ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮಾಯಣ ಕಥನದ ಚಿತ್ರಸಾಲು

Last Updated 4 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಭಾರತದ ಎರಡು ಮಹಾಕಥನಗಳಲ್ಲಿ ಒಂದಾದ ರಾಮಾಯಣವು, ಅದು ಸೃಷ್ಟಿಯಾದ ಕಾಲದಿಂದ ಈವರೆಗೆ ಪಡೆದುಕೊಂಡ ಪ್ರಚಾರದ ವರಸೆಯೇ ಆಶ್ಚರ್ಯ ಹುಟ್ಟಿಸುತ್ತದೆ. ನೆಲ–ಜಲದ ಮೇಲೆ ಇರಬಹುದಾದ ದಂತಕಥೆಗಳಿಂದ, ತೊಗಲುಬೊಂಬೆ, ಸೂತ್ರದಗೊಂಬೆ ಆಟಗಳಿಂದ, ಆಮೇಲಿನ ಬಯಲಾಟಗಳಿಂದ, ಶಿಲ್ಪ ಮತ್ತು ವರ್ಣಚಿತ್ರಗಳಿಂದ – ಇಷ್ಟೇ ಅಲ್ಲದೆ ಮತ್ತೆ ಮತ್ತೆ ಪ್ರಾಂತೀಯ ಭಾಷೆಗಳಲ್ಲಿ ಹುಟ್ಟಿಕೊಂಡ ಕಾವ್ಯಕಥನಗಳಿಂದ ರಾಮಾಯಣದ ಪ್ರಚಾರವ್ಯಾಪ್ತಿ ಹರಡಿಕೊಂಡಿದೆ. ಅಂದರೆ, ಭಾರತದ ಪ್ರಾಕೃತಿಕ ಜಗತ್ತಿನಲ್ಲಿ, ಜೀವಜಾಲಗಳಲ್ಲಿ ಮಹಾಭಾರತ–ರಾಮಾಯಣ ಕಥನಗಳು ಹೇಗೆ ಹೇಗೋ ಹುಟ್ಟಿ ಹರಿದು, ಹಂಚಿಹೋಗಿ ಇಲ್ಲಿಯ ಜನಸಮೂಹ ಅದರ ನಿರಂತರ ನೆನಪಿನಿಂದ ಹೊರಬರಲಾರದಂತೆ, ಬಿಡಿಸಿಕೊಳ್ಳಲಾರದಂತಿದೆ. ಕನ್ನಡದಲ್ಲಿ ಕುವೆಂಪು ‘ರಾಮಾಯಣ ದರ್ಶನಂ’ ಬರೆದರು. ತೆಲುಗಿನಲ್ಲಿ ವಿಶ್ವನಾಥ ಸತ್ಯನಾರಾಯಣ ಅವರು ‘ರಾಮಾಯಣ ಕಲ್ಪವೃಕ್ಷಮು’ ಬರೆದರೆ ಅದೇ ತೆಲುಗಿನಲ್ಲಿ ಮುಪ್ಪಾಳ ರಂಗನಾಯಕಮ್ಮ ‘ರಾಮಾಯಣ ವಿಷವೃಕ್ಷಮು’ ಬರೆದರು. ಅಂದರೆ, ರಾಮಾಯಣ ತನ್ನ ಒಂದೇ ದಿಕ್ಕಿನಲ್ಲಲ್ಲದೆ, ವಿರುದ್ಧಗತಿಯಲ್ಲೂ ಪ್ರಚಾರ ಪಡೆದದ್ದುಂಟು. ರಾಮಾಯಣದ ‘ಉತ್ತರಕಾಂಡ’ವಂತೂ ಬಹುಚರ್ಚಿತ ಕಥನ ಭಾಗವಾಗಿದೆ.

ಸೂತ್ರದ ಬೊಂಬೆಯಾಟದಲ್ಲಿ ಅತಿ ಪ್ರಾಚೀನವಾದುದು ತೊಗಲುಬೊಂಬೆಯಾಟ. ಈ ಸೂತ್ರದ ಗೊಂಬೆಯ ಸಿದ್ಧತೆಯೇ ಒಂದು ದೀರ್ಘ ಕ್ರಮ. ಬೊಂಬೆಗೆ ಉಪಯೋಗಿಸುವ ಮರವೇ ಬೇರೆ. ಮರವನ್ನು ಗೊಂಬೆಯಾಗಿಸುವವರೊಬ್ಬರು. ಗೊಂಬೆಗೆ ರಾಮಕೃಷ್ಣ ಸೀತೆಯ, ಲಕ್ಷ್ಮಣ, ಹನುಮಂತರ ವರ್ಣ ಮೇಳ ಹಚ್ಚುವವರು ಮತ್ತೊಂದು ವರ್ಗದವರು. ಈ ಬೊಂಬೆಗಳನ್ನು ಆಡಿಸುವುದು ಮೂರ್ನಾಲ್ಕು ಜನರ ಗುಂಪಾದರೆ, ಸಂಗೀತ ಮೇಳದ್ದೇ ಇನ್ನೊಂದು ಸಮೂಹ. ಇವರಿಗೆಲ್ಲ ಮುಖ್ಯಸ್ಥ ಭಾಗವತ. ಶಿಳ್ಳೆಕ್ಯಾತರೇ ಅಲ್ಲದೆ ಇತರೇ ಸಮೂಹದವರೂ ಈ ಗೊಂಬೆಯಾಟದ ಕಲಾವೃತ್ತಿಯವರಾಗಿರುತ್ತಾರೆ. ರಾಮಾಯಣ ಕಥನಕ್ಕೆ ಬಣ್ಣ ಬಳಿಯುವುದು ಈ ಗೊಂಬೆಯಾಟಗಳಿಂದ ಅತ್ಯಂತ ಪ್ರಾಚೀನ ಕಾಲದಿಂದಲೇ ಆರಂಭವಾಯಿತು. ತದನಂತರವೇ ಮನುಷ್ಯಮಾತ್ರರು ರಂಗಮಂಚವನ್ನೇರಿ ಬಯಲಾಟಗಳಲ್ಲಿ ಮುಖ, ಮೈ, ಮನಸ್ಸಿಗೆ ರಾಮಾಯಣ, ಮಹಾಭಾರತ ಪಾತ್ರಗಳ ಬಣ್ಣ ಬಳಿದುಕೊಂಡರು.

ಮೈಸೂರು ವಿಶ್ವವಿದ್ಯಾನಿಲಯದ ವಸ್ತು ಸಂಗ್ರಹಾಲಯದಲ್ಲಿ ವರ್ಣಮೇಳವಿರುವ ತೊಗಲುಬೊಂಬೆ, ಸೂತ್ರದಬೊಂಬೆಗಳಿವೆ. ಆದರೆ, ಈ ರಾಮಾಯಣದ ಚಿತ್ರವ್ಯಾಪ್ತಿ ಎಷ್ಟರವರೆಗೆ ಹಬ್ಬಿದೆಯೆಂದರೆ, ಅದೇ ಮೈಸೂರು ವಿ.ವಿ.ಯ ವಸ್ತು ಸಂಗ್ರಹಾಲಯದ ಹೊರಭಾಗದಲ್ಲಿ ನಿಲ್ಲಿಸಿರುವ ಒಂದು ಮರದ ರಥ ಮಧ್ಯಭಾಗದ ಸುತ್ತ ರಾಮಾಯಣ ಚಿತ್ರಗಳನ್ನು ಅತ್ಯಂತ ಕಿರಿದಾದ ಪಟ್ಟಿಕೆಯಲ್ಲಿ ಸುತ್ತಲೂ ಕೆತ್ತಲಾಗಿದೆ. ಇನ್ನು ಕರ್ನಾಟಕದಾದ್ಯಂತ ತೆಗೆದುಕೊಳ್ಳುವುದಾದರೆ ಬಾದಾಮಿ ಚಾಲುಕ್ಯರ ಕಾಲದಿಂದ, ವಿಜಯನಗರದ ಅರಸರವರೆಗೆ ಎಲ್ಲರೂ ತಾವು ಕಟ್ಟಿಸಿದ ದೇವಾಲಯಗಳ ತಳಪಟ್ಟಿಕೆಗಳಲ್ಲಿ ರಾಮಾಯಣದ ಚಿತ್ರಗಳನ್ನು ಕ್ರಮವಾಗಿ ಬಿಡಿಸಿರುವುದಿದೆ. ಇದರೊಂದಿಗೆ ಕನ್ನಡ ಕಾವ್ಯ ಪರಂಪರೆಯಲ್ಲಿ ರಾಮಾಯಣ–ಮಹಾಭಾರತ ಲಿಖಿತ ನಾಟಕಗಳು ಇಲ್ಲದಿದ್ದರೂ ಕನ್ನಡ ಜನಪದ ಜಗತ್ತು ಅದರ ಕಥನಭಾಗಗಳನ್ನು ಬಯಲಾಟಗಳನ್ನಾಗಿಸಿ ರಂಗದ ಮೇಲೆ ಆಡಿಕೊಂಡು ಬಂದುಬಿಟ್ಟಿರುತ್ತದೆ. ಇಲ್ಲಿಯೇ ಮುಖ್ಯವಾಗಿ ಗಮನಿಸಬೇಕಾದ ಒಂದು ಮುಖ್ಯ ಸಂಗತಿ ಎಂದರೆ, ಜನಪದರು ಮೌಖಿಕ ಪರಂಪರೆಯಲ್ಲಿ ಅದೇ ರಾಮಾಯಣ–ಮಹಾಭಾರತ ಕಥನಗಳನ್ನು ತಮಗೆ ಹೇಗೆ ಬೇಕೋ ಹಾಗೆ ಬದಲಾಯಿಸಿಕೊಂಡುಬಿಟ್ಟಿರುವುದು. ಆದರೆ ಅದನ್ನು ಬಯಲಾಟಕ್ಕೆ ತಂದುಕೊಳ್ಳುವಲ್ಲಿ ಮಾತ್ರ ಮೂಲಕಥನದ ಘಟನೆಗಳನ್ನು ಅಂತೆಯೇ ವ್ಯತ್ಯಾಸವಿಲ್ಲದಂತೆ ಉಳಿಸಿಕೊಂಡಿರುತ್ತಾರೆ.

ಆರಂಭಕ್ಕೇ ಹೇಳಿರುವಂತೆ ರಾಮಾಯಣ ಕಥನ ಯಾವ ಪ್ರಾಕೃತಿಕ ಸಂಗತಿ ಮತ್ತು ಜನಸಮೂಹದ ನೆನಪನ್ನೂ ಬಿಡದಂತೆ ಆವರಿಸಿಕೊಂಡಿರುವುದಕ್ಕೆ ಕಾರಣ ಮೇಲಿಂದಮೇಲೆ ಅವುಗಳನ್ನು ಪುನರಾವರ್ತನೆಯೆಂಬಂತೆ, ಅಕ್ಷರ ರೂಪದಲ್ಲಿ, ಚಾಕ್ಷುಷನಾಟಕ ರೂಪದಲ್ಲಿ ಅಲ್ಲದೆ, ಮತ್ತೆ ಚಿತ್ರ ಪರಂಪರೆಯಲ್ಲಿ ತಂದದ್ದೂ ಕಾರಣವಾಗಿರುತ್ತದೆ. ಹಿಮಾಚಲ ಪ್ರದೇಶದ ಚಂಬಾ ಪಟ್ಟಣದಲ್ಲಿ ರಾಮಾಯಣ ಕಥನ ಚಿತ್ರಗಳಿಗೇ ಮೀಸಲಾದ ಒಂದು ವಸ್ತು ಸಂಗ್ರಹಾಲಯವಿದೆ. ಎರಡು ಮೂರು ಅಂತಸ್ತಿನಲ್ಲಿರುವ ಆ ಚಿತ್ರ ಸಂಗ್ರಹಾಲಯದ ಗೋಡೆಯ ಮೇಲೆಲ್ಲ ರಾಮಾಯಣ ಕಥನದ ವಿವಿಧ ಬಗೆಯ ಜಲ–ತೈಲ ರೇಖಾಚಿತ್ರಗಳನ್ನು ಜೋಡಿಸಲಾಗಿದೆ.

1825ರಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರು ತಾವೇ ಸ್ವತಃ ಸಂಸ್ಕೃತದಲ್ಲಿ ‘ದಶರಥ ನಂದನಮ್’ ಎಂಬ ಕೃತಿಯನ್ನು ರಚಿಸಿ ಅದರಲ್ಲಿ ಒಂದಷ್ಟು ಕಪ್ಪುಬಿಳುಪಿನ ಗೆರೆಯ ಚಿತ್ರಗಳನ್ನು ಸೇರಿಸಿದ್ದಾರೆ. ಲಂಕೆಯಲ್ಲಿ ರಾವಣ ಸಂಹಾರವಾದ ಮೇಲೆ ರಾಮ ಲಕ್ಷ್ಮಣರು ವಿಭೀಷಣನಿಗೆ ಪಟ್ಟಾಭಿಷೇಕವನ್ನು ನೆರವೇರಿಸುತ್ತಿರುವ ಚಿತ್ರವಿದೆ. ಇವರ ನಂತರ ಪುಷ್ಪಕ ವಿಮಾನದಲ್ಲಿ ರಾಮ, ಲಕ್ಷ್ಮಣ, ಸೀತೆಯರು ಆಕಾಶಮಾರ್ಗ ಅಯೋಧ್ಯೆಯ ಕಡೆಗೆ ಬರುವ ಚಿತ್ರವಿದೆ.

1916ರಲ್ಲಿ ಕನ್ನಡದಲ್ಲಿಯೇ ರಾಮಾಯಣ ಚಿತ್ರ ವಿವರಣೆಯ ಸಂಪುಟವೊಂದು ಪ್ರಕಟವಾಯಿತು. ಈ ಸಂಪುಟದಲ್ಲಿ ಅರವತ್ತು ವರ್ಣಚಿತ್ರಗಳಿದ್ದು, ಬರವಣಿಗೆಯೇ ಇಲ್ಲದಂತಿದೆ. ಆದರೆ, ಪ್ರತಿ ಚಿತ್ರದ ಕೆಳಗೆ ಆ ಸಂದರ್ಭವನ್ನು ವಿವರಿಸುವ ಒಂದೆರಡು ಸಾಲುಗಳು ಮಾತ್ರ ಇವೆ. ಇದರ ಸಂಪಾದಕರು ಬಾಳಾಸಾಹೇಬ ಪಂಡಿತ ಪಂತಪ್ರತಿನಿಧಿ. ಮುಂಬೈನ ‘ಬ್ರಿಟಿಷ್ ಇಂಡಿಯ ಪ್ರಿಂಟಿಂಗ್ ಪ್ರೆಸ್‌’ನಲ್ಲಿ ಇದು ಪ್ರಕಟವಾಗಿ, ರಾಮಚಂದ್ರ ಮಾಧವ ಮಹಿಷಿ ಇದಕ್ಕೆ ಮುನ್ನುಡಿ ಬರೆದಿರುತ್ತಾರೆ. ಅದರಲ್ಲಿ ಮಹಿಷಿಯವರು, ವಾಲ್ಮೀಕಿಗಳು ಯಾವ ಕಥನವನ್ನು ಶಬ್ದದಲ್ಲಿ ಬರೆದಿರುತ್ತಾರೋ ಅದನ್ನು ಪಂಡಿತ ಪಂತಪ್ರತಿನಿಧಿಯವರು ಚಿತ್ರರೂಪದಲ್ಲಿ ತೋರಿಸಲು ಪ್ರಯತ್ನಿಸಿ ಸ್ತುತ್ಯರ್ಹ ಕಾರ್ಯವೆಸಗಿರುವರು ಎಂದಿದ್ದಾರೆ. ಈ ಚಿತ್ರಸಂಪುಟ ರಾಮಾಯಣವನ್ನು ನೇರವಾಗಿ ಓದಲಾರದವರ ಅನುಕೂಲಕ್ಕಾಗಿ ಸಿದ್ಧಪಡಿಸಲಾಗಿದೆ ಎಂದಿರುತ್ತಾರೆ. ಸಂಪುಟದಲ್ಲಿರುವ ಅರವತ್ತು ಚಿತ್ರಗಳೂ ವರ್ಣಚಿತ್ರಗಳು. ಇವು ನೋಡಲು ರಾಜಾ ರವಿವರ್ಮನ ಚಿತ್ರಗಳಂತೆ ತೋರುತ್ತವೆ. ಚಿತ್ರಗಳ ಅಂಗಭಾವವೂ ನೋಟಕ್ರಮವೂ ಸೂಕ್ಷ್ಮವಾಗಿಯೇ ಇರುವಂತಿವೆ. ವರ್ಣ ಮೇಳ ತೀವ್ರವಾಗಿಲ್ಲದೆ ಹಗುರ ಸ್ವರೂಪದಲ್ಲಿದ್ದು ಆಕರ್ಷಣೀಯವಾಗಿರುತ್ತದೆ. ಅರವತ್ತು ಪುಟಗಳನ್ನು ತಿರುವುತ್ತಿರುವಂತೆ ರಾಮಾಯಣ ಕಥನಚಿತ್ರ ಒಂದಾದ ಮೇಲೊಂದರಂತೆ ಕಾಣುವಂತಾಗುತ್ತದೆ. ಅಕ್ಷರ ಬಲ್ಲವರು ಅಡಿ ಟಿಪ್ಪಣಿಯ ಒಂದೆರಡು ಸಾಲು ಓದಿಕೊಂಡರೆ ಕಥನ ಸಂದರ್ಭ ಇನ್ನಷ್ಟು ಸ್ಪಷ್ಟವಾಗುತ್ತದೆ.
1928ರಲ್ಲಿ ಎಸ್. ಲಿಂಗಣ್ಣಯ್ಯ ಎಂಬುವವರು ‘ಚಿತ್ರ ರಾಮಾಯಣ’ ಪುಸ್ತಕವನ್ನು ಪ್ರಕಟಿಸಿದ್ದು ಅದೂ ಕೂಡ ಬಾಳಾಸಾಹೇಬರ ಚಿತ್ರ ಸಂಪುಟದಂತೆಯೇ ಇದೆ. ಆದರೆ, ಇವು ವರ್ಣ ಚಿತ್ರಗಳಲ್ಲ. ಬರಿಯ ಕಪ್ಪು ಬಿಳುಪಿನ ರೇಖಾಚಿತ್ರಗಳು. ಚಿತ್ರಸಂಖ್ಯೆ ನೂರ ಅರವತ್ತು. ಯಥಾವಿಧಿಯಾಗಿ ಪ್ರತಿಯೊಂದು ಚಿತ್ರಕ್ಕೂ ಮೂರ್ನಾಲ್ಕು ವಾಕ್ಯಗಳ ವಿವರಣೆ ಇದೆ. ಬಾಳಾಸಾಹೇಬರು ಮತ್ತು ಲಿಂಗಣ್ಣಯ್ಯನವರ ಉದ್ದೇಶ ಒಂದೇ. ವಾಲ್ಮೀಕಿ ಮಹರ್ಷಿಯು ಕಥನರೂಪದಲ್ಲಿ ಬರೆದದ್ದನ್ನು ಚಿತ್ರ ರೂಪದಲ್ಲಿ ಪ್ರಚುರಪಡಿಸುವುದು, ತನ್ಮೂಲಕ ಭಾರತೀಯಮೂಲ ಕಥನಗಳನ್ನು ಜನಸಮೂಹಕ್ಕೆ ಮುಟ್ಟಿಸುವುದು ತಮ್ಮ ಉದ್ದೇಶವೆಂದು ಹೇಳಿಕೊಂಡಿರುತ್ತಾರೆ. ಈ ರೇಖಾಚಿತ್ರ ರೂಪದ ರಾಮಾಯಣವನ್ನು ಬರೆದು ಜನಕ್ಕೆ ತಲುಪಿಸುತ್ತಿರುವುದು ತಮ್ಮ ವಿನಮ್ರ ಸೇವೆಯೆಂದು ಲಿಂಗಣ್ಣಯ್ಯ ಹೇಳಿಕೊಳ್ಳುತ್ತಾರೆ. 1966ರಲ್ಲಿ ವಿದ್ವಾನ್ ರಂಗನಾಥಶರ್ಮ ಅವರು ಸಂಸ್ಕೃತದ ‘ವಾಲ್ಮೀಕಿ ರಾಮಾಯಣ’ವನ್ನು ಕನ್ನಡಕ್ಕೆ ಭಾಷಾಂತರಿಸಿ ಪ್ರಕಟಿಸುವಲ್ಲಿ – ಅಲ್ಲಲ್ಲಿ ಕಪ್ಪುಬಿಳುಪು ಗೆರೆಯ ಚಿತ್ರಗಳು ರಾಮಾಯಣ ಕಥನಕ್ಕೆ ತಕ್ಕಂತೆ ಇರುತ್ತವೆ.

ಸುಪ್ರಸಿದ್ಧ ಚಿತ್ರ ಕಲಾವಿದರಾದ ಕೆ.ಕೆ. ಹೆಬ್ಬಾರರು ಶಿವರಾಮ ಕಾರಂತರು ಸಂಪಾದಿಸಿದ ‘ಕೌಶಿಕ ರಾಮಾಯಣ’ಕ್ಕೆ ಕೆಲವು ರೇಖಾಚಿತ್ರಗಳನ್ನು ರಚಿಸಿರುತ್ತಾರೆ. ಕೆಲವೇ ರೇಖೆಗಳಲ್ಲಿ ಜೀವನದ ಅರ್ಥವನ್ನು ಧ್ವನಿ ಪೂರ್ಣವಾಗಿ ಹೊಮ್ಮಿಸಿಬಿಡುವ ಹೆಬ್ಬಾರರ ಚಿತ್ರರೇಖೆಗಳು ಯಾವುದೋ ಕಾಲದ ಕಥನ ವಾತಾವರಣವನ್ನು ಸೃಷ್ಟಿಸಿಬಿಡುವಂತಿವೆ. ಮಧ್ಯಭಾರತದಲ್ಲಿಯ ಜನಪದ ಕಲಾವಿದರ ರಾಮಾಯಣ ಚಿತ್ರಕಥನ ಸಂಗತಿ ಇನ್ನೊಂದು ಕುತೂಹಲ. ಒರಿಸ್ಸಾ ಮೂಲದ ಚಿತ್ರ ಕಲಾವಿದರ ಮನೆತನದ ಗಂಡ ಹೆಂಡತಿಯರು ಬೀದಿಯಲ್ಲಿ ಮರದ ಕೆಳಗೆ ಒಂದು ಅಡಿ ಅಗಲದ ಬಿಳಿಯ ಹಾಳೆ ಹರಡುತ್ತಾರೆ. ಆದರೆ ಅದರ ಉದ್ದ ಮಾತ್ರ ಹತ್ತಾರು ಅಡಿಗಳಷ್ಟಿದ್ದು, ಅದನ್ನು ಗಳುವಿಗೆ ಸುತ್ತಿರುತ್ತಾರೆ. ಈ ಹಾಳೆಯಲ್ಲಿ ಒಂದು ಅಡಿ ಅಗಲ, ಒಂದು ಅಡಿ ಉದ್ದದ ಮನೆಗಳಲ್ಲಿ ರಾಮಾಯಣ ಕಥನವನ್ನು ಜಲವರ್ಣದಲ್ಲಿ ಬಿಡಿಸಲಾಗುತ್ತದೆ. ಈ ಪ್ರಕ್ರಿಯೆ ನಡೆಯುವುದು ಊರೂರ ಬೀದಿಗಳಲ್ಲಿ. ನಿಂತೋ ಕುಳಿತೋ ಚಿತ್ರ ಬರೆಯುವ ಈ ಗಂಡ ಹೆಂಡತಿಯ ಹೆಸರು ಜವಾ ಚಿತ್ರಕಾರ್ ಮತ್ತು ಮೊಂಟೂ ಚಿತ್ರಕಾರ್. ಬರಿದೇ ವರ್ಣಚಿತ್ರ ಬಿಡಿಸುವುದಲ್ಲ, ಅದರ ಕಥನ ಸಂದರ್ಭವನ್ನೂ ಜನಪದ ಧಾಟಿಯಲ್ಲಿ ಹಾಡುತ್ತಾರೆ.

ಬೀದಿಹೋಕರು ನಿಂತು ಆ ಚಿತ್ರಗಳನ್ನು ವೀಕ್ಷಿಸಬಹುದು. ಕೈ ಮುಗಿದು ತಮ್ಮ ಭಕ್ತಿಯನ್ನು ಸೂಚಿಸಬಹುದು. ಇಲ್ಲವೇ ಹಣಕೊಟ್ಟು ಚಿತ್ರವನ್ನು ಕೊಂಡುಹೋಗಬಹುದು. ಅಂದರೆ ದಾರಿಹೋಕರು ಬೇಕಾದ ಚಿತ್ರಗಳನ್ನು ಕೇಳುವಲ್ಲಿ ಅದಷ್ಟೇ ಭಾಗದ ಚಿತ್ರವನ್ನು ಕತ್ತರಿಸಿಕೊಟ್ಟು, ಮತ್ತೆ ಅದೇ ಚಿತ್ರವನ್ನು ಖಾಲಿ ಹಾಳೆಯಲ್ಲಿ ಪದ ಹೇಳುತ್ತ ಬಿಡಿಸತೊಡಗುತ್ತಾರೆ. ಈ ದಂಪತಿಯರು ಹೇಳುವಂತೆ ಪಾಕಿಸ್ತಾನದ ಪೆಶಾವರ್, ಲಾಹೋರ್, ರಾವಲ್ಪಿಂಡಿ, ಕರಾಚಿ ಭಾಗಗಳಲ್ಲಿ ರಾಮಾಯಣ ಕಥನವನ್ನು ಜನಪದ ಧಾಟಿಯಲ್ಲಿ ಹಾಡುವವರು ಇದ್ದರಂತೆ! ಇವರ ಜನಪದ ಹಾಡುಗಾರಿಕೆಯಲ್ಲಿ ಕಬೀರ್‌ದಾಸ್, ಸೂರದಾಸರ ವಾಕ್ಯಗಳು ಸೇರಿಕೊಂಡಂತೆ ಕಾಣುತ್ತಿದ್ದವು.

ಕುವೆಂಪು ಅವರ ‘ರಾಮಾಯಣ ದರ್ಶನಂ’ ಕಾವ್ಯ ಆಧರಿಸಿಯೂ ಚಿತ್ರಸಂಪುಟವೊಂದನ್ನು ಎಂ.ಎಚ್. ಕೃಷ್ಣಯ್ಯ ಅವರ ಸಂಪಾದಕತ್ವದಲ್ಲಿ ‘ಕನ್ನಡ ಮತ್ತು ಸಂಸ್ಕೃತಿ ಇಲಾಖೆ’ 2004ರಲ್ಲಿ ಹೊರತಂದಿದೆ. ಆಧುನಿಕ ಮಾದರಿಯ ವರ್ಣಚಿತ್ರಗಳನ್ನು ಬಿಡಿಸಿರುವವರು ಎಂ.ವಿ. ಕಂಬಾರ, ವಿ. ಹರೀಶ್, ಪುರುಷೋತ್ತಮ ಅಡವೆ, ದಿಲೀಪಕುಮಾರ್ ಕಾಳೆ, ಪ.ಸ. ಕುಮಾರ್, ಚಂದ್ರನಾಥ ಆಚಾರ್ಯ, ಜೆ.ಎಸ್. ಖಂಡೇರಾವ್, ಎಂ.ಬಿ. ಲೋಹರ್, ಕೆ.ಬಿ. ಸುರೇಖ ಮುಂತಾದವರ ವರ್ಣಚಿತ್ರಗಳು ಈ ಸಂಪುಟದಲ್ಲಿ ಪ್ರಕಟವಾಗಿವೆ. ಚಂದ್ರನಾಥ ಆಚಾರ್ಯರ ಚಿತ್ರ ಕುವೆಂಪು ಅವರ ‘ದಶಾನನನ ಸ್ವಪ್ನಸಿದ್ಧಿ’ ಕಥನವನ್ನು ಪ್ರತಿಮಾ ರೂಪದಲ್ಲಿ ಒಳಗೊಂಡಂತೆ ಅರ್ಥಪೂರ್ಣ ವರ್ಣಮೇಳದಲ್ಲಿ ರೂಪುಗೊಂಡಿದೆ.

ರಾಮಾಯಣ ಮಹಾಭಾರತ ಕಥನಗಳು ಹಲವು ಹತ್ತು ರೂಪಗಳಲ್ಲಿ ಭಾರತದಾದ್ಯಂತ ಹಬ್ಬಿಹೋಗಿ ಅವು ಈ ಹೊತ್ತಿಗೂ ಅಷ್ಟೇ ರೂಪದಲ್ಲಿ ಪುನರ್‌ಸೃಷ್ಟಿಗೊಳ್ಳುತ್ತಲೇ ಇವೆ. ಈಗಲೂ ರಾಮಾಯಣ ಕಥೆಯನ್ನು ‘ಆಧುನಿಕ ಮಹಾಕಾವ್ಯ’ ಎಂದು ಹೆಣೆಯುವುದು, ಕಥೆ, ಕಾದಂಬರಿ ರೂಪದಲ್ಲಿ ಬರೆಯುವುದು – ಚಿತ್ರಸೃಷ್ಟಿ, ಶಿಲ್ಪದ ಕೆತ್ತನೆಯಲ್ಲದೆ, ನಾಟಕ ಆಡುವುದು, ಮಂದಿರ ಕಟ್ಟಿಸುವುದು, ಪರ ವಿರೋಧ ಚರ್ಚೆ ಮಾಡುವುದು, ರಾಜಕಾರಣ ಮಾಡುವುದು... ಇದೆಲ್ಲವೂ ಜರುಗುತ್ತಲೇ ಕುವೆಂಪು ಹೇಳಿದಂತೆ, ವಿರಾಮವಿಲ್ಲದ ರಾಮಾಯಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT