ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಣ್ಣ ಉದ್ಯಮಗಳಿಗೆ ‘ಸ್ಮಾರ್ಟ್‌ಶಿಫ್ಟ್‌ ’ ನೆರವು

Last Updated 28 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ
–ವಿಶ್ವನಾಥ ಎಸ್‌.
 
*
ಸಣ್ಣ ಉದ್ಯಮಗಳು ನಗರಗಳ ವ್ಯಾಪ್ತಿಯಲ್ಲಿ ಸರಕುಗಳನ್ನು  ಸಾಗಿಸಲು ಹಲವು ರೀತಿಯ ಸಮಸ್ಯೆಗಳನ್ನು ಎದುರಿಸುತ್ತವೆ. ಮುಖ್ಯವಾಗಿ ಸಮಯಕ್ಕೆ ಸರಿಯಾಗಿ ವಾಹನ ಸಿಗದೇ ಇರುವುದು. ಸಿಕ್ಕರೂ ಬಹಳಷ್ಟು ಸಲ ಹೆಚ್ಚಿನ ಬಾಡಿಗೆ ಕೊಡಬೇಕಾಗುತ್ತದೆ. ಸಾಗಿಸಿದ ವಸ್ತು ಬಳಕೆಗೆ ಯೋಗ್ಯವಾಗಿರುವ ಖಾತರಿಯೂ ಇರುವುದಿಲ್ಲ. ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡುವ ಉದ್ದೇಶದಿಂದ ಮಹೀಂದ್ರ ಸಮೂಹವು ‘ಸ್ಮಾರ್ಟ್‌ಶಿಫ್ಟ್‌’  ಆ್ಯಪ್ ಪರಿಚಯಿಸಿದೆ.
 
ಆಂಡ್ರಾಯ್ಡ್‌ ಆಧಾರಿತ ಆ್ಯಪ್‌ ಇದಾಗಿದೆ. ಸಣ್ಣ ಉದ್ದಿಮೆದಾರರು ಗೂಗಲ್‌ ಪ್ಲೇ ಸ್ಟೋರ್‌ ಮೂಲಕ ಈ ಆ್ಯಪ್‌ ಡೌನ್‌ಲೋಡ್‌ ಮಾಡಿ ಸುಲಭವಾಗಿ ಇನ್‌ಸ್ಟಾಲ್‌ ಮಾಡಿಕೊಳ್ಳಬಹುದು. ಯಾವುದೇ ರೀತಿಯ ನೋಂದಣ ಶುಲ್ಕ ಇರುವುದಿಲ್ಲ.
 
ಬಳಕೆ ಹೇಗೆ 
ಸಣ್ಣ ಉದ್ಯಮಿಗಳು ಮತ್ತು ಸ್ಥಳೀಯವಾಗಿ ಸರಕು ಸಾಗಣೆ ವಾಹನ ಚಲಾಯಿಸುತ್ತಿರುವವರೊಂದಿಗೆ ಸ್ಮಾರ್ಟ್‌ಶಿಫ್ಟ್‌ ತಂಡ ಒಪ್ಪಂದ ಮಾಡಿಕೊಂಡಿರುತ್ತದೆ. ಸರಕು ಸಾಗಣೆಗೆ ತ್ರಿಚಕ್ರ ವಾಹನ ಅಂದರೆ ಗರಿಷ್ಠ 1.5 ಟನ್‌ ಸಾಮರ್ಥ್ಯದ ವಾಹನಗಳು (ಪಿಕಪ್‌, ಏಸ್‌ ತರಹದ್ದು) ಮಾತ್ರವೇ ಸ್ಮಾರ್ಟ್‌ಶಿಫ್ಟ್‌ನಲ್ಲಿ ಕಾರ್ಯ ನಿರ್ವಹಿಸುತ್ತವೆ. ದೊಡ್ಡ ಪ್ರಮಾಣದಲ್ಲಿ ಸರಕು ಸಾಗಣೆ ವಾಹನಗಳು ಈ ವ್ಯಾಪ್ತಿಯಲ್ಲಿ ಇರುವುದಿಲ್ಲ. 
 
ಉದ್ಯಮಿಗಳು ಮತ್ತು ಚಾಲಕರ ಮಧ್ಯೆ ಸಂಪರ್ಕ ಏರ್ಪಡಿಸುವ ಕೆಲಸವನ್ನು ಆ್ಯಪ್‌ ನಿರ್ವಹಿಸುತ್ತದೆ. ಹೀಗಾಗಿ, ಉದ್ಯಮಿಗಳು ಚಾಲಕರನ್ನು ಹುಡುಕಿ ಕೊಂಡು ಹೋಗುವ ಅಥವಾ ಚಾಲಕರು ಬಾಡಿಗೆ ಇಲ್ಲದೇ ದಿನವಿಡೀ ಕಾಯುವುದು ತಪ್ಪುತ್ತದೆ. ಸರಕನ್ನು  ಯಾವ ಸ್ಥಳದಿಂದ ಯಾವ ಸ್ಥಳಕ್ಕೆ ಸಾಗಿಸಬೇಕು ಎನ್ನುವ ಮಾಹಿತಿಯನ್ನು ಆ್ಯಪ್‌ನಲ್ಲಿ ನೀಡಬೇಕು. ಜತೆಗೆ ಆ ಕೆಲಸಕ್ಕೆ ತಾನು ನೀಡುವ ಅಂದಾಜು ಬೆಲೆಯನ್ನೂ ನೀಡಬೇಕು. ಈ ಎಲ್ಲಾ ಮಾಹಿತಿ ಸರಕು ಸಾಗಣೆ ವಾಹನ ಚಾಲಕರ ಮೊಬೈಲ್‌ನಲ್ಲಿರುವ ಆ್ಯಪ್‌ನಲ್ಲಿ ಕಾಣಿಸಿಕೊಳ್ಳುತ್ತದೆ. 
 
ಆ ದರ ಇಷ್ಟವಾಗದ ಚಾಲಕರು ತಮ್ಮದೇ ಆದ ದರವನ್ನು ನಮೂದಿಸಿ ಕಳುಹಿಸಬಹುದು.  ಕನಿಷ್ಠ ನಾಲ್ಕು ಚಾಲಕರಾದರೂ ಪ್ರತಿಕ್ರಿಯೆ ನೀಡುವುದರಿಂದ, ಉದ್ಯಮಿ ತನಗೆ ಹೆಚ್ಚು  ಸೂಕ್ತ ಎನಿಸಿದ ದರ ನೀಡಿದ ಚಾಲಕನನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ. ಪೈಪೋಟಿ ನೀಡಲು ಮತ್ತು ಅವಕಾಶವನ್ನು ತಮ್ಮದಾಗಿಸಿಕೊಳ್ಳಲು ಕೆಲವು ಚಾಲಕರು ಉದ್ಯಮಿ ನಿಗದಿ ಮಾಡಿದ ದರಕ್ಕಿಂತಲೂ ಕಡಿಮೆ ದರಕ್ಕೂ  ಸರಕು ಸಾಗಿಸಲು ಒಪ್ಪುವ ಸಾಧ್ಯತೆಯೂ ಇರುತ್ತದೆ. ಸರಕು ತುಂಬಿರುವ ವಾಹನವನ್ನು ಆ್ಯಪ್‌ ಮೂಲಕವೇ ಪರಿಶೀಲನೆ ಮಾಡಲಾಗುತ್ತದೆ. ವಹಿವಾಟು ಆರಂಭಿಸುವುದಕ್ಕೂ ಮೊದಲು ಶೇ 15 ರಷ್ಟು ಮೊತ್ತವನ್ನು ಠೇವಣಿ ರೂಪದಲ್ಲಿ ಇಡಬೇಕಾಗುತ್ತದೆ.  ಪ್ರತಿ ವರ್ಗಾವಣೆಗೆ ಶೇ 15 ರಿಂದ 20 ರಷ್ಟು ಕಮಿಷನ್‌ ನೀಡಬೇಕು. 
 
ಉತ್ತಮ ಪ್ರತಿಕ್ರಿಯೆ 
‘ಮೊದಲಿಗೆ ಮುಂಬೈ ಮತ್ತು ಹೈದರಾಬಾದ್‌ನಲ್ಲಿ ಸ್ಮಾರ್ಟ್‌ಶಿಫ್ಟ್‌ ಆರಂಭಿಸಲಾಯಿತು. ಕಾರ್ಯಾರಂಭ ಮಾಡಿದ 16 ತಿಂಗಳ ಒಳಗೆ ಎರಡೂ ನಗರಗಳಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದೇವೆ. 12 ಸಾವಿರಕ್ಕೂ ಅಧಿಕ ವಹಿವಾಟುದಾರರಿದ್ದು, ದಿನಕ್ಕೆ ಅಂದಾಜು 1,200ರಷ್ಟು  ವಹಿವಾಟುಗಳು ನಡೆಯುತ್ತಿವೆ. ಮುಂದಿನ ಮೂರು ವರ್ಷಗಳಲ್ಲಿ 10 ಲಕ್ಷ ವಹಿವಾಟುದಾರರನ್ನು ಹೊಂದುವ ನಿರೀಕ್ಷೆ ಇಟ್ಟುಕೊಂಡಿದ್ದೇವೆ’ ಎಂದು ಸ್ಮಾರ್ಟ್‌ಶಿಫ್ಟ್‌ ಸಿಇಒ ಕೌಸಲ್ಯ  ನಂದಕುಮಾರ್‌ ಹೇಳುತ್ತಾರೆ.
 
ವಿಸ್ತರಣೆಗೆ ಬೆಂಗಳೂರು ಪ್ರಮುಖ ತಾಣ
ಡಿಜಿಟಲ್ ತಂತ್ರಜ್ಞಾನ ಅಳವಡಿಕೆಯಲ್ಲಿ ಬೆಂಗಳೂರು ಮುಂಚೂಣಿಯಲ್ಲಿದೆ. ಹೀಗಾಗಿ ಸಿಲಿಕಾನ್‌ ಸಿಟಿಯಲ್ಲಿ ಕಾರ್ಯಾಚರಣೆ ಆರಂಭಿಸುವ ಮೂಲಕ ದಕ್ಷಿಣ ಭಾರತಕ್ಕೆ ವಹಿವಾಟು ವಹಿವಾಟು ವಿಸ್ತರಿಸಲಿದೆ. ದೇಶದಲ್ಲಿರುವ ಪ್ರಮುಖ 29 ನಗರಗಳಿಗೆ ವಹಿವಾಟು ವಿಸ್ತರಿಸುವ ಗುರಿಯನ್ನೂ ನಿಗದಿಪಡಿಸಲಾಗಿದೆ.
 
ಬೆಂಗಳೂರಿನಲ್ಲಿ ಸರಕು ಸಾಗಣೆಗೆ ಹೆಚ್ಚು ಬೇಡಿಕೆ ಇದೆ. ಬೆಂಗಳೂರಿನಲ್ಲಿ ನೋಂದಣಿ ಆಗಿರುವ 55 ಸಾವಿರಕ್ಕೂ ಅಧಿಕ ವಾಣಿಜ್ಯ ವಾಹನಗಳಿವೆ. ಸದ್ಯ 100ಕ್ಕೂ ಅಧಿಕ ಚಾಲಕರು ನಮ್ಮ ವ್ಯಾಪ್ತಿಗೆ ಬಂದಿದ್ದಾರೆ.  ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನವರು ಈ  ಸೌಲಭ್ಯ  ವ್ಯಾಪ್ತಿಗೆ ಒಳಪಡುವ ನಿರೀಕ್ಷೆ ಇದೆ.
 
ವಹಿವಾಟಿನ ಆದ್ಯತಾ ಕ್ಷೇತ್ರಗಳು: ಪೀಠೋಪಕರಣ, ಜವಳಿ, ಔಷಧಿ, ಇ–ಕಾಮರ್ಸ್‌, ಹಾರ್ಡ್‌ವೇರ್‌ ಮತ್ತು ತ್ವರಿತವಾಗಿ ಬಿಕರಿಯಾಗುವ ಗ್ರಾಹಕ ಉತ್ಪನ್ನಗಳ (ಎಫ್‌ಎಂಸಿಜಿ) ವಲಯಗಳು ಸ್ಮಾರ್ಟ್‌ಶಿಫ್ಟ್‌ನ ಪ್ರಮುಖ ಆದ್ಯತಾ ಕ್ಷೇತ್ರಗಳಾಗಿವೆ.
 
ಪ್ರಯೋಜನಗಳು
* ಮೂರು ನಿಮಿಷಗಳಲ್ಲಿ ವಾಹನ ಬುಕಿಂಗ್
* ತರಬೇತಿ ಪಡೆದ ಮತ್ತು ದೃಢೀಕರಿಸಿದ ವಾಹನ ಚಾಲಕರ  ಲಭ್ಯತೆ
* ಸರಕು ಸುರಕ್ಷಿತವಾಗಿ ಗ್ರಾಹಕರ ಕೈ ಸೇರಿದ ಬಗ್ಗೆ ಆ್ಯಪ್‌ ಮೂಲಕವೇ ಖಾತರಿ 
* ತ್ವರಿತ ಮತ್ತು ಸುಲಭವಾಗಿ ಬಾಡಿಗೆ ಪಡೆಯುವುದರಿಂದ ಖಾಲಿ ಕೂರುವುದು ತಪ್ಪಲಿದೆ.
* ಬಾಡಿಗೆ ದರದ ಆಧಾರದ ಮೇಲೆ ಸರಕು ವಿತರಿಸಲು ಒಪ್ಪಿಕೊಳ್ಳುವ ಅಥವಾ ತಿರಸ್ಕರಿಸುವ ಅವಕಾಶ. ಸ್ಥಳಕ್ಕೆ ಹೋಗಿ ಕಡಿಮೆ ಬಾಡಿಗೆ ಎಂದು ಹಿಂದಿರುಗಿ ಬರುವ ಅಥವಾ ತಕರಾರು ತೆಗೆಯುವ ಪ್ರಮೇಯವೇ ಎದುರಾಗುವುದಿಲ್ಲ.
 
**
ಸ್ಮಾರ್ಟ್‌ಶಿಫ್ಟ್‌ ಭರವಸೆ
ಸಾಮಾನ್ಯವಾಗಿ ಒಂದು ಬಾಡಿಗೆಯನ್ನು ನಿಗದಿತ ಸ್ಥಳಕ್ಕೆ ಸಾಗಿಸಿದ ನಂತರ ಅಲ್ಲಿಂದ ಬರಿಗೈಯಲ್ಲಿ ಹಿಂದಕ್ಕೆ ಬರಬೇಕಾಗುತ್ತದೆ. ಆದರೆ, ಸ್ಮಾರ್ಟ್‌ಶಿಫ್ಟ್‌ನಲ್ಲಿ ಹಾಗಾಗುವುದಿಲ್ಲ. ಒಂದು ನಿರ್ದಿಷ್ಟ ಸ್ಥಳಕ್ಕೆ ಸರಕು ಸಾಗಿಸಿದ ಬಳಿಕ ಹಿಂದಿರುಗುವಾಗ ಆ ಸ್ಥಳದ ಸಮೀಪದಿಂದಲೂ ಒಂದು ಬಾಡಿಗೆ ಕೊಡಿಸುವ ಭರವಸೆಯನ್ನು ಸ್ಮಾರ್ಟ್‌ಶಿಫ್ಟ್‌ ನೀಡುತ್ತದೆ.ಇದರಿಂದ ಗ್ರಾಹಕರು ಮತ್ತು ಚಾಲಕರು ಇಬ್ಬರಿಗೂ ಅನುಕೂಲ. ಹಿಂದಿರುಗುವಾಗ ಖಾಲಿ ಬರಬೇಕಾಗುತ್ತದೆ ಎನ್ನುವ ಕಾರಣಕ್ಕೆ ಚಾಲಕರು ಹೆಚ್ಚು ಬಾಡಿಗೆ ಕೇಳುವುದೂ ತಪ್ಪುತ್ತದೆ. 

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT