ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕಲಿ ಪಿಎಚ್‌.ಡಿ:ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ

ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ ನೇಮಕಾತಿ
Last Updated 21 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ ಹುದ್ದೆಗಿಟ್ಟಿಸಲು ನಕಲಿ ಪಿಎಚ್‌.ಡಿ ಪ್ರಮಾಣ ಪತ್ರಗಳನ್ನು ಸಲ್ಲಿಸಿದ್ದ ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲು ಉನ್ನತ ಶಿಕ್ಷಣ ಇಲಾಖೆ ನಿರ್ಧರಿಸಿದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ನಡೆಸಿದ ವಿವಿಧ ವಿಷಯಗಳ 2160 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ 40 ಅಭ್ಯರ್ಥಿಗಳು (ಇಂಗ್ಲಿಷ್‌ 25, ವಾಣಿಜ್ಯ 7, ಕಂಪ್ಯೂಟರ್‌ ಸೈನ್ಸ್‌ 6, ಗಣಿತ ಮತ್ತು ರಾಜ್ಯಶಾಸ್ತ್ರ ತಲಾ ಒಬ್ಬರು) ನಕಲಿ ಪಿಎಚ್‌.ಡಿ ಪ್ರಮಾಣ ಪತ್ರ ಸಲ್ಲಿಸಿರುವುದು ಪತ್ತೆಯಾಗಿತ್ತು.

ಪ್ರಾಧಿಕಾರ ಪ್ರಕಟಿಸಿದ್ದ ಪರಿಷ್ಕೃತ ತಾತ್ಕಾಲಿಕ ಆಯ್ಕೆಪಟ್ಟಿಯಲ್ಲಿ ಈ ಎಲ್ಲ ಅಭ್ಯರ್ಥಿಗಳ ಹೆಸರುಗಳಿದ್ದವು. ಅವರು ಸಲ್ಲಿಸಿರುವ ಪಿಎಚ್‌.ಡಿ ನಕಲಿ ಎಂಬುದು ಗೊತ್ತಾಗುತ್ತಿದ್ದಂತೆಯೇ ಆ ಅಭ್ಯರ್ಥಿಗಳ ಅರ್ಹತೆಯನ್ನು ರದ್ದುಗೊಳಿಸಿ, ಜನವರಿಯಲ್ಲಿ ಪರಿಷ್ಕೃತ ಆಯ್ಕೆ ಪಟ್ಟಿ ಪ್ರಕಟಿಸಿತ್ತು. ಅಲ್ಲದೆ ಉನ್ನತ ಶಿಕ್ಷಣ ಇಲಾಖೆಗೆ ವರದಿ ಕಳುಹಿಸಿತ್ತು.

ಉತ್ತರ ಭಾರತ ವಿ.ವಿಗಳ ಹೆಸರಲ್ಲಿ ನಕಲಿ ಪಿಎಚ್‌.ಡಿಗಳು: ಅನರ್ಹಗೊಂಡ 40 ಅಭ್ಯರ್ಥಿಗಳು ಸಲ್ಲಿಸಿರುವ ಪಿಎಚ್‌.ಡಿ ಪ್ರಮಾಣ ಪತ್ರಗಳು ಉತ್ತರ ಭಾರತದ ಕೆಲ ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಹೆಸರಿನಲ್ಲಿವೆ. 

ಇದರಲ್ಲಿ 16 ಜನರು ಉತ್ತರ ಪ್ರದೇಶದ ಝಾನ್ಸಿಯ ಬುಂದೇಲಖಂಡ ವಿಶ್ವವಿದ್ಯಾಲಯದ ಪ್ರಮಾಣ ಪತ್ರ ಸಲ್ಲಿಸಿದ್ದಾರೆ.

9 ಅಭ್ಯರ್ಥಿಗಳು ಬಿಹಾರದ ಬೋಧಗಯಾದ ಮಗದ್‌ ವಿಶ್ವವಿದ್ಯಾಲಯ, ಎಂಟು ಮಂದಿ ಮೇಘಾಲಯದ ಶಿಲ್ಲಾಂಗ್‌ನಲ್ಲಿರುವ ಸಿಎಂಜೆ ವಿ.ವಿ, ಮೂವರು ಉತ್ತರ ಪ್ರದೇಶದ ವಾರಾಣಸಿಯ ಮಹಾತ್ಮ ಗಾಂಧಿ ವಿ.ವಿ, ಇಬ್ಬರು ಕಾನ್ಪುರದ ಛತ್ರಪತಿ ಶಿವಾಜಿ ವಿ.ವಿ  ಹಾಗೂ ತಲಾ ಒಬ್ಬರು ಅಸ್ಸಾಂನ ನಲಬಾರಿಯ ಕುಮಾರ ಭಾಸ್ಕರವರ್ಮ ವಿ.ವಿ, ಶಿಲ್ಲಾಂಗ್‌ನ ಟೆಕ್ನೊ ಗ್ಲೋಬಲ್‌ ವಿಶ್ವವಿದ್ಯಾಲಯಗಳ ಪಿಎಚ್‌.ಡಿ ಪ್ರಮಾಣ ಪತ್ರ ಒದಗಿಸಿದ್ದಾರೆ ಎಂಬ ಮಾಹಿತಿ ಆರ್‌ಟಿಇ ಮೂಲಕ ‘ಪ್ರಜಾವಾಣಿ’ಗೆ ದೊರೆತಿದೆ.

ಇವುಗಳಲ್ಲಿ ಸಿಎಂಜೆ, ಟೆಕ್ನೊ ಗ್ಲೋಬಲ್‌ ವಿ.ವಿಗಳು ಖಾಸಗಿ ವಿಶ್ವವಿದ್ಯಾಲಯಗಳಾಗಿದ್ದು, ಉಳಿದವು ಆಯಾ ರಾಜ್ಯ ಸರ್ಕಾರಗಳ ವಿಶ್ವವಿದ್ಯಾಲಯಗಳಾಗಿವೆ.

ಬಯಲಾಗಿದ್ದು ಹೀಗೆ...

‘ಕೇಳದೇ ಇದ್ದರೂ ಕೆಲ ಅಭ್ಯರ್ಥಿಗಳು ತಮ್ಮ ಪಿಎಚ್‌.ಡಿ ಪದವಿಯ ನೈಜತೆ ಪ್ರಮಾಣ ಪತ್ರವನ್ನು ಸ್ವತಃ ತಂದು ಸಲ್ಲಿಸಿದ್ದು ಅನುಮಾನ ಹುಟ್ಟಲು  ಕಾರಣವಾಯಿತು’ ಎಂದು ಕೆಇಎ ಅಧಿಕಾರಿಯೊಬ್ಬರು ತಿಳಿಸಿದರು.

‘ಅಭ್ಯರ್ಥಿಯೊಬ್ಬ ಪಿಎಚ್‌.ಡಿ ಕೋರ್ಸ್‌ವರ್ಕ್‌ ಪ್ರಮಾಣ ಪತ್ರ  ಸಲ್ಲಿಸಿರಲಿಲ್ಲ. ಕಚೇರಿಗೆ ಬಂದಿದ್ದ ಆತನಿಗೆ ಈ ಕುರಿತು ತಿಳಿಸಿದಾಗ, ಅದನ್ನು ವಿಶ್ವವಿದ್ಯಾಲಯದಿಂದ ತಾನು ಪಡೆದಿಲ್ಲ ಎಂದು ಹೇಳಿದ್ದ. ಆದರೆ ಮರುದಿನವೇ ಅದನ್ನು ತಂದು ಸಲ್ಲಿಸಿದ. ಹೊರ ರಾಜ್ಯದ ವಿಶ್ವವಿದ್ಯಾಲಯದಿಂದ ಒಂದು ದಿನದಲ್ಲಿ ಈ ರೀತಿ ಪ್ರಮಾಣ ಪತ್ರ ತಂದು ಸಲ್ಲಿಸಿದ್ದು ಆಶ್ಚರ್ಯ ಉಂಟು ಮಾಡಿತು.  ನಕಲಿ ಅಂಕಪಟ್ಟಿ, ಪ್ರಮಾಣ ಪತ್ರ ವಿತರಿಸುವ ಜಾಲ ಕೆಲಸ ಮಾಡುತ್ತಿರಬಹುದು ಎಂಬ ಶಂಕೆಯೂ ಮೂಡಿತು’ ಎಂದರು.

‘ಕೆಲವರ ಪಿಎಚ್‌.ಡಿ ನಕಲಿ ಎಂಬುದರ ಕುರಿತು ಅನೇಕ  ಅಭ್ಯರ್ಥಿಗಳು ದೂರು ನೀಡಿದ್ದರು. ಹಾಗಾಗಿ ಪಿಎಚ್‌.ಡಿ ಪ್ರಮಾಣ ಪತ್ರಗಳ ನೈಜತೆ ಪರಿಶೀಲಿಸಿ ವರದಿ ನೀಡುವಂತೆ ಕರ್ನಾಟಕ ಉನ್ನತ ಶಿಕ್ಷಣ ಪರಿಷತ್ತಿಗೆ ಮನವಿ ಮಾಡಲಾಯಿತು. ಪರಿಷತ್ತು 40 ಅಭ್ಯರ್ಥಿಗಳ ಪ್ರಮಾಣ ಪತ್ರಗಳು ನಕಲಿ ಎಂದು ವರದಿ ನೀಡಿತು’ ಎಂದು ಅವರು ಮಾಹಿತಿ ನೀಡಿದರು.

2009ರಲ್ಲಿ ನಡೆದ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ವೇಳೆಯಲ್ಲೂ ಕೆಲ ಅಭ್ಯರ್ಥಿಗಳು ನಕಲಿ ಎಂ.ಫಿಲ್‌ ಪ್ರಮಾಣ ಪತ್ರ ಸಲ್ಲಿಸಿದ್ದರು ಎಂಬ ಆರೋಪ ಇತ್ತು. ಆ ನಂತರ ಯುಜಿಸಿಯು, ಸಹಾಯಕ ಪ್ರಾಧ್ಯಾಪಕರ ನೇಮಕಾತಿಯ ಅರ್ಹತಾ ಮಾನದಂಡದಿಂದ ಎಂ.ಫಿಲ್‌ ಪದವಿಯನ್ನು ತೆಗೆಯಿತು.

ಯಾವುದು ನಕಲಿ ಪಿಎಚ್‌.ಡಿ ?

* ವಿಶ್ವವಿದ್ಯಾಲಯದಲ್ಲಿ ನೋಂದಣಿಯಾಗದೆ ಮೂರನೇ ವ್ಯಕ್ತಿಗಳಿಂದ ಪಡೆಯುವ ಪಿಎಚ್‌.ಡಿ ಪ್ರಮಾಣ ಪತ್ರ

* ಯುಜಿಸಿಯಿಂದ ಮಾನ್ಯತೆ ಪಡೆಯದ ವಿಶ್ವವಿದ್ಯಾಲಯದಿಂದ ಪಡೆದ ಪಿಎಚ್‌.ಡಿ
* ಯುಜಿಸಿ ಕಪ್ಪುಪಟ್ಟಿಯಲ್ಲಿ ಸೇರಿಸಿದ ವಿಶ್ವವಿದ್ಯಾಲಯಗಳಿಂದ ಪಡೆದ ಪಿಎಚ್‌.ಡಿ
* ಯುಜಿಸಿ ನಿಯಮಗಳನ್ನು ಗಾಳಿಗೆ ತೂರಿ ಪಡೆದಪಿಎಚ್‌.ಡಿ

ನಕಲಿ ಅಂಕಪಟ್ಟಿ ಜಾಲಕ್ಕೆ ಶಾಸ್ತಿ

‘ನಕಲಿ ಪಿಎಚ್‌.ಡಿ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದೆ. ಅನರ್ಹಗೊಂಡ ಅಭ್ಯರ್ಥಿಗಳ ವಿರುದ್ಧ ವಂಚನೆ ಮತ್ತು ಕ್ರಿಮಿನಲ್‌ ಪ್ರಕರಣ ದಾಖಲಿಸುತ್ತೇವೆ’ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ರಾಜ್ಯದಲ್ಲಿ ನಕಲಿ ಅಂಕಪಟ್ಟಿ, ಪ್ರಮಾಣ ಪತ್ರ ವಿತರಣಾ ಜಾಲ ದೊಡ್ಡದಾಗಿ ಬೆಳೆದಿರುವುದು ಇದರಿಂದ ಮನದಟ್ಟಾಗಿದ್ದು, ಇದನ್ನು ಪತ್ತೆ ಮಾಡಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ’ ಎಂದರು.

‘ವಿ.ವಿಗಳಲ್ಲಿ ನೋಂದಣಿ ಮಾಡದೆ,  ಸಂಶೋಧನೆಯನ್ನೂ ನಡೆಸದೇ,  ಹಣಕೊಟ್ಟು ನಕಲಿ ಪ್ರಮಾಣ ಪತ್ರಗಳನ್ನು ತಂದು ವಂಚಿಸಿದ ಅಭ್ಯರ್ಥಿಗಳನ್ನು ಸುಮ್ಮನೆ ಬಿಡುವ ಪ್ರಶ್ನೆಯೇ ಇಲ್ಲ’ ಎಂದರು.

ಪಿಎಚ್‌.ಡಿ: ಯುಜಿಸಿ ನಿಯಮಗಳೇನು

*ನಿಗದಿತ ಶುಲ್ಕ ಭರಿಸಿ ವಿಶ್ವವಿದ್ಯಾಲಯದಲ್ಲಿ ನೋಂದಣಿ ಆಗಬೇಕು
*ಕೋರ್ಸ್‌ವರ್ಕ್‌ ಕಡ್ಡಾಯ
*ಸಂಶೋಧನಾರ್ಥಿ ವಾರ್ಷಿಕ ವರದಿಗಳನ್ನು ಸಲ್ಲಿಸಬೇಕು
*ಕನಿಷ್ಠ ಎರಡು ಸಂಶೋಧನಾ ಲೇಖನಗಳನ್ನು ಸಂಶೋಧನಾ ಜರ್ನಲ್‌ಗಳಲ್ಲಿ ಪ್ರಕಟಿಸಬೇಕು
*ಕನಿಷ್ಠ ಎರಡು ವಿಚಾರ ಸಂಕಿರಣದಲ್ಲಿ ಪ್ರಬಂಧ ಮಂಡಿಸಬೇಕು
*ಮಹಾ ಪ್ರಬಂಧವನ್ನು ನುರಿತ ಇಬ್ಬರು ಬಾಹ್ಯ ತಜ್ಞರ (ರಾಜ್ಯ/ ಹೊರ ರಾಜ್ಯ/ವಿದೇಶ) ಪರಿಶೀಲನೆಗೆ ಒಳಪಡಿಸಿ, ಅನುಮತಿ ಪಡೆಯಬೇಕು
*ಮುಕ್ತ ಸಂದರ್ಶನದಲ್ಲಿ ತಜ್ಞರ ಪ್ರಶ್ನೆಗಳಿಗೆ ಸಂಶೋಧನಾರ್ಥಿ ಸಮರ್ಪಕ  ಉತ್ತರ ನೀಡಬೇಕು. ಆ ಮೂಲಕ ತನ್ನ ಮಹಾ ಪ್ರಬಂಧವನ್ನು ಸಮರ್ಥಿಸಿಕೊಳ್ಳಬೇಕು
*ಪಿಎಚ್‌.ಡಿ ಅವಧಿ: ಕನಿಷ್ಠ 3, ಗರಿಷ್ಠ 6 ವರ್ಷ.

*
ಕಾಯ್ದಿರಿಸಿದ ಅಭ್ಯರ್ಥಿಗಳ ಪಟ್ಟಿಯನ್ನು (waiting *ist) ಶೀಘ್ರ ಪ್ರಕಟಿಸಲಾಗುವುದು. ಈ ವೇಳೆ ನಕಲಿ ಪಿಎಚ್‌.ಡಿ ಅಭ್ಯರ್ಥಿಗಳು ಕಂಡು ಬಂದರೆ ಅವರನ್ನೂ ಅನರ್ಹಗೊಳಿಸಲಾಗುವುದು.

–ಗಂಗಾಧರಯ್ಯ,  ಆಡಳಿತಾಧಿಕಾರಿ, ಕೆಇಎ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT