ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯಾನಿಗನ್‌ ಆಸ್ತಿ ವಿವಾದ: ಸಿಐಡಿ ವರದಿ ಸಲ್ಲಿಸಲು ‘ಸುಪ್ರೀಂ’ ಸೂಚನೆ

Last Updated 17 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ
ನವದೆಹಲಿ: ಮೈಸೂರಿನಲ್ಲಿ ವಾಸವಾಗಿದ್ದ ಬ್ರಿಟನ್‌ ಮೂಲದ ಸ್ಟಫಿಂಗ್ (ಚರ್ಮ ಪ್ರಸಾದನ) ಕಲಾವಿದ, ಎಡ್ವಿನ್‌ ಜ್ಯೂಬಟ್ ವ್ಯಾನಿಗನ್ ಅವರ ₹ 500 ಕೋಟಿ ಮೌಲ್ಯದ ಆಸ್ತಿ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ನಡೆಸಿರುವ ತನಿಖಾ ವರದಿಯನ್ನು ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.
 
ಆಸ್ತಿ ವಿವಾದ ಕುರಿತು ಹೈಕೋರ್ಟ್‌ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ವ್ಯಾನಿಗನ್‌ ಅವರ ಸಂಬಂಧಿ ಎಂದು ಹೇಳಿಕೊಂಡಿರುವ ಫ್ರಾನ್ಸ್‌ ಮೂಲದ ಮಹಿಳೆ ಟಿಲ್ಲಿ ಗಿಫರ್ಡ್‌ ಅವರ ಮೇಲ್ಮನವಿಯ ವಿಚಾರಣೆಯನ್ನು ಶುಕ್ರವಾರ ನಡೆಸಿದ ನ್ಯಾಯಮೂರ್ತಿ ರಂಜನ್‌ ಗೊಗೋಯ್‌ ನೇತೃತ್ವದ ತ್ರಿಸದಸ್ಯ ಪೀಠವು, ಏಪ್ರಿಲ್‌ 18ರೊಳಗೆ ವರದಿ ಸಲ್ಲಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿತು.
 
ವ್ಯಾನಿಗನ್‌ ಅವರ ಮೈಸೂರಿನ ಬಂಗಲೆ, ಅವರಿಗೆ ದೊರೆತಿರುವ ಸ್ಮರಣಿಕೆಗಳು, ಕೇರಳದ ವೈನಾಡಿನಲ್ಲಿರುವ 220 ಎಕರೆ ಕಾಫಿ ತೋಟದ ಒಡೆತನಕ್ಕೆ ಸಂಬಂಧಿಸಿದಂತೆ ಮುಂದಿನ ವಿಚಾರಣೆ ನಡೆಯುವವರೆಗೆ ಹೈಕೋರ್ಟ್‌ ನೀಡಿರುವ ತೀರ್ಪಿನಂತೆಯೇ ಯಥಾಸ್ಥಿತಿ ಕಾಪಾಡಬೇಕು ಎಂದು ಕೋರ್ಟ್‌ ಆದೇಶಿಸಿತು.
 
ವ್ಯಾನಿಗನ್‌ ಅವರ ದತ್ತು ಪುತ್ರ ಎಂದು ಹೇಳಿಕೊಂಡಿದ್ದ ಮೈಕೆಲ್‌ ಫ್ಲಾಯ್ಡ್‌ ಈಶ್ವರ್‌ ಅವರ ವಿರುದ್ಧ ಸ್ವತಃ ವ್ಯಾನಿಗನ್‌ ವಂಚನೆ ಆರೋಪದಡಿ ದೂರು ಸಲ್ಲಿಸಿದ್ದರಿಂದ ಮೈಸೂರಿನ ನಜರಬಾದ್‌ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
 
ಇದನ್ನು ಪ್ರಶ್ನಿಸಿ ಈಶ್ವರ್‌ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್‌ ಎಫ್‌ಐಆರ್‌ ರದ್ದುಪಡಿಸುವಂತೆ ತಿಳಿಸಿತ್ತಲ್ಲದೆ, ಸಿಐಡಿ ತನಿಖೆಗೆ ಆದೇಶಿಸಿತ್ತು.
ಟ್ಯಾಕ್ಸಿಡೆರ್ಮಿ (ಚರ್ಮ ಪ್ರಸಾದನ) ಕಲೆಯನ್ನು ಕರಗತ ಮಾಡಿಕೊಂಡಿದ್ದ ವ್ಯಾನಿಗನ್‌, ಸ್ವಾತಂತ್ರ್ಯ ಪೂರ್ವದಲ್ಲೇ ಬ್ರಿಟನ್‌ನಿಂದ ಮೈಸೂರಿಗೆ ಬಂದು ನೆಲೆಸಿದ್ದರಲ್ಲದೆ, ಮೈಸೂರು ಮಹಾರಾಜ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಆಪ್ತರಾಗಿದ್ದರು. ಮಹಾರಾಜರು ಇವರ ಕಲೆಗೆ ಮಾರು ಹೇಗಿ ಕೇರಳದ ವೈನಾಡಿನಲ್ಲಿ 220 ಎಕರೆ ಕಾಫಿ ತೋಟ, ಮೈಸೂರಿನಲ್ಲಿ ದೊಡ್ಡ ಬಂಗಲೆ ಹಾಗೂ ಜಮೀನನ್ನು ನೀಡಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT