ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗದ್ದಿಗೆ ಕ್ಷೇತ್ರದಲ್ಲಿ ಜೋಡಿ ರಥೋತ್ಸವ ಸಂಭ್ರಮ

ಕೆಂಡಗಣ್ಣೇಶ್ವರಸ್ವಾಮಿ ಹಾಗೂ ಮಲೆಮಹದೇಶ್ವರ ಸ್ವಾಮಿಗೆ ಭಕ್ತಿ ಸಮರ್ಪಣೆ
Last Updated 9 ಮಾರ್ಚ್ 2017, 9:12 IST
ಅಕ್ಷರ ಗಾತ್ರ
ಹುಣಸೂರು: ತಾಲ್ಲೂಕಿನ ಗದ್ದಿಗೆ ಕ್ಷೇತ್ರದಲ್ಲಿ ಬುಧವಾರ ಕೆಂಡಗಣ್ಣೇ ಶ್ವರಸ್ವಾಮಿ ಹಾಗೂ ಮಲೆ ಮಹದೇಶ್ವರ ಸ್ವಾಮಿ ಜೋಡಿ ರಥೋತ್ಸವ ಜರುಗಿತು. 15 ಗ್ರಾಮಗಳಿಂದ ಸಂಗ್ರಹಿಸಿದ್ದ ಸೌದೆ ಬಳಸಿ  ದೇವಸ್ಥಾನದ ಆವರಣದಲ್ಲಿ ಸಿದ್ದಪಡಿಸಿದ ಕೊಂಡದಲ್ಲಿ ಬೆಳಿಗ್ಗೆ ಕೊಂಡೋತ್ಸವ ಜರುಗಿತು. 
 
ಭಕ್ತರು ಹೆಬ್ಬಳದಲ್ಲಿ ಸ್ನಾನ ಮಾಡಿ, ಒದ್ದೆ ಬಟ್ಟೆಯಲ್ಲೇ ಕೊಂಡ ಹಾದು ಕೆಂಡಗಣ್ಣೇಶ್ವರಸ್ವಾಮಿಗೆ ಹರಕೆ ತೀರಿಸಿದರು. ಬಳಿಕ ಅಕ್ಕಪಕ್ಕದ ಗ್ರಾಮದ ರೈತರು ಜಾನುವಾರುಗಳನ್ನು ಕೊಂಡ ಹಾಯಿಸುವ ಮೂಲಕ ಅವುಗಳ ಆರೋಗ್ಯ ರಕ್ಷಣೆ ಕೋರಿ ಪೂಜೆ ಸಲ್ಲಿಸಿದರು.
 
ಬೆಳಿಗ್ಗೆ 11.30ಕ್ಕೆ ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಸೋಮನಾಥ ಸ್ವಾಮಿ, ಗಾವಡಗೆರೆ ಗುರುಲಿಂಗ ಜಂಗಮ ಮಠದ ನಟರಾಜ ಸ್ವಾಮೀಜಿ, ಮಾದಳ್ಳಿ ಉಕ್ಕಿನಕಂತೆ ಮಠದ ಸಾಂಬಸದಾಶಿವ ಸ್ವಾಮೀಜಿ ಜೋಡಿ ರಥೋತ್ಸವಕ್ಕೆ ಪೂಜೆ ಸಲ್ಲಿಸಿದರು. ಬಳಿಕ ಉತ್ಸವಮೂರ್ತಿ ಹೊತ್ತ ರಥವನ್ನು ಭಕ್ತರು ಎಳೆದರು. ಭಕ್ತರು ಹಣ್ಣು ಜವನ ಎಸೆಯುವ ಮೂಲಕ ತಮ್ಮ ಭಕ್ತಿ ಸಮರ್ಪಿಸಿದರು.
 
ರಥೋತ್ಸವಕ್ಕೆ ಬಂದಿದ್ದ ಭಕ್ತರಿಗೆ ದೇವಸ್ಥಾನದ ವತಿಯಿಂದ ದಾಸೋಹ ಏರ್ಪಡಿಸಿದ್ದರು.  ಅಂದಾಜು 7ರಿಂದ 8 ಸಾವಿರ ಭಕ್ತರು ಜಾತ್ರೆ ಮಹೋತ್ಸವದಲ್ಲಿ ಭಾಗವಹಿಸಿದ್ದರು ಎಂದು ದೇವಸ್ಥಾನ ಮಂಡಳಿ ತಿಳಿಸಿದೆ.
 
ಜಾತ್ರೆಯಲ್ಲಿ ಸಿಹಿ ತಿಂಡಿ ಅಂಗಡಿ, ಬೆಂಡು ಬತಾಸು ಕಡ್ಲೆ ಪುರಿ ಸಾಮಾನ್ಯವಾಗಿತ್ತು. ಬಳೆ ಬಿಚ್ಚೋಲೆ ಅಂಗಡಿಗಳು ಕಣ್ಣು ಕಾಣಿಸುವಷ್ಟು ಜಾತ್ರೆಯಲ್ಲಿ ಹರಡಿಕೊಂಡಿದ್ದವು.
 
ರಥೊತ್ಸವದ ಅಂಗವಾಗಿ ದೇವಸ್ಥಾ ನದಲ್ಲಿ ಬೆಳಗಿನ ಜಾವದಿಂದಲೂ ವಿಶೇಷ ಪೂಜೆ ನಡೆದಿದ್ದು, ಭಕ್ತರು ಅಹೋ ರಾತ್ರಿ ದೇವರ ಪೂಜಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.
ಜಾತ್ರಾ ಮಹೋತ್ಸವದಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಬಿಳಿಕೆರೆ ಪೊಲೀಸ್‌ ಠಾಣೆ ಪಿ.ಎಸ್‌.ಐ ನವೀನ್‌ಕುಮಾರ್ ನೇತೃತ್ವದಲ್ಲಿ  ಪೊಲೀಸ್‌  ಬಂದೋಬಸ್ತ್ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT