ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತ್ಯದಿಂದ ಸ್ತ್ರೀ ಸಂವೇದನೆ ಜಾಗೃತವಾಗಲಿ

ಅಲ್ಲಂ ಸುಮಂಗಳಮ್ಮ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಕಥೆಗಾರ ಅಮರೇಶ ನುಗಡೋಣಿ ಆಶಯ
Last Updated 9 ಮಾರ್ಚ್ 2017, 11:53 IST
ಅಕ್ಷರ ಗಾತ್ರ
ಹೊಸಪೇಟೆ: ‘ಮಹಿಳಾ ಚಳವಳಿಗಳಿಂದ ಸ್ತ್ರೀ ಸಂವೇದನೆ ಹುಟ್ಟಬೇಕು. ಪುರುಷ ಪ್ರಧಾನ ವ್ಯವಸ್ಥೆಗೆ ಆ ಸಂವೇದನೆಯನ್ನು ಹೇಗೆ ತಿಳಿಸಬೇಕು ಎನ್ನುವುದು ದೊಡ್ಡ ಅಜೆಂಡಾ ಆಗಬೇಕು’ ಎಂದು ಕಥೆಗಾರ ಅಮರೇಶ ನುಗಡೋಣಿ ತಿಳಿಸಿದರು.
 
ತಾಲ್ಲೂಕಿನ ಹಂಪಿ ಕನ್ನಡ ವಿಶ್ವವಿದ್ಯಾಲಯದ ಮಹಿಳಾ ಅಧ್ಯಯನ ವಿಭಾಗವು ಬುಧವಾರ ವಿ.ವಿ ಮಂಟಪ ಸಭಾಂಗಣದಲ್ಲಿ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಅಲ್ಲಂ ಸುಮಂಗಳಮ್ಮ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
 
ಮಹಿಳಾ ಸಂವೇದನೆ ಮಹಿಳೆಯರಿಗೆ ಮಾತ್ರ ಸೀಮಿತವಾದರೆ ಸಾಲದು. ಅದನ್ನು ಪುರುಷ ಸಂವೇದನೆಗೆ ವರ್ಗಾಯಿಸಬೇಕು. ಆ ಕೆಲಸ ಕನ್ನಡ ಸಾಹಿತ್ಯದ ಮೂಲಕ ಆಗಬೇಕು. ಅದಕ್ಕೆ ಮಹಿಳೆಯರು ತಮ್ಮ ಬರವಣಿಗೆ ಮೂಲಕ ಶಕ್ತಿ ಕೊಡಬೇಕು ಎಂದು ಹೇಳಿದರು.
 
ಮಹಿಳಾ ಚಳವಳಿ ಹುಟ್ಟಿಕೊಳ್ಳಲು ಸಿದ್ಧತೆ ನಡೆದಿದೆ. ಆದರೆ, ಪುರುಷ ಪ್ರಧಾನ ವ್ಯವಸ್ಥೆ ಅದನ್ನು ಲಘುವಾಗಿ ಕಾಣುತ್ತಿದೆ. ಈ ಧೋರಣೆ ಬದಲಾಗಬೇಕು. ಕನ್ನಡದಲ್ಲಿ ಪುರುಷರನ್ನು ಒಳಗೊಂಡಿರುವ ಸ್ತ್ರೀವಾದಿ ಚಳವಳಿ ನಡೆಯಬೇಕು. ಆಗ ದೊಡ್ಡ ಬದಲಾವಣೆ ಕಾಣಲು ಸಾಧ್ಯ ಎಂದರು. ಮಹಿಳಾ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಶಿವಾನಂದ ಎಸ್‌. ವಿರಕ್ತಮಠ ಮಾತನಾಡಿದರು.
 
ಅಧ್ಯಕ್ಷತೆ ವಹಿಸಿ ಮಾತನಾಡಿದ ಕುಲಪತಿ ಪ್ರೊ. ಮಲ್ಲಿಕಾ ಎಸ್‌.ಘಂಟಿ, ಸಮಾಜದ ಮೇಲು ರಚನೆಯಲ್ಲಿ ಮಾತ್ರ ಸ್ತ್ರೀಶಕ್ತಿ, ಸ್ತ್ರೀವಾದಿ ವಿಚಾರಗಳ ಬಗ್ಗೆ ಚರ್ಚೆ ನಡೆಯುತ್ತಿದೆ ಹೊರತು ಅವುಗಳು ತಲಸ್ಪರ್ಶಿಯಾಗಿಲ್ಲ. ಜಗತ್ತಿನಲ್ಲಿ ಕೆಲವೇ ಕೆಲವರು ಸೃಷ್ಟಿಸಿರುವ ಭ್ರಮಾಲೋಕಕ್ಕೆ ಮಹಿಳೆಯರು ಸರಕು ಆಗಬಾರದು ಎಂದು ಹೇಳಿದರು.
ಕುಲಸಚಿವ ಡಿ. ಪಾಂಡುರಂಗಬಾಬು, ಮಹಿಳಾ ಅಧ್ಯಯನ ವಿಭಾಗದ ಮುಖ್ಯಸ್ಥೆ ಶೈಲಜಾ ಹಿರೇಮಠ ಇದ್ದರು.
 
‘ಮಹಿಳೆಯರನ್ನು ಗೌರವಿಸಿ’
ಕೊಟ್ಟೂರು: ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರಿಗೆ ಸೂಕ್ತ ಸ್ಥಾನಮಾನ ಹಾಗೂ ರಕ್ಷಣೆ ಇಲ್ಲದಿರುವುದು ದುರಂತದ ವಿಷಯ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಎಚ್.ಡಿ.ಪ್ರಶಾಂತ್ ಅಭಿಪ್ರಾಯಪಟ್ಟರು.
 
ಪಟ್ಟಣದ ಕ್ರಿಯೇಟಿವ್ ಲೇಡಿಸ್ ಕ್ಲಬ್ ವತಿಯಿಂದ ಗಂಗೋತ್ರಿ ಕಾಲೇಜಿನಲ್ಲಿ ಬುಧವಾರ ಏರ್ಪಪಡಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
 
ಸಮಾಜದಲ್ಲಿ ಇಂದು ಮಹಿಳೆಯರು ಸಾಧನೆಯ ಉತ್ತುಂಗಕ್ಕೆ ಏರಿದರೂ, ಯಾವುದೇ ಕ್ಷೇತ್ರ, ಕೆಲಸವಾದರೂ ತಾನು ಮಾಡಬಲ್ಲೆ ಎಂಬುದು ಸಾಬೀತುಪಡಿಸಿದರೂ ತಾರತಮ್ಯ ಕಡಿಮೆಯಾಗಿಲ್ಲ ಹಾಗೂ ಶೋಷಣೆ, ಭ್ರೂಣಹತ್ಯೆ, ಅತ್ಯಾಚಾರದಂತಹ ಘಟನೆಗಳು ಮರುಕಳಿಸುತ್ತಿರುವುದು ವಿಷಾದಕರ ಸಂಗತಿ ಎಂದರು.
 
ಸಮಾರಂಭದ ಅಧ್ಯಕ್ಷತೆಯನ್ನು ಕ್ಲಬ್ ಅಧ್ಯಕ್ಷೆ ಸುನಂದ ಗುರುಬಸವರಾಜ ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಜೀವ ವಿಮಾ ನಿಗಮದ ಅಭಿವೃದ್ಧಿ ಅಧಿಕಾರಿ ಎಂ.ಎಸ್. ಶಿವನಗುತ್ತಿ, ಪ್ರಾಚಾರ್ಯ ಗಣೇಶ್ ಗುಲಗಂಜಿ, ಕಾರ್ಯದರ್ಶಿ ನಿರ್ಮಲ ಶಿವನಗುತ್ತಿ ಇದ್ದರು. 
 
‘ಮಹಿಳೆಗೆ ಕಾನೂನು ಅರಿವು ಅಗತ್ಯ’
ಕೂಡ್ಲಿಗಿ: ಮಹಿಳೆಯರಿಗಾಗಿ ಇರುವ ಕಾನೂನುಗಳ ಬಗ್ಗೆ ಪುರುಷರಿಗೇ ಹೆಚ್ಚಿನ ಅರಿವು ನೀಡಬೇಕಾಗಿದೆ ಎಂದು ಹಿರಿಯ ವಕೀಲೆ ಕೆ.ಎಚ್.ಎಂ. ಶೈಲಜಾ ಹೇಳಿದರು. 
ತಾಲ್ಲೂಕು ಕಾನೂನು ಸೇವೆಗಳ ಸಮಿತಿ, ತಾಲ್ಲೂಕು ವಕೀಲರ ಸಂಘ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಸಂಯುಕ್ತವಾಗಿ ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಬುಧವಾರ ಏರ್ಪಡಿಸಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿದರು.
 
ಸಿವಿಲ್ ನ್ಯಾಯಾಧೀಶೆ ಶಾಂತಮ್ಮ ಕಾರ್ಯಕ್ರಮ ಉದ್ಘಾಟಿಸಿದರು. ಶಿಶು ಅಭಿವೃದ್ಧಿ ಅಧಿಕಾರಿ ಸೋಮಣ್ಣ ಚಿನ್ನೂರು, ವಕೀಲರಾದ ಸಾವಿತ್ರಿ ಬಾಯಿ, ಪರುಸಪ್ಪ, ಜಯಶ್ರೀ, ವಿರೂಪಾಕ್ಷಿ, ನಾಗರಾಜ, ಶಿಶು ಅಭಿವೃದ್ಧಿ ಕಚೇರಿಯ ಸಹಾಯಕ ಕೃಷ್ಣ ಬಾಕಳೆ, ಮೇಲ್ವಿಚಾರಕಿಯರಾದ ಮಂಗಳ ಕಾಳೆ, ಅನುಪಮ, ಸುನಿತಾ ಪತ್ತಾರ್, ಬಸಮ್ಮ ಈರಣ್ಣನವರ್ ಇದ್ದರು.
 
‘ಅವಕಾಶಗಳ ಸದ್ಬಳಕೆ ಅಗತ್ಯ’
ಹೂವಿನಹಡಗಲಿ: ‘ಮಹಿಳೆಯರಿಗೆ ಸಿಗುವ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಂಡು ಸಾಧನೆ ಮಾಡಬೇಕು’ಎಂದು ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಶಾರದ ಬಳಿಗಾರ ಹೇಳಿದರು.
 
ಪಟ್ಟಣದ ಕಾರ್ಮೆಲ್ ಸೇವಾ ಸದನದಲ್ಲಿ ಬುಧವಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಮಹಿಳೆಯಲ್ಲಿ ಅಡಕವಾಗಿರುವ ಪ್ರತಿಭೆ ನಿಷ್ಪ್ರಯೋಜಕವಾಗದೇ  ಪ್ರಜ್ವಲಿಸಬೇಕು. ಸ್ವಸಾಮರ್ಥ್ಯ ಬೆಳೆಸಿಕೊಂಡು ಪ್ರಗತಿಯ ದಿಕ್ಕಿನಲ್ಲಿ ಸಾಗಬೇಕು ಎಂದು ಸಲಹೆ ನೀಡಿದರು.
 
ಜಿಲ್ಲಾ  ಪಂಚಾಯ್ತಿ ಸದಸ್ಯೆ ಕುಂಚೂರು ಶೀಲಾ ಮಾತನಾಡಿ, ‘ಸಮಾಜದಲ್ಲಿ ಶೋಷಣೆ, ದೌರ್ಜನ್ಯಕ್ಕೆ ಒಳಗಾದ ಮಹಿಳೆಯ ಕುರಿತು ಚುಚ್ಚು ಮಾತುಗಳನ್ನಾಡಿ ಹೆಣ್ಣಿಗೆ ಹೆಣ್ಣೇ ಶತೃವಾಗಬಾರದು. ವಿಧವೆಯರು, ಅಬಲೆಯರಿಗೆ ನೈತಿಕ ಸ್ಥೈರ್ಯ ತುಂಬಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ನೆರವಾಗಬೇಕು’ ಎಂದರು.
 
ಜಿ.ಪಂ. ಸದಸ್ಯೆ ಎಂ.ವೀಣಾ ಮಾತನಾಡಿ, ಆಟೊ ಚಾಲನೆಯಿಂದ ಅಂತರಿಕ್ಷ ಪದಾರ್ಪಣೆವರೆಗೂ ಸಾಧನೆ ಮಾಡಿದ್ದರೂ ಮಹಿಳೆ ಆತ್ಮವಿಶ್ವಾಸದಿಂದ ಬೀಗುವಂತಿಲ್ಲ. ಮಹಿಳೆಯರ ಅಸಹಾಯಕತೆ ದುರುಪಯೋಗಪಡಿಸಿಕೊಂಡು ದೌರ್ಜನ್ಯ, ಅತ್ಯಾಚಾರ ಎಸಗುತ್ತಿರುವುದು ಖೇದಕರ ಎಂದರು.
 
ಜಿ.ಪಂ. ಸದಸ್ಯೆ ಎಸ್.ಎಂ. ಲಲಿತಾಬಾಯಿ, ತಹಶೀಲ್ದಾರ್ ರಾಘವೇಂದ್ರರಾವ್, ಸಿಡಿಪಿಓ ರಾಮನಗೌಡ, ಕಾರ್ಮೆಲ್ ಸೇವಾ ಸದನದ ನಿರ್ದೇಶಕ ಫಾ. ಡೆಂಜಿಲ್ ವೇಗಸ್, ಪುರಸಭೆ ಅಧ್ಯಕ್ಷೆ ಆರ್.ಪವಿತ್ರಾ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕಿ ಜೆ.ಎಂ. ಶ್ರೀಲತಾ ಉಪನ್ಯಾಸ ನೀಡಿದರು. ಅಂಗನವಾಡಿ ಮೇಲ್ವಿಚಾರಕಿಯರಾದ ಡಿ.ಹನುಮಕ್ಕ, ಎಚ್.ನಾಗರತ್ನಾ ಇತರರು ಇದ್ದರು.

* ಖಾಸಗೀಕರಣ ಹೆಚ್ಚಾದಂತೆಲ್ಲ ಸರ್ಕಾರ ದುರ್ಬಲವಾಗುತ್ತ ಹೋಗುತ್ತದೆ. ಮಹಿಳೆ, ಶೋಷಿತ ವರ್ಗ ಇನ್ನಷ್ಟು ಶೋಷಣೆಗೆ ಒಳಗಾಗುತ್ತದೆ
ಅಮರೇಶ ನುಗಡೋಣಿ, ಕಥೆಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT