ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಟೆನಾಡಿನಲ್ಲಿ ಸಂಚಲನ ಮೂಡಿಸಿದ ‘ವುಶು’

ಧಾರವಾಡದಲ್ಲಿ ನಡೆದ ರಾಜ್ಯ ಒಲಿಂಪಿಕ್ಸ್‌ನಲ್ಲಿ ಒಂದು ಚಿನ್ನ, ಮೂರು ಕಂಚಿನ ಪದಕಗಳ ಗರಿ
Last Updated 18 ಫೆಬ್ರುವರಿ 2017, 5:39 IST
ಅಕ್ಷರ ಗಾತ್ರ
ಚಿತ್ರದುರ್ಗ: ಧಾರವಾಡದಲ್ಲಿ ಈಚೆಗೆ ನಡೆದ ರಾಜ್ಯ ಒಲಿಂಪಿಕ್ಸ್‌ನ ‘ವುಶು’ ಸ್ಪರ್ಧೆಯ 70 ಕೆ.ಜಿ. ಒಳಗಿನ ವಿಭಾಗದಲ್ಲಿ ಚಿತ್ರದುರ್ಗದ ಟಿ.ಆರ್.ಸ್ವರೂಪಾ ಇದೇ ಪ್ರಥಮ ಬಾರಿಗೆ ಜಿಲ್ಲೆಗೆ ಚಿನ್ನದ ಪದಕ ಗೆದ್ದುಕೊಟ್ಟಿದ್ದಾರೆ.
 
ರಾಜ್ಯ ಒಲಿಂಪಿಕ್ಸ್‌ನಲ್ಲಿ ಇದೇ ಪ್ರಥಮ ಬಾರಿಗೆ ವುಶು ಸ್ಪರ್ಧೆ ಆಯೋಜಿಸಲಾಗಿತ್ತು. ಜಿಲ್ಲೆಯ ಇನ್ನೂ ಮೂವರು ಸ್ಪರ್ಧಿಗಳು ಈ ಸ್ಪರ್ಧೆಯಲ್ಲಿ ಕಂಚಿನ ಪದಕ ಪಡೆದಿದ್ದಾರೆ. ಯುವತಿ ಸ್ವರೂಪಾ ನಾಲ್ಕು ತಿಂಗಳಿಂದ ದಿನಕ್ಕೆ ಎರಡು ಗಂಟೆಗಳ ಕಾಲ ವುಶುಗಾಗಿ ಮೀಸಲಿಟ್ಟಿದ್ದಾರೆ. ಅಲ್ಪಾವಧಿಯಲ್ಲೇ ಅಭ್ಯಾಸದಲ್ಲಿ ತೊಡಗಿ ಚಿನ್ನದ ಪದಕ ಪಡೆದಿದ್ದಾರೆ.
 
ಪ್ರೇರಣೆ: ‘ಮನೆಯಲ್ಲಿ ನಿತ್ಯ ವ್ಯಾಯಾಮ ಮಾಡಲು ಪ್ರಾರಂಭಿಸಿದೆ. ದೈಹಿಕ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಕರಾಟೆ ಕಲಿಯಬೇಕು ಎಂಬ ಆಸೆ ಮೂಡಿತು. ಐದು ತಿಂಗಳ ಹಿಂದೆ ನಗರದಲ್ಲಿ ನಡೆದ ವುಶು ಸ್ಪರ್ಧೆ ನೋಡಿದಾಗ ಸೇರಲು ನಿರ್ಧರಿಸಿದೆ’ ಎನ್ನುತ್ತಾರೆ ಸ್ವರೂಪಾ. 
 
‘ಮನೆಯಲ್ಲಿ ಕೇಳಿದಾಗ ಮಹಿಳೆಯರಿಗೆ ಇಂತಹ ವಿದ್ಯೆ ಏಕೆ ಎಂದು ಪೋಷಕರು ಪ್ರಶ್ನಿಸಿದರು. ಆದರೂ ಹಟ ಮಾಡಿ ಸೇರಿದೆ. ಪದಕ ಗೆದ್ದ ನಂತರ ಖುಷಿಪಟ್ಟರು’ ಎನ್ನುತ್ತಾರೆ ಅವರು.
 
ನಿರಂತರ ತರಬೇತಿ: ನಗರದಲ್ಲಿ ಒಂದು ತಿಂಗಳಿಂದ ವುಶು ತರಬೇತಿ ಪಡೆಯುತ್ತಿದ್ದ ವಿ.ಕಿಶೋರ್‌ಕುಮಾರ್, ಪ್ರಥಮ ಬಾರಿಗೆ ರಾಜ್ಯಮಟ್ಟದ ಸ್ಪರ್ಧೆಯ 90 ಕೆ.ಜಿ. ಒಳಗಿನ ವಿಭಾಗದಲ್ಲಿ ಕಂಚಿನ ಪದಕ ಪಡೆದಿದ್ದಾರೆ.
 
‘ನಾನು ಮೂಲತಃ ಫುಟ್‌ಬಾಲ್ ಆಟಗಾರ. ವಿಭಾಗೀಯ ಮಟ್ಟಕ್ಕೆ ಮೂರು ಬಾರಿ, ರಾಜ್ಯಮಟ್ಟಕ್ಕೆ ಒಂದು ಬಾರಿ ಫುಟ್‌ಬಾಲ್‌ ಟೂರ್ನಿಗೆ ಆಯ್ಕೆಯಾಗಿದ್ದೇನೆ. ಐದನೇ ತರಗತಿಯಿಂದ ಪಿ.ಯು.ವರೆಗೂ ಶಿಕ್ಷಣ ಇಲಾಖೆ ಆಯೋಜಿಸಿದ ಜಿಲ್ಲಾ ಮಟ್ಟದ ಕ್ರೀಡಾಕೂಟದ ಫುಟ್‌ಬಾಲ್‌ ಸ್ಪರ್ಧೆಯಲ್ಲಿ ನಾಲ್ಕೈದು ಬಾರಿ ಚಿನ್ನದ ಪದಕ ಗಳಿಸಿದ್ದೇನೆ. ವುಶುನಲ್ಲಿ ಆಸಕ್ತಿ ಹೆಚ್ಚಿದ ನಂತರ ತರಬೇತಿ ಪಡೆಯುತ್ತಿದ್ದೇನೆ’ ಎನ್ನುತ್ತಾರೆ ಅವರು.
 
ರಾಜ್ಯ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಪಡೆದ ರೇಣುಕಾ ಕವಾಡಿ 52 ಕೆ.ಜಿ.ಒಳಗಿನ ಮಹಿಳೆಯರ ವಿಭಾಗದಲ್ಲಿ 2013 ರಿಂದ ಈವರೆಗೆ 
ರಾಜ್ಯಮಟ್ಟದಲ್ಲಿ ನಡೆದ ಸ್ಪರ್ಧೆಗಳಲ್ಲಿ ಸತತ ನಾಲ್ಕು ಬಾರಿ ಚಿನ್ನದ ಪದಕ ಗಳಿಸಿದ್ದಾರೆ. 
 
‘ಫೆಡರೇಷನ್ ಕಪ್‌ನಲ್ಲಿ ಬೆಳ್ಳಿ ಪದಕ ಪಡೆದ ಕಾರಣ ಬಿಎಸ್ಸಿ  ಕೃಷಿ ವಿಭಾಗಕ್ಕೆ ಕ್ರೀಡಾ ಕೋಟಾದಡಿ ಸೀಟು ಸಹ ಲಭಿಸಿತು. ಇದಕ್ಕೆಲ್ಲ ನನಗೆ ತರಬೇತಿ ನೀಡುತ್ತಿರುವ ಗೋಪಾಲ್ ಅವರೇ ಕಾರಣ’ ಎಂದರು. 
 
‘ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟ ಮತ್ತು ಒಲಿಂಪಿಕ್ಸ್‌ನಲ್ಲಿ ದೇಶವನ್ನು ವುಶು ಕ್ರೀಡೆಯಲ್ಲಿ ಭಾಗವಹಿಸಿ ದೇಶ ಮತ್ತು ರಾಜ್ಯಕ್ಕೆ ಕೀರ್ತಿ ತರುವುದೇ ನನ್ನ ಗುರಿ’ಎನ್ನುತ್ತಾರೆ ಕಂಚಿನ ಪದಕ ಪಡೆದ ನಾಗರಾಜ್ ಕವಾಡಿ.
 
ಬಡತನದಲ್ಲೂ ಸಾಧನೆಯ ಛಲ ಹೊಂದಿರುವ ನಾಗರಾಜ್, ನಾಲ್ಕು ವರ್ಷಗಳಲ್ಲಿ ಮೂರು ಕಂಚಿನ ಪದಕ, ಬೆಳ್ಳಿ ಪದಕಗಳನ್ನು 60 
ಕೆ.ಜಿ. ಒಳಗಿನವರ ಸ್ಪರ್ಧೆಯಲ್ಲಿ ಜಯಿಸಿದ್ದಾರೆ. 
 
ಸ್ವರೂಪಾ, ರೇಣುಕಾ ಕವಾಡಿ, ಕಿಶೋರ್‌ ಕುಮಾರ್ ಐಎಎಸ್, ಐಪಿಎಸ್ ಸೇರಿದಂತೆ ಉನ್ನತ ಸರ್ಕಾರಿ ಹುದ್ದೆಯನ್ನು ಪಡೆಯಬೇಕು ಎಂಬ ಹಂಬಲ ಹೊಂದಿದ್ದಾರೆ. ನಾಗರಾಜ್ ವುಶು ಕ್ರೀಡೆಯಲ್ಲೇ ಹೆಚ್ಚಿನ ಸಾಧನೆ ಮಾಡಬೇಕು ಎಂಬ ಗುರಿ ಇದೆ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.
 
ತಾಳ್ಮೆ ಇದ್ದರೆ ಪ್ರತಿಫಲ: ‘ಯಾವುದೇ ವಿದ್ಯೆಯಾಗಲಿ ಕಲಿಯುವ ದೃಢ ಮನಸ್ಸಿರಬೇಕು. ಈ ಮೂಲಕ ಜಿಲ್ಲೆಗೆ ಕೀರ್ತಿ ತರಬಹುದು ಎಂಬುದಕ್ಕೆ ಈ ಕ್ರೀಡಾಪಟುಗಳೇ ಉತ್ತಮ ನಿದರ್ಶನ’ ಎನ್ನುತ್ತಾರೆ ಇದೇ ಮೊದಲ ಬಾರಿ ತರಬೇತುದಾರನಾಗಿ ಜಿಲ್ಲೆಯನ್ನು ಪ್ರತಿನಿಧಿಸಿದ ಕೆ.ದೇವರಾಜ್.
 
ಸ್ವ ರಕ್ಷಣೆಯ ಕಲೆ
‘ಕರಾಟೆ, ಕುಂಗ್‌ ಫು, ಟೇಕ್ವಾಂಡೊ, ವುಶು ಸಮರಕಲೆಗಳು ಎಂಬಭಾವನೆ ಈ ಮೊದಲು ಅನೇಕರಲ್ಲಿ ಇತ್ತು. ಆದರೆ,
ಈಗ ಮಹಿಳೆಯರು ಸ್ವರಕ್ಷಣೆಗೆ ಈ ಕಲೆಯಲ್ಲಿ ತೊಡಗುವ ಅನಿವಾರ್ಯತೆ ಇದೆ’ ಎನ್ನುತ್ತಾರೆ ವುಶು ಜಿಲ್ಲಾ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕೆ.ಗೋಪಾಲ್.
 
‘ದೈಹಿಕ ಸಾಮರ್ಥ್ಯ, ಏಕಾಗ್ರತೆ, ಕಷ್ಟ ಎದುರಿಸುವ ತಾಕತ್ತು ಇಂತಹ ಕಲೆಗಳಿಂದ ಮಾತ್ರ ಸುಲಭವಾಗಿ ದೊರೆಯಲು ಸಾಧ್ಯ. ಜಿಲ್ಲೆಯಲ್ಲಿ 2004ರಿಂದ ವುಶು ತರಬೇತಿ ನೀಡುತ್ತಿದ್ದೇನೆ. ಆದರೆ, ಈ ಕ್ರೀಡೆಗೆ ಅನುದಾನದ ಕೊರತೆ ಇದೆ. ಇಲಾಖೆಯಿಂದ ಪ್ರೋತ್ಸಾಹ ದೊರೆತರೆ, ನೂರಾರು ಕ್ರೀಡಾಪಟುಗಳಿಗೆ ತರಬೇತಿ ನೀಡಿ ಚಿತ್ರದುರ್ಗಕ್ಕೆ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ತರಲು
ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ’ ಎಂದು ಹೇಳುತ್ತಾರೆ ಅವರು.
 
* ಸರ್ಕಾರ ವುಶು ಕ್ರೀಡಾಪಟುಗಳಿಗೆ ಹೆಚ್ಚಿನ ಅನುದಾನ ನೀಡಿ ಪ್ರೋತ್ಸಾಹಿಸಬೇಕಿದೆ. ಈ ಸಾಧಕರನ್ನು ಜಿಲ್ಲಾಮಟ್ಟದ ಕಾರ್ಯಕ್ರಮದಲ್ಲಿ ಸನ್ಮಾನಿಸಬೇಕು.
- ರಾಮಲಿಂಗ ಶ್ರೇಷ್ಠಿ, ವುಶು ಸಂಸ್ಥೆ ಜಿಲ್ಲಾ ಘಟಕದ ಅಧ್ಯಕ್ಷ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT