ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲ್ವರ ಮೇಲೆ ಕಾಡಾನೆ ದಾಳಿ: ರೈತ ಸಾವು

ಕೆಂಪೆನಾಲ್‌ ಗ್ರಾಮದ ನಿವಾಸಿ ಬಾಬು ಪೂಜಾರಿ ಸಾವು
Last Updated 18 ಫೆಬ್ರುವರಿ 2017, 8:39 IST
ಅಕ್ಷರ ಗಾತ್ರ
ಸಕಲೇಶಪುರ: ತಾಲ್ಲೂಕಿನ ಬಾಗೆ ಗ್ರಾ.ಪಂ ವ್ಯಾಪ್ತಿಯ ದಿವಾನ್‌ಬೆಟ್ಟ, ಮಳಲಿ ಗ್ರಾ.ಪಂ ವ್ಯಾಪ್ತಿಯ ಕಬ್ಬಿನಗದ್ದೆ  ಗ್ರಾಮಗಳಲ್ಲಿ ಶುಕ್ರವಾರ ಇಬ್ಬರು ಮಹಿಳೆಯರು ಸೇರಿ ನಾಲ್ವರು ಕಾಡಾನೆಗಳ ದಾಳಿಗೆ ಗುರಿಯಾಗಿದ್ದು, ರೈತರೊಬ್ಬರು ಸತ್ತಿದ್ದಾರೆ.
 
ಕೆಂಪೆನಾಲ್‌ ಗ್ರಾಮದ ನಿವಾಸಿ ಬಾಬು ಪೂಜಾರಿ (45) ಮೃತಪಟ್ಟವರು. ಕಾಫಿ ತೋಟದಿಂದ ಮರಳುವಾಗ ಇವರ ಮನೆಗೆ ಹತ್ತಿರವೇ ಕಾಡಾನೆಗೆ ಸಿಕ್ಕಿಬಿದ್ದರು.  
 
ಇದೇ ಕಾಡಾನೆ ಬೆಳಿಗ್ಗೆ ಗ್ರಾಮಸ್ಥರಾದ ಮಾಲಾ, ಕಸ್ತೂರಮ್ಮ ಅವರನ್ನು ಅಟ್ಟಾಡಿಸಿದೆ. ಮಾಲಾ ಅವರನ್ನು ಸೊಂಡಿಲಿಂದ ತಳ್ಳಿದ್ದು, ಅವರು ಕಾಫಿ ಗಿಡದ ಮೇಲೆ ಬಿದ್ದು ಮೂಳೆ ಮುರಿದಿದೆ. ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ತಪ್ಪಿಸಿಕೊಂಡು ಓಡುವಾಗ ಅಸ್ವಸ್ಥರಾದ ಕಸ್ತೂರಮ್ಮ ಅವರನ್ನು ಕ್ರಾಫರ್ಡ್‌ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲು ಮಾಡಲಾಗಿದೆ.
 
ದಿವಾನ್‌ಬೆಟ್ಟ ಗ್ರಾಮದಲ್ಲಿ ನಡೆದ ಪ್ರಕರಣದಲ್ಲಿ ಕಾಫಿ ಗುತ್ತಿಗೆದಾರ ಖಾದರ್ (60) ದಾಳಿಗೆ ಗುರಿಯಾಗಿದ್ದಾರೆ. ಆನೆ ದಾಳಿಗೆ ಸಿಲುಕಿದ ಇವರಿಗೆ ಎದೆ, ಕಾಲು ಹಾಗೂ ಸೊಂಟಕ್ಕೆ ಪೆಟ್ಟು ಬಿದ್ದಿದೆ. ಚಿಕಿತ್ಸೆಗಾಗಿ ಹಾಸನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
 
ಗ್ರಾಮಸ್ಥರಲ್ಲಿ ಆತಂಕ: ನಾಲ್ವರ ಮೇಲೆ ನಡೆದ ಆನೆ ದಾಳಿಯಿಂದ ಗ್ರಾಮಸ್ಥರು ಆತಂಕಗೊಂಡಿದ್ದಾರೆ. ವಲಯ ಅರಣ್ಯ ಇಲಾಖೆ ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
 
ಸ್ಥಳಕ್ಕೆ ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಯಡೇಹಳ್ಳಿ ಆರ್‌. ಮಂಜುನಾಥ್‌, ಜಿ.ಪಂ. ಸದಸ್ಯ ಸುಪ್ರದೀಪ್ತ ಯಜಮಾನ್‌ ಅವರೂ ಭೇಟಿ ನೀಡಿದ್ದರು.
ಬಾಳ್ಳುಪೇಟೆ, ಬಾಗೆ ಹಾಗೂ ಮಳಲಿ ವ್ಯಾಪ್ತಿಯಲ್ಲಿ ಆನೆ ದಾಂದಲೆ ಹೆಚ್ಚಿದೆ. ಈ ಸಮಸ್ಯೆಗೆ ಶಾಶ್ವತ  ಪರಿಹಾರ ಒದಗಿಸಬೇಕು ಎಂದು ಮನವಿ ಸಲ್ಲಿಸಿದರೂ ಸರ್ಕಾರ, ಅರಣ್ಯ  ಇಲಾಖೆ ಕ್ರಮಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
 
ಡಿಎಫ್‌ಒ ವಿರುದ್ಧ ಆಕ್ರೋಶ:  ರೋಗಿಗಳು ಆಸ್ಪತ್ರೆಗೆ ದಾಖಲಾಗಿದ್ದ ಸರ್ಕಾರಿ ಆಸ್ಪತ್ರೆಗೆ ಡಿಎಫ್‌ಒ ಭೇಟಿ ನೀಡಿದ್ದು, ಈ ಸಂದರ್ಭದಲ್ಲಿ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಲು ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಎಂದು ಆಗ್ರಹಪಡಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
 
ನಿಷೇಧಾಜ್ಞೆ ಜಾರಿ: ಬೆಳಗೋಡು ಹೋಬಳಿ ವಡೂರು, ಹಳೇಕೆರೆ, ಕಿರುಹುಣಸೆ ಮತ್ತು ಕಸಬಾ ಹೋಬಳಿ ಕಬ್ಬಿನಗದ್ದೆ, ಮಠಸಾಗರ ಗ್ರಾಮಗಳ ಸುತ್ತಮುತ್ತಲಿನ ವ್ಯಾಪ್ತಿಯಲ್ಲಿ ಫೆ.17ರಿಂದ ಫೆ. 22ರವರೆಗೆ  ಪ್ರತಿದಿನ ಬೆ.6ರಿಂದ ಸಂಜೆ 6ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
 
ಸಾರ್ವಜನಿಕರ ಓಡಾಟವನ್ನು ನಿರ್ಬಂಧಿಸಲಾಗಿದೆ. ದೂರವಾಣಿ ಮೂಲಕ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವ ಸಲ್ಲಿಸಿ ಅವರ ನಿರ್ದೇಶನದ ಮೇರೆಗೆ ಆದೇಶ ಹೊರಡಿಸಲಾಗಿದೆ ಎಂದು ತಹಶೀಲ್ದಾರ್‌  ಜಿ.ಬಿ. ನಾಗಭೂಷಣ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT