ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೀರ ರಣಚಂಡಿ

ನಾವು ನೋಡಿದ ಸಿನಿಮಾ
Last Updated 10 ಮಾರ್ಚ್ 2017, 13:11 IST
ಅಕ್ಷರ ಗಾತ್ರ

ವೀರ ರಣಚಂಡಿ
ನಿರ್ಮಾಪಕ: ವಿ. ಕುಪ್ಪು ಸ್ವಾಮಿ
ನಿರ್ದೇಶಕ: ಆನಂದ ಪಿ. ರಾಜು
ತಾರಾಗಣ: ರಾಗಿಣಿ ದ್ವಿವೇದಿ, ಶರತ್ ಲೋಹಿತಾಶ್ವ, ಭಜರಂಗಿ ಲೋಕಿ

ಬಹುತೇಕ ರೌಡಿಸಂ ಸಿನಿಮಾಗಳಲ್ಲಿರುವ ಸಾಮ್ಯತೆ: ರೌಡಿಗಳನ್ನು ವೈಭವೀಕರಿಸುವುದು, ಕ್ರೌರ್ಯವನ್ನು ಹಸಿಹಸಿಯಾಗಿ ತೋರಿಸುವುದು ಹಾಗೂ ಸಿನಿಮಾದ ಕೊನೆಯಲ್ಲಿ ಸಮಾಜ ಘಾತುಕರನ್ನು ನಾಶ ಮಾಡಿ ನಾಯಕ ವಿಜೃಂಭಿಸುವುದು. ಈ ಹೊಡೆದಾಟ ಮತ್ತು ದುಷ್ಟರ ಶಿಕ್ಷೆಯ ನಡುವೆ ಬರುವ ತಾಯಿ–ಪ್ರೇಯಸಿ ಸೆಂಟಿಮೆಂಟ್‌ಗಳಲ್ಲಿ ಪ್ರೇಕ್ಷಕ ಸಿಲುಕಿಯೂ ಸಿಲುಕದಂತೆ ಇರಬೇಕು ಎನ್ನುವ ಕಾರಣಕ್ಕೆ ಒಂದು ‘ಸ್ಪೆಷಲ್ ಐಟಂ ನಂಬರ್’ ಹಾಡು, ಜೊತೆಗೆ ಒಂದಿಷ್ಟು ಹಾಸ್ಯ ದೃಶ್ಯಗಳನ್ನು ರೂಪಿಸಲಾಗುತ್ತದೆ. ಈ ಜನಪ್ರಿಯ ಸೂತ್ರಗಳನ್ನು ನಿರ್ದೇಶಕ ಆನಂದ ಪಿ. ರಾಜು ‘ವೀರ ರಣಚಂಡಿ’ ಚಿತ್ರವನ್ನು ರೂಪಿಸಿದ್ದಾರೆ.

ಇಲ್ಲಿ ಬದಲಾವಣೆ ಎಂದರೆ ಭ್ರಷ್ಟರನ್ನು ಸದೆ ಬಡಿಯುವುದು ನಾಯಕನಲ್ಲ. ಬದಲಾಗಿ ನಾಯಕಿ ರಾಗಿಣಿ. ಈಕೆ ಮಾಫಿಯಾ ಗ್ಯಾಂಗ್ ಒಂದರ ನಾಯಕಿ. ತನ್ನ ಎದುರಾಳಿ ಗುಂಪನ್ನು ನಂಬಿ ಮೋಸಹೋಗುತ್ತಾಳೆ. ಅಣ್ಣನನ್ನು ಕಳೆದುಕೊಳ್ಳುತ್ತಾಳೆ. ಅಲ್ಲಿಂದ ಒಂದು ಹಳ್ಳಿಗೆ ವಾಸ್ತವ್ಯ ಬದಲಿಸುತ್ತಾಳೆ. ಆ ಊರಿನ ಗೌಡ, ಚಿಕ್ಕ ವಯಸ್ಸಿನಲ್ಲಿ ಕಳೆದುಹೋದ ತನ್ನ ಮಗಳು ನಂದಿನಿ ಇವಳೇ ಎಂದು ನಂಬಿಕೊಳ್ಳುತ್ತಾನೆ. ರಾಗಿಣಿ ಕೂಡ ನಂದಿನಿಯಾಗಿ ತಂದೆ–ತಾಯಿಯ ಪ್ರೀತಿ ಸವಿಯುತ್ತ ಕುಟುಂಬದ ಒಳಿತಿಗಾಗಿ ಬದುಕಲು ತೊಡಗುತ್ತಾಳೆ. ಅಲ್ಲೊಂದು ಮರಳು ಮಾಫಿಯಾ ಇದೆ.

ತಂದೆಗೆ ಮೋಸ ಮಾಡಿದ ನಂಜೇಗೌಡನಿಗೆ ಗತಿ ಕಾಣಿಸುವುದು ಆಕೆಯ ಕೆಲಸವಾಗುತ್ತದೆ. ಪೇಟೆಯಲ್ಲಿದ್ದಾಗ ತಾನೇ ದುಷ್ಟರ ಗುಂಪೊಂದನ್ನು ಕಟ್ಟಿಕೊಂಡು ದರೋಡೆ ಮಾಡಲು ಹೊಡೆದಾಡುತ್ತಿದ್ದವಳು ಹಳ್ಳಿಯಲ್ಲಿ ಮಾಫಿಯಾವೊಂದಕ್ಕೆ ಕಡಿವಾಣ ಹಾಕಲು ಹೊಡೆದಾಡುತ್ತಾಳೆ. ಒಟ್ಟಿನಲ್ಲಿ ರಾಗಿಣಿ ನಂದಿನಿಯಾದರೂ ತಾನು ಅಂದುಕೊಂಡಿದ್ದನ್ನು ಸಾಧಿಸದೇ ಇರುವುದಿಲ್ಲ. ಎಷ್ಟೆಂದರೂ ನಾಯಕಿಯಲ್ಲವೇ?

ನಿರ್ದೇಶಕರು ಅನವಶ್ಯಕ ದೃಶ್ಯಗಳ ಮೂಲಕ ಪ್ರೇಕ್ಷಕನ ತಾಳ್ಮೆ ಪರೀಕ್ಷಿಸುತ್ತಾರೆ. ಕಥೆಗೆ ಪೂರಕವಲ್ಲದ ಸಂಭಾಷಣೆ ದೃಶ್ಯಗಳ ಕಾರಣ ಸಿನಿಮಾ ಎಲ್ಲೋ ನಿಂತಂತೆ ಭಾಸವಾಗುತ್ತದೆ. ರಾಗಿಣಿಯವರ ಜನಪ್ರಿಯತೆಯ ಬೆನ್ನು ಹತ್ತಿ, ಅವರ ಅಭಿಮಾನಿಗಳಿಗೆಂದೇ ಮಾಡಿದ ಸಿನಿಮಾ ‘ವೀರ ರಣಚಂಡಿ’. ಸಾಹಸ ದೃಶ್ಯಗಳಲ್ಲಿ ರಾಗಿಣಿ ಅವರನ್ನು ಇನ್ನಷ್ಟು ಸ್ಟೈಲಿಶ್ ಆಗಿ ತೋರಿಸುವ ಅವಕಾಶವನ್ನು ನಿರ್ದೇಶಕರು ಕೈಚೆಲ್ಲಿದ್ದಾರೆ.

ರಾಗಿಣಿ ಅವರ ಹೊಡೆದಾಟ ರಂಜಕವಾಗುವಂತೆ ತೋರಿಸಲು ಛಾಯಾಗ್ರಾಹಕ (ಆರ್. ಗಿರಿ) ಮತ್ತು ಸಂಕಲನಕಾರ (ಲಕ್ಷ್ಮಣ ಎನ್. ರೆಡ್ಡಿ) ಸಾಕಷ್ಟು ಕಸರತ್ತು ಮಾಡಿದ್ದಾರೆ. ಅತಿಯಾದ ಮೆಲೋಡ್ರಾಮ ಚಿತ್ರಕ್ಕೆ ಪೂರಕವಾಗಿಲ್ಲ. ಸಂಗೀತ ನಿರ್ದೇಶಕ ಎಸ್.ಪಿ. ವೆಂಕಟೇಶ್ ಚಿತ್ರಕ್ಕೆ ತಮ್ಮ ಕೊಡುಗೆ ನೀಡಲು ಇನ್ನಷ್ಟು ಶ್ರಮ ವಹಿಸಬೇಕಿತ್ತು. ನಂಜೇಗೌಡನ ಪಾತ್ರದಲ್ಲಿ ಶರತ್ ಲೋಹಿತಾಶ್ವ ನಿಜವಾದ ನಾಯಕನಾಗಿ ಮೆರೆಯುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT