ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕದಲ್ಲಿ ಟೆನ್‌ಪಿನ್‌ ...

ಆಕಾಶ್‌ ಸಂದರ್ಶನ
Last Updated 26 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ
ಆಸ್ಟ್ರೇಲಿಯಾ, ಅಮೆರಿಕಾ, ಮಲೇಷ್ಯಾ, ಸಿಂಗಪುರ, ದಕ್ಷಿಣ ಕೊರಿಯಾ ಮತ್ತು  ಇಂಗ್ಲೆಂಡ್‌ ದೇಶಗಳಲ್ಲಿ ಸಾಕಷ್ಟು ಜನಮನ್ನಣೆ ಗಳಿಸಿರುವ ಟೆನ್‌ಪಿನ್‌ ಬೌಲಿಂಗ್‌ ಭಾರತದ ನೆಲದಲ್ಲೂ ನಿಧಾನವಾಗಿ ತನ್ನ ಬೇರುಗಳನ್ನು ಆಳಕ್ಕಿಳಿಸುತ್ತಿದೆ.
 
ಕ್ರಿಕೆಟ್‌, ಫುಟ್‌ಬಾಲ್‌, ಟೆನಿಸ್‌, ಬ್ಯಾಡ್ಮಿಂ ಟನ್‌ ಹೀಗೆ ಹಲವು ಜನಪ್ರಿಯ ಕ್ರೀಡೆಗಳ ಅಬ್ಬರದ ನಡುವೆ ಅಸ್ತಿತ್ವ ಉಳಿಸಿಕೊಳ್ಳಲು ಈ ಕ್ರೀಡೆ ಪಡಿಪಾಟಲು ಪಡುತ್ತಿದೆ.
 
 ಕರ್ನಾಟಕದಲ್ಲೂ ಈ ಕ್ರೀಡೆ ತನ್ನ ಕಂಪು ಪಸರಿಸುತ್ತಿದೆ.  ಬೆಂಗಳೂರು, ಭಾರತದ ಟೆನ್‌ಪಿನ್‌ ಬೌಲಿಂಗ್‌ ಕ್ರೀಡೆಯ ಶಕ್ತಿ ಕೇಂದ್ರ ಎಂದೇ ಬಿಂಬಿತವಾಗಿದೆ. 
2003ರಲ್ಲಿ  ಕರ್ನಾಟಕ ರಾಜ್ಯ ಟೆನ್‌ಪಿನ್‌ ಬೌಲಿಂಗ್‌ ಸಂಸ್ಥೆ (ಕೆಎಸ್‌ಟಿಬಿ) ಅಸ್ತಿತ್ವಕ್ಕೆ ಬಂದ ಮೇಲೆ ರಾಜ್ಯದಲ್ಲಿ ಈ ಕ್ರೀಡೆಯ ಪ್ರಗತಿಗೆ ಮತ್ತಷ್ಟು ವೇಗ ಸಿಕ್ಕಿದೆ.
 
ವಿಜಯ್‌ ಪಂಜಾಬಿ, ಶ್ರೀನಾಥ್‌, ಆಕಾಶ್‌ ಅಶೋಕ್‌ ಕುಮಾರ್‌, ಪ್ರತಿಮಾ ಹೆಗ್ಡೆ, ನಮ್ರತಾ ಕಾರಂತ್‌, ಜೂಡಿ ಆಲ್ಬನ್‌, ಸ್ವಪ್ನಾ ಮಿತ್ರಾ, ಗಿರೀಶ್‌ ಗಾಬಾ, ಅಭಿಷೇಕ್‌ ಮಹೇಶ್ವರಿ, ಪರ್ವೇಜ್‌ ಅಹ್ಮದ್‌, ಶಶಿಕುಮಾರ್‌, ರಾಧಿಕಾ ಕುಮಾರಿ, ಪೂಜಾ ಹೆಗ್ಡೆ ಅವರಂತಹ ಅನೇಕ ಪ್ರತಿಭೆಗಳು ರಾಷ್ಟ್ರ ಮತ್ತು ಅಂತರ ರಾಷ್ಟ್ರೀಯ ಮಟ್ಟಗಳಲ್ಲಿ ಮಿಂಚು ಹರಿಸುತ್ತಿದ್ದಾರೆ.
 
2007ರಲ್ಲಿ ನಡೆದಿದ್ದ ಚೊಚ್ಚಲ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕ ತಂಡ ಸಮಗ್ರ ಪ್ರಶಸ್ತಿ ಗೆದ್ದು ಮಿಂಚಿದ್ದು ಇದಕ್ಕೊಂದು ನಿದರ್ಶನ. 
 
ಬದಲಾದ ಪರಿಸ್ಥಿತಿ
ಆರಂಭದಲ್ಲಿ ಕೇವಲ ಮನರಂಜನೆಗಾಗಿ  ಆಡುತ್ತಿದ್ದವರು, ಈಗ ಈ ಕ್ರೀಡೆಯನ್ನು ವೃತ್ತಿಪರವಾಗಿ ಸ್ವೀಕರಿಸಿ ಇದರಲ್ಲೇ ಎತ್ತರದ ಸಾಧನೆ ಮಾಡುವ  ಕನಸು ಕಾಣುತ್ತಿದ್ದಾರೆ.  
 
ದಶಕದ ಹಿಂದೆ 40ಕ್ಕೆ ಸೀಮಿತವಾಗಿದ್ದ ವೃತ್ತಿಪರ ಆಟಗಾರರ ಸಂಖ್ಯೆ ಈಗ 300ರ ಗಡಿ ದಾಟಿರುವುದೂ  ಈ ಕ್ರೀಡೆಯ ಪ್ರಗತಿಗೆ ದ್ಯೋತಕದಂತಿದೆ.
ಈ ಬದಲಾವಣೆಯ ಹಿಂದೆ ಕೆಎಸ್‌ಟಿಬಿ ಮತ್ತು ಭಾರತ ಟೆನ್‌ಪಿನ್‌ ಬೌಲಿಂಗ್‌ ಫೆಡರೇಷನ್‌ನ (ಟಿಬಿಎಫ್‌ಐ)  ಪರಿಶ್ರಮವೂ ಇದೆ ಎಂಬುದನ್ನು ಮರೆಯುವಂತಿಲ್ಲ.
 
ಕೆಎಸ್‌ಟಿಬಿ ಮತ್ತು ಟಿಬಿಎಫ್‌ಐ ಈ ಕ್ರೀಡೆಯ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಹಲವು ಯೋಜನೆಗಳನ್ನು ಸಿದ್ಧಪಡಿಸಿ ಅವುಗಳನ್ನು ಕಾರ್ಯಗತಗೊಳಿಸಲು ಶ್ರಮಿಸುತ್ತಿವೆ. ಶಾಲಾ ಮತ್ತು ಕಾಲೇಜು ಮಟ್ಟದ  ಟೂರ್ನಿಗಳನ್ನು ಆಯೋಜಿಸುವ ಮೂಲಕ ಪ್ರತಿಭಾನ್ವೇಷಣೆಗೂ ನಾಂದಿ ಹಾಡಿವೆ.
 
‘ಮಕ್ಕಳು ಹಾಗೂ ಯುವಕರಲ್ಲಿ ಟೆನ್‌ಪಿನ್‌ ಬಗ್ಗೆ ಆಸಕ್ತಿ ಬೆಳೆಸುವ ಉದ್ದೇಶದಿಂದ  ಶಾಲಾ ಮತ್ತು ಕಾಲೇಜು ಹಂತಗಳಲ್ಲಿ ಅನೇಕ ಟೂರ್ನಿಗಳನ್ನು ಆಯೋಜಿಸುತ್ತಾ ಬರುತ್ತಿದ್ದೇವೆ. ಈ ಟೂರ್ನಿಗಳಲ್ಲಿ ಉತ್ತಮ ಸಾಮರ್ಥ್ಯ ತೋರುವ ಬೌಲರ್‌ಗಳನ್ನು ಗುರುತಿಸಿ ಅವರಿಗೆ ವಿಶೇಷ ತರಬೇತಿ ನೀಡುತ್ತಿದ್ದೇವೆ. ಇದಕ್ಕಾಗಿಯೇ ಮಲೇಷ್ಯಾ ಮತ್ತು ಆಸ್ಟ್ರೇಲಿಯಾದ ನುರಿತ ಕೋಚ್‌ಗಳನ್ನು ನೇಮಿಸಿದ್ದೇವೆ’ ಎಂದು  ಟಿಬಿಎಫ್‌ಐ ಮಹಾ ಕಾರ್ಯದರ್ಶಿ ಕಣ್ಣನ್‌ ರಾಮಚಂದ್ರನ್‌ ಹೇಳುತ್ತಾರೆ.
 
ಇಷ್ಟೇ ಅಲ್ಲದೆ ರಾಜ್ಯ ಮಟ್ಟದ ಚಾಂಪಿಯನ್‌ಷಿಪ್‌ಗಳನ್ನು ನಡೆಸಿ ಆ ಮೂಲಕ ಪ್ರತಿಭೆಗಳನ್ನು ಹೆಕ್ಕುವ ಕೆಲಸವೂ ಆಗುತ್ತಿದೆ. ಇದರ ಜೊತೆಗೆ ಬೆಂಗಳೂರು, ಮಂಗಳೂರು, ಮೈಸೂರು ಮತ್ತು ಹುಬ್ಬಳ್ಳಿ ಯಲ್ಲಿರುವ ಅರೇನಾಗಳಲ್ಲಿ ಟೆನ್‌ಪಿನ್‌ ಆಡಲು ಬರುವ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ  ಪ್ರವೇಶ ಶುಲ್ಕದಲ್ಲಿ ರಿಯಾಯಿತಿಯನ್ನೂ ನೀಡಲಾಗುತ್ತಿದೆ. 
 
ಸಿಗದ ಸರ್ಕಾರದ ನೆರವು
ಟೆನ್‌ಪಿನ್‌ ಕ್ರೀಡೆಗೆ ಸರ್ಕಾರದಿಂದ ಯಾವುದೇ ರೀತಿಯ ನೆರವು ಸಿಗುತ್ತಿಲ್ಲ. ಹಾಗಂತ ಕೆಎಸ್‌ಟಿಬಿ ಮತ್ತು ಟಿಬಿಎಫ್‌ಐ ಕೈಕಟ್ಟಿ ಕುಳಿತಿಲ್ಲ. ಖಾಸಗಿ ಸಂಸ್ಥೆಗಳ ಸಹಕಾರದೊಂದಿಗೆ ಅತ್ಯಾಧುನಿಕ ಮೂಲ ಸೌಕರ್ಯಗಳನ್ನು ಕಲ್ಪಿಸಿ ಬೌಲರ್‌ಗಳನ್ನು ಪ್ರೋತ್ಸಾಹಿಸುತ್ತಿವೆ.
 
‘153 ಸೆಂಟಿ ಮೀಟರ್‌ ಅಳತೆಯ ಸಿಂಥೆಟಿಕ್‌ ಲೇನ್‌ನಲ್ಲಿ ಟೆನ್‌ಪಿನ್‌ ಆಡಲಾಗುತ್ತದೆ. ಇದನ್ನು ನಿರ್ಮಿಸಲು ಬೇಕಿರುವ ಪರಿಕರಗಳು, ಟೆನ್‌ಪಿನ್‌ ಆಡಲು ಬಳಸುವ ತ್ರಿಕೋನಾಕಾರದ  ಪಿನ್‌ಗಳು ಮತ್ತು ವಿವಿಧ ತೂಕದ ಚೆಂಡುಗಳನ್ನು ವಿದೇಶದಿಂದಲೇ ತರಿಸಬೇಕು. ಇದಕ್ಕೆ ಅಪಾರ ಹಣ ಖರ್ಚಾಗುತ್ತದೆ. ನಮಗೆ ಸರ್ಕಾರದಿಂದ ನಯಾ ಪೈಸೆಯೂ ಸಿಗುತ್ತಿಲ್ಲ. ಹೀಗಾಗಿ ಖಾಸಗಿ ಯವರ ಜೊತೆ ಕೈಜೋಡಿಸಿದ್ದೇವೆ’ ಎಂದು ಕಣ್ಣನ್‌ ನುಡಿಯುತ್ತಾರೆ.
 
ಕೈಗೆಟುಕದ ಬೆಲೆ 
ಟೆನ್‌ಪಿನ್‌ ಅನ್ನು ಶ್ರೀಮಂತರ ಆಟ ಎಂದೇ ಹೇಳಲಾಗುತ್ತದೆ. ಈ ಆಟ ಕಲಿಯಲು ಲಕ್ಷಾಂತರ ಹಣ ಖರ್ಚಾಗುತ್ತದೆ. ಹೀಗಾಗಿ ಬಹುತೇಕ ಪೋಷಕರು  ತಮ್ಮ ಮಕ್ಕಳಿಗೆ ಈ ಆಟ ಕಲಿಸಲು ಹಿಂದೇಟು ಹಾಕುತ್ತಾರೆ ಎಂಬ ವಾದವೂ ಇದೆ. ಆದರೆ ಕಣ್ಣನ್‌  ಈ ಮಾತು  ಒಪ್ಪುವುದಿಲ್ಲ.
 
‘ಟೆನ್‌ಪಿನ್‌ಗಿಂತ ಟೆನಿಸ್‌  ಕಲಿಯಲು ಸಾಕಷ್ಟು  ಹಣ ವೆಚ್ಚವಾಗುತ್ತದೆ. ಹಾಗಂತ  ಪೋಷಕರು ಸುಮ್ಮನಿದ್ದಾರೆಯೇ.  ಮಕ್ಕಳಿಗೆ ಟೆನಿಸ್‌ ಕಲಿಸುತ್ತಿಲ್ಲವೇ’ ಎಂದು ಅವರು ಪ್ರಶ್ನಿಸುತ್ತಾರೆ.
 
**
ಆಕಾಶ್‌ ಸಂದರ್ಶನ
ಇನ್ನಷ್ಟು ಸಾಧನೆಯ ಹಂಬಲ
ಕರ್ನಾಟಕದ ಆಕಾಶ್‌ ಅಶೋಕ್‌ ಕುಮಾರ್‌ ಅವರು ಭಾರತದ ಟೆನ್‌ಪಿನ್‌ ಲೋಕದಲ್ಲಿ ತಮ್ಮದೇ ಆದ ಹೆಜ್ಜೆ ಗುರುತು ಮೂಡಿಸಿದ್ದಾರೆ.
ರಾಜ್ಯ ಮತ್ತು ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗಳಲ್ಲಿ ಮಿಂಚು ಹರಿಸುತ್ತಿರುವ 27 ವರ್ಷದ ಆಟಗಾರ , ಕಾಮನ್‌ವೆಲ್ತ್‌ ಚಾಂಪಿಯನ್‌ಷಿಪ್‌ನಲ್ಲಿ ಎರಡು ಕಂಚಿನ ಪದಕ ಗೆದ್ದ ಹೆಗ್ಗಳಿಕೆ ಹೊಂದಿದ್ದಾರೆ. ಅವರು ತಾವು ಬೆಳೆದು ಬಂದ ಹಾದಿಯ ಬಗ್ಗೆ ‘ಪ್ರಜಾವಾಣಿ’ ಜೊತೆ ಮಾತನಾಡಿದ್ದಾರೆ.
 
* ಟೆನ್‌ಪಿನ್‌ಗೆ ಅಡಿಯಿಟ್ಟ ಬಗ್ಗೆ ಹೇಳಿ?
ಕಾಲೇಜು ದಿನಗಳಲ್ಲಿ ಸ್ನೇಹಿತರ ಜೊತೆ ಮಾಲ್‌ಗಳಿಗೆ ಹೋದಾಗಲೆಲ್ಲಾ ಮನ ರಂಜನೆಗಾಗಿ ಟೆನ್‌ಪಿನ್‌ ಆಡುತ್ತಿದ್ದೆ. ಕ್ರಮೇಣ ಇದನ್ನು ಗಂಭೀರವಾಗಿ ಪರಿಗಣಿಸಿ 2008ರಲ್ಲಿ ವೃತ್ತಿಪರ ಆಟಗಾರನಾಗಿ ಈ ಕ್ರೀಡೆಗೆ ಅಡಿ ಇಟ್ಟೆ. ಆ ನಂತರ ಸತತ ಆರು ವರ್ಷ ನುರಿತ ಕೋಚ್‌ಗಳ ಮಾರ್ಗದರ್ಶನದಲ್ಲಿ ಹಲವು ಕೌಶಲಗಳನ್ನು ಕಲಿತೆ.
 
* ಈ ಕ್ರೀಡೆಯನ್ನೇ ವೃತ್ತಿಪರವಾಗಿ ಸ್ವೀಕರಿಸಿದ್ದು ಏಕೆ?
ಎಂಟು ವರ್ಷಗಳ ಹಿಂದೆ ಕ್ರಿಕೆಟ್‌, ಫುಟ್‌ಬಾಲ್‌, ಟೆನಿಸ್‌ ಕಲಿಯುವವರ ಸಂಖ್ಯೆ ಹೆಚ್ಚಿತ್ತು. ಆ ಕ್ರೀಡೆಗಳಲ್ಲಿ ತೊಡಗಿಕೊಂಡರೆ ಹೆಚ್ಚು ಅವಕಾಶ ಸಿಗುವುದಿಲ್ಲ ಎಂದು ಅನಿಸಿತು. ಜೊತೆಗೆ ಟೆನ್‌ಪಿನ್‌ನಲ್ಲಿ ಮೊದಲಿನಿಂದಲೂ ಆಸಕ್ತಿ ಇತ್ತು. ಹೀಗಾಗಿ ಇದರಲ್ಲಿ ಎತ್ತರದ ಸಾಧನೆ ಮಾಡಬೇಕೆಂದು ನಿರ್ಧರಿಸಿದೆ.
 
* ಕಾಮನ್‌ವೆಲ್ತ್‌ ಚಾಂಪಿಯನ್‌ಷಿಪ್‌ನಲ್ಲಿ ಎರಡು ಕಂಚು ಗೆದ್ದಿದ್ದೀರಿ. ಈ ಸಾಧನೆ ಬಗ್ಗೆ ಹೇಳಿ?
2011ರಲ್ಲಿ ಮಲೇಷ್ಯಾದಲ್ಲಿ ನಡೆದಿದ್ದ ಚಾಂಪಿಯನ್‌ಷಿಪ್‌ನಲ್ಲಿ ಮೊದಲ ಬಾರಿಗೆ  ಭಾಗವಹಿಸಿದ್ದೆ. ಆಗ ತಂಡ ವಿಭಾಗದಲ್ಲಿ ಕಂಚಿನ ಸಾಧನೆ ಮೂಡಿಬಂದಿತ್ತು. 2016ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದಿದ್ದ  ಚಾಂಪಿಯನ್‌ಷಿಪ್‌ನ ಸಿಂಗಲ್ಸ್‌ ವಿಭಾಗದಲ್ಲೂ ಕಂಚು ಗೆದ್ದಿದ್ದೆ. ಆಗ ತುಂಬಾ ಹೆಮ್ಮೆ ಎನಿಸಿತ್ತು.
 
* ಅಭ್ಯಾಸ ಕ್ರಮದ ಬಗ್ಗೆ ಹೇಳಿ?
ಮುಂಜಾನೆ ಜಿಮ್‌ನಲ್ಲಿ ಕೆಲ ಕಾಲ ದೈಹಿಕ ಕಸರತ್ತು ನಡೆಸುತ್ತೇನೆ. ಆ ನಂತರ  9ರಿಂದ 12 ಗಂಟೆಯವರೆಗೆ ಅಭ್ಯಾಸ ನಡೆಸುತ್ತೇನೆ. ಮತ್ತೆ ಮಧ್ಯಾಹ್ನ 2 ಗಂಟೆಯಿಂದ 4ರವರೆಗೆ ತಾಲೀಮು ಮುಂದುವರಿಸುತ್ತೇನೆ.  
 
* ನಿಮಗೆ ಪ್ರೇರಣೆ ಯಾರು?
ಆರಂಭದಲ್ಲಿ ವಿಜಯ್‌ ಪಂಜಾಬಿ ಅವರನ್ನು ನೋಡಿ ಸಾಕಷ್ಟು ಕಲಿತಿದ್ದೇನೆ. ಈಗ ದೆಹಲಿಯ ಧ್ರುವ ಸರ್ದಾ ತುಂಬಾ ಚೆನ್ನಾಗಿ ಆಡುತ್ತಿದ್ದಾರೆ. ಅವರ ಆಟ ನೋಡಲು ತುಂಬಾ ಖುಷಿಯಾಗುತ್ತದೆ. 
 
 * ಮುಂದಿನ ಗುರಿ?
ಸದ್ಯದಲ್ಲೇ ಥಾಯ್ಲೆಂಡ್‌ ಮತ್ತು ದುಬೈ ಓಪನ್‌ ಟೂರ್ನಿಗಳಿವೆ. ಅದಾದ ನಂತರ ಸೆಪ್ಟೆಂಬರ್‌ನಲ್ಲಿ ಏಷ್ಯನ್‌ ಒಳಾಂಗಣ ಕ್ರೀಡಾಕೂಟ ನಡೆಯುತ್ತದೆ.  ಈ ಚಾಂಪಿ ಯನ್‌ಷಿಪ್‌ಗಳಲ್ಲಿ ಪ್ರಶಸ್ತಿ ಗೆಲ್ಲುವ ಗುರಿ ಇಟ್ಟುಕೊಂಡಿದ್ದೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT