ಹವಾಮಾನ ವೈಪರೀತ್ಯ ಜಾಗತಿಕ ವಿದ್ಯಮಾನ. ನಮ್ಮ ದೇಶಕ್ಕೂ ಇದರ ಬಿಸಿ ತಟ್ಟಿದೆ. ಕರ್ನಾಟಕವಂತೂ ಸತತ ಬರಗಾಲದಿಂದ ಕಂಗೆಟ್ಟಿದೆ. ಕೃಷಿ ಉತ್ಪಾದಕತೆ ಕುಂಠಿತ ಆಗುತ್ತಿರುವುದು, ಜೊತೆಗೆ ಜನಸಂಖ್ಯೆ ಏರಿಕೆಯಿಂದಾಗಿ ಆಹಾರ ಬೇಡಿಕೆ ಹೆಚ್ಚುತ್ತಿರುವುದು ಕೃಷಿ ವಿಜ್ಞಾನಿಗಳ ಮುಂದೆ ಹೊಸ ಸವಾಲನ್ನು ಹುಟ್ಟುಹಾಕಿದೆ.

ಬೆಂಗಳೂರಿನಲ್ಲಿ ಶುಕ್ರವಾರ ಮುಕ್ತಾಯಗೊಂಡ 13ನೇ ಕೃಷಿ ವಿಜ್ಞಾನ ಸಮ್ಮೇಳನದಲ್ಲಿ ‘ಹವಾಮಾನ ಚತುರ ಕೃಷಿ’ಯ ಬಗ್ಗೆ ಸಮಾಲೋಚನೆ ನಡೆಯಿತು. ಈ ಸಮ್ಮೇಳನದ ರೂವಾರಿಗಳಲ್ಲಿ ಒಬ್ಬರಾದ ಭಾರತೀಯ ಕೃಷಿ ಸಂಶೋಧನಾ ಪರಿಷತ್ತಿನ (ಐಸಿಎಆರ್) ನಿವೃತ್ತ ಮಹಾನಿರ್ದೇಶಕ ಹಾಗೂ ಕೃಷಿ ಸಂಶೋಧನೆ ಮತ್ತು ಶಿಕ್ಷಣ ಇಲಾಖೆಯ ನಿವೃತ್ತ ಕಾರ್ಯದರ್ಶಿಯಾಗಿರುವ ಕನ್ನಡಿಗ ಡಾ. ಎಸ್.ಅಯ್ಯಪ್ಪನ್ ಅವರು ಭಾರತೀಯ ಕೃಷಿ ವ್ಯವಸ್ಥೆಯ ಮುಂದಿರುವ ಸವಾಲುಗಳ ಬಗ್ಗೆ ಇಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ. ರಾಷ್ಟ್ರೀಯ ಕೃಷಿ ವಿಜ್ಞಾನಗಳ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷರೂ ಆಗಿರುವ ಅಯ್ಯಪ್ಪನ್, ಪ್ರಸ್ತುತ ನಬಾರ್ಡ್ ಪ್ರಾಧ್ಯಾಪಕ ಪೀಠದ ಮುಖ್ಯಸ್ಥರಾಗಿದ್ದಾರೆ.

* ಸದ್ಯ ನಮ್ಮ ದೇಶದ ಕೃಷಿ ಪರಿಸ್ಥಿತಿ ಹೇಗಿದೆ?
ಪ್ರಪಂಚದ ಒಟ್ಟು ಜನಸಂಖ್ಯೆಯ ಶೇಕಡ 17ರಷ್ಟು ಜನ ನಮ್ಮ ದೇಶದಲ್ಲಿದ್ದಾರೆ. ಆದರೆ, ಜಗತ್ತಿನ ಶೇಕಡ 2.4ರಷ್ಟು ಭೂಮಿ, ಶೇಕಡ 4.2ರಷ್ಟು ನೀರು ಹಾಗೂ ಶೇಕಡ 11ರಷ್ಟು ಜಾನುವಾರುಗಳು ಮಾತ್ರ ನಮ್ಮಲ್ಲಿವೆ. 14.20 ಕೋಟಿ ಹೆಕ್ಟೇರ್ ಕೃಷಿ ಯೋಗ್ಯ ಭೂಮಿ ಇದೆ. ಕೃಷಿ ಮತ್ತು ಹವಾಮಾನಕ್ಕೆ ಸಂಬಂಧಿಸಿ ಹಿಮಾಲಯದಿಂದ ಕನ್ಯಾಕುಮಾರಿಯವರೆಗೆ ಬೇರೆ ಬೇರೆ ರೀತಿಯ ಭೌಗೋಳಿಕ ಪ್ರದೇಶಗಳು ನಮ್ಮಲ್ಲಿವೆ. ಬೆಳೆಗಳು ಹಾಗೂ ಪಶುಗಳಿಗೆ ಸಂಬಂಧಿಸಿ 10ಕ್ಕೂ ಹೆಚ್ಚು ಜೈವಿಕ ವೈವಿಧ್ಯಗಳಿವೆ.

ಸ್ವಾತಂತ್ರ್ಯ ಬಂದಾಗ ದೇಶದ ಒಟ್ಟು ಆಂತರಿಕ ಉತ್ಪನ್ನದಲ್ಲಿ (ಜಿಡಿಪಿ) ಕೃಷಿಯ ಪಾಲು ಶೇಕಡ 52ರಷ್ಟಿತ್ತು. ಶೇಕಡ 70ರಷ್ಟು ಮಂದಿ ಕೃಷಿಯನ್ನು ಅವಲಂಬಿಸಿದ್ದರು. ಈಗ ಜಿಡಿಪಿಯಲ್ಲಿ ಕೃಷಿಯ ಪಾಲು ಶೇಕಡ 14ಕ್ಕೆ ಇಳಿಕೆ ಆಗಿದೆ. ಶೇಕಡ 52ರಷ್ಟು ಮಂದಿ (125 ಕೋಟಿ ಜನಸಂಖ್ಯೆಯಲ್ಲಿ ಸುಮಾರು 65 ಕೋಟಿ ಜನ) ಜೀವನೋಪಾಯಕ್ಕೆ ಕೃಷಿ ಚಟುವಟಿಕೆಯನ್ನೇ ಅವಲಂಬಿಸಿದ್ದಾರೆ.

* ಕೃಷಿ ವ್ಯವಸ್ಥೆ ಎದುರಿಸುತ್ತಿರುವ ಸವಾಲುಗಳೇನು?
ಸ್ವಾತಂತ್ರ್ಯ ಬಂದಾಗ ಆಹಾರ ಧಾನ್ಯಗಳನ್ನು ಆಮದು ಮಾಡಿಕೊಳ್ಳಬೇಕಾದ ಪರಿಸ್ಥಿತಿ ಇತ್ತು. ಹಸಿರು ಕ್ರಾಂತಿ ಬಳಿಕ ಆಹಾರದ ವಿಚಾರದಲ್ಲಿ ಸ್ವಾವಲಂಬನೆ ಸಾಧಿಸಿದ್ದೇವೆ. ದೇಶದಲ್ಲಿ ಈಗ ವರ್ಷಕ್ಕೆ 26 ಕೋಟಿ ಟನ್‌ಗಳಷ್ಟು ಆಹಾರ ಉತ್ಪಾದನೆಯಾಗುತ್ತಿದೆ. 3 ಲಕ್ಷ ಕೋಟಿಯಷ್ಟು ಮೌಲ್ಯದ ಕೃಷಿ ಉತ್ಪನ್ನಗಳನ್ನು ರಫ್ತು ಮಾಡುತ್ತಿದ್ದೇವೆ. 25 ಕೋಟಿ ಟನ್ ಹಣ್ಣು, ತರಕಾರಿ, 16 ಕೋಟಿ ಟನ್ ಹಾಲು, 1 ಕೋಟಿ ಟನ್ ಮೀನು, 60 ಲಕ್ಷ ಟನ್ ಮಾಂಸ ಉತ್ಪಾದನೆ ಆಗುತ್ತಿದೆ.

ಇವೆಲ್ಲ ನೋಡಿದರೆ, ಕೃಷಿ ಪರಿಸ್ಥಿತಿ ಚೆನ್ನಾಗಿರುವಂತೆ ಕಾಣಿಸುತ್ತದೆ. ಆದರೆ, ಭೂಮಿಯ ಆರೋಗ್ಯ ಕ್ಷೀಣಿಸುತ್ತಿರುವುದು, ಪೋಷಕಾಂಶಗಳ ಕೊರತೆ, ಕೃಷಿ ಭೂಮಿ ಕಡಿಮೆಯಾಗುತ್ತಿರುವುದು, ಯುವ ಪೀಳಿಗೆ ಕೃಷಿಯಿಂದ ವಿಮುಖರಾಗುತ್ತಿರುವುದು, ಕೃಷಿ ಕ್ಷೇತ್ರದಲ್ಲಿ ಕಡಿಮೆಯಾಗುತ್ತಿರುವ ಅವಕಾಶಗಳು ಹೊಸ ಸವಾಲುಗಳನ್ನು ಹುಟ್ಟುಹಾಕಿವೆ. ನೀರಿನ ಸಮಸ್ಯೆಯಂತೂ ಸದಾ ಇದ್ದದ್ದೆ.

* ಹವಾಮಾನ ವೈಪರೀತ್ಯಕ್ಕೆ ಪ್ರಮುಖ ಕಾರಣಗಳೇನು?
300 ವರ್ಷಗಳಲ್ಲಿ ಆದ ಬದಲಾವಣೆ ಕೇವಲ 100 ವರ್ಷಗಳಲ್ಲಿ ಆಯಿತು. 100 ವರ್ಷಗಳಲ್ಲಿ ಆದ ಬದಲಾವಣೆ ಕಳೆದ 20 ವರ್ಷಗಳಲ್ಲಿ ಆಯಿತು. ಇದರಿಂದಾಗಿ ಹಸಿರುಮನೆ ಅನಿಲಗಳು (ಪ್ರಮುಖವಾಗಿ ಮೀಥೇನ್ ನೈಟ್ರಸ್ ಆಕ್ಸೈಡ್ ಹಾಗೂ ಇಂಗಾಲದ ಡೈಆಕ್ಸೈಡ್) ವಾತಾವರಣವನ್ನು ಸೇರುವ ಪ್ರಮಾಣ ಹೆಚ್ಚಿದೆ. ಭತ್ತದ ಗದ್ದೆಗಳಿಂದ ಹಾಗೂ ಜಾನುವಾರುಗಳಿಂದಲೂ ಹಸಿರುಮನೆ ಅನಿಲಗಳು ವಾತಾವರಣ ಸೇರುತ್ತಿವೆ. ಇವು ಹವಾಮಾನ ವೈಪರೀತ್ಯಕ್ಕೆ ಕಾರಣ.

* ಹವಾಮಾನ ವೈಪರೀತ್ಯದಿಂದ ಎದುರಾಗಿರುವ ಸಮಸ್ಯೆಗಳೇನು?
ಇದರಿಂದ ಜೈವಿಕ ಹಾಗೂ ಅಜೈವಿಕ ಒತ್ತಡಗಳು ಸೃಷ್ಟಿಯಾಗಿವೆ. ಅಜೈವಿಕ ಅಂದರೆ ತಾಪಮಾನ ಏರಿಕೆ, ಮಳೆ ವಿಧಾನದಲ್ಲಿ ಬದಲಾವಣೆ ಇತ್ಯಾದಿ. 150 ವರ್ಷಗಳ ಅಂಕಿ–ಅಂಶ ಪರಿಗಣಿಸಿದರೆ, ತಾಪಮಾನ ಸರಾಸರಿ ಶೇ 1.2 ಡಿಗ್ರಿ ಸೆಲ್ಸಿಯಸ್‌ನಷ್ಟು ಜಾಸ್ತಿ ಆಗಿದೆ. ಇದು ಪಶುಗಳು, ಬೆಳೆಗಳು ಹಾಗೂ ಜನಜೀವನದ ಮೇಲೆ ಪರಿಣಾಮ ಬೀರುತ್ತಿದೆ.

ಮೂರು ತಿಂಗಳು ಸುರಿಯುತ್ತಿದ್ದ ಮುಂಗಾರು ಮಳೆ ಈಗ 30–40 ದಿನಗಳಿಗೆ ಸೀಮಿತ ಆಗಿದೆ. ಗಿಡಗಳ ಮೇಲೆ ಮಂಜಿನ ತೆರೆ ಬೀಳುತ್ತಿದೆ. ಹಿಂದೆ ದಕ್ಷಿಣ ಭಾರತದಲ್ಲಿ ಆಲಿಕಲ್ಲು ಮಳೆ ಅಪರೂಪವಾಗಿತ್ತು. ಇಂದು ಸಾಮಾನ್ಯವಾಗುತ್ತಿದೆ. ಚಂಡಮಾರುತಗಳು ಪದೇ ಪದೇ ಕಾಣಿಸಿಕೊಳ್ಳುತ್ತಿವೆ. ಕ್ರಿಮಿಕೀಟಗಳು, ಸಾಂಕ್ರಾಮಿಕ ರೋಗಕಾರಕಗಳು, ಕಳೆಗಳು ಹೆಚ್ಚುತ್ತಿರುವುದು ಜೈವಿಕ ಒತ್ತಡಗಳಿಗೆ ಉದಾಹರಣೆ. ಉಷ್ಣಾಂಶ ಮತ್ತು ತೇವಾಂಶ ಸೂಚ್ಯಂಕ (ಟಿಎಚ್‌ಐ) ಏರುಪೇರಾಗುತ್ತಿರುವುದು ಬೆಳೆ ಹಾಗೂ ಪಶುಗಳ ಸಂತಾನೋತ್ಪಾದನೆ ಮೇಲೂ ಪ್ರಭಾವ ಬೀರುತ್ತಿದೆ.

ಒಂದು ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಜಾಸ್ತಿ ಆದರೆ ಶೇಕಡ 20ರಷ್ಟು ಇಳುವರಿ ಕಡಿಮೆ ಆಗುತ್ತದೆ. ಪ್ರಾಣಿಗಳ ಚಯಾಪಚಯ ಕ್ರಿಯೆ, ಸಂತಾನೋತ್ಪತ್ತಿ ಹಾಗೂ ಹಾರ್ಮೋನ್‌ಗಳ ಮೇಲೆ ಪರಿಣಾಮ ಉಂಟಾಗುತ್ತದೆ. ಇದು ಪರಾಗಸ್ಪರ್ಶದ ಮೇಲೆ ಪರಿಣಾಮ ಬೀರುತ್ತದೆ. ಉದಾಹರಣೆಗೆ, ಜೇನ್ನೊಣಗಳ ಸಂಖ್ಯೆ ಕಡಿಮೆಯಾದರೆ ಪರಾಗಸ್ಪರ್ಶದ ಪ್ರಮಾಣವೂ ಇಳಿಮುಖವಾಗುತ್ತದೆ. ಇದರಿಂದ ಕೃಷಿ ಉತ್ಪಾದಕತೆ ಕುಂಠಿತವಾಗುತ್ತದೆ.

ಮಾವು ಬೇಗ ಹೂ ಬಿಡುತ್ತಿದೆ. ಹೀಗಾದರೆ ಕಾಯಿ ಕಚ್ಚುವ ಪ್ರಮಾಣ ಕಡಿಮೆ ಆಗುತ್ತದೆ. ಸೇಬು ಬೆಳೆಯುವುದಕ್ಕೆ ಬೇಕಾದ ಕನಿಷ್ಠ ಎತ್ತರ ಹೆಚ್ಚುತ್ತಿರುವುದರಿಂದ ಸೇಬಿನ ಇಳುವರಿ ಕಡಿಮೆ ಆಗುತ್ತಿದೆ. ಹವಾಮಾನ ವೈಪರೀತ್ಯ ಎದುರಿಸಲು ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಆಹಾರ ಉತ್ಪಾದನೆ ಇಳಿಕೆಯಾಗುವುದರ ಜೊತೆಗೆ ಗುಣಮಟ್ಟವೂ ಕಡಿಮೆಯಾಗಲಿದೆ. ಮಣ್ಣು– ಸಸ್ಯ, ಪ್ರಾಣಿಗಳ ನಡುವಿನ ಸಂಬಂಧ ಹಾಗೂ ಸಮತೋಲನ ಕಳೆದುಕೊಳ್ಳುತ್ತೇವೆ.

* ಹವಾಮಾನ ವೈಪರೀತ್ಯ ಎದುರಿಸಲು ನಮ್ಮ ಮುಂದಿರುವ ಕಾರ್ಯಕ್ರಮಗಳೇನು?
ಸುಸ್ಥಿರ ಕೃಷಿ ಸಾಮರ್ಥ್ಯ ಹೆಚ್ಚಿಸುವ ಬಗ್ಗೆ ಹಾಗೂ ವಾತಾವರಣದಲ್ಲಿ ಹಸಿರು ಮನೆ ಅನಿಲಗಳ ಪ್ರಮಾಣ ಕಡಿಮೆ ಮಾಡುವ ಕುರಿತ ಪ್ಯಾರಿಸ್ ಒಪ್ಪಂದಕ್ಕೆ ಭಾರತವೂ ಸಹಿ ಹಾಕಿದೆ. ಮಿಲೇನಿಯಂ ಅಭಿವೃದ್ಧಿ ಗುರಿಯಿಂದ ಸುಸ್ಥಿರ ಅಭಿವೃದ್ಧಿಯತ್ತ ತಲುಪುವ ಗುರಿ ನಿಗದಿಪಡಿಸಿಕೊಂಡಿದ್ದೇವೆ. ನಾವೀಗ ಕೃಷಿಯನ್ನು ಸುಸ್ಥಿರಗೊಳಿಸಬೇಕು. ಬೀಜ ಉತ್ಪಾದನೆಯಿಂದ ಮಾರುಕಟ್ಟೆಯವರೆಗೆ ಕೃಷಿ ಸಂರಕ್ಷಣೆ, ಸಂವರ್ಧನೆ, ಸಂಸ್ಕರಣೆಯ ಮೂರು ಮೌಲ್ಯ ಶೃಂಖಲಗಳನ್ನು ಜೋಡಿಸಬೇಕಾಗಿದೆ. ಇದಕ್ಕಾಗಿ ನೈಸರ್ಗಿಕ ಸಂಪನ್ಮೂಲಗಳಾದ ಮಣ್ಣು, ನೀರು, ಜೈವಿಕ ವೈವಿಧ್ಯ ಕಾಪಾಡುವ, ಮಾರುಕಟ್ಟೆ ಕಂಡುಕೊಳ್ಳುವ ಹಾಗೂ ರೈತರ ಜೀವನಮಟ್ಟ ಕಾಪಾಡುವ ನಿಟ್ಟಿನಲ್ಲಿ ಹೆಜ್ಜೆ ಹಾಕಬೇಕಿದೆ.

* ‘ಹವಾಮಾನ ಚತುರ ಕೃಷಿ’ ಬಗ್ಗೆ ದೇಶದಲ್ಲಿ ಯಾವ ರೀತಿಯ ಪ್ರಯತ್ನಗಳು ನಡೆಯುತ್ತಿವೆ?
ನಮ್ಮ ದೇಶದಲ್ಲಿ ಈಗಲೂ ಶೇಕಡ 70ರಷ್ಟು ಕೃಷಿ ಮಳೆ ಆಧಾರಿತ. ಇದರಿಂದ ಹವಾಮಾನ ವೈಪರೀತ್ಯದ ಅಪಾಯಕ್ಕೆ ಸಿಲುಕುವ ಸಾಧ್ಯತೆ ಜಾಸ್ತಿ. ಹವಾಮಾನ ವೈಪರೀತ್ಯದಿಂದ ಕೃಷಿ ಮೇಲೆ ಬೇರೆ ಬೇರೆ ಕಡೆ ಬೇರೆ ಬೇರೆ ರೀತಿಯ ಪರಿಣಾಮ ಉಂಟಾಗುತ್ತದೆ. ಕೆಲವೆಡೆ ಮಂಜು ಕರಗಿ ಸಮಸ್ಯೆ ಕಾಣಿಸಿಕೊಳ್ಳಬಹುದು. ಕರ್ನಾಟಕ ಸತತ ಬರದ ಸಮಸ್ಯೆ ಎದುರಿಸುತ್ತಿದೆ. ಹವಾಮಾನ ವೈಪರೀತ್ಯ ನಿವಾರಣೆ ಹಾಗೂ ಅದಕ್ಕೆ ಹೊಂದಿಕೊಳ್ಳುವುದು ಎರಡೂ ಸವಾಲಿನದು. ‘ಹವಾಮಾನ ಚತುರ ಕೃಷಿ’ಯಿಂದ ಈ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಬಹುದು. ಇದಕ್ಕಾಗಿ ಬೀಜ ಉತ್ಪಾದನೆಯಿಂದ ಮಾರುಕಟ್ಟೆವರೆಗೆ ಬೇರೆ ಬೇರೆ ತಂತ್ರಜ್ಞಾನಗಳ ಮೊರೆ ಹೋಗಬೇಕಿದೆ.

ನೀರು ಕಡಿಮೆ ಬಳಸುವ, ರೋಗ ನಿರೋಧಕತೆ ಹೊಂದಿರುವ, ಇಳುವರಿ ಜಾಸ್ತಿ ಕೊಡುವ ತಳಿಗಳ ಸುಧಾರಣೆ, ವಂಶಾಭಿವೃದ್ಧಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಬಳಕೆ, ನೀರನ್ನು ಸಮರ್ಥವಾಗಿ ಬಳಸುವ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಬೇಕು. ಕಾರ್ಮಿಕರ ಸಮಸ್ಯೆಗೆ ಸೂಕ್ತ ಯಾಂತ್ರೀಕರಣದ ಮೂಲಕ ಪರಿಹಾರ ಕಂಡುಕೊಳ್ಳಬೇಕು. ಕಟಾವಿಗೆ ಮುನ್ನ ಮತ್ತು ನಂತರ ಶೇಕಡ 15ರಿಂದ ಶೇ 20ರಷ್ಟು ಬೆಳೆ ನಷ್ಟವಾಗುತ್ತಿದೆ. ಇದರ ಒಟ್ಟು ಮೌಲ್ಯ ₹ 92 ಸಾವಿರ ಕೋಟಿ. ಈ ನಷ್ಟವನ್ನು ತಡೆಯಬೇಕಿದೆ.

* ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಾದ ಬೆಳವಣಿಗೆ ಕೃಷಿ ಸುಧಾರಣೆಗೆ ಹೊಸ ಆಯಾಮ ನೀಡಬಹುದೇ?
ಲಕ್ಷದ್ವೀಪದಿಂದ ಹಿಮಾಲಯದವರೆಗೆ 13 ಕೋಟಿ ರೈತ ಕುಟುಂಬಗಳಿವೆ. ಕೃಷಿ ಸಮಸ್ಯೆಯನ್ನು ಹಾಗೂ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನವನ್ನು (ಐಸಿಟಿ) ಒಂದಕ್ಕೊಂದು ಜೋಡಿಸುವ ಕಾರ್ಯ ಆಗಬೇಕು. ಹವಾಮಾನ ಬದಲಾವಣೆಯಿಂದ ಹಿಡಿದು ಮಾರುಕಟ್ಟೆವರೆಗೆ ಸಕಾಲದಲ್ಲಿ ಅಗತ್ಯ ಮಾಹಿತಿ ಕೊಡುವುದಕ್ಕೆ ಟೆಲಿವಿಷನ್, ರೇಡಿಯೊ, ಮೊಬೈಲ್, ಇಂಟರ್‌ನೆಟ್, ಸಾಮಾಜಿಕ ಜಾಲತಾಣಗಳನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು. ಐಸಿಟಿಯಲ್ಲೂ ಚತುರ ವ್ಯವಸ್ಥೆಗಳು ಬರುತ್ತಿವೆ.

‘ಹವಾಮಾನ ಚತುರ ಕೃಷಿ’ ಬಗ್ಗೆ ದೇಶದಲ್ಲಿ ಅನೇಕ ಸಂಶೋಧನೆಗಳು ಹಾಗೂ ಆವಿಷ್ಕಾರಗಳಾಗಿವೆ. ಕೆಲವು ರೈತರೂ ಹೊಸ ಆವಿಷ್ಕಾರಗಳನ್ನು ಮಾಡಿದ್ದಾರೆ. ಐಸಿಟಿ ಬಳಸಿ ಇವುಗಳನ್ನು ಪ್ರಚುರಪಡಿಸಬಹುದು. ಚತುರ ಕೃಷಿ ಸಾಧ್ಯವಾಗಿಸಲು ರೈತರು, ನೀತಿ ನಿರೂಪಕರು, ಸಂಶೋಧಕರ ನಡುವೆ ಸಾಮರಸ್ಯ ಸಾಧಿಸಲು ಇದು ನೆರವಾಗುತ್ತದೆ.

* ಬರದಿಂದ ಕಂಗೆಟ್ಟ ಕರ್ನಾಟಕ, ನೀರಾವರಿಯ ತೀವ್ರ ಸಮಸ್ಯೆ ಎದುರಿಸುತ್ತಿದೆ. ಇದರ ನಿವಾರಣೆಗೆ ಪರಿಹಾರ ಯಾವುದು?
ರಾಜ್ಯದಾದ್ಯಂತ ಕೃಷಿ ಹೊಂಡಗಳನ್ನು ನಿರ್ಮಿಸುವ ಕಾರ್ಯ ನಡೆಯುತ್ತಿದೆ. ಇದರ ಜೊತೆಗೆ ಸೂಕ್ಷ್ಮ ನೀರಾವರಿಯನ್ನು ಜೋಡಿಸಬೇಕು. ಹನಿ ನೀರಾವರಿ, ಸ್ಪ್ರಿಂಕ್ಲರ್ ಬಳಸುವ ಮೂಲಕ ನೀರು ಪೋಲಾಗುವುದನ್ನು ತಡೆಯಬೇಕು. ನಿಯಂತ್ರಿತ ನೀರಾವರಿ ಪದ್ಧತಿ ಬಳಕೆ ಈ ನಿಟ್ಟಿನಲ್ಲಿ ಹೆಚ್ಚು ಸೂಕ್ತ.

ಸೆನ್ಸರ್‌ಗಳನ್ನು ಬಳಸಿ ಸಸಿಗಳಿಗೆ ಎಷ್ಟು ನೀರು ಅಗತ್ಯವಿದೆ ಎಂದು ಕಂಡುಕೊಂಡು ಅಷ್ಟೇ ಪ್ರಮಾಣದ ನೀರುಣಿಸುವ ವ್ಯವಸ್ಥೆ ಇದು. ಭತ್ತ ಹಾಗೂ ಕಬ್ಬಿಗೂ ಚತುರ ನೀರಾವರಿ ಬಳಸಿ ಎರಡರಿಂದ ಮೂರು ಪಟ್ಟು ಹೆಚ್ಚು ಇಳುವರಿ ಪಡೆಯಬಹುದು. ಈಗ ಒಂದು ಕೆ.ಜಿ ಭತ್ತ ಬೆಳೆಯಲು ಕನಿಷ್ಠ 1,600 ಲೀಟರ್ ನೀರು ಬೇಕು. ಗದ್ದೆಗೆ ನೀರು ಕಟ್ಟುವ ಬದಲು, ಚತುರ ಕೃಷಿ ಅಳವಡಿಸಿದರೆ ನೀರಿನ ಬಳಕೆ ಕಡಿಮೆ ಆಗುತ್ತದೆ. ಎರಡು ಪಟ್ಟು ಹೆಚ್ಚು ಇಳುವರಿ ಬರುತ್ತದೆ. ಬೇರೆಡೆ ಯಶಸ್ವಿಯಾದ ನೀರಾವರಿ ಮಾದರಿಗಳನ್ನು ಕಬ್ಬಿಗೂ ಬಳಸಬಹುದು.

* ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ಕಂಡುಕೊಳ್ಳುವುದು ದೊಡ್ಡ ಸವಾಲು. ದೇಶದಲ್ಲಿ ರೈತರ ಆದಾಯ ದ್ವಿಗುಣವಾಗಲು 14 ವರ್ಷ ಕಾಯಬೇಕಾಯಿತು. ಇಂತಹ ಸ್ಥಿತಿ ಆತ್ಮಹತ್ಯೆಯಂತಹ ಸಮಸ್ಯೆಗಳಿಗೂ ಕಾರಣವಾಗುತ್ತಿದೆಯಲ್ಲ?
ಹವಾಮಾನ ಬದಲಾವಣೆಯನ್ನು ಸಮರ್ಥವಾಗಿ ಎದುರಿಸುವುದರ ಜೊತೆಯಲ್ಲೇ ರೈತರ ಆದಾಯ ದ್ವಿಗುಣಗೊಳಿಸುವ ಬಗ್ಗೆ ಇತ್ತೀಚೆಗೆ ವ್ಯಾಪಕವಾಗಿ ಮಾತುಕತೆ ನಡೆಯುತ್ತಿದೆ. ಸಮನ್ವಿತ ಕೃಷಿ ಇದಕ್ಕೆ ಸೂಕ್ತ ಪರಿಹಾರ. ಬೆಳೆ ಬೆಳೆಯುವುದರ ಜೊತೆಗೆ ಪಶುಸಂಗೋಪನೆ, ಕೋಳಿ ಸಾಕಣೆ, ಜೇನು ಕೃಷಿ, ಅಣಬೆ ಕೃಷಿ, ಒಂದು ಬೆಳೆಯ ಬದಲು ಎರಡು ಬೆಳೆ ತೆಗೆಯುವುದು, ಎರಡು ಪ್ರಮುಖ ಬೆಳೆಗಳ ನಡುವೆ ದ್ವಿದಳ ಧಾನ್ಯ ಬೆಳೆಯುವುದರಿಂದ ಕೃಷಿ ಉತ್ಪಾದಕತೆ ಹೆಚ್ಚಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ. ಬಹುತೇಕ ಕೃಷಿ ಉತ್ಪನ್ನಗಳು ಬೇಗ ಹಾಳಾಗುವಂತಹವು. ಇವುಗಳ ಶೇಖರಣೆಗೆ ಸರಣಿ ಶೀತಲ ಗೃಹಗಳನ್ನು ನಿರ್ಮಿಸುವುದು, ಸಾಗಣೆ ಹಾಗೂ ಮೌಲ್ಯವರ್ಧನೆಗೆ ವ್ಯವಸ್ಥೆ ಕಲ್ಪಿಸುವ ಕೆಲಸಗಳಾಗಬೇಕು.

ರೈತರ ಆದಾಯ ಹೆಚ್ಚಾಗಬೇಕಾದರೆ ಕೃಷಿ ವೈವಿಧ್ಯ ಹೆಚ್ಚಬೇಕು. ನಮ್ಮಲ್ಲಿ ಸಣ್ಣ ಹಿಡುವಳಿ ಜಾಸ್ತಿ. ಹಾಗಾಗಿ 50ರಿಂದ 60 ರೈತರು ಸೇರಿಕೊಂಡು ಮಾರುಕಟ್ಟೆ ಕಂಡುಕೊಳ್ಳಬೇಕು. ಇದರಿಂದ ಕೃಷಿಯ ಕಾರ್ಯಕ್ಷಮತೆಯೂ ಹೆಚ್ಚುತ್ತದೆ.

* ‘ಮೇಕ್ ಇನ್ ಇಂಡಿಯಾ’ ಮಂತ್ರ ಕೃಷಿಗೆ ಮಾರಕ ಆಗುವ ಅಪಾಯ ಇದೆಯೇ?
ದೇಸಿ ಬಳಕೆಗೆ ಯೋಗ್ಯವಾದ ಯಂತ್ರೋಪಕರಣ ತಯಾರಿಸಲು ಇದು ಸಹಕಾರಿ. ಉದಾಹರಣೆಗೆ ಸಣ್ಣ ಪವರ್ ಟಿಲ್ಲರ್, ತೆಂಗಿನ ಕಾಯಿ ಕೀಳಲು ರೋಬೊಟಿಕ್ಸ್ ಯಂತ್ರ ಉತ್ಪಾದನೆಗೆ ಇದು ಅನುಕೂಲ ಕಲ್ಪಿಸಲಿದೆ. ಆದರೆ, ಕೈಗಾರಿಕೆ ಹೆಚ್ಚಾದಂತೆ ಕೃಷಿ ಭೂಮಿ ಕಡಿಮೆ ಆಗುವುದು ಸಹಜ. ಜಾಗ ಇರುವಷ್ಟೇ ಇರುತ್ತದೆ. ಅದನ್ನು ಕೃಷಿಯ ಜೊತೆಗೆ ಕೈಗಾರಿಕೆ ಹಾಗೂ ಸೇವಾ ಕ್ಷೇತ್ರಗಳ ಜೊತೆಗೂ ಹಂಚಿಕೊಳ್ಳಬೇಕು. ಇದಕ್ಕೆ ಪ್ರತಿಯಾಗಿ ಕೃಷಿ ಉತ್ಪಾದಕತೆ ಹೆಚ್ಚಿಸುವ ಮಾರ್ಗವನ್ನು ಅನುಸರಿಸಬಹುದು.

* ಭಾರತದ ಕೃಷಿ ಭವಿಷ್ಯ ಹೇಗಿರಬೇಕು ಎಂದು ಬಯಸುತ್ತೀರಿ?
ನಾವು ಆಹಾರ ಭದ್ರತೆ ಜೊತೆ ಪೌಷ್ಟಿಕ ಸುರಕ್ಷೆ ಸಾಧಿಸಬೇಕಾಗಿದೆ. ಕೃಷಿ ಕ್ರಾಂತಿ ನಡೆದಾಗ ಕಾರ್ಬೊಹೈಡ್ರೇಟ್‌ಗೆ ಆದ್ಯತೆ ನೀಡಿದ್ದೆವು. ಈಗ ಪ್ರೊಟೀನ್‌ಯುಕ್ತ ಆಹಾರಕ್ಕೆ ಆದ್ಯತೆ ನೀಡಬೇಕಾಗಿದೆ. ಮಕ್ಕಳಿಗೆ ಕಬ್ಬಿಣಾಂಶ, ವಿಟಮಿನ್ ಎ ಅನ್ನು ಸೂಕ್ತ ಪ್ರಮಾಣದಲ್ಲಿ ಒದಗಿಸುವ ನಿಟ್ಟಿನಲ್ಲಿ ಗಮನಹರಿಸಬೇಕಿದೆ. ಹೆಚ್ಚು ಪ್ರೊಟೀನ್ ಒದಗಿಸಲು ದ್ವಿದಳ ಧಾನ್ಯ, ಮಾಂಸ, ಹಾಲು, ಮೊಟ್ಟೆ ಉತ್ಪಾದನೆ ಹೆಚ್ಚಬೇಕು. ಪೌಷ್ಟಿಕಾಂಶ ಕೊರತೆ ನೀಗಿಸುವಲ್ಲಿ ತೃಣಧಾನ್ಯಗಳೂ (ಮಿಲೆಟ್ಸ್ ) ಸಹಕಾರಿ. ಇವು ಕಡಿಮೆ ನೀರಿದ್ದರೂ ಚೆನ್ನಾಗಿ ಬೆಳೆಯುತ್ತವೆ. ಹವಾಮಾನ ವೈಪರೀತ್ಯಕ್ಕೆ ಒಗ್ಗಿಕೊಳ್ಳುವ ಸಾಮರ್ಥ್ಯ ಇವುಗಳಿಗಿದೆ. ನನ್ನ ಪ್ರಕಾರ ತೃಣಧಾನ್ಯಗಳೇ ಭವಿಷ್ಯದ ಆಹಾರ.

(ಚಿತ್ರ: ಪಿ.ಎಸ್.ಕೃಷ್ಣಕುಮಾರ್)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.