ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹4 ಕೋಟಿಯಿಂದ ₹60ಲಕ್ಷಕ್ಕೆ ಇಳಿದ ವೆಚ್ಚ

ಶಾಸಕರ ವೈದ್ಯಕೀಯ ಬಿಲ್ ನೈಜತೆ ಪರಿಶೀಲನೆ
Last Updated 19 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಮಾಜಿ ಶಾಸಕರು ನಕಲಿ ಬಿಲ್‌ ನೀಡಿ ವೈದ್ಯಕೀಯ ವೆಚ್ಚ ಮರುಪಾವತಿಗೆ ಯತ್ನಿಸಿದ ಹಗರಣವನ್ನು ಸಿಐಡಿ ತನಿಖೆಗೆ ವಹಿಸಿದ ಬಳಿಕ ವಾರ್ಷಿಕ ₹4 ಕೋಟಿ ಮೊತ್ತದಷ್ಟಿದ್ದ ಮರುಪಾವತಿ ವೆಚ್ಚ ಏಕಾಏಕಿ ₹60 ಲಕ್ಷಕ್ಕೆ ಇಳಿದಿದೆ.

ಶಾಸಕರು, ಮಾಜಿ ಶಾಸಕರು ತಾವು ಮತ್ತು ಕುಟುಂಬದವರು ಆರೋಗ್ಯ ಸೇವೆ ಪಡೆದ ಬಗ್ಗೆ ಸಂಬಂಧಪಟ್ಟ ಆಸ್ಪತ್ರೆಯ ಬಿಲ್‌ ಸಲ್ಲಿಸಿ ವೈದ್ಯಕೀಯ ವೆಚ್ಚ ಮರುಪಾವತಿ ಪಡೆಯುವ ಸೌಲಭ್ಯ ಇದೆ. ಆದರೆ, ಇದಕ್ಕೆ ಮಿತಿಯಿಲ್ಲ. 2013ರಿಂದ 2015ರವರೆಗಿನ 3 ವರ್ಷದ ಮಾಹಿತಿ ಯಂತೆ ವಾರ್ಷಿಕ ಸರಾಸರಿ ₹3 ಕೋಟಿಯಿಂದ ₹4 ಕೋಟಿವರೆಗೆ ಈ ಲೆಕ್ಕ ಶೀರ್ಷಿಕೆಯಡಿ  ಜನಪ್ರತಿನಿಧಿಗಳ ಖಾತೆಗೆ ಸಂದಾಯ ಮಾಡಲಾಗಿದೆ.

ಕಾಗೋಡು ತಿಮ್ಮಪ್ಪ ಅವರು ವಿಧಾನಸಭೆ ಅಧ್ಯಕ್ಷರಾಗಿದ್ದಾಗ  ಮಾಜಿ ಶಾಸಕರು ಸಲ್ಲಿಸುತ್ತಿರುವ ಆಸ್ಪತ್ರೆ ಬಿಲ್‌ ನಕಲಿ ಎಂಬ ಸಂಶಯ ಬಂದಿತ್ತು. ಬಿಲ್‌ನ ಸತ್ಯಾಸತ್ಯತೆ ಶೋಧಕ್ಕೆ ಮುಂದಾದಾಗ, ಮೂವರು ಶಾಸಕರು ನಕಲಿ ಬಿಲ್‌ ಪಾವತಿಸಿರುವುದು ಪತ್ತೆಯಾಗಿತ್ತು.
ಕಾಗೋಡು ತಿಮ್ಮಪ್ಪ ಅವರು ಮುತುವರ್ಜಿ ವಹಿಸಿ ಹಗರಣದ ಬಗ್ಗೆ ಸಿಐಡಿ ತನಿಖೆ ನಡೆಸುವಂತೆ ಸರ್ಕಾರಕ್ಕೆ ಶಿಫಾರಸು ಮಾಡಿದ್ದರು. 2016ರ ಆಗಸ್ಟ್‌ನಲ್ಲಿ  ಗೃಹ ಇಲಾಖೆ ಈ ಸಂಬಂಧ ಆದೇಶ ಹೊರಡಿಸಿತ್ತು. 7 ತಿಂಗಳು ಕಳೆದರೂ ಸಿಐಡಿ ತನಿಖೆ ಆರಂಭವಾಗಿಲ್ಲ.

ತುಮಕೂರು ಜಿಲ್ಲೆ ಶಿರಾ ಕ್ಷೇತ್ರದ ಮಾಜಿ ಶಾಸಕ ಸ. ಲಿಂಗಯ್ಯ 2008ರಿಂದ 2015ರ ಅವಧಿಯಲ್ಲಿ ತಮ್ಮ ಸ್ವಂತ ಹಾಗೂ ಕುಟುಂಬದ ಸದಸ್ಯರ ಹೆಸರಿನಲ್ಲಿ ಪಡೆದ ಚಿಕಿತ್ಸೆಗಾಗಿ ₹4,57,393 ಮರುಪಾವತಿ ಮಾಡಲಾಗಿತ್ತು.

ತಮ್ಮ 9 ವರ್ಷದ ಮಗ ಕುಮಾರ ಆದಿತ್ಯ ಕ್ಯಾನ್ಸರ್‌ಗೆ ತುತ್ತಾಗಿ, ಮರಣ ಹೊಂದಿದ್ದಾನೆ. ಆತನ ಚಿಕಿತ್ಸಾವೆಚ್ಚ ₹4,65,581 ಮರುಪಾವತಿ ಮಾಡುವಂತೆ 2016ರಲ್ಲಿ ಆಸ್ಪತ್ರೆಯ ದಾಖಲಾತಿ ಸಹಿತ ಕಡತ ಸಲ್ಲಿಸಿದ್ದರು. 80 ವರ್ಷ ವಯಸ್ಸಿನ ಲಿಂಗಯ್ಯ ಅವರಿಗೆ 9 ವರ್ಷದ ಮಗ ಇರಲು ಹೇಗೆ ಸಾಧ್ಯ ಎಂಬ ಸಂಶಯ ಮೂಡಿತು. ದಾಖಲೆಯ ನೈಜತೆ ಪರಿಶೀಲನೆಗೆ ವಿಧಾನಸಭೆ ಸಚಿವಾಲಯ ಮುಂದಾಯಿತು. ಆದಿತ್ಯ ಎಂಬಾತನ ಜನನ ಮತ್ತು ಮರಣ ಪ್ರಮಾಣ ಪತ್ರ, ವಾಸ ದೃಢೀಕರಣದ ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಿ ಶಿರಾ ತಹಶೀಲ್ದಾರ್‌ಗೆ ಪತ್ರ ಬರೆಯಲಾಗಿತ್ತು. ಮಾಜಿ ಶಾಸಕರು ನೀಡಿದ ವಿಳಾಸದಲ್ಲಿ ಅಂತಹ ಹೆಸರಿನ ಬಾಲಕ ಯಾರೂ ಇರಲಿಲ್ಲ, ಜನನ–ಮರಣ ಪ್ರಮಾಣ ಪತ್ರಗಳೂ ಇಲ್ಲ ಎಂದು ತಹಶೀಲ್ದಾರ್ ವರದಿ ಸಲ್ಲಿಸಿದ್ದರು.

ಮಾಜಿ ಶಾಸಕರಾದ ಡಾ.ಸಿ.ಸಿ.ಕಲಕೋಟಿ ಅವರು ₹8,60,958 ಹಾಗೂ ಸುಧೀಂದ್ರರಾವ್ ಕಸಬೆ  ₹3,05,381 ಮೊತ್ತದ ಬಿಲ್‌ಗಳನ್ನು ಮರುಪಾವತಿಗೆ ಕೋರಿ ಪ್ರಸ್ತಾವನೆ ಸಲ್ಲಿಸಿದ್ದರು. ಈ ಬಿಲ್‌ಗಳು ನಕಲಿ ಎಂಬುದು ಪ್ರಾಥಮಿಕ ತನಿಖೆಯಿಂದ ದೃಢಪಟ್ಟಿತ್ತು.

ಈ ಮೂರು ಪ್ರಕರಣಗಳನ್ನು ಸಿಐಡಿ  ತನಿಖೆಗೆ ಒಪ್ಪಿಸಲಾಗಿತ್ತು. ಆಪಾದಿತರು ವಿಧಾನಸಭಾಧ್ಯಕ್ಷ ಕೆ.ಬಿ. ಕೋಳಿವಾಡ ಎದುರು ತಪ್ಪು ಒಪ್ಪಿಕೊಂಡಿದ್ದಾರೆ. ಸಿಐಡಿ ತನಿಖೆಗೆ ಆದೇಶಿಸಿರುವುದರಿಂದ ಪ್ರಕರಣ ಕೈಬಿಡಲಾಗದು ಎಂದು ಕೋಳಿವಾಡ ತಿಳಿಸಿದ್ದಾರೆ ಎನ್ನಲಾಗಿದೆ.

ಮಾಜಿ ಶಾಸಕರಿಗೂ ಇದೆ ವೈದ್ಯಕೀಯ ಭತ್ಯೆ

ಲೋಕಸಭೆ, ರಾಜ್ಯಸಭೆ ಮತ್ತು ಬೇರೆ ಯಾವುದೇ ರಾಜ್ಯದಲ್ಲೂ ಮಾಜಿ ಶಾಸಕರಿಗೆ ವೈದ್ಯಕೀಯ ವೆಚ್ಚದ ಮರುಪಾವತಿ ಹಾಗೂ ತಿಂಗಳಿಗೆ ವೈದ್ಯಕೀಯ ಭತ್ಯೆ ನೀಡುವ ಪರಿಪಾಠವಿಲ್ಲ. ಕರ್ನಾಟಕದಲ್ಲಿ ಮಾತ್ರ ಇಂತಹ ಪದ್ಧತಿ ಚಾಲ್ತಿಯಲ್ಲಿದೆ. ಮರುಪಾವತಿ ಜತೆಗೆ ಮಾಜಿ ಶಾಸಕರಿಗೆ ತಿಂಗಳಿಗೆ ₹5 ಸಾವಿರ, ಆತನ ನಿಧನದ ತರುವಾಯ ಪತ್ನಿಗೆ ತಿಂಗಳಿಗೆ ₹2,500 ಭತ್ಯೆಯನ್ನು ಅವರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತಿದೆ. ಈ ಲೆಕ್ಕಾಚಾರದಂತೆ ವೈದ್ಯಕೀಯ ಭತ್ಯೆ ರೂಪದಲ್ಲಿ ಮಾಜಿ ಶಾಸಕರಿಗೆ ₹2.40 ಕೋಟಿ ಹಾಗೂ ಶಾಸಕರ ಕುಟುಂಬಕ್ಕೆ ₹1.09 ಕೋಟಿಯಷ್ಟು ಪ್ರತಿವರ್ಷ ವೆಚ್ಚ ಮಾಡಲಾಗುತ್ತಿದೆ.

* ವೈದ್ಯಕೀಯ ವೆಚ್ಚದ ಮರುಪಾವತಿಗೆ ಸಲ್ಲಿಸುವ ಬಿಲ್‌ನ ಸತ್ಯಾಸತ್ಯತೆ ಪರಿಶೀಲಿಸಲು ಕ್ರಮ ಕೈಗೊಂಡ ಬಳಿಕ ಒಟ್ಟು ವೆಚ್ಚ ಗಮನಾರ್ಹವಾಗಿ ಇಳಿಕೆಯಾಗಿದೆ.

-ಎಸ್‌.ಮೂರ್ತಿ, ಕಾರ್ಯದರ್ಶಿ, ವಿಧಾನಸಭೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT