ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರ್‌ಮೆಹರ್‌ ಮತ್ತು ಕಾಮಾಲೆ ಕಣ್ಣು

ಸಂಗತ
Last Updated 6 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಕಾರ್ಗಿಲ್‌ ಯುದ್ಧದಲ್ಲಿ ಹುತಾತ್ಮನಾದ ಯೋಧನ ಪುತ್ರಿ ಗುರ್‌ಮೆಹರ್‌ ಕೌರ್‌ ಅವರ ಕತೆ ಮಾಧ್ಯಮಗಳ ಮೂಲಕ ಗೊತ್ತಾದಾಗ, ಮುಖಮರೆಸಿ ಕೊಂಡ ವ್ಯಕ್ತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಗುರ್‌ಮೆಹರ್‌ ಅವರ ಮೇಲೆ ಆಕ್ರಮಣ ನಡೆಸಿದ್ದನ್ನು ಕಂಡಾಗ, ಎಳೆ ವಯಸ್ಸಿನ ಗುರ್‌ಮೆಹರ್‌ ಧ್ವನಿಯನ್ನು ಚಿರಪರಿಚಿತ ವ್ಯಕ್ತಿಗಳು ಇಂಟರ್‌ನೆಟ್‌ನಲ್ಲಿ ಹತ್ತಿಕ್ಕಿದಾಗ, ಕೆಲವು ಟಿ.ವಿ. ಚಾನೆಲ್‌ಗಳು ಆಕೆಯ ಮೇಲೆ ಹುಚ್ಚು ನಾಯಿಗಳನ್ನು ಛೂಬಿಟ್ಟಾಗ, ಸಾರ್ವಜನಿಕರ ಗಮನ ಹಾಗೂ ಮಾತಿನ ದಾಳಿ ಎದುರಿಸಲಾಗದೆಂದು ಅರಿತು ಆಕೆ ತನ್ನ ಅಭಿಯಾನದಿಂದ ಹಿಂದೆ ಸರಿದಿದ್ದನ್ನು ಕಂಡಾಗ, ಆಫ್ರಿಕಾದ ಅಭಯಾರಣ್ಯದಲ್ಲಿ ರಕ್ತದಾಹಿ ಕತ್ತೆಕಿರುಬಗಳು ಒಂಟಿ ಚಿಗರೆಯನ್ನು ಹರಿದು ಮುಕ್ಕಿದ ದೃಶ್ಯ ನೆನಪಿಗೆ ಬಂತು.

ನನ್ನ ಮನಸ್ಸು ನಾನು ಸೇನೆಯಲ್ಲಿದ್ದ ದಿನಗಳನ್ನು ನೆನಪಿಸಿತು. 1971ರಲ್ಲಿ ನಡೆದ ಪಾಕಿಸ್ತಾನದ ಜೊತೆಗಿನ ಯುದ್ಧದ ವೇಳೆ ನಮ್ಮ ಬ್ಯಾಚ್‌ನ ಯೋಧರನ್ನು ಮಿಲಿಟರಿ ಅಕಾಡೆಮಿಯಿಂದ ನೇರವಾಗಿ ಯುದ್ಧಭೂಮಿಗೆ ಕಳುಹಿಸಲಾಯಿತು. ಆ ಯುದ್ಧದಲ್ಲಿ ಸಾವಿರಾರು ಸೈನಿಕರು, ಸಾರ್ವಜನಿಕರು ಜೀವ ಕಳೆದುಕೊಂಡರು, ಅಂಗವೈಕಲ್ಯಕ್ಕೆ ತುತ್ತಾದರು. ನೆರೆಯ ದೇಶವೊಂದು ಸಂಪೂರ್ಣ ಧ್ವಂಸವಾಯಿತು. ಸಿಕ್ಕಿಂ, ಭೂತಾನ್‌, ಕಾಶ್ಮೀರ ಮತ್ತು ರಾಜಸ್ತಾನಗಳಲ್ಲಿ ಜನಸಾಮಾನ್ಯರಿಗೆ ಪ್ರವೇಶ ನಿಷಿದ್ಧವಾಗಿದ್ದ ಗಡಿ ಪ್ರದೇಶಗಳಲ್ಲಿ ಕಳೆದ ದಿನಗಳು ನೆನಪಾದವು. ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳ, ಮಗನನ್ನು ಕಳೆದುಕೊಂಡ ಅಪ್ಪ–ಅಮ್ಮಂದಿರ, ತಂದೆಯನ್ನು ಕಳೆದುಕೊಂಡ ಸೈನಿಕರ ಮಕ್ಕಳ ಹಾಗೂ ವಿಧವೆಯಾದವರ ಚಿತ್ರಗಳು ಮನಸ್ಸನ್ನು ಮುತ್ತಿದವು. ಯುದ್ಧದಲ್ಲಿ ಅದೆಷ್ಟು ಪ್ರಾಣ ಹಾನಿಯಾಯಿತು, ಅದೆಷ್ಟು ನಷ್ಟ ಸಂಭವಿಸಿತು. ವಿವೇಕಯುತ ಮನಸ್ಸು ಇರುವ ಯಾರಿಗೆ ಯುದ್ಧ ಬೇಕಿದೆ?

ಹೊರಗಿನ ಶತ್ರುಗಳ ವಿರುದ್ಧ ಹೋರಾಡುವಾಗ ಅಥವಾ ಆಂತರಿಕ ಗಲಭೆಗಳ ಸಂದರ್ಭದಲ್ಲಿ ಯೋಧರು ಮತ್ತೆ ಮತ್ತೆ ಪ್ರಾಣ ಅರ್ಪಿಸುತ್ತಾರೆ. ಅದು ಅವರ ಕರ್ತವ್ಯದ ಭಾಗ. ಆದರೆ, ಕೆಲವು ಸಂದರ್ಭಗಳಲ್ಲಿ ದೇಶವನ್ನು ಆಳುವವರು ಯುದ್ಧಕ್ಕೆ ಮುಂದಾಗುತ್ತಾರೆ. ಕವಿ ಟೆನ್ನಿಸನ್‌ ತನ್ನ ಅವಿಸ್ಮರಣೀಯ ಕವಿತೆ ‘ದಿ ಚಾರ್ಜ್‌ ಆಫ್‌ ದಿ ಲೈಟ್ ಬ್ರಿಗೇಡ್‌’ನಲ್ಲಿ ‘ಕಾರಣ ಕೇಳುವುದು ಅವರ ಕೆಲಸವಲ್ಲ, ಕರ್ತವ್ಯ ನಿಭಾಯಿಸುವುದು,  ಪ್ರಾಣ ಅರ್ಪಿಸುವುದು ಅವರ ಧರ್ಮ’ ಎನ್ನುತ್ತಾನೆ. ಸೈನ್ಯಕ್ಕೆ ಸೇರಿದ ನಂತರ, ಪ್ರತಿ ಯೋಧನ ಹಣೆಬರಹ ಇದೇ ಆಗಿರುತ್ತದೆ. ಯುದ್ಧದಲ್ಲಿ ನಂಬಿಕೆ ಇರದ ಶಾಂತಿಪ್ರಿಯ ವ್ಯಕ್ತಿಗಳು, ತಮ್ಮದೇ ದೇಶದ ಪರವಾಗಿ ಯುದ್ಧದಲ್ಲಿ ಭಾಗಿಯಾಗಲು ನಿರಾಕರಿಸುತ್ತಾರೆ, ಆಳುವ ವರ್ಗ ಕರೆದರೂ ಸೈನ್ಯ ಸೇರುವುದಿಲ್ಲ, ಬದಲಿಗೆ ಜೈಲಿಗೆ ಹೋಗುವುದು ಲೇಸೆಂದು ನಂಬುತ್ತಾರೆ. ಇಂತಹ ವ್ಯಕ್ತಿಗಳನ್ನು ಇತಿಹಾಸ ಕಂಡಿದೆ.

1960ರಲ್ಲಿ ಅಮೆರಿಕವು ವಿಯೆಟ್ನಾಂ ವಿರುದ್ಧ ನಡೆಸಿದ ಯುದ್ಧಕ್ಕೆ ಆತ್ಮಸಾಕ್ಷಿಗೆ ಅನುಗುಣವಾಗಿ ವಿರೋಧ ವ್ಯಕ್ತಪಡಿಸಿದ ಅತ್ಯಂತ ಜನಪ್ರಿಯ ವ್ಯಕ್ತಿ ಕ್ಯಾಸಿಯಸ್ ಕ್ಲೇ. ಈತನೇ ಮುಂದೆ ಮಹಮ್ಮದ್ ಅಲಿ ಆದ. ಹೆವಿವೆಯ್ಟ್‌ ಬಾಕ್ಸಿಂಗ್‌ನಲ್ಲಿ ಮೂರು ಬಾರಿ ವಿಶ್ವ ವಿಜೇತನಾದ. ಯುದ್ಧವನ್ನು ವಿರೋಧಿಸಿದ ಇತರ ಸಾವಿರಾರು ಜನರ ಜೊತೆ ಬಂಧನಕ್ಕೆ ಒಳಗಾಗುವುದು ಲೇಸೆಂದು ಪರಿಗಣಿಸಿದ. ಆತನೇನು ಎರಡನೆಯ ದರ್ಜೆಯ ಅಮೆರಿಕನ್ ಆಗಿರಲಿಲ್ಲ.
ದಕ್ಷಿಣ ಆಫ್ರಿಕಾದಲ್ಲಿ ಇದ್ದಾಗ ಮಹಾತ್ಮ ಗಾಂಧಿ, ಬೋಯರ್ ಯುದ್ಧದ ಸಂದರ್ಭದಲ್ಲಿ ಬ್ರಿಟಿಷ್ ಸೇನೆಯಲ್ಲಿ ವೈದ್ಯಕೀಯ ಸಹಾಯಕ ಆಗಿ ಸೇರಿಕೊಂಡರು. ತಾವು ಬ್ರಿಟಿಷ್ ಸಾಮ್ರಾಜ್ಯದ ಪ್ರಜೆ ಆಗಿರುವ ಕಾರಣ, ತಮಗೆ ಆ ಸಾಮ್ರಾಜ್ಯ ಒದಗಿಸುವ ರಕ್ಷಣೆ ಇರುವ ಕಾರಣ ಈ ಕೆಲಸ ಮಾಡುವುದು ಸರಿ ಎಂದು ಶಾಂತಿ ಹಾಗೂ ಅಹಿಂಸೆಯ ಮೂರ್ತ ರೂಪವಾದ ಮಹಾತ್ಮ ಹೇಳಿದ್ದರು. ಒಂದನೆಯ ಹಾಗೂ ಎರಡನೆಯ ವಿಶ್ವಯುದ್ಧದ ಸಂದರ್ಭದಲ್ಲಿ ಕೂಡ ಮಹಾತ್ಮ ಇದೇ ತಾರ್ಕಿಕ ನೆಲೆಯಲ್ಲಿ ಬ್ರಿಟನ್‌ಗೆ ಬೆಂಬಲ ಸೂಚಿಸಿದರು. ಆದರೆ ತಾತ್ವಿಕವಾಗಿ ಅವರು ಯುದ್ಧವನ್ನು ಎಲ್ಲ ರೀತಿಯಿಂದಲೂ ವಿರೋಧಿಸಿದ್ದರು. ಈ ನಿಲುವಿನ ಕಾರಣಕ್ಕೆ ಮಹಾತ್ಮನ ದೇಶಪ್ರೇಮ ಕಡಿಮೆ ಆಯಿತೇ? ವಿಶ್ವ ಕಂಡಿರುವ ಮಹಾನ್ ಭಾರತೀಯ ಅಲ್ಲವೇ ನಮ್ಮ ಮಹಾತ್ಮ? ಅಲ್ಲದೆ, ಬುದ್ಧನಿಗೆ ಇರುವಂತಹ ಸ್ಥಾನ ಮಹಾತ್ಮನಿಗೆ ಇಲ್ಲವೇ?

ಪಾಕಿಸ್ತಾನದ ಜೊತೆಗಿನ ಯುದ್ಧದಲ್ಲಿ ತಂದೆಯನ್ನು ಕಳೆದುಕೊಂಡ, ತಂದೆ ಇಲ್ಲ ಎಂಬ ನೋವಿನಿಂದ ಹೊರಬಂದಿರದ, ಹದಿಹರೆಯವನ್ನು ಈಗಷ್ಟೇ ದಾಟಿರುವ ಹೆಣ್ಣುಮಗಳೊಬ್ಬಳು ಭಿತ್ತಿಫಲಕ ಹಿಡಿದು ‘ನನ್ನ ತಂದೆಯನ್ನು ಕೊಂದಿದ್ದು ಯುದ್ಧವೇ ವಿನಾ ಪಾಕಿಸ್ತಾನ ಅಲ್ಲ’ ಎಂದು ಹೇಳುವುದು ಶಾಂತಿಗಾಗಿನ ಹಂಬಲದಿಂದ ಅಲ್ಲವೇ? ಆ ಹೆಣ್ಣು ಯುದ್ಧವನ್ನು ವಿರೋಧಿಸುತ್ತಿದ್ದಾಳೆಯೇ ಹೊರತು ಪಾಕಿಸ್ತಾನ ಮಾಡಿದ್ದು ಸರಿ ಎಂದು ಹೇಳುತ್ತಿಲ್ಲ ಎಂಬುದು ಸ್ಪಷ್ಟವಾಗಿ ಅರ್ಥವಾಗುತ್ತಿಲ್ಲವೇ? ಗುರ್‌ಮೆಹರ್‌ ಅವರು ನೀಡಿದ ಸಂದೇಶದಲ್ಲಿ ಇರುವುದು ಶಾಂತಿಯ ಕರೆ, ಆಕೆಯ ಹೃದಯದಲ್ಲಿ ಮುಚ್ಚುಮರೆ ಇಲ್ಲ. ಯುದ್ಧವೆಂಬುದು ಭೀಕರ, ಅದು ತರುವುದು ನಾಶವನ್ನು ಮಾತ್ರ, ಎರಡೂ ದೇಶಗಳ ನಾಯಕರು ಯುದ್ಧವನ್ನು ತಡೆಯಬೇಕು, ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳಲು ಬೇರೆ ಮಾರ್ಗ ಕಂಡುಕೊಳ್ಳಬೇಕು ಎಂಬುದು ಆ ಮುಗ್ಧ ಯುವತಿಯ ಸಂದೇಶ.

ಉಗ್ರ ರಾಷ್ಟ್ರಪ್ರೇಮದಿಂದ ಕುರುಡಾಗಿರದ, ಅವಕಾಶವಾದಿ ರಾಜಕಾರಣಿಗಳ ಮಾತುಗಳಿಗೆ ಮಾರುಹೋಗಿರದ, ತಾವು ಮಾತ್ರ ಸರಿ ಎಂದು ಹೇಳಿಕೊಳ್ಳುವ ಎಡ ಹಾಗೂ ಬಲ ಪಂಥಗಳ ವಿಚಾರವಾದಿಗಳ ಮಾತಿಗೆ ಕಟ್ಟುಬೀಳದ ವ್ಯಕ್ತಿಗೆ, ಗುರ್‌ಮೆಹರ್‌ ‘ಶತ್ರು ಪಾಕಿಸ್ತಾನ’ವನ್ನು ಸಮರ್ಥಿಸಿಕೊಳ್ಳುತ್ತಿಲ್ಲ, ‘ಭಾರತದ ದೇಶಭಕ್ತ’ರನ್ನು ವಿರೋಧಿಸುತ್ತಿಲ್ಲ ಎಂಬುದು ಅರ್ಥವಾಗುತ್ತದೆ. ಗುರ್‌ಮೆಹರ್‌ ಯುದ್ಧವನ್ನು ವಿರೋಧಿಸುತ್ತಿದ್ದಾರೆ.

ತನ್ನ ಕರ್ತವ್ಯ ಎಂದು ತಿಳಿದು ಯುದ್ಧದಲ್ಲಿ ಪಾಲ್ಗೊಂಡಿದ್ದರೂ ಗಾಂಧಿ ಯುದ್ಧವನ್ನು ವಿರೋಧಿಸಿದರು. ಅಹಿಂಸೆ ಅವರ ನಂಬಿಕೆಯಾಯಿತು. ನಮ್ಮ ನಡುವಿನ ಮಹೋನ್ನತ ಮನಸ್ಸು, ಅನುಭಾವಿ ವ್ಯಕ್ತಿ ಟ್ಯಾಗೋರ್‌ ‘ನಾವು ಅರ್ಥ ಮಾಡಿಕೊಂಡಿರುವ ರಾಷ್ಟ್ರೀಯತೆಯು 20ನೆಯ ಶತಮಾನದ ಕೇಡು’ ಎಂದರು.

ಮಾನವತೆಯ ಮೇಲೆ ಪ್ರಭುತ್ವ ಸಾಧಿಸಲು ರಾಷ್ಟ್ರಭಕ್ತಿಗೆ ಎಂದಿಗೂ ಅವಕಾಶ ನೀಡಲಾರೆ’ ಎಂದು ಟ್ಯಾಗೋರ್ ಹೇಳಿದ್ದರು. ನಮ್ಮ ಋಷಿ, ಮುನಿಗಳಿಂದ ಆರಂಭಿಸಿ ಆಧುನಿಕ ಭಾರತ ಕಂಡ ಸಂತರಾದ ಪರಮಹಂಸರು, ವಿವೇಕಾನಂದರು, ರಮಣ ಮಹರ್ಷಿ ಹಿಂಸೆಯನ್ನು ವಿರೋಧಿಸಿದರು. ಸಂಕುಚಿತ ಮನಸ್ಸಿನವರು ಮಾತ್ರ ಇಂಥ ಮಹಾನ್ ವ್ಯಕ್ತಿಗಳನ್ನು ‘ದೇಶ ವಿರೋಧಿಗಳು’ ಎಂದು ಹೇಳಬಲ್ಲರು. ಪರ್ವತಗಳಷ್ಟೇ ಹಳೆಯದಾದ ಉಪನಿಷತ್ತುಗಳು, ನಮ್ಮ ನಡುವೆ ನಡೆಯುವ ಅನೇಕ ವಾಗ್ವಾದಗಳು ಶಾಂತಿ ಮಂತ್ರದ ಮೂಲಕ ಆರಂಭವಾಗುತ್ತವೆ. ಗುರ್‌ಮೆಹರ್‌ ನೀಡಿರುವ ಕರೆ ‘ಹಿಂಸೆಯನ್ನು ತ್ಯಜಿಸಿ’ ಎಂದು. ಕಾಮಾಲೆ ಕಣ್ಣಿನವರು ಮಾತ್ರ ಅದನ್ನು ತಿರುಚಿ ಓದಬಲ್ಲರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT