ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೃತ್ತಿಪರ ಬಾಕ್ಸಿಂಗ್‌ ಏರುಗತಿ...

Last Updated 26 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ
‘ಇದು ವಿಜೇಂದರ್‌ ವಿಜಯ’
ಹಾಗಂತ ಭಾರತದ ಬಾಕ್ಸಿಂಗ್ ಜಗತ್ತು ತುಂಬಾ ಖುಷಿಯಿಂದ ಮಾತನಾಡಿ ಕೊಳ್ಳುತ್ತಿದೆ. 
 
ಯಾವುದಾದರೂ ಹೊಸ ಸಾಹಸಕ್ಕೆ ಕೈ ಹಾಕಿದಾಗ ಆರಂಭದಲ್ಲಿ ವಿರೋಧ, ಅವನಿಂದ ಏನು ಸಾಧ್ಯ ಎನ್ನುವ ಕುಹಕ ಮಾತುಗಳ ಸಾಮಾನ್ಯ. ಇದೆಲ್ಲವನ್ನೂ ಮೀರಿ ಗುರಿಯತ್ತ ಮುನ್ನಡೆದಾಗ ಟೀಕಿಸಿದ ಜನರೇ ಶ್ಲಾಘಿಸುತ್ತಾರೆ. ಇದು ಒಲಿಂಪಿಯನ್ ಬಾಕ್ಸರ್‌ ವಿಜೇಂದರ್ ಸಿಂಗ್ ವಿಷಯದಲ್ಲಿಯೂ ನಿಜವಾಗಿದೆ. 
 
ಹರಿಯಾಣದ ಭಿವಾನಿ ಜಿಲ್ಲೆಯ ಕುಲುವಾಸ್ ಗ್ರಾಮದ ವಿಜೇಂದರ್ ಎರಡು ವರ್ಷಗಳ ಹಿಂದೆ ‘ಅಮೆಚೂರ್ ಬಾಕ್ಸಿಂಗ್‌ನಲ್ಲಿ ಗುದ್ದಾಟ ಸಾಕಿನ್ನು, ವೃತ್ತಿಪರ ಬಾಕ್ಸಿಂಗ್‌ನಲ್ಲಿ ಸಾಧನೆ ಮಾಡುತ್ತೇನೆ’ ಎಂದು ದಿಟ್ಟ ನಿರ್ಧಾರ ಪ್ರಕಟಿಸಿದಾಗ ಅಚ್ಚರಿಪಟ್ಟವರೇ ಹೆಚ್ಚು.
 
ವಿಜೇಂದರ್ ಅಮೆಚೂರ್ ಬಾಕ್ಸಿಂಗ್‌ನಲ್ಲಿ ವಿಫಲರೇನೂ ಆಗಿರಲಿಲ್ಲ. 2008ರ ಬೀಜಿಂಗ್‌ ಒಲಿಂಪಿಕ್ಸ್‌ನ ಮಿಡ್ಲ್‌ವೇಟ್ ವಿಭಾಗದಲ್ಲಿ ಕಂಚಿನ ಪದಕ ಜಯಿಸಿದ್ದರು. ಒಲಿಂಪಿಕ್ಸ್‌ನ ಬಾಕ್ಸಿಂಗ್‌ನಲ್ಲಿ ಪದಕ ಗೆದ್ದ ಭಾರತದ ಮೊದಲ ಬಾಕ್ಸರ್‌ ಎನ್ನುವ ಹೆಗ್ಗಳಿಕೆ ವಿಜೇಂದರ್ ಹೆಸರಿನಲ್ಲಿದೆ. ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚು, ಕಾಮನ್‌ವೆಲ್ತ್‌ ಕ್ರೀಡಾಕೂಟ, ಏಷ್ಯನ್‌ ಕ್ರೀಡಾಕೂಟ ಮತ್ತು ಏಷ್ಯನ್‌ ಚಾಂಪಿಯನ್‌ಷಿಪ್‌ ಹೀಗೆ ಪ್ರತಿ ಟೂರ್ನಿ ಯಲ್ಲಿಯೂ ಸಾಲು ಸಾಲಾಗಿ ಪದಕಗಳನ್ನು ಜಯಿಸಿದ್ದಾರೆ. ಅವರು ಮನಸ್ಸು ಮಾಡಿದ್ದರೆ ಇಷ್ಟೇ ಸಾಧನೆಗೆ ಸಮಾಧಾನ ಪಟ್ಟುಕೊಳ್ಳಬಹುದಿತ್ತು.
 
ಆದರೆ ಸಾಹಸಿ ವಿಜೇಂದರ್‌ ವೃತ್ತಿಪರ ಬಾಕ್ಸಿಂಗ್‌ನಲ್ಲಿ ಪಾಲ್ಗೊಳ್ಳುತ್ತೇನೆ ಎಂದು ಹೇಳಿ ಲಂಡನ್‌ನಲ್ಲಿ ಒಪ್ಪಂದಕ್ಕೆ ಸಹಿ ಹಾಕಿಬಿಟ್ಟರು. ಆಗ ರಿಯೊ ಒಲಿಂಪಿಕ್ಸ್ ಆರಂಭವಾಗಲು ಒಂದು ವರ್ಷವಷ್ಟೇ ಬಾಕಿಯಿತ್ತು. ವಿಶ್ವ ಚಾಂಪಿಯನ್‌ಷಿಪ್‌ ಎದುರಿಗಿತ್ತು. ಅಂತರರಾಷ್ಟ್ರೀಯ ಮಟ್ಟದ ಅನೇಕ ಬಾಕ್ಸಿಂಗ್‌ ಕ್ರೀಡಾಕೂಟಗಳಿದ್ದವು. ಆದ್ದರಿಂದ ಆಗ ಕೆಲ ಬಾಕ್ಸಿಂಗ್ ಪ್ರೇಮಿಗಳು ಮತ್ತು ಇನ್ನೂ ಕೆಲ ಬಾಕ್ಸರ್‌ಗಳು ವಿಜೇಂದರ್ ವಿರುದ್ಧ ಮಾತಿನ ‘ಪಂಚ್‌’ ಹರಿಯ ಬಿಟ್ಟರು. ಏಕೆಂದರೆ ನಿಯಮಾವಳಿ ಪ್ರಕಾರ ವೃತ್ತಿಪರ ಬಾಕ್ಸಿಂಗ್‌ನಲ್ಲಿ ಆಡುವವರು ಅಮೆಚೂರ್‌ನಲ್ಲಿ ಪಾಲ್ಗೊಳ್ಳುವಂತಿಲ್ಲ. ಏನೇ ವಿರೋಧ ವ್ಯಕ್ತವಾದರೂ ಅದನ್ನು ಲೆಕ್ಕಿಸದೇ ವಿಜೇಂದರ್ ಈಗ ವೃತ್ತಿಪರ ಬಾಕ್ಸಿಂಗ್‌ನಲ್ಲಿ ಪ್ರತಿ ಹೆಜ್ಜೆಯಲ್ಲಿಯೂ ಯಶಸ್ಸು ಪಡೆಯುತ್ತಿದ್ದಾರೆ.
 
ಕೂಸು ಯಾವ ಲೆಕ್ಕ
ವಿಜೇಂದರ್‌ 2015ರ ಅಕ್ಟೋಬರ್‌ನಲ್ಲಿ ಮ್ಯಾಂಚೆಸ್ಟರ್‌ ಅರೆನಾದಲ್ಲಿ ಚೊಚ್ಚಲ ವೃತ್ತಿಪರ ಪಂದ್ಯವಾಡಲು ಸಜ್ಜಾಗುತ್ತಿ ದ್ದಾಗಲೂ ಅವರ ನಿರ್ಧಾರ ವನ್ನು ವಿರೋಧಿಸುವವರ ದೊಡ್ಡ ಪಡೆಯೇ ಇತ್ತು. ಕೆಲವೇ ನಿಮಿಷಗಳಲ್ಲಿ ವಿಜೇಂದರ್ ಸೋತು ಸುಣ್ಣವಾಗುತ್ತಾರೆ ಎಂದು ಹೀಯಾಳಿಸಿದ್ದರು. ವಿಜೇಂದರ್ ಅವರನ್ನು ತಮ್ಮ ದೇಶದ ಬಾಕ್ಸಿಂಗ್ ಪ್ರೇಮಿಗಳು ವಿರೋಧಿ ಸಿದ್ದರಿಂದ ಎದುರಾಳಿ ಇಂಗ್ಲೆಂಡ್‌ನ ಸೊನ್ನಿ ವೈಟಿಂಗ್‌ಗೆ ಆನೆಬಲ ಬಂದಂತಾಗಿತ್ತು. ಆದ್ದರಿಂದ ಅವರು ‘ವೃತ್ತಿಪರ ಬಾಕ್ಸಿಂಗ್‌ನಲ್ಲಿ ಅಂಬೆಗಾಲು ಇಡುತ್ತಿರುವ ವಿಜೇಂದರ್‌ ನನಗೆ ಯಾವ ಲೆಕ್ಕ. ಅವನಿನ್ನು ಕೂಸು’ ಎಂದು ಆತ್ಮಬಲ ಕುಗ್ಗಿಸುವ ಮಾತುಗಳನ್ನು ವೈಟಿಂಗ್ ಆಡಿದ್ದರು.
 
ವಿಜೇಂದರ್‌ ಅವರ ಮೊದಲ ವೃತ್ತಿಪರ ಬಾಕ್ಸಿಂಗ್ ಪಂದ್ಯ ಭಾರತದ ಕ್ರೀಡಾ ಇತಿಹಾಸದಲ್ಲಿ ಹೊಸ ಮೈಲುಗಲ್ಲಾಯಿತು. ವಿಜೇಂದರ್ ಸೋಲನ್ನೇ ಎದುರು ನೋಡುತ್ತಿದ್ದವರಿಗೆ ಅಚ್ಚರಿ ಕಾದಿತ್ತು. ಅವರು ಹೋರಾಡಿ ಕೆಲವೇ ನಿಮಿಷಗಳಲ್ಲಿ ಗೆದ್ದರು. ಆಗ ವಿಜೇಂದರ್ ತೆಗೆದುಕೊಂಡ ನಿರ್ಧಾರಕ್ಕೆ ಭಾರಿ ಬೆಂಬಲ ವ್ಯಕ್ತವಾಯಿತು. ವಿರೋಧಿಸಿದ್ದವರೇ ಈಗ ಅಭಿಮಾನಿಗಳಾ ಗಿದ್ದಾರೆ.  ಸತತ ಎಂಟು ಪಂದ್ಯಗಳಲ್ಲಿ ಗೆದ್ದು ಪ್ರಶಸ್ತಿ ಸುತ್ತಿಗೂ ತಲುಪಿದರು.
 
ವೃತ್ತಿಪರ ಬಾಕ್ಸಿಂಗ್‌ನಲ್ಲಿ ಈಗಾಗಲೇ ಅನುಭವಿಗಳಾಗಿರುವ ಇಂಗ್ಲೆಂಡ್‌ನ ಡಿಯಾನ್‌ ಗಿಲ್ಲಿನ್‌, ಬಲ್ಗೇರಿಯಾದ ಸ್ಯಾಮಿತ್‌ ಹುಸೆಯಿನೊವ್‌, ಹಂಗರಿಯ ಅಲೆಕ್ಸಾಂಡರ್‌ ಹೋರ್ವತ್‌, ಆಸ್ಟ್ರೇಲಿಯಾದ ಕೆನ್ರಿ ಹೋಪ್‌, ತಾಂಜಾನಿಯಾದ ಫ್ರಾನ್ಸಿಸ್‌ ಚೇಕಾ ಹೀಗೆ ಅನೇಕ ಬಾಕ್ಸರ್‌ಗಳ ವಿರುದ್ಧ ವಿಜೇಂದರ್‌ ಮುಷ್ಠಿಪ್ರಹಾರ ನಡೆಸಿದರು.
 
ವೃತ್ತಿಪರ ಬಾಕ್ಸರ್‌ ಆಗಿ ಒಂದೂವರೆ ವರ್ಷ ಕಳೆಯುವಷ್ಟರಲ್ಲಿ ಡಬ್ಲ್ಯುಬಿಒ ಏಷ್ಯಾ ಪೆಸಿಫಿಕ್‌ ಸೂಪರ್ ಮಿಡ್ಲ್‌ವೇಟ್ ವಿಭಾಗದಲ್ಲಿ ಸತತ ಎರಡು ಸಲ ಪ್ರಶಸ್ತಿ ಗೆದ್ದರು. ಕೆಲ ತಿಂಗಳುಗಳಲ್ಲಿಯೇ ಇಷ್ಟೆಲ್ಲಾ ಸಾಧನೆ ಮಾಡಿ ಭಾರತದ ಮತ್ತಷ್ಟು ಹೊಸ ಬಾಕ್ಸರ್‌ಗಳು ವೃತ್ತಿಪರ ಬಾಕ್ಸಿಂಗ್‌ನತ್ತ ಮುಖ ಮಾಡಲು ಸ್ಫೂರ್ತಿಯಾದರು. ಮಹಿಳಾ ಬಾಕ್ಸರ್‌ ಎಲ್‌. ಸರಿತಾ ದೇವಿ ಅವರಿಗೂ ಪ್ರೇರಣೆಯಾದರು. 
 
(ಎಲ್‌. ಸರಿತಾ ದೇವಿ)
 
ಹಾದಿ ಸುಲಭವಲ್ಲ
ಕೆಲವೇ ತಿಂಗಳುಗಳಲ್ಲಿ ಜಿದ್ದಿಗೆ ಬಿದ್ದಂತೆ ವೃತ್ತಿಪರ ಬಾಕ್ಸಿಂಗ್ ಸೇರುತ್ತಿರುವ ಭಾರತದ ಬಾಕ್ಸರ್‌ಗಳ ಹಾದಿ ಸುಲಭವಾಗಿಲ್ಲ. ವಿಶ್ವಮಟ್ಟದಲ್ಲಿ ಶ್ರೇಷ್ಠ ಬಾಕ್ಸರ್‌ಗಳ ಸವಾಲು ಎದುರಿಸಬೇಕು.
 
ದೈಹಿಕವಾಗಿ ಸಾಕಷ್ಟು ಬಲಿಷ್ಠವಾಗಿದ್ದು ಗಟ್ಟಿ ಮುಷ್ಠಿ ಪ್ರಹಾರ ಮಾಡುವಲ್ಲಿ ನಿಸ್ಸೀಮರಾಗಿರಬೇಕಾಗುತ್ತದೆ. ಎದುರಾಳಿ ಸ್ಪರ್ಧಿಯಿಂದ ಪಾಯಿಂಟ್ ಪಡೆದುಕೊಳ್ಳುವುದಕ್ಕಿಂತ ಹೆಚ್ಚಾಗಿ ತಾವೇ ತಪ್ಪು ಮಾಡಿ ಎದುರಾಳಿಗೆ ಪಾಯಿಂಟ್‌ ಬಿಟ್ಟುಕೊಡದಂತೆ ಎಚ್ಚರಿಕೆ ವಹಿಸಬೇಕಾಗುತ್ತದೆ. ಹೆಸರಾಂತ ಬಾಕ್ಸರ್‌ಗಳಾದ ಫ್ಲಾಯ್ಡ್ ಮೇವೆದರ್‌ ಜೂನಿಯರ್‌, ಜೆರ್ರಿ ಕ್ವಾರಿ, ಜ್ಯಾಕ್‌ ಡೆಂಪ್ಸೆ, ರಾಕಿ ಮಾರ್ಸಿಯಾನೊ, ಜೂಲಿಯೊ ನೇಸರ್‌ ಅವರೆಲ್ಲಾ ವಿರೋಧಿಗಳ ತಪ್ಪುಗಳಿಂದಲೇ ಪಾಯಿಂಟ್ ಪಡೆಯುವ ತಂತ್ರಕ್ಕೆ ಮುಂದಾಗುವುದು ಹೆಚ್ಚು.
 
ಈಗಿನ ಪಂದ್ಯಗಳೆಲ್ಲಾ ಗ್ಲ್ಯಾಮರ್ ಸ್ವರೂಪ ಪಡೆದುಕೊಂಡಿರುವ ಕಾರಣ ವೃತ್ತಿಪರ ಬಾಕ್ಸಿಂಗ್‌ನ ಪಂದ್ಯ ಗೆಲ್ಲುವುದು ಪ್ರತಿಷ್ಠೆ ಎನಿಸಿದೆ. ಲಕ್ಷಾಂತರ ಜನ ಬೆಟ್‌ ಕಟ್ಟುವವರೂ ಇದ್ದಾರೆ. ದೊಡ್ಡ ದೊಡ್ಡ ಟೂರ್ನಿ ಗಳಲ್ಲಿ ಗೆದ್ದರೆ ಕೋಟಿ ಕೋಟಿ ಹಣ ಲಭಿಸುತ್ತದೆ. ಎರಡು ವರ್ಷಗಳ ಹಿಂದೆ ಲಾಸ್‌ ವೆಗಾಸ್‌ನಲ್ಲಿ ಮ್ಯಾನಿ ಪ್ಯಾಕ್ವಿಯೊ ಮತ್ತು ಫ್ಲಾಯ್ಡ್ ಮೇವೆದರ್‌ ನಡುವೆ ‘ಶತಮಾನದ ಬಾಕ್ಸಿಂಗ್‌’ ನಡೆದಿತ್ತು. ಅಲ್ಲಿ ಜಯ ಪಡೆದ  ಮೇವದರ್‌ಗೆ ₹ 900 ಕೋಟಿ, ಎರಡನೇ ಸ್ಥಾನ ಗಳಿಸಿದ ಪ್ಯಾಕ್ವಿಯೊಗೆ ₹ 600 ಕೋಟಿ ಬಹುಮಾನ ಲಭಿಸಿತ್ತು. ಜಾಹೀರಾತು ಆದಾಯ, ಪ್ರಾಯೋಜಕರು ಮತ್ತು ಟಿಕೆಟ್‌ನಿಂದ ಪಡೆದ ಹಣದಿಂದಲೇ ಸಂಘಟಕರು ಕೋಟಿಗಟ್ಟಲೇ ಹಣ ಸಂಪಾದಿಸಿದರು.
 
ವೃತ್ತಿಪರ ಬಾಕ್ಸಿಂಗ್‌ ಪಂದ್ಯ ನಡೆಯುವಾಗ ರೋಮಾಂಚಕ ಎನಿಸಬಹುದು. ಅವರ ಸಾಧನೆ ಬಗ್ಗೆ ಹೆಮ್ಮೆಯೂ ಆಗಬಹುದು. ಆದರೆ ಸ್ವಲ್ಪ ಹೆಚ್ಚು ಕಡಿಮೆಯಾದರೂ ಬದುಕು ದುರಂತವಾಗುವ ಅಪಾಯವೂ ಇದೆ. ಬಾಕ್ಸಿಂಗ್‌ ದಂತಕತೆ ಮಹಮ್ಮದ್ ಅಲಿ ಅವರ ಬದುಕು ಇದಕ್ಕೊಂದು ಉದಾಹರಣೆ. ಬಾಕ್ಸಿಂಗ್‌ ರಿಂಗ್‌ನಲ್ಲಿ ತಿಂದ ಪೆಟ್ಟುಗಳಿಂದ ಅಲಿ ಅವರು ಪಾರ್ಕಿನ್ಸನ್‌ ಖಾಯಿಲೆ ಯಿಂದ 32 ವರ್ಷಗಳ ಕಾಲ ಬಳಲಿದರು. 
 
ಆದ್ದರಿಂದ ವೃತ್ತಿಪರ ಬಾಕ್ಸಿಂಗ್‌ನಲ್ಲಿನ ಪ್ರತಿ ಹೆಜ್ಜೆಯೂ ಮುಳ್ಳಿನ ನಡಿಗೆಯೇ. ಇಷ್ಟೆಲ್ಲಾ ಕಷ್ಟಗಳು ಗೊತ್ತಿದ್ದೂ ವಿಜೇಂದರ್‌ ಮುನ್ನುಗ್ಗಿ ಯಶಸ್ಸು ಕಂಡಿದ್ದಾರೆ. ಅವರ ಹಾದಿಯಲ್ಲಿ ಭಾರತದ ಮತ್ತಷ್ಟು ಬಾಕ್ಸರ್‌ಗಳು ಸಾಗುತ್ತಿದ್ದಾರೆ. ಇದೆಲ್ಲವೂ ವಿಜೇಂದರ್‌ಗೆ ಸಲ್ಲಬೇಕಾದ ಶ್ರೇಯಸ್ಸು.
 
**
ಶುರುವಾಗಿದೆ ಹೊಸ ಅಲೆ
ವಿಜೇಂದರ್ ಮಾಡಿದ ಮೋಡಿ ಭಾರತದಲ್ಲಿ ಹೊಸ ಅಲೆ ಹುಟ್ಟು ಹಾಕಿದೆ. ಒಂದು ತಿಂಗಳಲ್ಲಿ ನಮ್ಮ ದೇಶದ 13ಕ್ಕೂ ಹೆಚ್ಚು ಬಾಕ್ಸರ್‌ಗಳು ವೃತ್ತಿಪರ ಬಾಕ್ಸಿಂಗ್‌ನಲ್ಲಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ.
 
2004ರ ಅಥೆನ್ಸ್‌ ಒಲಿಂಪಿಕ್ಸ್‌ನಲ್ಲಿ ದೇಶವನ್ನು ಪ್ರತಿನಿಧಿಸಿದ್ದ ಜಾರ್ಖಂಡ್‌ನ ದಿವಾಕರ್ ಪ್ರಸಾದ್‌, ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಚಿನ್ನ ಜಯಿಸಿದ್ದ ಅಮನದೀಪ್‌ ಸಿಂಗ್‌, ಡಬ್ಲ್ಯುಬಿಸಿ ಏಷ್ಯಾ ವೆಲ್ಟರ್‌ವೇಟ್‌ ವಿಭಾಗದಲ್ಲಿ ಪ್ರಶಸ್ತಿ ಪಡೆದಿದ್ದ ನೀರಜ್‌ ಗೋಯತ್‌, ಪವನ್ ಮಾನ್‌, ಹರಿಯಾಣದ ಅಖಿಲ್‌ ಕುಮಾರ್‌, ಜಿತೇಂದರ್‌ ಕುಮಾರ್‌ ಸೇರಿದಂತೆ ಇತರರು ವೃತ್ತಿಪರ ಬಾಕ್ಸಿಂಗ್‌ನಲ್ಲಿ ಸಾಮರ್ಥ್ಯ ಸಾಬೀತ ಮಾಡಲು ಸಜ್ಜಾಗಿದ್ದಾರೆ.
 
ಬ್ಯಾಂಟಮ್‌ವೇಟ್ ವಿಭಾಗದಲ್ಲಿ ಪರಿಣತಿ ಹೊಂದಿರುವ ಹರಿಯಾಣದ ಅಖಿಲ್‌ 2006ರ ಮೆಲ್ಬರ್ನ್ ಕಾಮನ್‌ವೆಲ್ತ್ ಕೂಟದಲ್ಲಿ ಚಿನ್ನ ಜಯಿಸಿದ್ದರು. ನಂತರದ ವರ್ಷದಲ್ಲಿ ಉಲಾನ್ ಬಾತರ್‌ನಲ್ಲಿ ಜರುಗಿದ ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದರು. ಬೀಜಿಂಗ್ ಒಲಿಂಪಿಕ್ಸ್‌ನಲ್ಲಿಯೂ ಪಾಲ್ಗೊಂಡಿದ್ದರು. ‘ವಯಸ್ಸು 35 ಆದರೂ ಮುಷ್ಠಿಪ್ರಹಾರ ಮಾಡುವ ತಾಕತ್ತು ಇನ್ನೂ ಪ್ರಖರವಾಗಿದೆ. ವೃತ್ತಿಪರ ಬಾಕ್ಸಿಂಗ್‌ನಲ್ಲಿ ಯಶಸ್ಸು ಕಾಣುತ್ತೇನೆ’ ಎಂದು ಅವರು ಹೇಳಿದ್ದಾರೆ. ಇವರೆಲ್ಲರೂ ಐಒಎಸ್‌ ಬಾಕ್ಸಿಂಗ್ ಪ್ರೊಮೋಷನ್ಸ್ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ.
 
ಪುರುಷರ ವಿಭಾಗದಲ್ಲಷ್ಟೆ ಅಲ್ಲದೇ, ಮಹಿಳಾ ಬಾಕ್ಸರ್‌ಗಳು ವೃತ್ತಿಪರ ಬಾಕ್ಸಿಂಗ್‌ನತ್ತ ಮುನ್ನುಗ್ಗುತ್ತಿದ್ದಾರೆ. ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಮೂರು, ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಐದು, ಏಷ್ಯನ್‌ ಕ್ರೀಡಾಕೂಟ ಮತ್ತು ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ತಲಾ ಒಂದು ಪದಕ ಗೆದ್ದಿರುವ ಸರಿತಾ ದೇವಿ ಅವರು ವಿಜೇಂದರ್ ಹಾದಿಯಲ್ಲಿ ಸಾಗಲು ನಿರ್ಧರಿಸಿದ್ದಾರೆ. ಪಿಂಕಿ ಜಾಂಗ್ರಾ ಕೂಡ ವೃತ್ತಿಪರ ಬಾಕ್ಸಿಂಗ್‌ನಲ್ಲಿ ಸೆಣಸಲಿದ್ದಾರೆ. ಹರಿಯಾಣದ ಹಿಸ್ಸಾರ್‌ನ ಪಿಂಕಿ ಅವರು ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ನಾಲ್ಕು ಪದಕಗಳನ್ನು ಜಯಿಸಿದ್ದಾರೆ.
 
**
ವೃತ್ತಿಪರ ಬಾಕ್ಸಿಂಗ್ ನಡೆಸುವ ಪ್ರಮುಖ ಸಂಸ್ಥೆಗಳು
* ಅಂತರರಾಷ್ಟ್ರೀಯ ಬಾಕ್ಸಿಂಗ್ ಸಂಸ್ಥೆ 
* ಅಂತರರಾಷ್ಟ್ರೀಯ ಬಾಕ್ಸಿಂಗ್ ಫೆಡರೇಷನ್ 
* ವಿಶ್ವ ಬಾಕ್ಸಿಂಗ್ ಸಂಘಟನೆ 
* ವಿಶ್ವ ಬಾಕ್ಸಿಂಗ್ ಸಂಸ್ಥೆ 
* ವಿಶ್ವ ಬಾಕ್ಸಿಂಗ್ ಕೌನ್ಸಿಲ್ 

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT