ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಟೇಪ್ಲರ್‌ ಚರಿತ್ರೆ

Last Updated 1 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಮನೆ, ಶಾಲೆ, ಕಚೇರಿ, ಪುಸ್ತಕದ ಅಂಗಡಿ... ಹೀಗೆ ಕಾಗದ ಬಳಕೆ ಇರುವ ಕಡೆಗಳಲ್ಲೆಲ್ಲ ಸಾಮಾನ್ಯವಾಗಿ ಕಂಡು ಬರುವ ಸಾಧನ ಸ್ಟೇಪ್ಲರ್‌. ಈ ಪದಕ್ಕೆ ಕನ್ನಡ ನಿಘಂಟಿನಲ್ಲಿ ‘ತಂತಿ ಹೊಲಿಗೆ ಯಂತ್ರ’ ಎಂಬ ಅರ್ಥ ಇದೆ. ಆದರೆ, ಹಾಗೆ ಹೇಳಿದರೆ ಜನರಿಗೆ ತಕ್ಷಣಕ್ಕೆ ಅರ್ಥ ಆಗುವುದು ಕಷ್ಟ. ಆಡುಮಾತಿನಲ್ಲಿ ಅದು ಸ್ಟೇಪ್ಲರ್‌ ಎಂದೇ ಜನಪ್ರಿಯ. ಜಗತ್ತನ್ನು ಬದಲಾಯಿಸಿದ ಪ್ರಮುಖ ಆವಿಷ್ಕಾರಗಳಲ್ಲಿ ಇದೂ ಒಂದು ಎಂಬ ಹೆಗ್ಗಳಿಕೆ ಸ್ಟೇಪ್ಲರ್‌ನದ್ದು. ಒಂದು ವೇಳೆ, ಇದು ಇಲ್ಲದಿದ್ದರೆ, ಕಾಗದದ ಹಾಳೆಗಳನ್ನು ಜೋಡಿಸಲು ಎಷ್ಟು ಕಷ್ಟ ಪಡಬೇಕಾಗಿತ್ತು ಎಂಬುದನ್ನು ಊಹಿಸಿ...

ಆಧುನಿಕ ರೂಪಿನ ಕಾಗದವನ್ನು ಅಭಿವೃದ್ಧಿಪಡಿಸಿದಾಗಿನಿಂದ ಎರಡು ಕಾಗದದ ಹಾಳೆಗಳನ್ನು ಒಂದಕ್ಕೊಂದು ಜೋಡಿಸಲು ಜನರು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಸ್ಟೇಪ್ಲರ್‌ ಆವಿಷ್ಕಾರ ಆಗುವುದಕ್ಕಿಂತಲೂ ಮೊದಲು ಸೂಜಿ ದಾರದಲ್ಲಿ ಕಾಗದಗಳನ್ನು ಹೊಲಿಯುವ, ಕಾಗದದ ಹಾಳೆಗಳನ್ನು ಒಂದರ ಮೇಲೊಂದು ಇಟ್ಟು ಮೇಣ, ಗೋಂದಿನಿಂದ ಅಂಟಿಸುವ, ಬಟ್ಟೆ ತುಂಡಿನಿಂದ ಕಾಗದಗಳನ್ನು ಕಟ್ಟುವ ಪ್ರಯತ್ನಗಳೆಲ್ಲ ನಡೆದಿದ್ದವು. ಮೊದಲ ಬಾರಿಗೆ ಕ್ರಿ.ಶ 1200ರಲ್ಲಿ ಮಧ್ಯಕಾಲೀನ ಶಿಕ್ಷಣ ತಜ್ಞರು ಬಟ್ಟೆ ಹಾಗೂ ಮೇಣವನ್ನು ಬಳಸಿ ಕಾಗದಗಳನ್ನು ಜೋಡಿಸಲು ಪ್ರಯತ್ನಿಸಿದ್ದರು.

ಕಾಗದದ ಹಾಳೆಗಳನ್ನು ಜೋಡಿಸಲು ಅತ್ಯಂತ ಸರಳ ಹಾಗೂ ಹೆಚ್ಚು ಪರಿಣಾಮಕಾರಿಯಾಗದ ಸಾಧನ ಅಭಿವೃದ್ಧಿಪಡಿಸಲು 18ನೇ ಶತಮಾನದವರೆಗೆ ಸಾಧ್ಯವಾಗಿರಲಿಲ್ಲ. ಫ್ರಾನ್ಸ್‌ನ ದೊರೆ 15ನೇ ಲೂಯಿಸ್‌ ಅವರಿಗಾಗಿ ಸಲಕರಣೆ ತಯಾರಕರು ಕಚ್ಚಾ ಸ್ಟೇಪ್ಲರ್‌ ಅನ್ನು ರೂಪಿಸಿದರು. ಅದುವರೆಗೂ ರಾಜ, ಕಾಗದದ ಹಾಳೆಗಳನ್ನು ಜೋಡಿಸಲು ಮೇಣವನ್ನು ಬಳಸುತ್ತಿದ್ದರಂತೆ. ಈ ಸ್ಟೇಪ್ಲರನ್ನು ಚಿನ್ನದಿಂದ ಮಾಡಲಾಗಿತ್ತು. ರಾಜ ಲಾಂಛನವನ್ನೂ ಅದರಲ್ಲಿ ಅಚ್ಚೊತ್ತಲಾಗಿತ್ತು.

ನಂತರದಲ್ಲಿ  ಜಗತ್ತಿನಾದ್ಯಂತ ಕಾಗದದ ಬಳಕೆ ಹೆಚ್ಚಾಯಿತು. ಹಾಗಾಗಿ, ಹಾಳೆಗಳನ್ನು ಸುಲಭವಾಗಿ ಜೋಡಿಸುವ ಸಾಧನದ ಅನಿವಾರ್ಯತೆ ಸೃಷ್ಟಿಯಾಯಿತು. ಸುಧಾರಿತ ಸ್ಟೇಪ್ಲರ್‌ನ ಅಭಿವೃದ್ಧಿಪಡಿಸಲು ಹಲವಾರು ಪ್ರಯತ್ನಗಳು ನಡೆದರೂ ಯಶಸ್ಸು ಸಿಕ್ಕಲಿಲ್ಲ.

1866ರಲ್ಲಿ ಅಮೆರಿಕದ ನಾವೆಲ್ಟಿ ಮ್ಯಾನ್ಯುಫಾಕ್ಚರಿಂಗ್‌ ಕಂಪೆನಿ ಆಧುನಿಕ ಸ್ಟೇಪ್ಲರ್‌ನ ಮೂಲ ರೂಪವನ್ನು ಆವಿಷ್ಕರಿಸಿತು. ಈ ಸಾಧನವು ಒಮ್ಮೆಗೆ ಒಂದು ಲೋಹದ ಕೊಂಡಿಯನ್ನು (ಸಾಮಾನ್ಯವಾಗಿ ಇಂಗ್ಲಿಷ್‌ನ ‘ಯು’ ಆಕಾರದಲ್ಲಿರುತ್ತದೆ) ಮಾತ್ರ ಹಾಳೆಗಳಿಗೆ ಒತ್ತುತ್ತಿತ್ತು. ಅಲ್ಲದೇ, ಕಾಗದಗಳ ಕಟ್ಟಿನ ಮತ್ತೊಂದು ಬದಿಯಲ್ಲಿ ತಂತಿಯ ತುದಿಗಳನ್ನು ಬಾಗಿಸುವ ವ್ಯವಸ್ಥೆ ಅದರಲ್ಲಿ ಇರಲಿಲ್ಲ. ಹಾಗಾಗಿ ಜನರು ಕೈಯಲ್ಲೇ ಅವುಗಳನ್ನು ಬಾಗಿಸಬೇಕಾಗಿತ್ತು. ಇದಕ್ಕೆ ಹೆಚ್ಚು ಮಾನವ ಶ್ರಮ ಬೇಕಿತ್ತು. ಹಾಗಾಗಿ, ಈ ಸಾಧನ ಅಷ್ಟೊಂದು ಯಶಸ್ಸು ಕಾಣಲಿಲ್ಲ.

ಅದೇ ವರ್ಷ ಜಾರ್ಜ್‌ ಮೆಕ್‌ಗಿಲ್‌ ಎಂಬುವವರು, ಲೋಹದ ಕೊಂಡಿ ಕಾಗದ ಹಾಳೆಗಳನ್ನು ಚುಚ್ಚಿ ಮತ್ತೊಂದು ಬದಿಯಲ್ಲಿ ಕೊಂಡಿಯ ತುದಿಗಳನ್ನು ಬಾಗಿಸುತ್ತಿದ್ದ ಸಾಧನಕ್ಕೆ ಪೇಟೆಂಟ್‌ ಪಡೆದರು. 1867ರಲ್ಲಿ ಇನ್ನಷ್ಟು ಸುಧಾರಿತ ಸ್ಟೇಪ್ಲರ್‌ಗೆ ಪೇಟೆಂಟ್ ಸಂಪಾದಿಸಿದರು. 1879ರಲ್ಲಿ ಇನ್ನಷ್ಟು ಸುಧಾರಿತ ಸ್ಟೇಪ್ಲರ್‌ಗೆ ಅವರು ಪೇಟೆಂಟ್‌ ಪಡೆದರು. ಈ ಸಾಧನ ವಾಣಿಜ್ಯಾತ್ಮಕವಾಗಿಯೂ ಹೆಚ್ಚು ಯಶಸ್ಸು ಗಳಿಸಿತು. ಆದರೆ, ಈ ಸಾಧನದಲ್ಲೂ ಒಂದು ಸಲಕ್ಕೆ ಒಂದು ಲೋಹದ ಕೊಂಡಿಯನ್ನು ಮಾತ್ರ ಬಳಸಬಹುದಿತ್ತು. ಪ್ರತಿ ಬಾರಿಯೂ ಲೋಹವನ್ನು ಯಂತ್ರಕ್ಕೆ ತುಂಬಬೇಕಿತ್ತು. ಅರ್ಧ ಇಂಚಿನ ಲೋಹದ ತಂತಿಯನ್ನು ಇದರಲ್ಲಿ ಬಳಸಲಾಗುತ್ತಿತ್ತು.

1895ರಲ್ಲಿ ಹೆಚ್ಚು ಸುಧಾರಿತ ಸ್ಟೇಪ್ಲರ್‌ ಅಭಿವೃದ್ಧಿಯಾಯಿತು. ಇ.ಎಚ್‌.ಹಾಚ್‌ಕಿಸ್‌ ಎಂಬ ಕಂಪೆನಿ ಇದರ ನಿರ್ಮಾತೃ. ಉದ್ದದ ತಂತಿಯ ರೂಪದಲ್ಲಿ ಬಾಗಿಸಬಹುದಾದ ಲೋಹದ ಕೊಂಡಿಗಳನ್ನು ಒಂದಕ್ಕೊಂದು ಜೋಡಿಸಿ ತಯಾರಿಸಿದ್ದ ಪಟ್ಟಿಯನ್ನು ಇದು ಬಳಸುತ್ತಿತ್ತು. ಇದರಲ್ಲಿ ಅತ್ಯಂತ ಸುಲಭವಾಗಿ ಕಾಗದಗಳನ್ನು ಜೋಡಿಸಬಹುದಿತ್ತು. ಆದರೆ, ಇದರ ವಿನ್ಯಾಸ ಬಳಕೆದಾರಸ್ನೇಹಿ ಆಗಿರಲಿಲ್ಲ. ಹಾಗಾಗಿ ಹೆಚ್ಚು ಜನಪ್ರಿಯತೆ ಗಳಿಸಲಿಲ್ಲ. 1930ರವರೆಗೂ ಹಲವಾರು ತಂತ್ರಜ್ಞರು ಹೆಚ್ಚು ಜನಸ್ನೇಹಿ ಸ್ಟೇಪ್ಲರ್‌ಗಳ ಅಭಿವೃದ್ಧಿಗೆ ಒತ್ತು ನೀಡಿದರು. ಆದರೆ ಯಶಸ್ಸೆಂಬುದು ಮರೀಚಿಕೆಯಾಗಿತ್ತು.

ಲೇಖನ ಸಾಮಗ್ರಿಗಳ ಸಗಟು ವ್ಯಾಪಾರಿಯಾಗಿದ್ದ ಜ್ಯಾಕ್‌ ಲಿಂಕ್ಸಿ ಎಂಬುವವರು ಸ್ಥಾಪಿಸಿದ್ದ ಸ್ವಿಂಗ್ಲಿನ್‌ ಎಂಬ ಕಂಪೆನಿ 1937ರಲ್ಲಿ ಸ್ಟೇಪ್ಲರ್‌ ತಂತ್ರಜ್ಞಾನದಲ್ಲಿ ಕ್ರಾಂತಿಕಾರಕ ಆವಿಷ್ಕಾರ ಮಾಡಿತು. ಅತ್ಯಂತ ವೇಗವಾಗಿ ಕಾಗದಗಳನ್ನು ಜೋಡಿಸಬಲ್ಲ ಸ್ಟೇಪ್ಲರ್‌ ಅನ್ನು ಅದು ಪರಿಚಯಿಸಿತು. ಈ ಸಾಧನ ಬಹುಪಾಲು ಈಗಿನ ಸ್ಟೇಪ್ಲರ್‌ ಅನ್ನೇ ಹೋಲುತ್ತಿತ್ತು. ಸಾಧನದ ಒಳಗಡೆ ಲೋಹದ ಕೊಂಡಿಗಳನ್ನು ಒಂದಕ್ಕೊಂದು ಅಂಟಿಕೊಂಡಂತೆ ಸರಣಿಯಾಗಿ ಜೋಡಿಸಲು ಸಾಧ್ಯವಿತ್ತು.  ಈಗಿನಂತೆ ಕಾಗದದ ಹಾಳೆಗಳನ್ನು ಈ ಯಂತ್ರದ ಮಧ್ಯದಲ್ಲಿ ಇಟ್ಟು ಮೇಲಿನ ಸಾಧನದ ಮೇಲಿನ ಭಾಗವನ್ನು ಒತ್ತಿದರೆ ಸಾಕಿತ್ತು.
ಅಲ್ಲಿಯವರೆಗೂ ಸ್ಟೇಪ್ಲರ್‌ ಮೂಲಕ ಕಾಗದಗಳನ್ನು ಜೋಡಿಸಬೇಕಿದ್ದರೆ ಜನರು ಸ್ಕ್ರೂಡ್ರೈವರ್‌, ಸುತ್ತಿಗೆಗಳನ್ನು ಜೊತೆಯಲ್ಲಿ ಇಟ್ಟುಕೊಳ್ಳಬೇಕಿತ್ತಂತೆ!
ಅದರ ನಂತರ ಇಲ್ಲಿಯವರೆಗೆ ತರಹೇವಾರಿ ಸ್ಟೇಪ್ಲರ್‌ಗಳು ಬಂದರೂ, ವಿನ್ಯಾಸ, ತಂತ್ರಜ್ಞಾನದಲ್ಲಿ ಹೆಚ್ಚಿನ ಬದಲಾವಣೆ ಆಗಿಲ್ಲ. ವಿದ್ಯುತ್‌ ಚಾಲಿತ ಸ್ಟೇಪ್ಲರ್‌ಗಳೂ ಈಗ ಬಂದಿವೆ. ಕಾಗದದ ಹಾಳೆಗಳನ್ನು ಜೋಡಿಸುವುದಕ್ಕೆ ಮಾತ್ರವಲ್ಲದೇ ಬೇರೆ ವಸ್ತುಗಳನ್ನು (ಉದಾ: ಮರ, ರಟ್ಟು, ಚರ್ಮ, ರಬ್ಬರ್‌ ಹಾಳೆ) ಜೋಡಿಸಲೂ ಈ ಸಾಧನವನ್ನು ಬಳಸಲಾಗುತ್ತಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಶಸ್ತ್ರಚಿಕಿತ್ಸೆಗಳಲ್ಲಿ ಬಳಸುವ ಸ್ಟೇಪ್ಲರ್‌ಗಳೂ ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT