ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ಫೊಸಿಸ್‌ನಲ್ಲೂ ಬೋರ್ಡ್‌ರೂಂ ಕಲಹ

Last Updated 28 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ
ಟಾಟಾ ಸನ್ಸ್‌ನಲ್ಲಿ ನಡೆದ ಬೋರ್ಡ್‌ ರೂಂ ಕಲಹ ಕೊನೆಗೊಂಡ ಬೆನ್ನಲ್ಲೇ, ಇನ್ಫೊಸಿಸ್‌ನಲ್ಲಿಯೂ ಅದೇ ಬಗೆಯ  ಸಮರ ನಡೆಯುತ್ತಿರುವುದನ್ನು ದೇಶಿ ಕಾರ್ಪೊರೇಟ್‌ ಜಗತ್ತು ಅಚ್ಚರಿಯಿಂದ ಗಮನಿಸುತ್ತಿದೆ.  ಟಾಟಾ ಸನ್ಸ್‌ ಮತ್ತು ಇನ್ಫೊಸಿಸ್‌ನಲ್ಲಿ  ನಡೆಯುತ್ತಿರುವ ವಿದ್ಯಮಾನಗಳಲ್ಲಿ ಹಲವು ಸಾಮ್ಯತೆಗಳಿವೆ.
 
ನಿರ್ದೇಶಕ  ಮಂಡಳಿಯ ಕಾರ್ಯವೈಖರಿ ಬಗ್ಗೆ ಸಂಸ್ಥೆಯ ಪ್ರವರ್ತಕರು ಬಹಿರಂಗವಾಗಿಯೇ ತಮ್ಮ  ಅತೃಪ್ತಿ ಹೊರ ಹಾಕಿದ್ದಾರೆ. ಪಾರದರ್ಶಕ ಕಾರ್ಪೊರೇಟ್‌ ಆಡಳಿತಕ್ಕೆ ಹೆಸರಾಗಿದ್ದ ಸಂಸ್ಥೆಯಲ್ಲಿ ಕೈಗೊಂಡ ಕೆಲವು ನಿರ್ಧಾರಗಳು ಸಮಂಜಸವಾಗಿಲ್ಲ. ಷೇರುದಾರರ ಹಿತಾಸಕ್ತಿಗೆ ಮಾರಕವಾಗಿವೆ. ಸ್ವಾಧೀನ ಪ್ರಕ್ರಿಯೆ ಮತ್ತು ಉನ್ನತ ಅಧಿಕಾರಿಗಳ ವೇತನ ನಿಗದಿಯಲ್ಲಿ ಮಾನದಂಡಗಳನ್ನು ಗಾಳಿಗೆ ತೂರಲಾಗಿದೆ. ಕೆಲವರ ಬಾಯಿ ಮುಚ್ಚಿಸಲು ಹಣ ಪಾವತಿಸಲಾಗಿದೆ. ಷೇರುದಾರರಿಗೆ ಸೇರಿದ ಹಣವನ್ನು ಬೇಕಾಬಿಟ್ಟಿಯಾಗಿ ವೆಚ್ಚ ಮಾಡಲಾಗುತ್ತಿದೆ ಎಂದು ಸಂಸ್ಥೆಯ ಸಹ ಸ್ಥಾಪಕರು ತಮ್ಮ ಕಳವಳ ವ್ಯಕ್ತಪಡಿಸಿರುವುದು ವಿವಾದದ ಮೂಲವಾಗಿದೆ.
 
ದೇಶದ ಎರಡನೆ ಅತಿದೊಡ್ಡ ಸಾಫ್ಟ್‌ವೇರ್‌ ರಫ್ತು ಸೇವಾ ಸಂಸ್ಥೆಯಾಗಿರುವ ಬೆಂಗಳೂರು ಮೂಲದ  ಇನ್ಫೊಸಿಸ್‌ನಲ್ಲಿ ಸ್ಥಾಪಕರು ಮತ್ತು ನಿರ್ದೇಶಕ ಮಂಡಳಿ ನಡುವಣ ಕಲಹ ಬೀದಿಗೆ ಬಂದಾಗಿದೆ.  ಆರೋಪ, ಸ್ಪಷ್ಟನೆಗಳ ನಂತರ ಸದ್ಯಕ್ಕೆ ಉಭಯ ಬಣಗಳು ಕದನ ವಿರಾಮ ಘೋಷಿಸಿರುವಂತೆ ಕಂಡು ಬರುತ್ತಿದೆ.
 
ಸಿಇಒ, ಅಧ್ಯಕ್ಷ ಹಾಗೂ ಸಹಸ್ಥಾಪಕ ನಾರಾಯಣಮೂರ್ತಿ ಅವರ ನಡುವಣ ಬಾಂಧವ್ಯ ಹಳಸಿಲ್ಲ ಎಂದು ಸ್ಪಷ್ಟನೆ ನೀಡಲಾಗುತ್ತಿದೆ. ಆದರೆ, ಬೋರ್ಡ್‌ರೂಂ ಹೊರಗೆ ನಡೆಯುತ್ತಿರುವ ವಿದ್ಯಮಾನಗಳು ಮಾತ್ರ ಸಂಸ್ಥೆಯಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವ ವಾದಕ್ಕೆ ಇಂಬು ನೀಡುತ್ತಿವೆ.
 
ಸಂಸ್ಥೆ ಕಟ್ಟಿ ಬೆಳೆಸಿದವರು ವ್ಯಕ್ತಪಡಿಸಿರುವ ಆತಂಕವನ್ನೂ ಕೆಲವರು ಟೀಕಿಸಿದ್ದಾರೆ. ಸ್ಥಾಪಕರು ಈಗ ಸಂಸ್ಥೆಯನ್ನು  ಸ್ವತಂತ್ರವಾಗಿ ಮುನ್ನಡೆಸಲು ಅವಕಾಶ ಮಾಡಿಕೊಟ್ಟು ಮತ್ತೆ ಅದರ ಮೇಲೆ ನಿಯಂತ್ರಣ ಹೊಂದಲು ಬಯಸುವುದು ಸರಿಯಲ್ಲ ಎನ್ನುವುದು ಅವರ ವಾದವಾಗಿದೆ. ಆದರೆ, ಈ ಹಿಂದೆಯೇ ಸಂಸ್ಥೆ ತೊರೆದಿರುವ ಮುಖ್ಯ ಹಣಕಾಸು ಅಧಿಕಾರಿಗಳಾಗಿದ್ದ ಟಿ. ಎ. ಮೋಹನದಾಸ್‌ ಪೈ ಮತ್ತು ವಿ.ಬಾಲಕೃಷ್ಣನ್‌ ಅವರು ನಾರಾಯಣ ಮೂರ್ತಿ ಅವರ ಬೆಂಬಲಕ್ಕೆ ನಿಂತಿದ್ದಾರೆ. ಬಹಿರಂಗ ಹೇಳಿಕೆ ನೀಡುವ ಮೂಲಕ ಮೂರ್ತಿ ಅವರ ಕಳವಳಕ್ಕೆ ದನಿ ಗೂಡಿಸಿದ್ದಾರೆ. ಆಡಳಿತಾತ್ಮಕ ಲೋಪಗಳಿಗೆ ಹೊಣೆ ಹೊತ್ತು ಸಂಸ್ಥೆಯ ಅಧ್ಯಕ್ಷ ಆರ್‌. ಶೇಷಸಾಯಿ ಅವರು ರಾಜೀನಾಮೆ ನೀಡಬೇಕು ಎಂದೂ ಒತ್ತಾಯಿಸಿದ್ದಾರೆ.
 
ಮೂರ್ತಿ ಅವರು ವ್ಯಕ್ತಪಡಿಸಿರುವ ಆತಂಕವು ಸಣ್ಣ ಹೂಡಿಕೆದಾರರ ಹಿತಾಸಕ್ತಿ ರಕ್ಷಿಸುವ ಪರವಾಗಿ ಇದೆ.  ಸದ್ಯಕ್ಕೆ ಅವರ ಆಕ್ಷೇಪಕ್ಕೆ ಬೆಲೆ ಸಿಗದಿದ್ದರೂ ಮುಂದೊಂದು ದಿನ ಇದು ವಿವಾದವಾಗಿ ಬೆಳೆಯಲಿದೆ ಎನ್ನುವ ಅಭಿಪ್ರಾಯವೂ ಇದೆ. ಆದರೆ, ಸಂಸ್ಥೆಯಲ್ಲಿ ಬಹುದೊಡ್ಡ ಪಾಲು ಹೊಂದಿರುವ ಸಾಂಸ್ಥಿಕ ಹೂಡಿಕೆದಾರರು ಸಿಕ್ಕಾ ಮತ್ತು ಅಧ್ಯಕ್ಷ ಆರ್‌. ಶೇಷಸಾಯಿ ಅವರ ಬೆಂಬಲಕ್ಕೆ ನಿಂತಿರುವುದು ಗಮನಾರ್ಹ ಸಂಗತಿಯಾಗಿದೆ.
 
(ರಾಜೀವ್‌ ಬನ್ಸಲ್‌)
 
ಸಿಇಒ ವಿಶಾಲ್ ಸಿಕ್ಕಾ ಅವರಿಗೆ ಭಾರಿ ಮೊತ್ತದ ವೇತನ ನಿಗದಿ ಮಾಡಿರುವುದು ಮತ್ತು  ಸಂಸ್ಥೆ ತೊರೆದ ಇಬ್ಬರು ಉನ್ನತ ಅಧಿಕಾರಿಗಳಿಗೆ ಗುತ್ತಿಗೆ ರದ್ದು ಒಪ್ಪಂದದ ಅನ್ವಯ ಉದಾರವಾಗಿ  ಪರಿಹಾರ ನೀಡಿರುವುದನ್ನು ಸಂಸ್ಥೆಯ ಸ್ಥಾಪಕರು ಪ್ರಶ್ನಿಸಿರುವುದೇ ವಿವಾದದ ಕೇಂದ್ರ ಬಿಂದುವಾಗಿದೆ.
 
 ಸಂಸ್ಥೆ ಸ್ಥಾಪನೆ ಸಂದರ್ಭದಲ್ಲಿ  ಮತ್ತು ನಂತರದ ದಿನಗಳಲ್ಲಿ ಪಾಲಿಸಿಕೊಂಡು ಬಂದಿರುವ ಮೌಲ್ಯಗಳಿಂದ ಸಂಸ್ಥೆಯ ಹಾಲಿ ನಿರ್ದೇಶಕ ಮಂಡಳಿಯು ದೂರ ಸರಿಯುತ್ತಿದೆ ಎನ್ನುವುದು ಸಹ ಸ್ಥಾಪಕರ ಕಳಕಳಿಯಾಗಿದೆ.  ಬದಲಾದ ಕಾಲಘಟ್ಟದಲ್ಲಿ ಸಂಸ್ಥೆಯ ವಹಿವಾಟನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು  ಹೊಸ ಆಡಳಿತ ಮಂಡಳಿಯು ಕೈಗೊಳ್ಳುತ್ತಿರುವ  ಕೆಲ ನಿರ್ಧಾರಗಳು ಸಹ ಸ್ಥಾಪಕರಿಗೆ ಪಥ್ಯವಾಗುತ್ತಿಲ್ಲ.  ಮೂರ್ತಿ ಮತ್ತು ಸಿಕ್ಕಾ ಅವರದ್ದು ವಿಭಿನ್ನ ಆಲೋಚನೆ.  ಮೂರ್ತಿ ಅವರು ರೈಲಿನ ಪ್ರಥಮ ದರ್ಜೆ ಬೋಗಿಯಲ್ಲಿ ಪ್ರಯಾಣಿಸುತ್ತ, ಸಂಸ್ಥೆಯ ಹಣ ಉಳಿಸುವ ಚಿಂತನೆ ಉಳ್ಳವರು. ಬಾಡಿಗೆ ವಿಮಾನದಲ್ಲಿ ಪ್ರಯಾಣಿಸುತ್ತ ಕಾಲದ ಜತೆಗೆ ಓಡುತ್ತ, ಸಂಸ್ಥೆಯ ವಹಿವಾಟನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಅಭಿಲಾಷೆ ವಿಶಾಲ್‌ ಸಿಕ್ಕಾ ಅವರದ್ದು. ಹೀಗಾಗಿ ಇಲ್ಲಿ ಸಾಂಸ್ಕೃತಿಕ ಮೌಲ್ಯಗಳ ಸಂಘರ್ಷವೂ ನಡೆಯುತ್ತಿದೆ. ಸಿಕ್ಕಾ ನೇತೃತ್ವದಲ್ಲಿ ನಡೆಯುತ್ತಿರುವ ಬದಲಾವಣೆ ಬಗ್ಗೆ ಯಾರೇ ಆಗಲಿ ತಕ್ಷಣಕ್ಕೆ ತೀರ್ಮಾನಕ್ಕೆ ಬರುವುದೂ ಅವಸರದ ತೀರ್ಮಾನವಾಗಿರಲಿದೆ. 
 
ವಿಶಾಲ್‌ ಸಿಕ್ಕಾ ಆಕ್ರೋಶ
ಸಂಸ್ಥೆಯ ಬಗ್ಗೆ ಸುಳ್ಳು ಮತ್ತು ದುರುದ್ದೇಶದಿಂದ ಕೂಡಿದ ಅಪಪ್ರಚಾರದಲ್ಲಿ ತೊಡಗಿರುವ ಟೀಕಾಕಾರರ ವಿರುದ್ಧ ವಿಶಾಲ್‌ ಸಿಕ್ಕಾ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಪನಯಾ ಸ್ವಾಧೀನ ಪ್ರಕ್ರಿಯೆಯಲ್ಲಿ ನಿರ್ದೇಶಕ ಮಂಡಳಿಯ ಯಾವೊಬ್ಬ ಸದಸ್ಯನೂ ಲಾಭ ಪಡೆದುಕೊಂಡಿಲ್ಲ. 
 
ಸಂಸ್ಥೆಯ ವರ್ಚಸ್ಸಿಗೆ ಧಕ್ಕೆ ತರುವ ದುರುದ್ದೇಶದಿಂದಲೇ ಸುಳ್ಳು ಸುದ್ದಿಗಳನ್ನು ಹಬ್ಬಿಸಲಾಗುತ್ತಿದೆ. ಸಂಸ್ಥೆಯಲ್ಲಿ ಹಿತಾಸಕ್ತಿ ಸಂಘರ್ಷ ನಡೆದಿಲ್ಲ. ತಮ್ಮನ್ನೇ ಗುರಿಯಾಗಿರಿಸಿಕೊಂಡು ಆರೋಪ ಮಾಡಲಾಗುತ್ತಿದೆ. 
 
ಸಂಸ್ಥೆಯ, ಸಿಬ್ಬಂದಿಗೆ ಕಿರುಕುಳ ನೀಡುವ, ಸಂಸ್ಥೆಯ ವರ್ಚಸ್ಸಿಗೆ ಧಕ್ಕೆ ತರುವ ಉದ್ದೇಶದಿಂದಲೇ ಇಂತಹ ಇಲ್ಲಸಲ್ಲದ  ಆರೋಪ ಮಾಡಲಾಗುತ್ತಿದೆ ಎನ್ನುವುದು ಸಿಕ್ಕಾ ಅವರ ನಿಲುವಾಗಿದೆ.
 
 
ನ್ಯೂಜೆರ್ಸಿ ಮೂಲದ ತಂತ್ರಜ್ಞಾನ ಸಂಸ್ಥೆ  ಪನಯಾವನ್ನು (Panaya) ಇನ್ಫೊಸಿಸ್‌ ₹ 1,250 ಕೋಟಿಗೆ ಸ್ವಾಧೀನಪಡಿಸಿಕೊಂಡಿತ್ತು. ಸಂಸ್ಥೆಯ ಎರಡನೆ ಅತಿದೊಡ್ಡದಾದ ಈ ಸ್ವಾಧೀನ ವಹಿವಾಟಿನಲ್ಲಿ   ಅವ್ಯವಹಾರ ನಡೆದಿದೆ. ಇನ್ಫೊಸಿಸ್‌ನ ಉನ್ನತ ಅಧಿಕಾರಿಯೊಬ್ಬರು  ಇದರ ಪ್ರಯೋಜನ ಪಡೆದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಅಜ್ಞಾತವ್ಯಕ್ತಿಯೊಬ್ಬ ಈ ಕುರಿತು  ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಗೆ (ಸೆಬಿ)  ದೂರು ನೀಡಿದ್ದಾನೆ.
 
ಈ ಕಲಹವು ಟಾಟಾ ಸನ್ಸ್‌ನಲ್ಲಿ ಘಟಿಸಿದಂತೆ ಕ್ಷಿಪ್ರ ಕ್ರಾಂತಿಗೆ ಕಾರಣವಾಗಲಿದೆಯೇ ಎನ್ನುವ  ಅನುಮಾನಕ್ಕೂ ಎಡೆಮಾಡಿಕೊಟ್ಟಿದೆ. ಸಹ ಸ್ಥಾಪಕರು ಸಿಕ್ಕಾ ಅವರನ್ನು ಅಥವಾ ಅವರ ಬೆಂಬಲಕ್ಕೆ ಇರುವ ನಿರ್ದೇಶಕ ಮಂಡಳಿ ಸದಸ್ಯರನ್ನು ಹೊರ ಹಾಕಲು ಕಾರ್ಯತಂತ್ರ ರೂಪಿಸುತ್ತಿರುವರೇ ಕಾದು ನೋಡಬೇಕು.
 
ಡೊನಾಲ್ಡ್‌ ಟ್ರಂಪ್‌ ಅವರು ತಳೆದಿರುವ ‘ಅಮೆರಿಕ ಮೊದಲು’ ಎನ್ನುವ ಸ್ವಯಂ ರಕ್ಷಣಾ ನೀತಿಯಿಂದಾಗಿ ದೇಶಿ ಐ.ಟಿ ಉದ್ಯಮಕ್ಕೆ ಅನಿಶ್ಚಿತತೆ ಎದುರಾಗಿರುವ ಸದ್ಯದ ಸಂದರ್ಭದಲ್ಲಿ ಐ.ಟಿ ದೈತ್ಯ ಸಂಸ್ಥೆಗಳಲ್ಲಿ ಒಂದಾಗಿರುವ ಇನ್ಫೊಸಿಸ್‌ನಲ್ಲಿ ಇಂತಹ ಅಂತಃಕಲಹ ನಡೆಯುತ್ತಿರುವುದು ಅನಪೇಕ್ಷಿತ ಬೆಳವಣಿಗೆಯಾಗಿದೆ.
 
**
ವಿಶಾಲ್‌ ಸಿಕ್ಕಾ..
ವಿಶಾಲ್‌ ಸಿಕ್ಕಾ ಅವರನ್ನು 2014ರ ಜೂನ್‌ 12ರಂದು ಇನ್ಫೊಸಿಸ್‌ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿ (ಸಿಇಒ) ನೇಮಿಸಲಾಗಿತ್ತು. ನಾರಾಯಣಮೂರ್ತಿ ಅವರೇ ಈ ಘೋಷಣೆ ಮಾಡಿದ್ದರು. ಸಿಕ್ಕಾ ಅವರು ಮುಖ್ಯಸ್ಥರಾಗುವವರೆಗೆ  2014ರ ಜೂನ್‌ ತಿಂಗಳವರೆಗೆ ಸಂಸ್ಥೆಯ ಸಹ ಸ್ಥಾಪಕರೇ ಸರದಿಯಲ್ಲಿ ಮುಖ್ಯಸ್ಥರಾಗುತ್ತ ಬಂದಿದ್ದರು.
 
ಸಿಕ್ಕಾ ನೇಮಕಾತಿ ನಂತರ ಎನ್‌. ಆರ್‌. ನಾರಾಯಣಮೂರ್ತಿ ಅವರು 33 ಸಂಸ್ಥೆ ಜತೆಗಿನ ವರ್ಷಗಳ  ಒಡನಾಟ ತೊರೆದಿದ್ದರು. 2016ನೆ ಹಣಕಾಸು ವರ್ಷದಲ್ಲಿ  ಸಿಕ್ಕಾ ಅವರಿಗೆ ವೇತನ ರೂಪದಲ್ಲಿ ₹ 49  ಕೋಟಿ ಪಾವತಿಸಲಾಗಿದೆ. 2014ರ ಜೂನ್‌ನಿಂದ 2015 ಮಾರ್ಚ್‌ ಅವಧಿಯಲ್ಲಿ  ಅವರು ₹ 4.6 ಕೋಟಿಗಳಷ್ಟು ಮಾತ್ರ ವೇತನ ಪಡೆದಿದ್ದರು. 2017ರ ಜನವರಿಯಿಂದ ಅವರ ವೇತನವು ₹ 74 ಕೋಟಿಗಳಷ್ಟಾಗಿದೆ. 2020ರ ಹೊತ್ತಿಗೆ ಸಂಸ್ಥೆಯ ವರಮಾನವನ್ನು ₹ 1.34 ಲಕ್ಷ  ಕೋಟಿಗೆ ತಲುಪಿಸುವ ಗುರಿಯನ್ನು ಸಿಕ್ಕಾ ನಿಗದಿಪಡಿಸಿದ್ದಾರೆ. ಸದ್ಯಕ್ಕೆ ಸಂಸ್ಥೆಯ ವಾರ್ಷಿಕ ವರಮಾನ ₹ 60,300 ಕೋಟಿ ಗಳಷ್ಟಿದೆ. ಸ್ಟ್ಯಾನ್‌ಫೋರ್ಡ್‌ನ ವಿದ್ಯಾರ್ಥಿಯಾಗಿರುವ ಸಿಕ್ಕಾ, 
12 ವರ್ಷಗಳ ಕಾಲ ಜರ್ಮನಿಯ ಸಾಫ್ಟ್‌ವೇರ್‌ ಸಂಸ್ಥೆ ಎಸ್‌ಎಪಿ ಯಲ್ಲಿದ್ದರು. 
 
ಸಿಕ್ಕಾ ಅವರ ಅಧಿಕಾರಾವಧಿಯನ್ನು 2021ರವರೆಗೆ ವಿಸ್ತರಿಸಲಾಗಿದೆ.
 
**
ಪನಯಾ ಸ್ವಾಧೀನ ವಿವಾದ
₹ 1,250 ಕೋಟಿ ನಗದು ಪಾವತಿಸಿ ಪನಯಾ ಸಂಸ್ಥೆ ಸ್ವಾಧೀನಪಡಿಸುವ ನಿರ್ಧಾರಕ್ಕೆ  ಅಂದಿನ  ಸಿಎಫ್‌ಒ ರಾಜೀವ್‌ ಬನ್ಸಲ್‌ ಅವರು  ಆಕ್ಷೇಪ ವ್ಯಕ್ತಪಡಿಸಿದ್ದರಂತೆ.  2015ರ ಫೆಬ್ರುವರಿ 15ರಂದು ನಡೆದ ನಿರ್ದೇಶಕ ಮಂಡಳಿ ಸಭೆಯಲ್ಲಿ ಈ ಬಗ್ಗೆ ತೀರ್ಮಾನಕ್ಕೆ ಬರಲಾಗಿತ್ತು. 
 
ಸಭೆಯಲ್ಲಿ ಹಾಜರಿದ್ದ ಬನ್ಸಲ್‌ ಅವರು , ಈ ನಿರ್ಧಾರಕ್ಕೆ ಬರುವ ಮುಂಚೆಯೇ ಹೊರ ನಡೆದಿದ್ದರು ಎಂದೂ  ಅನಾಮಧೇಯ ವ್ಯಕ್ತಿ  ಪ್ರತಿಪಾದಿಸಿದ್ದಾನೆ, ಸ್ವಾಧೀನಕ್ಕೂ ಒಂದು ತಿಂಗಳ ಹಿಂದಷ್ಟೇ ಸಂಸ್ಥೆಯ ಮೌಲ್ಯವನ್ನು ಪನಯಾದ ಪಾಲುದಾರ ಸಂಸ್ಥೆ ₹ 1,085 ಕೋಟಿಗಳಿಗೆ ನಿಗದಿಪಡಿಸಿತ್ತು. ಆದರೆ, ಇನ್ಫೊಸಿಸ್‌ ₹1,250 ಕೋಟಿ ಪಾವತಿಸಿದೆ. ಬನ್ಸಲ್‌ ಅವರ ಆಕ್ಷೇಪದ ಹೊರತಾಗಿಯೂ ಈ ನಿರ್ಧಾರಕ್ಕೆ ಬರಲಾಗಿತ್ತು ಎಂದು 'ಸೆಬಿ’ಗೆ ಸಲ್ಲಿಸಿದ ದೂರಿನಲ್ಲಿ ತಿಳಿಸಲಾಗಿದೆ.ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಲ್ಲಿ ಯಾರೊಬ್ಬರೂ ಪನಯಾದಲ್ಲಿ ಈ ಮೊದಲೇ ಹಣ ಹೂಡಿಕೆ ಮಾಡಿಲ್ಲ ಎಂದೂ ಸಂಸ್ಥೆ ಸ್ಪಷ್ಟನೆ ನೀಡಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT