ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಗಿಣಿಯ ‘ರಣಚಂಡಿ’ ಅವತಾರ

Last Updated 9 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಕಾಲು ಮೇಲೆ ಕಾಲು ಹಾಕಿಕೊಂಡು ವೇದಿಕೆ ಅಲಂಕರಿಸಿದ್ದ ರಾಗಿಣಿ ದ್ವಿವೇದಿ ಮೊಗದಲ್ಲಿ ಸಂಭ್ರಮ ಎದ್ದು ಕಾಣುತ್ತಿತ್ತು. ತಮ್ಮ ಎರಡನೇ ಆ್ಯಕ್ಷನ್ ಚಿತ್ರ ‘ವೀರ ರಣಚಂಡಿ’ ಕಡೆಗೂ ತೆರೆಗೆ ಬರಲು ಕಾಲ ಕೂಡಿ ಬಂತಲ್ಲ ಎಂಬ ನಿರಾಳಭಾವವೂ ಅದರಲ್ಲಿ ಅಡಕವಾಗಿತ್ತು.

ಆರೋಗ್ಯದ ಸಮಸ್ಯೆಯಿಂದಾಗಿ ನಿರ್ದೇಶಕ ಆನಂದ್ ಪಿ. ರಾಜು ಪತ್ರಿಕಾಗೋಷ್ಠಿಗೆ ಬಂದಿರಲಿಲ್ಲ. ಅವರ ಅನುಸ್ಥಿತಿಯಲ್ಲೇ ಚಿತ್ರತಂಡ ಮಾತು ಆರಂಭಿಸಿತು.

‘ಮಹಿಳೆಯನ್ನು ಯಾರೂ ರಕ್ಷಿಸಲು ಬರುವುದಿಲ್ಲ. ಆಕೆಯೇ ರಕ್ಷಿಸಿಕೊಳ್ಳಬೇಕು’ ಎನ್ನುತ್ತಾ ಮಾತಿಗಳಿದ ರಾಗಿಣಿ, ‘ಹೆಣ್ಣು ಒಲಿದರಷ್ಟೆ ಮೃದು ಸ್ವಭಾವಿ. ಮುನಿದರೆ ಆಕೆ ರಣಚಂಡಿಯ ಅವತಾರ ತಾಳಬಲ್ಲಳು. ಈ ಚಿತ್ರದ ಕಥೆಯೂ ಅದನ್ನೇ ಧ್ವನಿಸುತ್ತದೆ. ಐದು ಹೊಡೆದಾಟ ದೃಶ್ಯಗಳು ಚಿತ್ರದ್ಲಲಿವೆ’ ಎಂದು ಚಿತ್ರದ ತಿರುಳನ್ನು ಹಂಚಿಕೊಂಡರು.

ಚಿತ್ರದ ಆ್ಯಕ್ಷನ್ ದೃಶ್ಯಗಳಿಗಾಗಿ ನಡೆಸಿದ ಕಸರತ್ತು ಸೇರಿದಂತೆ ಹಲವು ಅನುಭವಗಳನ್ನು ಹಂಚಿಕೊಂಡ ಅವರು, ‘ಚಿತ್ರದ ಪ್ರಚಾರಕ್ಕಾಗಿ ನಡೆಸಲು ನಿರ್ಧರಿಸಿರುವ ರೋಡ್‌ ಷೋದಲ್ಲಿ ಭಾಗವಹಿಸುವೆ. ಜತೆಗೆ, ನಿರ್ದೇಶಕ ಆನಂದ್ ಅವರು ಶೀಘ್ರ ಗುಣಮುಖರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುವೆ’ ಎಂದರು.

ಹೆಣ್ಣೊಬ್ಬಳು ಸಿಡಿದೆದ್ದು ರಣಚಂಡಿಯಾಗುವ ಕಥೆಯನ್ನು ಬರೆದುಕೊಟ್ಟಿರುವ ಅರುಣ್, ‘ಮನರಂಜನೆ ಮತ್ತು ಆ್ಯಕ್ಷನ್ ಎರಡನ್ನೂ ಒಳಗೊಂಡ ಸ್ವಮೇಕ್ ಚಿತ್ರವಿದು. ಹಳ್ಳಿ ಹುಡುಗಿಯೊಬ್ಬಳು ನಗರಕ್ಕೆ ಬಂದು, ದೌರ್ಜನ್ಯದ ವಿರುದ್ಧ ರಣಚಂಡಿ ಅವತಾರ ತಾಳುತ್ತಾಳೆ’ ಎಂದು ಮಾತು ಮುಗಿಸಿದರು.

ವಿ. ಕುಪ್ಪುಸ್ವಾಮಿ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಅವರ ಪರವಾಗಿ ಮಾತಿಗಳಿದ ಚಲನಚಿತ್ರ ವಾಣಿಜ್ಯ ಮಂಡಳಿ ಕಾರ್ಯದರ್ಶಿ ಸೂರಪ್ಪ ಬಾಬು, ‘ನಾಲ್ಕು ದಶಕ ಚಿತ್ರರಂಗದಲ್ಲಿರುವ ಕುಪ್ಪುಸ್ವಾಮಿ ಸ್ವಂತ ಬ್ಯಾನರ್‌ನಿಂದ ಈ ಚಿತ್ರವನ್ನು ನಿರ್ಮಿಸಿದ್ದಾರೆ.

ಸಿನಿಮಾಗಾಗಿ ಸ್ವಂತ ಮನೆಯನ್ನು ಅಡವಿಟ್ಟು ದುಡ್ಡು ಹೊಂದಿಸಿದ್ದಾರೆ. ಆನಂದ್ ಪಿ. ರಾಜು ಮತ್ತು ರಾಗಿಣಿ ದ್ವಿವೇದಿ ಅವರ ಜೋಡಿಗೆ ಹಿಂದೆ ‘ರಾಗಿಣಿ ಐಪಿಎಸ್‌’ನಲ್ಲಿ ಸಿಕ್ಕಿದ್ದ ಯಶಸ್ಸು ‘ವೀರ ರಣಚಂಡಿ’ಗೂ ಸಿಗಲಿ. ಆ ಮೂಲಕ ಕುಪ್ಪುಸ್ವಾಮಿ ಸುಧಾರಿಸಿಕೊಳ್ಳುವಂತಾಗಲಿ’ ಎಂದು ಹಾರೈಸಿದರು.

ಬಾಹರ್ ಫಿಲ್ಮ್ಸ್‌ನ ಬಾಷಾ ಚಿತ್ರದ ವಿತರಣೆಯ ಹೊಣೆಯ ಹೊತ್ತಿದ್ದು, ಇಂದು (ಮಾರ್ಚ್ 10) ರಾಜ್ಯದಾದ್ಯಂತ ಸುಮಾರು 250 ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT