ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಆಸ್ಪತ್ರೆಗಳಿಗೆ ಮಾದರಿ

Last Updated 26 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ
ಸರ್ಕಾರಿ ಆಸ್ಪತ್ರೆಗಳಿಗೆ ಮಾದರಿ 
ಮೂಡುಬಿದಿರೆಯಲ್ಲಿ  8ನೇ ತರಗತಿ ಓದುತ್ತಿರುವ ನನ್ನ ಮಗನಿಗೆ ಆರೋಗ್ಯ ಕೆಟ್ಟಾಗ ನಾವು ವಾಸವಿರುವ ಹೂವಿನಹಡಗಲಿಗೆ ಕರೆತಂದು ಚಿಕಿತ್ಸೆ ಕೊಡಿಸಲಾಯಿತು. ಗುಣಮುಖನಾದ ನಂತರ ಶಾಲೆಗೆ ನಾನೇ ಕರೆದುಕೊಂಡು ಹೋದೆ. ರುಬೆಲ್ಲಾ ಲಸಿಕೆ ಹಾಕಿಸಲು ಶಾಲೆಯಲ್ಲಿ ಕೇಳಿದಾಗ, ‘ಕಳೆದ ವಾರವೇ ನಮ್ಮ ಶಾಲೆಯಲ್ಲಿ ಲಸಿಕೆ ಹಾಕಿದ್ದಾರೆ. ನೀವು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿ’ ಎಂದು ಸೂಚಿಸಿದರು. 
 
ಅವರ ಸೂಚನೆಯಂತೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ಹೋದೆವು. ಒಳಗೆ ಹೋಗಿ ನೋಡಿದರೆ ನನಗಾದ ಆಶ್ಚರ್ಯ ಅಷ್ಟಿಷ್ಟಲ್ಲ! ಆಸ್ಪತ್ರೆಯ ಶುಚಿತ್ವ ನಮ್ಮನ್ನು ಸ್ವಾಗತಿಸಿತು. ಆಸ್ಪತ್ರೆಯ ಯಾವುದೇ ಭಾಗದಲ್ಲೂ ಕಸ-ಕಡ್ಡಿ, ಗಲೀಜು ಕಾಣಿಸಲೇ ಇಲ್ಲ. ಖಾಸಗಿ ಆಸ್ಪತ್ರೆಗಳನ್ನೂ ಮೀರಿಸುವಂತಹ ಶುಚಿತ್ವ! 
ಇಷ್ಟು ಮಾತ್ರವಲ್ಲ, ಲಸಿಕಾ ಕೊಠಡಿಯನ್ನು ತಲುಪಿದ ತಕ್ಷಣ  ಮಹಿಳಾ ಆರೋಗ್ಯ ವೈದ್ಯಾಧಿಕಾರಿ ಮುಗುಳ್ನಗುತ್ತಾ ‘ಲಸಿಕೆ ಹಾಕಿಸಲು ಬಂದಿದ್ದೀರಾ’ ಎಂದು ಪ್ರಶ್ನಿಸಿದರು. ನಾನು, ಹೌದು ಎಂಬಂತೆ ತಲೆ ಆಡಿಸಿದೆ. ಅದಕ್ಕವರು ಕುರ್ಚಿಯನ್ನು ತೋರಿಸುತ್ತಾ,  ‘ಐದು ನಿಮಿಷ ಕುಳಿತುಕೊಳ್ಳಿ,  ಸಿಬ್ಬಂದಿ ಸ್ವಲ್ಪ ಆಚೀಚೆ ಆಗಿದ್ದಾರೆ (ಬೇರೆ ಬೇರೆ ಕಡೆ ನಿಯೋಜಿಸಲಾಗಿದೆ)’ ಎಂದು ಹೇಳಿ ಹೊರಟು ಹೋದರು.
 
ಅವರು ತೋರಿಸಿದ ಕುರ್ಚಿಯಲ್ಲಿ  ಕುಳಿತುಕೊಂಡೆವು. ‘ಸ್ವಚ್ಛತೆಯನ್ನು ವೃದ್ಧಿಸಿ ರೋಗವನ್ನು ತೊಲಗಿಸಿ’, ‘ನಾನು ಇಲ್ಲಿ ಗುಣಮುಖನಾಗಲು ಬಂದಿದ್ದೇನೆ. ಸುತ್ತಮುತ್ತಲಿನ ವಾತಾವರಣವನ್ನು ಸ್ವಚ್ಛವಾಗಿಡಿ...’ ಇಂಥ ಘೋಷಣೆಗಳು  ಪ್ರತೀ ಗೋಡೆ ಮೇಲೂ ಇದ್ದವು.  ಅಲ್ಲದೆ ಆರೋಗ್ಯಕ್ಕೆ ಸಂಬಂಧಿಸಿದ ಕರಪತ್ರಗಳನ್ನು  ಒಪ್ಪವಾಗಿ ಜೋಡಿಸಿಡಲಾಗಿತ್ತು.
 
ಇದನ್ನೆಲ್ಲಾ ಗಮನಿಸುತ್ತಾ ಇದ್ದೆ. ಸರಿಯಾಗಿ ಐದು ನಿಮಿಷ ಆಗುತ್ತಲೇ ಮತ್ತೆ  ಮಹಿಳಾ ಆರೋಗ್ಯ ವೈದ್ಯಾಧಿಕಾರಿ ಮುಗುಳ್ನಗುತ್ತಾ ಬಂದು ‘ಇನ್ನೊಂದು ಐದು ನಿಮಿಷ ಕಾಯಿರಿ’ ಎಂದು ಹೇಳಿ ಮತ್ತೆ ಹೊರಟು ಹೋದರು. ನಂತರ ಮೂರು ನಿಮಿಷದೊಳಗೆ ಅವರೇ ಮತ್ತೆ ಬಂದು, ‘ಕಾಯಿಸಿದ್ದಕ್ಕಾಗಿ ಕ್ಷಮಿಸಿ, ಸಿಬ್ಬಂದಿಯ ನಿಯೋಜನೆಗೆ ಸ್ವಲ್ಪ ತಡವಾಯಿತು’ ಎಂದು ಹೇಳಿ, ‘ಈಗ ನೀವು ಲಸಿಕಾ ಕೊಠಡಿಯೊಳಗೆ ಹೋಗಿ ಲಸಿಕೆಯನ್ನು ಹಾಕಿಸಿಕೊಳ್ಳಿ’ ಎಂದು ಲಸಿಕಾ ಕೊಠಡಿ ಕಡೆಗೆ ಕೈತೋರಿಸಿದರು. ನಾನು ಏನೂ ಮಾತನಾಡದೆ ಅಲ್ಲಿ ಹೋದೆ. ಅಲ್ಲಿದ್ದ ಶುಶ್ರೂಷಕಿ, ‘ನಿಮ್ಮನ್ನು ಕಾಯಿಸಿದ್ದಕ್ಕೆ ಬೇಸರಿಸಿಕೊಳ್ಳಬೇಡಿ’ ಎಂದು ಹೇಳಿ ನನ್ನ ಮಗನಿಗೆ ಲಸಿಕೆ ನೀಡಿದರು. 
 
ಕೆಲವು ಸರ್ಕಾರಿ ಆಸ್ಪತ್ರೆಗಳಲ್ಲಿ ಕ್ಷಮೆ ಕೇಳುವುದಿರಲಿ, ಗಂಟೆಗಟ್ಟಲೆ ಕಾದರೂ ಮಾತನಾಡಿಸುವವರು ಇರುವುದಿಲ್ಲ.  ಮೂಡುಬಿದಿರೆಯ ಸಮುದಾಯ ಆರೋಗ್ಯ ಕೇಂದ್ರದವರ ಸೌಜನ್ಯ ನೋಡಿ, ‘ನಾನೆಲ್ಲಿದ್ದೇನೆ’ ಎಂದು ನನ್ನನ್ನು ನಾನೇ ಪ್ರಶ್ನಿಸಿಕೊಂಡೆ. ಇಂತಹ ಆರೋಗ್ಯಕರ ಮನಸ್ಥಿತಿ ಎಲ್ಲಾ ಸರ್ಕಾರಿ ಆಸ್ಪತ್ರೆಗಳ ಸಿಬ್ಬಂದಿಯಲ್ಲೂ ಏಕೆ ಮೂಡಿಲ್ಲ?
ಶ್ರೀನಿವಾಸ ಆರ್.ಟಿ.ಎಸ್., ನಂದಿಹಳ್ಳಿ, ಹೂವಿನಹಡಗಲಿ ತಾಲ್ಲೂಕು
 
‘ಟಿಕೆಟ್’ ಜಟಾಪಟಿ
ಈ ತಿಂಗಳ 20ರಂದು ಮಧ್ಯಾಹ್ನ  1.30ರ  ಸಮಯದಲ್ಲಿ ಬೆಂಗಳೂರು ಕೆಂಪೇಗೌಡ ಬಸ್ ನಿಲ್ದಾಣದಿಂದ ಜೆ.ಪಿ.ನಗರಕ್ಕೆ ಬಿಎಂಟಿಸಿ ಬಸ್‌ನಲ್ಲಿ (ಕೆಎ-01-ಎಫ್‌ಎ-1112) ಪ್ರಯಾಣಿಸುತ್ತಿದ್ದೆ. ನಿರ್ವಾಹಕ ‘ಚೀಟಿಯನ್ನು ಪಡೆದುಕೊಳ್ಳಿ’ ಎಂದು ಬಂದಾಗ, ಹಿರಿಯ ನಾಗರಿಕನಾದ ನಾನು ‘ಸೀನಿಯರ್...’ ಎಂದು ಹೇಳಿ ರಿಯಾಯಿತಿ ಟಿಕೆಟ್ ಪಡೆದುಕೊಂಡೆ. ಮತ್ತೊಬ್ಬರ ಹತ್ತಿರ ನಿರ್ವಾಹಕ ಚೀಟಿ ಹಣ ಕೇಳುತ್ತಿದ್ದಾಗ, ಆತ ‘ನಾನು ಪೊಲೀಸ್’ ಎಂದು ಹೇಳಿದ. ಅದಕ್ಕೆ ನಿರ್ವಾಹಕ ‘ಗುರುತಿನ ಚೀಟಿ ತೋರಿಸಿ’ ಎಂದಾಗ, ಆತ ಯಾವುದೋ ಹಳೆಯ ಗುರುತಿನ ಚೀಟಿ ತೋರಿಸಿದ.  ಆತ ನಿವೃತ್ತಿ ಹೊಂದಿರುವುದು ನಿರ್ವಾಹಕನಿಗೆ ತಿಳಿಯಿತು.
 
‘ನೀವು ನಿವೃತ್ತರಾಗಿದ್ದೀರಿ, ಬಸ್‌ ಟಿಕೆಟ್‌ ತೆಗೆದುಕೊಳ್ಳಿ’ ಎಂದು ಹೇಳಿದಾಗ ಆ ನಿವೃತ್ತ ಪೊಲೀಸ್ ತಕರಾರು ಎತ್ತಿದ. ಆಗ ನಿರ್ವಾಹಕ ‘ನೀವು ನಿವೃತ್ತರಾದ ಕೂಡಲೇ ಆ ಗುರುತಿನ ಚೀಟಿಯನ್ನು ಇಲಾಖೆಗೆ ವಾಪಸ್ ನೀಡಬೇಕಾಗಿತ್ತು. ನಿಮ್ಮ ಗುರುತಿನ ಚೀಟಿಯನ್ನು ಮನೆಯಲ್ಲಿ ಬೇಕಾದ್ರೆ ಇಟ್ಟುಕೊಳ್ಳಿ, ಈಗ ಹಣ ನೀಡಿ ಟಿಕೆಟ್ ಪಡೆದುಕೊಳ್ಳಿ’ ಎಂದು ಹೇಳಿದರು.
 
ಇಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು. ನಿವೃತ್ತ ಪೊಲೀಸನ ತಪ್ಪಿದ್ದರೂ ಬಸ್‌ನಲ್ಲಿದ್ದ ನಾಗರಿಕರು ಯಾರೂ ನಿರ್ವಾಹಕನ ನೆರವಿಗೆ ನಿಲ್ಲಲಿಲ್ಲ. ನನಗೆ ಆಶ್ಚರ್ಯವಾಯಿತು. ಕೊನೆಗೂ ಆತ ಬಿಡಲಿಲ್ಲ. ಹಣ ಪಡೆದು ಟಿಕೆಟ್ ನೀಡಿದ. ಕರ್ತವ್ಯನಿರತ ಪೊಲೀಸರಿಗೆ ಬಸ್‌ನಲ್ಲಿ ಸಂಚರಿಸಲು ಅವಕಾಶ ಇದೆ. ಆದರೆ ನಿವೃತ್ತಿ ನಂತರವೂ ಸರ್ಕಾರದ  ಸವಲತ್ತು  ಪಡೆಯಲು ಗುರುತಿನ ಚೀಟಿಯನ್ನು ದುರುಪಯೋಗಪಡಿಸಿಕೊಳ್ಳುವುದು ತಪ್ಪಲ್ಲವೇ? ಈ ವಿಷಯದಲ್ಲಿ ಆ ನಿರ್ವಾಹಕನ ಕರ್ತವ್ಯಪ್ರಜ್ಞೆಯನ್ನು  ಮೆಚ್ಚಿಕೊಂಡೆ. 
ಚನ್ಮನೆ ಸಿದ್ದರಾಜು, ಮಂಡ್ಯ
 
ಹಿಂದಿಗೆ ವಿರೋಧವೇಕೆ?
ಕಮಲಾ ಹಂಪನಾ ಅವರು, ‘ಶಿಕ್ಷಣದಲ್ಲಿ ತ್ರಿಭಾಷಾ ಸೂತ್ರ ಅಳವಡಿಸುವ ಮೂಲಕ ಹಿಂದಿ ಭಾಷೆಯನ್ನು ಬಲವಂತವಾಗಿ ಹೇರಲಾಗುತ್ತಿದೆ. ಕನ್ನಡ ಮತ್ತು ಇಂಗ್ಲಿಷ್ ಒಳಗೊಂಡಿರುವ ದ್ವಿಭಾಷಾ ಬೋಧನೆ ಮಾತ್ರ ಶಿಕ್ಷಣದಲ್ಲಿ ಇರಬೇಕು’ ಎಂಬುದಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ (ಪ್ರ.ವಾ., ಫೆ. 26). ಆದರೆ, ಹಿಂದಿಗೆ ವಿರೋಧವೇಕೆ ಎಂಬುದು ಅರ್ಥವಾಗುತ್ತಿಲ್ಲ. ನಮ್ಮ ದಿನನಿತ್ಯದ ವ್ಯವಹಾರಕ್ಕಾಗಲೀ, ನಮ್ಮ ವೈಜ್ಞಾನಿಕ ಹಾಗೂ ಔದ್ಯಮಿಕ ಅಭಿವೃದ್ಧಿಗಾಗಿಯಾಗಲೀ ಇಂಗ್ಲಿಷ್ ಅಷ್ಟೊಂದು ಅಗತ್ಯವಿದೆಯೇ?

ನಮ್ಮ ದೇಶದಿಂದಾಚೆಗೆ ನಾವು ದೃಷ್ಟಿ ಹರಿಸಿದಾಗ, ಅಭಿವೃದ್ಧಿ ಹೊಂದಿದ ಜಪಾನ್, ರಷ್ಯಾಗಳು ಇಂಗ್ಲಿಷ್ ಭಾಷೆಯನ್ನು ತ್ಯಜಿಸಿ ಅನೇಕ ದಶಕಗಳಾದವೆಂಬ ತಥ್ಯ ಗಮನಕ್ಕೆ ಬರುತ್ತದೆ. ಇನ್ನು ಐರೋಪ್ಯ ರಾಷ್ಟ್ರಗಳಾದ ಫ್ರಾನ್ಸ್, ಜರ್ಮನಿ, ಇಟಲಿಯಂಥ  ದೇಶಗಳಲ್ಲಿ ಇಂಗ್ಲಿಷ್ ಭಾಷೆ ಬಳಕೆಯಲ್ಲಿಲ್ಲ ಎಂಬುದೂ ಗಮನಿಸಬೇಕಾದ ಅಂಶ. ಅಲ್ಲದೆ, ಜನ ಬೆಂಬಲ ಪಡೆದು ಐರೋಪ್ಯ ಒಕ್ಕೂಟದಿಂದ ಬ್ರಿಟನ್  ಹೊರಬರಲು ನಿರ್ಧರಿಸಿದ ಬೆನ್ನಿಗೇ ಐರೋಪ್ಯ ಒಕ್ಕೂಟದ ರಾಷ್ಟ್ರಗಳು ಇಂಗ್ಲಿಷ್ ಭಾಷೆಯನ್ನು ಒಕ್ಕೂಟದಿಂದ ಹೊರಹಾಕಿದವು.

‘ಬ್ರಿಟಿಷರೇ, ಭಾರತದಿಂದ ತೊಲಗಿ’ ಎಂಬುದು ನಮ್ಮ ಸ್ವಾತಂತ್ರ್ಯ ಹೋರಾಟಗಾರರ ಧ್ಯೇಯ ವಾಕ್ಯವಾಗಿತ್ತು. ಬ್ರಿಟಿಷರೇನೋ ಭಾರತದಿಂದ ತೊಲಗಿದರು; ಆದರೆ, ಅವರ ಭಾಷೆಯಾದ ಇಂಗ್ಲಿಷ್ ನಮ್ಮನ್ನು ಬೆಂಬಿಡದ ಭೂತದಂತೆ ಅಂಟಿಕೊಂಡೇ ಇದೆ. ಇನ್ನಾದರೂ ನಾವು ಇಂಗ್ಲಿಷನ್ನು ತ್ಯಜಿಸಿ, ನಮ್ಮದೇ ಭಾಷೆಯಾದ ಹಿಂದಿಯೊಂದಿಗೆ ದ್ವಿಭಾಷಾ ಸೂತ್ರವನ್ನು ಅಳವಡಿಸಿಕೊಂಡು, ಸರ್ವತಂತ್ರ ಸ್ವಾತಂತ್ರ್ಯವನ್ನು ಪಡೆಯುತ್ತೇವೆಯೇ?
ಉಡುಪಿ ಅನಂತೇಶ ರಾವ್, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT