ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡಿನ ಬೆಂಕಿ ತಡೆಗೆ ಸನ್ನದ್ಧತೆ ಕೊರತೆ ಅಕ್ಷಮ್ಯ

Last Updated 21 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಬಂಡಿಪುರದ ಮೊಳೆಯೂರು ವಲಯದಲ್ಲಿ ನಿಯಂತ್ರಣಕ್ಕೆ ಬಾರದಂತೆ ಹೊತ್ತಿ ಉರಿಯುತ್ತಿರುವ ಕಾಳ್ಗಿಚ್ಚಿಗೆ ಅರಣ್ಯ ಸಿಬ್ಬಂದಿಯೊಬ್ಬರು ಬಲಿಯಾಗಿದ್ದಾರೆ. ಮೂವರು ಸಿಬ್ಬಂದಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದೇ ಶನಿವಾರ ಕಾಣಿಸಿಕೊಂಡ ಬೆಂಕಿಯು ದಿನಗಟ್ಟಲೆ ಉರಿದು ಸುಮಾರು 20 ಚದರ ಕಿಲೋ ಮೀಟರ್‌ ಅರಣ್ಯವನ್ನು ಆಹುತಿ ತೆಗೆದುಕೊಂಡಿದೆ.

ಬೆಲೆಬಾಳುವ ಶ್ರೀಗಂಧ, ತೇಗ, ಬೀಟೆ,  ಮತ್ತಿ ಜೊತೆಯಲ್ಲಿ ಬಿದಿರು ಸಹ ಬೆಂಕಿಯ ಕೆನ್ನಾಲಿಗೆಗೆ ಭಸ್ಮವಾಗಿವೆ. ಬೇಸಿಗೆಯಲ್ಲಿ ಅಳಿದುಳಿದ ಹಸಿರನ್ನು ಹೊಂದಿದ್ದ ಬಿದಿರಿಗೂ ಬೆಂಕಿ ಹೊತ್ತಿರುವುದರಿಂದ ಆನೆಯಂತಹ ಪ್ರಾಣಿಯ ತುತ್ತಿಗೂ ಹೊಡೆತಬಿದ್ದಿದೆ. ಮಳೆಯಿಲ್ಲದೆ ಕಂಗಾಲಾಗಿರುವ ಬಂಡಿಪುರದ ಸ್ಥಿತಿ ಇದಾದರೆ, ಹೆಚ್ಚು ಮಳೆ ಬೀಳುವ ಮೂಕಾಂಬಿಕಾ ವನ್ಯಜೀವಿ ವಲಯದಲ್ಲೂ ಮಳೆಕಾಡಿಗೆ ಬೆಂಕಿ ಹಾಕಲಾಗಿದೆ.

ಕೃಷಿ ವಿಸ್ತರಣೆ ಮಾಡುವ ಉದ್ದೇಶದಿಂದಲೇ ಕಾಡಿಗೆ ಬೆಂಕಿ ಹಾಕಲಾಗಿದೆ ಎನ್ನುವ ಸಂಶಯವಿದೆ. ಬಿದಿರಿಗೆ ಬೆಂಕಿ ಬಿದ್ದ ಕಾರಣದಿಂದ ನಿಯಂತ್ರಣಕ್ಕೆ ಬಾರದಂತೆ ಬೆಂಕಿ ಹಬ್ಬುತ್ತಿದೆ. ಮಳೆಯ ಕೊರತೆಯಿಂದ ಜನರು ಬವಣೆ ಅನುಭವಿಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಕಾಡಿನ ಕೆರೆಗಳೂ ಒಣಗಿವೆ.

ವನ್ಯಮೃಗಗಳು ನೀರನ್ನು ಹುಡುಕಿಕೊಂಡು ಕಾಡಿನಿಂದ ಕಾಡಿಗೆ ವಲಸೆ ಹೋಗುತ್ತಿವೆ. ಇಂತಹ ಕಷ್ಟ ಕಾಲದಲ್ಲಿ ಕಾಡಿಗೆ ದುರುದ್ದೇಶದಿಂದ  ಬೆಂಕಿ ಹಾಕಿರುವುದು ನಿಜವೇ ಆಗಿದ್ದಲ್ಲಿ ಅಂಥವರು ಕ್ಷಮೆಗೆ ಅರ್ಹರೇ ಅಲ್ಲ. ಅವರನ್ನು ಪತ್ತೆ ಮಾಡಿ ಕಠಿಣವಾಗಿ ಶಿಕ್ಷಿಸಬೇಕು.

ಕಾಡಿನ ಬೆಂಕಿಯ ಇತಿಹಾಸವನ್ನು ಅವಲೋಕಿಸಿದರೆ ದುಷ್ಕರ್ಮಿಗಳನ್ನು ಶಿಕ್ಷಿಸಿದ ಉದಾಹರಣೆಯೇ ಇಲ್ಲ. 2013–14 ಮತ್ತು 2016ರಲ್ಲಿ ಬಂಡಿಪುರದಲ್ಲಿ ಬೆಂಕಿ ಬಿದ್ದು ನೂರಾರು ಎಕರೆ ಸುಟ್ಟಿತ್ತು. 2013ರಲ್ಲಿ ಬಿದ್ದ ಬೆಂಕಿಗೆ ನಾಗರಹೊಳೆಯ 500 ಎಕರೆಗೂ ಹೆಚ್ಚು ಅರಣ್ಯ ಆಹುತಿಯಾಗಿತ್ತು. ಈ ಬಗ್ಗೆ ಸಿಐಡಿ ತನಿಖೆಗೂ ಆದೇಶಿಸಲಾಗಿತ್ತು. ಆದರೆ ಸಿಐಡಿ ಪೊಲೀಸರಿಗೂ ಅಪರಾಧಿಗಳ ಪತ್ತೆ ಸಾಧ್ಯವಾಗಿಲ್ಲ.

ತನಿಖಾಧಿಕಾರಿಗಳ ನಿರಂತರ ಬದಲಾವಣೆಯಿಂದ ತನಿಖೆ ತಾರ್ಕಿಕ ಅಂತ್ಯ ಕಂಡಿಲ್ಲ. ಇದು ಸಿಐಡಿ ವೃತ್ತಿಪರತೆಗೆ ಅಂಟಿದ ಕಪ್ಪು ಚುಕ್ಕೆ. ಶಿಕ್ಷೆಯೇ ಇಲ್ಲದ ಸ್ಥಿತಿ ಇರುವಾಗ ಬೆಂಕಿ ಹಾಕುವವರು ಯಾವ ಕಾರಣಕ್ಕೆ ಹೆದರುತ್ತಾರೆ? ಬೆಂಕಿ ಬಿದ್ದ ಸ್ಥಳದ ಸುತ್ತಮುತ್ತಲ ಕೆರೆಗಳಾದ ಚಿಕ್ಕಬೆಸುಗೆ, ಬಂಕವಾಡಿ, ಬೇಗೂರು ಕೆರೆಗಳಲ್ಲಿ ನೀರೇ ಇಲ್ಲ. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ಆರಿಸಲು ನೀರಿಗಾಗಿ ಪರದಾಡುವಂತಾಗಿದೆ. 

ಅರಣ್ಯ ಸಿಬ್ಬಂದಿ ಸೊಪ್ಪು ಹಿಡಿದು ಬೆಂಕಿ ಆರಿಸಬೇಕಾಗಿದೆ. ಕಾಡೇ ಒಣಗಿರುವಾಗ ಹಸಿರು ಸೊಪ್ಪನ್ನು ತರುವುದು ಎಲ್ಲಿಂದ?  ಬೆಂಕಿ ಆರಿಸಲು  ಪರ್ಯಾಯ ತಂತ್ರಜ್ಞಾನವನ್ನು ಇಲಾಖೆ ಅಭಿವೃದ್ಧಿಪಡಿಸಬೇಕು. ಬೇಸಿಗೆ ಬರುವ ಮುನ್ನವೇ ಕಾಡಿನ ದಾರಿಯಲ್ಲಿ ಸಿಬ್ಬಂದಿಯೇ ಬೆಂಕಿ ಹಚ್ಚಿ, ಆರಿಸಿ ‘ಫೈರ್‌ಲೈನ್‌’ ಮಾಡುತ್ತಾರೆ. ಇದರಿಂದ ಕಾಳ್ಗಿಚ್ಚು ತಡೆಯಲು ಆಗಿಲ್ಲ ಎನ್ನುವುದಾದರೆ, ಈ ಸಿದ್ಧತೆ ಸಾಲದು ಅನ್ನಿಸುತ್ತದೆ.

ಇನ್ನಷ್ಟು ಪೂರ್ವತಯಾರಿ ಬೇಕು. ಕಾಡಿಗೆ ಈಗ ದೊಡ್ಡ ಪ್ರಮಾಣದಲ್ಲಿ ಬೆಂಕಿ ಬಿದ್ದಿರುವುದನ್ನು ನೋಡಿದರೆ, ಇದು ದುಷ್ಕೃತ್ಯ ಎನ್ನುವ ಅನುಮಾನ ದಟ್ಟವಾಗಿದೆ. ಅನಾಹುತದಲ್ಲಿ ಸತ್ತ  ವನಪಾಲಕ ಮುರುಗಪ್ಪ ತಮ್ಮನಗೋಳ ಅವರ ಕುಟುಂಬದವರಿಗೆ ₹ 25 ಲಕ್ಷ ಪರಿಹಾರ ಘೋಷಿಸಲಾಗಿದೆ. ಈ ಹೊತ್ತಿನಲ್ಲಿ  ಪೊಲೀಸ್‌ ಇಲಾಖೆಯಲ್ಲಿ ನೀಡುವ ಪರಿಹಾರದ ಮಾದರಿಯನ್ನೇ ಅರಣ್ಯ ಇಲಾಖೆಯಲ್ಲೂ ಅನುಸರಿಸಬೇಕು ಎನ್ನುವ ಬೇಡಿಕೆ ಎದ್ದಿದೆ.

ಈ ಬೇಡಿಕೆಗೆ  ಸರ್ಕಾರ ಕೂಡಲೇ ಸ್ಪಂದಿಸಬೇಕು. ಕಾಳ್ಗಿಚ್ಚು ಪ್ರಕರಣದಲ್ಲಿ  ಇಲಾಖೆಯ ವೈಫಲ್ಯ ಇದೆ ಎಂದು ಸ್ವತಃ ಮುಖ್ಯಮಂತ್ರಿ ಹೇಳಿದ್ದಾರೆ. ಅದಕ್ಕಾಗಿ ಅಧಿಕಾರಿಗಳನ್ನು ತರಾಟೆಗೂ ತೆಗೆದುಕೊಂಡಿದ್ದಾರೆ. ಇಷ್ಟೇ ಸಾಲದು. ಬಂಡಿಪುರ ಕಾಡಿನ ಬೆಂಕಿ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಬೇಕು. ಆದಷ್ಟು ಬೇಗ ತಪ್ಪಿತಸ್ಥರನ್ನು ಪತ್ತೆ ಮಾಡಿ ಶಿಕ್ಷೆಗೆ ಒಳಪಡಿಸಬೇಕು. ಅಂದರೆಮಾತ್ರ ಇಂಥ ಪ್ರಕರಣ ಮರುಕಳಿಸುವುದು ತಪ್ಪುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT