ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವರಾತ್ರಿಯಂದು ಮೌಲ್ವಿಸಮಾಧಿಗೆ ಗಂಧಲೇಪನ

Last Updated 20 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ
ಸಣಬಘಟ್ಟ ಸೋಮಶೇಖರ
 
ತುಮಕೂರು ಜಿಲ್ಲೆಯ ಕುಣಿಗಲ್-ಮದ್ದೂರು ಹೆದ್ದಾರಿಯಲ್ಲಿ ಹುಲಿಯೂರು ದುರ್ಗದಿಂದ ಹೊರಟು ಆರು ಕಿ.ಮೀ. ಕ್ರಮಿಸಿದರೆ ಸಿಗುವುದು ಬೀಸೇಗೌಡನದೊಡ್ಡಿ ಎಂಬ ಗ್ರಾಮ. ಅಲ್ಲಿಂದ ಎಡ ತಿರುವು ತೆಗೆದುಕೊಂಡು ಉಜ್ಜಿನಿ ಮಾರ್ಗವಾಗಿ ಐದಾರು ಫರ್ಲಾಂಗ್ ದೂರ ಕ್ರಮಿಸಿದ ಮೇಲೆ ಇನ್ನೊಂದು ಎಡ ತಿರುವಿನ ಮಣ್ಣು ರಸ್ತೆಯಲ್ಲಿ ಸ್ವಲ್ಪವೇ ದೂರ ಹೋದರೆ ಕರಡಿಗುಡ್ಡೆಯ ತಪ್ಪಲು. 
 
ಶತಶತಮಾನಗಳಿಂದ ಹಿಂದೂ-ಮುಸ್ಲಿಂ ಭಾವೈಕ್ಯವನ್ನು ಸಾರುತ್ತಿರುವ ಕುರುಹುಗಳು ಇಲ್ಲಿವೆ. ಮುಸಲ್ಮಾನ ಸಂತರ ಹಾಗೂ ಪರಿಚಾರಕಿಯರ ತಲಾ ಎರಡು ಗೋರಿಗಳು, ನಂದಿ, ನಾಗರಕಲ್ಲು, ತಾರೆಮರದ ಶನೈಶ್ಚರ ಮೂರ್ತಿಗಳು ಇಲ್ಲಿವೆ. ಇವು ಧರ್ಮಾತೀತವಾಗಿ ವೈರುಧ್ಯಗಳನ್ನು ಮೀರಿದ ಐತಿಹ್ಯವನ್ನು ಪ್ರತಿಪಾದಿಸುತ್ತಿವೆ. 
 
ಇಲ್ಲಿನ ದೇವಾಲಯದಲ್ಲಿ ಶಿವರಾತ್ರಿಯಂದು ವಿಶೇಷ ರೀತಿಯಲ್ಲಿ ಪೂಜೆ ನೆರವೇರುತ್ತದೆ. ಆದಿಶಕ್ತಿಯ ಪೂಜಾಕೈಂಕರ್ಯ ಹಾಗೂ ಮುಸಲ್ಮಾನ ಮೌಲ್ವಿಗಳ ಸಮಾಧಿಗಳಿಗೆ ಗಂಧಲೇಪನ ಕಾರ್ಯಕ್ರಮಗಳು ಒಂದೇ ದಿನ ನಡೆಯುವುದು ವಿಶೇಷ. ಎರಡೂ ಕಾರ್ಯಕ್ರಮಗಳಲ್ಲಿ ಹಿಂದೂ-ಮುಸ್ಲಿಂ ಧರ್ಮೀಯರು ಪಾಲ್ಗೊಳ್ಳುತ್ತಾರೆ. ಅವರು ಕೈಗೊಳ್ಳುವ ಉಪವಾಸ, ಭಜನೆ ಮೊದಲಾದ ಕಾರ್ಯಕ್ರಮಗಳು ಭಾವಪರವಶರನ್ನಾಗಿ ಮಾಡುತ್ತವೆ ಎನ್ನುತ್ತಾರೆ ಇಲ್ಲಿನ ಸ್ಥಳೀಯರು. 
 
ಮಾರನೆಯ ದಿನ ಮುಸ್ಲಿಮರು, ಫಕೀರರು ಗೋರಿಗಳಿಗೆ ಶ್ರೀಗಂಧದ ದ್ರವ್ಯ ಲೇಪಿಸಿ ಗಂಧಾರ್ಪಣೆ ಕಾರ್ಯಕ್ರಮ ನಡೆಸುತ್ತಾರೆ. ಖರ್ಜೂರ, ಕಲ್ಲುಸಕ್ಕರೆ, ಬೂಂದಿ ಹಂಚುತ್ತಾರೆ. ಹಿಂದೂಗಳ ಭಜನೆಗೆ ಸಂವಾದಿಯಾಗಿ ಫಾತೇಹಾ ಅರ್ಥಾತ್ ಕುರಾನಿನ ಕೆಲವು ಶ್ಲೋಕಗಳನ್ನು ಪಠಣ ಮಾಡುತ್ತಾರೆ. ಮಾರನೆಯ ದಿನ ಅನ್ನಸಂತರ್ಪಣಾ ಕಾರ್ಯಕ್ರಮ ಇರುತ್ತದೆ.
 
ಸುಮಾರು 11.10 ಎಕರೆ ವಿಸ್ತೀರ್ಣದ ಸಮತಟ್ಟುಗೊಳಿಸಿರುವ ಕಾಡುಬಯಲಿನ ಈ ತಾಣದ ಇತಿಹಾಸ ಆರಂಭವಾಗುವುದು 120 ವರ್ಷಗಳ ಹಿಂದೆ. ಆದಿಶಕ್ತಿಯ ಮಂದಿರದ ಪ್ರಾಂಗಣ ಹಾಗೂ ರಹಮತುಲ್ಲಾ ಅಲೈಗಳ (ಅಲ್ಲಾನ ಕೃಪೆಗೆ ಪಾತ್ರರಾದವರ) ಗೋರಿಗಳ ಸಮುಚ್ಚಯ ಇಲ್ಲಿವೆ. ಸ್ವಘೋಷಿತ ಮುಸ್ಲಿಂ ಮೌಲ್ವಿ ಹಾಗೂ ಅವರ ಅನುಯಾಯಿಗಳಾಗಿ ಸೇವೆ ಸಲ್ಲಿಸಿದ ಹಿಂದೂ ಮಹಿಳೆಯರ ತಲಾ ಎರಡು ಗೋರಿಗಳಿವೆ.
 
ಮಠದ ಮಾದರಿಯಲ್ಲಿರುವ ಇನ್ನೊಂದು ಕಟ್ಟಡದ ಒಳಗೆ ಮುಸಲ್ಮಾನ ಸಂತರ ಭಾವಚಿತ್ರಗಳು, ಹಿಂದೂ ದೇವರುಗಳ ಮೂರ್ತಿಗಳು ಏಕಪ್ರಕಾರವಾಗಿ ಪೂಜಿಸಲ್ಪಡುತ್ತಿವೆ. ಗೋರಿಗಳು ಹಿಂದೂ ಪರಿಚಾರಕರಿಂದಲೇ ನಿರ್ವಹಿಸಲ್ಪಡುತ್ತಿವೆ. ಶಿಥಿಲಗೊಂಡಿದ್ದ ಆದಿಶಕ್ತಿಯ ದೇಗುಲದ ಪುನರ್ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. 
 
19ನೇ ಶತಮಾನದ ಅಂತ್ಯ ಭಾಗದಲ್ಲಿ ಇಲ್ಲಿಗೆ ಬಂದ ‘ಮದ್ರಾಸ್ ಸ್ವಾಮಿ’ ಎಂದೇ ಇಂದಿಗೂ ಕರೆಯಲಾಗುವ ಮುಸಲ್ಮಾನ ಗುರು ಗೌಸ್ ಸೈಯದ್ ಪೀ ಷಾ ಖಾದ್ರಿ ಇಲ್ಲಿ ತಪಸ್ಸು ಕೈಗೊಂಡನೆಂದೂ ದೈವ ಪ್ರೇರಣೆಯಂತೆ ಇಲ್ಲಿಯೇ ನೆಲೆ ನಿಂತು ಜೀವಂತ ಸಮಾಧಿ ಹೊಂದಿದನೆಂಬುದು ಐತಿಹ್ಯ. ಮುಸ್ಲಿಂ ಮೌಲ್ವಿಯೊಬ್ಬ ಹಿಂದೂ ಸಂತರಂತೆ ತಪಸ್ಸು ಮಾಡಿದರೆನ್ನುವುದನ್ನು ಇಲ್ಲಿನ ಜನರು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ವನ್ಯಮೃಗಗಳು ಅವರ ತಪೋಭಂಗ ಮಾಡಲಾಗಲಿಲ್ಲ ಎಂದು ಬೆರಗು ವ್ಯಕ್ತಪಡಿಸುವ ಅವರ ಮುಗ್ಧ ಮಾತುಗಳಿಗೆ ತಲೆದೂಗಲೇಬೇಕು. ತಪೋವನದ ಕುರುಹಾಗಿ ದೊಡ್ಡದಾದ ಆಲದ ಮರ ತನ್ನ ಬಿಳಲುಗಳನ್ನು ಚಾಚುತ್ತಾ ವಿಸ್ತರಣೆಗೊಳ್ಳುತ್ತಿರುವುದನ್ನು ತೋರಿಸುತ್ತಾರೆ. ಇವರ ಜೊತೆ ಅನುಯಾಯಿಗಳಾಗಿ ನೆಲೆ ಕಂಡುಕೊಂಡವಳು ಮಂಡ್ಯ ಜಿಲ್ಲೆ ನಾಗೂರು ನಾಗಪಟ್ಟಣದ ಸಿದ್ದಲಿಂಗಮ್ಮ. ಇವರಿಬ್ಬರ ಗೋರಿಗಳು ಕೂಡ ಒಂದೇ ಕಟ್ಟಡದಲ್ಲಿ ಆಸುಪಾಸಿನಲ್ಲಿವೆ. 
 
ಇವರ ಕಾಲಾ ನಂತರ ಇಲ್ಲಿನ ಪರಂಪರೆಯನ್ನು ಮುಂದುವರಿಸಿದವರು ಸೈಯದ್ ಮಸ್ತಾಕ್ ಷಾ ಖಾದ್ರಿ. ಇವರಿಗೆ ಅನುಯಾಯಿಗಳಾಗಿ ಗುರುತಿಸಿಕೊಂಡಿದ್ದವರು ಕೂಡ ಹಿಂದೂ ಮಹಿಳೆಯರೇ ಆಗಿದ್ದರು. ಮಂಡ್ಯ ಜಿಲ್ಲೆ ಅರಗೋಡಿನ ಬೊಮ್ಮಮ್ಮ ಹಾಗೂ ಗೌರಮ್ಮ ಹಲವು ವರ್ಷಗಳ ಕಾಲ ಅವರ ಅನುಯಾಯಿಗಳಾಗಿ ಸೇವೆ ಸಲ್ಲಿಸುತ್ತಿದ್ದುದನ್ನು ಬಹಳಷ್ಟು ಜನ ಈಗಲೂ ಸ್ಮರಿಸಿಕೊಳ್ಳುತ್ತಾರೆ.
 
ಸೈಯದ್ ಮುಷ್ತಾಕ್ ಷಾ ಖಾದ್ರಿ ಕೂಡ ಮೊದಲ ಗುರುವಿನಂತೆಯೇ ಜೀವಂತ ಸಮಾಧಿ ಹೊಂದಿದ ಮೇಲೆ ಹಿಂದಿನ ಕಟ್ಟಡದಲ್ಲಿ ಅವರ ಗೋರಿಯನ್ನು ನಿರ್ಮಿಸಲಾಗಿದೆ. ಆ ನಂತರದಲ್ಲಿ ನಿಧನ ಹೊಂದಿದ ಬೊಮ್ಮಮ್ಮನ ಸಮಾಧಿಯು ಅವರ ಗೋರಿಯ ಸನಿಹವೇ ನಿರ್ಮಾಣಗೊಂಡಿದೆ. ಆದರೆ ಇಲ್ಲಿ ಗೌರಮ್ಮನ ಸಮಾಧಿ ಕಾಣಸಿಗುವುದಿಲ್ಲ. ನಿಧನಾ ನಂತರ ಆಕೆಯ ದೇಹವನ್ನು ಅವರ ಸಂಬಂಧಿಕರು ಹುಟ್ಟೂರಿಗೆ ಕೊಂಡೊಯ್ದರೆಂದು ಹೇಳಲಾಗುತ್ತಿದೆ. 
 
ಸದ್ಗುರು ಮದ್ರಾಸ್ ಸ್ವಾಮಿ ಅವಧೂತಾಶ್ರಮ ಹೆಸರಿನ ಟ್ರಸ್ಟ್ ಇಲ್ಲಿನ ಮಂದಿರ ಗೋರಿಗಳ ನಿರ್ವಹಣೆ ಮಾಡುತ್ತಿದೆ. ಮಠದ ಮಾದರಿಯಲ್ಲಿರುವ ವಿಶಾಲ ಭವನದಲ್ಲಿ ಹಿಂದೂ ದೇವರುಗಳ ಪ್ರತಿಮೆ ಹಾಗೂ ಮುಸ್ಲಿಂ ಮೌಲ್ವಿಗಳ ಭಾವಚಿತ್ರಗಳು ಸಮಾನವಾಗಿ ಪೂಜಿಸಲ್ಪಡುತ್ತಿರುವುದು ಇಲ್ಲಿನ ವಿಶೇಷಗಳಲ್ಲೊಂದು. ಪ್ರಸ್ತುತ ಕೊಪ್ಪದ ಹರಳಕೆರೆಯ ವಯೋವೃದ್ಧೆ ಮಾಯಮ್ಮ ಹಾಗೂ ಕೊಪ್ಪದ ಮುನಿಶಾಮಪ್ಪ ಇಲ್ಲಿ ವಾಸವಿದ್ದು ಮಠದ ನಿರ್ವಹಣೆಯಲ್ಲಿ ನಿರತರಾಗಿದ್ದಾರೆ.
 
‘ನಮ್ಮ ಹಸುಗಳು ಹಾಲು ಕರೆಯಲು ಬಿಡದೆ ಒದೆಯುತ್ತಿದ್ದ ಹೊತ್ತಲ್ಲಿ ಸೈಯದ್ ಮಸ್ತಾನ್ ಷಾ ಖಾದ್ರಿಯವರು ಮಂತ್ರಿಸಿ ಕೊಡುತ್ತಿದ್ದ ಗಂಗೋದಕವನ್ನು ಪ್ರೋಕ್ಷಿಸಿದರೆ ಸಾಕು ತಕರಾರು ಮಾಡದೆ ಬಕೆಟ್ಟುಗಟ್ಟಲೆ ಹಾಲು ಹಿಂಡುತ್ತಿದ್ದವು’ ಎಂದು ಇಲ್ಲಿಯ ಮಹಿಮೆ ಬಣ್ಣಿಸುತ್ತಾರೆ ಹೊನ್ನಮಾಚನಹಳ್ಳಿಯ ಎಚ್.ಎನ್.ನಾರಾಯಣ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT