ಕಲ್ಪಿಸಲಾಗಿದೆ. ಹಾಸ್ಟೆಲ್‌ನಲ್ಲಿದ್ದುಕೊಂಡು ಓದಲು ವ್ಯವಸ್ಥೆ, ಮೈಸಾಬೂನು ಮೊದಲ್ಗೊಂಡು ರೇಮಂಡ್ಸ್ ರಗ್ಗು, ಕಾಟನ್ ಬೆಡ್‌ಶೀಟ್‌, ವಾರಕ್ಕೊಮ್ಮೆ ಮಾಂಸಾಹಾರ, ಉನ್ನತ ಶಿಕ್ಷಣದಲ್ಲಿ ಲ್ಯಾಪ್‌ಟಾಪ್, ಶುಲ್ಕ ಹಿಂಪಾವತಿಯಂಥ ಅಗಣಿತ ಸವಲತ್ತುಗಳನ್ನು ಕೊಟ್ಟು, ಉದ್ಯೋಗದಲ್ಲಿ ವಿಶೇಷ ಮೀಸಲಾತಿಯನ್ನೂ ಒದಗಿಸಲಾಗಿದೆ. ಒಬ್ಬ ಮನುಷ್ಯನಿಗೆ ಒಂದು ಬಾರಿ ಉದ್ಯೋಗದಲ್ಲಿ ಮೀಸಲಾತಿಯಡಿ ಅವಕಾಶ ನೀಡಿದ ನಂತರವೂ ಅರ್ಹತೆ, ದಕ್ಷತೆ, ಅನುಭವ, ಪ್ರಬುದ್ಧತೆ, ಸೇವಾ ಹಿರಿತನ ಇದಾವುದನ್ನೂ ಪರಿಗಣಿಸದೆ ಕೇವಲ ಒಂದು ನಿರ್ದಿಷ್ಟ ಜಾತಿಗೆ ಸೇರಿದ್ದಾನೆಂಬ ಒಂದೇ ಮಾನದಂಡ ಆಧರಿಸಿ ಉದ್ಯೋಗಗಳಲ್ಲಿ ಬಡ್ತಿ ನೀಡುವುದು ಎಷ್ಟು ಸಮರ್ಥನೀಯ? ನಾವು ಎತ್ತ ಸಾಗುತ್ತಿದ್ದೇವೆ? ನಮಗೆ ದೇಶದ ಭವಿಷ್ಯ, ಬಲಿಷ್ಠ ರಾಷ್ಟ್ರನಿರ್ಮಾಣ, ಪ್ರಬುದ್ಧ ಸಮಾಜ ಸಂರಚನೆ ಬೇಕಿಲ್ಲವೇ? ಜಾತಿ ರಾಜಕೀಯ ಮಾಡಿಕೊಂಡು, ಮತಬ್ಯಾಂಕ್ ಓಲೈಕೆಯ ತಂತ್ರಗಳನ್ನು ಇನ್ನೂ ಎಷ್ಟು ದಿನ ಮುಂದುವರಿಸಬಯಸುತ್ತವೆ ಈ ರಾಜಕೀಯ ಪಕ್ಷಗಳು?  
 
ತನ್ನ ತಂದೆಯ ಕಾರಿನಲ್ಲಿ ಬರುವ ನನ್ನ ಸಹಪಾಠಿಗೆ ವಿ.ಟಿ.ಯು. ಪರೀಕ್ಷೆಯ ಶುಲ್ಕ ಕೇವಲ ₹ 100. ಸೈಕಲ್ಲಿನಲ್ಲಿ ಕಾಲೇಜಿಗೆ ಹೋಗುವ ನನಗಾದರೋ ₹ 600! ಇದು ಬಿಡಿ, ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗೆ ಪರಿಶಿಷ್ಟರಿಗಾದರೆ ಬಹಳಷ್ಟು ಬಾರಿ ಉಚಿತ, ಇಲ್ಲವೇ ನಗಣ್ಯಎಂಬಷ್ಟು ಶುಲ್ಕ, ನಮ್ಮಂಥ ಸಾಮಾನ್ಯ ವರ್ಗದವರಿಗೆ ಸಾವಿರಾರು ರೂಪಾಯಿ. ಏಕೀ ತಾರತಮ್ಯ?  ನಾವೂ ಮನುಷ್ಯರಲ್ಲವೇ? ಕುಲೀನ ಜಾತಿಯಲ್ಲಿ ಹುಟ್ಟಿದ ಮಾತ್ರಕ್ಕೆ ಸಾಲ ಸೋಲ ಮಾಡಿ ಕಂಪ್ಯೂಟರ್ ಖರೀದಿಸಬೇಕು. ನನ್ನ ಜೊತೆಗೇ ಇರುವ ನನ್ನ  ಸಹಪಾಠಿಗೆ ಯಾವುದೇ ಗೋಜು ಇಲ್ಲದೆ ಸರ್ಕಾರವೇ ಲ್ಯಾಪ್‌ಟಾಪ್ ಕೊಡಿಸುತ್ತದೆ. ಬ್ರಿಟಿಷರನ್ನು ಒಡೆದು ಆಳುವವರೆಂದು ಜರೆದು, ಭಾರತೀಯರು ಸ್ವಾತಂತ್ರ್ಯ ಪಡೆದರೆಂದು ಇತಿಹಾಸ ಹೇಳುತ್ತದೆ. ಈಗ ನಮ್ಮವರೇ ಆದ, ನಮ್ಮಿಂದಲೇ ಆಯ್ಕೆ ಆದ ಸರ್ಕಾರಗಳು ಮಾಡುತ್ತಿರುವುದೇನು? 
 
ರಾಜಕೀಯ ನೇತಾರರೇ, ನೀವು 5 ವರ್ಷ ಅಧಿಕಾರ ಅನುಭವಿಸಿ ಹೋಗುತ್ತೀರಿ. ಆದರೆ ನಿಮ್ಮ ಸ್ವಾರ್ಥಕ್ಕೆ ಯುವ ಸಮುದಾಯದಲ್ಲಿ ದ್ವೇಷ, ಅಸೂಯೆಯ ಬೀಜಗಳನ್ನು ಬಿತ್ತಿ, ಸಮಾಜವನ್ನು ಛಿದ್ರ ಛಿದ್ರ ಮಾಡುತ್ತೀರಿ. ಭವ್ಯ ಭಾರತದ ಭವಿಷ್ಯವನ್ನು ನಿಮ್ಮ ಹಿತಾಸಕ್ತಿಗಾಗಿ ಬಲಿ ಕೊಡುತ್ತೀರಿ. 
 
ಇದುವರೆಗೂ ಶೋಷಿತರಿಗಾಗಿ ಇಷ್ಟೇಕೆ ಖರ್ಚು ಮಾಡುತ್ತೀರಿ ಎಂದು ಯಾವ ನ್ಯಾಯಾಲಯದಲ್ಲಿಯೂ ಪ್ರಕರಣ ದಾಖಲಿಸಲಾಗಿಲ್ಲ. ಏಕೆ ಒಡೆದು ಆಳುತ್ತೀರೆಂದು ಯಾರೂ ನಿಮ್ಮನ್ನು ಪ್ರಶ್ನಿಸಿಲ್ಲ. ಪರಿಶಿಷ್ಟರಿಗಾಗಿ ನೀವು ಮಾಡುವ ಯೋಜನೆಗಳನ್ನು, ಕೊಡುವ ಯಾವುದೇ ಸವಲತ್ತುಗಳನ್ನು ಇದುವರೆಗೂ ಯಾರೂ ಪ್ರತಿರೋಧಿಸಿಲ್ಲ. ಕನಿಷ್ಠಪಕ್ಷ ಸರ್ಕಾರದ ಸೇವೆಯಲ್ಲಿರುವವರಿಗೆ ಅವರವರ ಅರ್ಹತೆ, ಸೇವಾನುಭವ, ದಕ್ಷತೆ, ಹಿರಿತನವನ್ನು ಆಧರಿಸಿ ಬಡ್ತಿ ನೀಡುವ ನಿಯಮಗಳನ್ನಾದರೂ ಪಾಲಿಸಿ,  ಸುಪ್ರೀಂ ಕೋರ್ಟ್‌ನ ಆಶಯವನ್ನು ಅರಿತು, ಪರಿಪಾಲಿಸಿ. ನ್ಯಾಯಾಲಯದ ನ್ಯಾಯಸಮ್ಮತವಾದ ನಿರ್ಣಯವನ್ನು ಪುನರ್‌ಪರಿಶೀಲನಾ ಅರ್ಜಿ ಹಾಕುವ ಮೂಲಕ ಉದ್ದೇಶಪೂರ್ವಕವಾಗಿ ವಿಳಂಬವಾಗುವಂತೆ ಮಾಡಬೇಡಿ. ಸಾಮಾನ್ಯ ವರ್ಗದ ಜನರಿಗೆ ಹಲವಾರು ದಶಕಗಳಿಂದ ಉಂಟಾಗುತ್ತಿರುವ ಅನ್ಯಾಯವನ್ನು ವಿನಾಕಾರಣ ಮುಂದುವರಿಸಿ ಹತಾಶೆಯುಂಟು ಮಾಡಬೇಡಿ. 
 
ಬಡ್ತಿಗೆ ಜಾತಿಯೊಂದನ್ನೇ ಆಧಾರವಾಗಿಟ್ಟುಕೊಳ್ಳುವ ಪದ್ಧತಿಯನ್ನು ಕೈಬಿಟ್ಟು, ಸಾಮಾನ್ಯ ವರ್ಗದವರಿಗೂ ನ್ಯಾಯ ನೀಡಿ.  ಪರಿಶಿಷ್ಟ ಜಾತಿ, ಪಂಗಡದ ಒಬ್ಬ ಪೊಲೀಸ್‌ ಕಾನ್‌ಸ್ಟೆಬಲ್ ನಿವೃತ್ತನಾಗುವ ವೇಳೆಗೆ ಡಿವೈಎಸ್‌ಪಿ ಹಂತಕ್ಕೆ ಬರುತ್ತಾನೆ. ಆದರೆ ಸಾಮಾನ್ಯ ವರ್ಗದ ಕಾನ್‌ಸ್ಟೆಬಲ್, ಇನ್‌ಸ್ಪೆಕ್ಟರ್ ಹಂತವನ್ನೂ ತಲುಪುವುದಿಲ್ಲ. ಶೋಷಿತರೆಂಬ ಕಾರಣಕ್ಕೆ ಇದುವರೆಗೆ ತೋರಿದ ಕಾಳಜಿ, ಕರುಣೆಯನ್ನು ನ್ಯಾಯಾಲಯದ ಸೂಚನೆಗೆಅನುಗುಣವಾಗಿಯಾದರೂ ಸಾಮಾನ್ಯ ವರ್ಗಕ್ಕೆ ತೋರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಸಾಮಾಜಿಕ ನ್ಯಾಯ ಪಾಲಿಸಲಿ, ಸಂವಿಧಾನದ ಆಶಯಗಳನ್ನು ಪರಿಪೂರ್ಣಗೊಳಿಸಲಿ. ಬಡವರು, ಶೋಷಿತರು ಪರಿಶಿಷ್ಟರಲ್ಲಷ್ಟೇ ಇಲ್ಲವೆಂಬುದನ್ನು ಈಗಲಾದರೂ ಆಳುವವರು ಅರಿಯಲಿ.  
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT