ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಥಿಕ ಅಸ್ಥಿರತೆಯಿಂದ ದೇಶದ ವಿನಾಶ

ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ.ಹರಿಪ್ರಸಾದ್‌ ಆರೋಪ
Last Updated 18 ಫೆಬ್ರುವರಿ 2017, 7:16 IST
ಅಕ್ಷರ ಗಾತ್ರ
ಕೆಜಿಎಫ್: ದೇಶವನ್ನು ವಿನಾಶದೆಡೆಗೆ ಕರೆದೊಯ್ಯುತ್ತಿರುವ ನರೇಂದ್ರ ಮೋದಿಸರ್ಕಾರ ದೇಶವನ್ನು ಆರ್ಥಿಕ ಅಸ್ಥಿರತೆಯತ್ತ ಕರೆದೊಯ್ಯುತ್ತಿದೆ  ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ.ಹರಿಪ್ರಸಾದ್‌ ಆರೋಪಿಸಿದರು.
 
ಕ್ಯಾಸಂಬಳ್ಳಿ ಹೊರವಲಯದಲ್ಲಿ ಶುಕ್ರವಾರ ಕಾಂಗ್ರೆಸ್‌ ನಡಿಗೆ–ಸುರಾಜ್ಯದ ಕಡೆಗೆ ಎಂಬ ಘೋಷಣೆಯಡಿಯಲ್ಲಿ ನಡೆದ ಬೃಹತ್‌ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದರು.
 
ಹಿಂದೂ ಧರ್ಮದ ಗುತ್ತಿಗೆ ಪಡೆದಿದ್ದೇನೆ ಎಂಬಂತೆ ವರ್ತಿಸುವ ನರೇಂದ್ರ ಮೋದಿಯವರು, ಹಿಂದುಗಳ ಪೂಜೆ ಮಾಡುವ ಹಣವನ್ನು ರದ್ಧತಿಗೆ ಸಮೀಕರಿಸಿದರು. ಮಹಾತ್ಮ ಗಾಂಧಿಯವರನ್ನು ನಕಲು ಮಾಡುವ ಹುನ್ನಾರವನ್ನು ಈಗ ಮಾಡುತ್ತಿದ್ದಾರೆ ಎಂದರು.
 
ರಾಜ್ಯ ಕಾಂಗ್ರೆಸ್‌ ಕಾರ್ಯಾಧ್ಯಕ್ಷ ದಿನೇಶ್‌ಗುಂಡೂರಾವ್‌ ಮಾತನಾಡಿ, ಕೇಂದ್ರ ಸರ್ಕಾರ ಆದಾಯ ತೆರಿಗೆ ಇಲಾಖೆ ಮತ್ತು ಸಿಬಿಐನ್ನು ದುರುಪಯೋಗ ಮಾಡಿಕೊಂಡು ಕಾಂಗ್‌್ರೆಸ್ ಸರ್ಕಾರವನ್ನು ಅಸ್ಥಿರತೆಗೊಳಿಸಲು ಯತ್ನಿಸುತ್ತಿದೆ. ಇದೇ ರೀತಿ ಬಿಜೆಪಿ ಮುಂದುವರಿದರೆ ಕರ್ನಾಟಕದ ಜನ ಮುಂದಿನ ಚುನಾವಣೆಯಲ್ಲಿ ಅವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದರು.
 
ಆರೋಗ್ಯ ಸಚಿವ  ರಮೇಶ್‌ಕುಮಾರ್‌ ಮಾತನಾಡಿ, ರಾಜಕೀಯ ಪಕ್ಷಗಳ ಗುರ್ತು ನೋಡಿ ಮತ ಹಾಕುವ ಕಾಲ ಹೊರಟು ಹೋಗಿದೆ. ಜನರ ಮಧ್ಯೆ ಇದ್ದು, ಕೆಲಸ ಮಾಡಿದರೆ ಖಂಡಿತವಾಗಿಯೂ ಜನ ಮನ್ನಣೆ ನೀಡುತ್ತಾರೆ. ದೇಶದ ಜನ ಭ್ರಷ್ಟರಾಗಿಲ್ಲ. ರಾಜಕಾರಣಿಗಳು ಭ್ರಷ್ಟರಾಗಿದ್ದೇವೆ ಎಂದರು.
 
ಇಂದಿರಾಗಾಂಧಿಯವರು ಬ್ಯಾಂಕ್‌ಗಳನ್ನು ಬಡವರ ಮನೆ ಬಾಗಿಲಿಗೆ ತೆಗೆದುಕೊಂಡು ಹೋದರೆ, ಮೋದಿಯವರು ಬಡವರ ದುಡ್ಡನ್ನು ಬ್ಯಾಂಕಿನಲ್ಲಿರಿಸಿ ಹಣ ಕೊಡದೆ ಸತಾಯಿಸಿದರು ಎಂದು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌ ಹೇಳಿದರು. ಕೆಜಿಎಫ್‌ನಲ್ಲಿ ಯಾವುದೇ ಕಾರಣಕ್ಕೂ ಕಸ ಹಾಕುವುದಿಲ್ಲ. ಬೆಂಗಳೂರಿಗೆ ಸಮೀಪದಲ್ಲಿ 1000 ಎಕರೆ ಬರಡು ಪ್ರದೇಶವನ್ನು ಹುಡುಕಲಾಗುತ್ತಿದೆ. ಅಲ್ಲಿ ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡಲಾಗುವುದು ಎಂದರು.
 
ಸಚಿವ ರಾಮಲಿಂಗಾರೆಡ್ಡಿ, ಎಐಸಿಸಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಧ್ಯಕ್ಷ ಕೆ.ರಾಜು, ಸಂಸದ ಕೆ.ಎಚ್‌.ಮುನಿಯಪ್ಪ, ಗುಂಟೂರು ಶಾಸಕ ಶೇಕ್‌ ಮಸ್ತಾನ್‌, ಸಂಸದ ಚಂದ್ರಪ್ಪ, ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ, ಮಾಜಿ ಸಭಾಪತಿ ವಿ.ಆರ್.ಸುದರ್ಶನ್‌, ರಾಜ್ಯ ಮಹಿಳಾ ಕಾಂಗ್ರೆಸ್‌ ಉಪಾಧ್ಯಕ್ಷೆ ರೂಪಕಲಾ ಶಶಿಧರ್‌ ಮಾತನಾಡಿದರು.
 
ಮುಖಂಡರಾದ ಕಮಲಮ್ಮ, ರೇವಣ್ಣ,ನಗರಸಭೆ ಅಧ್ಯಕ್ಷ ರಮೇಶ್‌ಕುಮಾರ್‌, ನಿಸಾರ್‌ ಅಹ್ಮದ್‌, ರಾಮಚಂದ್ರಪ್ಪ, ಸುಧೀಂದ್ರ, ಅನಿಲ್‌ಕುಮಾರ್, ರಾಧಾಕೃಷ್ಣರೆಡ್ಡಿ ಮತ್ತಿತರರು ಹಾಜರಿದ್ದರು. ಕೆ.ಚಂದ್ರಾರೆಡ್ಡಿ ಕಾರ್ಯಕ್ರಮ ನಿರ್ವಹಿಸಿದರು.
 
ಗೊಂದಲ: ಸಮಾವೇಶಕ್ಕಾಗಿ ಆಗಮಿಸಿದ್ದ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಮಂದಿ ಒಮ್ಮೆಲೆ ಊಟಕ್ಕೆ ಧಾವಿಸಿದ್ದರಿಂದ, ಕೊಂಚ ಕಾಲ ಊಟಕ್ಕಾಗಿ ಪರದಾಡಬೇಕಾಯಿತು. ನಂತರ ಪೊಲೀಸರು ಮತ್ತು ಕಾರ್ಯಕರ್ತರ ನೆರವಿನಿಂದ ಪರಿಸ್ಥಿತಿಯನ್ನು ತಹಬದಿಗೆ ತರಲಾಯಿತು.
 
* ಏಳು ಬಾರಿ ಲೋಕಸಭಾ ಸದಸ್ಯರಾದ ಕೆ.ಎಚ್‌.ಮುನಿಯಪ್ಪ ದೊಡ್ಡ ಜಾತಿಯಲ್ಲಿ ಹುಟ್ಟಿದ್ದರೆ, ಇಷ್ಟೊತ್ತಿಗೆ ಮುಖ್ಯಮಂತ್ರಿಯಾಗುತ್ತಿದ್ದರು’
- ಬಿ.ಕೆ.ಹರಿಪ್ರಸಾದ್‌, ಎಐಸಿಸಿ ಪ್ರಧಾನ ಕಾರ್ಯದರ್ಶಿ
 
* ರಾಜ್ಯದ ಪ್ರಥಮ ಮುಖ್ಯ  ಮಂತ್ರಿ ಕೆ.ಸಿ.ರೆಡ್ಡಿ ಹೆಸರಿನಲ್ಲಿ ಹತ್ತು ಎಕರೆ ಪ್ರದೇಶದಲ್ಲಿ ಸಂಕೀರ್ಣವನ್ನು ಶೀಘ್ರದಲ್ಲಿಯೇ ನಿರ್ಮಿಸಲಾಗುವುದು’
ಕೆ.ಎಚ್‌.ಮುನಿಯಪ್ಪ, ಲೋಕಸಭಾ ಸದಸ್ಯ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT