ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾಜದ ಅಂಕುಡೊಂಕು ತಿದ್ದಿದ ಶರಣರು

ದಲಿತ ವಚನಕಾರರ ಜಯಂತಿ: ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ ಅಭಿಮತ
Last Updated 11 ಮಾರ್ಚ್ 2017, 6:04 IST
ಅಕ್ಷರ ಗಾತ್ರ
ರಾಯಚೂರು:  ದಲಿತ ವಚನಕಾರರು ತಮ್ಮ ವಚನಗಳ ಮೂಲಕ ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ಕೆಲಸ ಮಾಡಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ ಹೇಳಿದರು.
 
ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನಗರ ಸಭೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಶುಕ್ರವಾರ ಏರ್ಪಡಿಸಿದ್ದ ದಲಿತ ವಚನಕಾರರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
 
ಕಾಯಕವೇ ಕೈಲಾಸ ತತ್ವವನ್ನು ಬೋಧಿಸಿದ ಬಸವಣ್ಣನವರು ಕಾಯಕದ ವಚನಕಾರರನ್ನು ಒಗ್ಗೂಡಿಸಿ ಅನುಭವ ಮಂಟಪ ಕಟ್ಟಿದರು. ದಲಿತ ವಚನಕಾರರು ಇಡೀ ಮನುಕುಲ ಉದ್ಧರಿಸುವ ವಚನಗಳನ್ನು ಬರೆದಿದ್ದಾರೆ. ಮನುಷ್ಯ ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ರಾಜಕೀಯವಾಗಿ ಹೇಗೆ ನಡೆ ನುಡಿ ರೂಢಿಸಿಕೊಳ್ಳಬೇಕು ಎನ್ನುವ ವಿವರಗಳನ್ನು ಅವರು ವಚನಗಳ ಮೂಲಕ ಕೊಟ್ಟಿದ್ದಾರೆ ಎಂದು ಹೇಳಿದರು.
 
ಶರಣ ಸಾಹಿತಿ ರಾಮಸ್ವಾಮಿ ಮಾತನಾಡಿ, ಬಸವಣ್ಣನವರು ಹರಳಯ್ಯ ಅವರನ್ನು ಅಪ್ಪಿಕೊಂಡು ಶರಣು ಶರಣಾರ್ಥಿ ಎಂದು ಹೇಳಿದ್ದರು. ಅಲ್ಲದೆ ಹರಳಯ್ಯನ ಮಗನಿಗೆ ಬ್ರಾಹ್ಮಣ ಮದುರಸನ ಮಗಳನ್ನು ಕೊಟ್ಟು ಅಂತರ್ಜಾತಿಯ ವಿವಾಹವನ್ನು ಅಂದಿನ ಕಾಲದಲ್ಲೆ ಮಾಡಿದ್ದಾರೆ. ಸಾಮಾಜಿಕ ಸಮಾನತೆಯ ಕನಸನ್ನು ಅವರು ಕಂಡಿದ್ದರು ಎಂದು ತಿಳಿಸಿದರು.
 
ಸಾಹಿತಿ ವೀರ ಹನುಮಾನ ಮಾತನಾಡಿ, ಬಸವಣ್ಣ, ಅಕ್ಕಮಹಾದೇವಿ, ಅಲ್ಲಂಪ್ರಭು ಅವರ ವಿದ್ವತ್ತಿಗೆ ಕಡಿಮೆ ಇಲ್ಲದಂತೆ ದಲಿತ ವಚನಕಾರರು ಇದ್ದರು. ಇಡೀ ವಿಶ್ವದಲ್ಲಿ ರಷ್ಯಾ ಮತ್ತು ಫ್ರೆಂಚ್ ಎರಡು ಪ್ರಮುಖ ಕ್ರಾಂತಿಗಳನ್ನು ಕಂಡಿದ್ದೇವೆ. ಅವೆರಡಕ್ಕೂ ಮಿಗಿಲಾಗಿ ಬಸವಣ್ಣನವರ ನೇತೃತ್ವದಲ್ಲಿ ಕಲ್ಯಾಣ ಚಳುವಳಿಯ ಕ್ರಾಂತಿ ನಡೆದಿದೆ ಎಂದು ಹೇಳಿದರು.
 
ಉಪನ್ಯಾಸಕ ಡಾ. ಲಿಂಗಣ್ಣ ಗಾಣದಾಳ ಮಾತನಾಡಿ, ಅಂದಿನ ಕಾಲದಲ್ಲಿ ಕಾಯಕ ಜೀವಿಗಳ ಕಸುಬು ಆಧರಿಸಿ ಕುಲಗಳು ಹುಟ್ಟಿದವು. ಆದರೆ ಈಗ ಕಸುಬುಗಳು ನಶಿಸಿ ಕುಲಗಳನ್ನು ಪೋಷಿಸಿಕೊಂಡು ಹೋಗಲಾಗುತ್ತಿದೆ. ಡೋಹರ ಕಕ್ಕಯ್ಯ ಮಧ್ಯಭಾರತದ ಮಾಳ್ವದ ಮೂಲಕ ಬಂದವರು ಎಂದು ಹೆಳಲಾಗುತ್ತದೆ. ಇವರ ಕಾಲ ಕ್ರಿ. ಶ. 1100 ರಿಂದ 1108 ಎಂದು ಹೇಳಲಾಗುತ್ತದೆ. ಅಂದಿನ ವಚನಕಾರರಲ್ಲಿಯೆ ಶ್ರೇಷ್ಠ ವಚನಕಾರರಾಗಿದ್ದರು ಎಂದು ಅಭಿಪ್ರಾಯಪಟ್ಟರು.
 
ಬಸವೇಶ್ವರ ವೃತ್ತದಿಂದ ಆರಂಭವಾದ ದಲಿತ ವಚನಕಾರರ ಭಾವಚಿತ್ರಗಳ ಮೆರವಣಿಗೆಯನ್ನು ನಗರಸಭೆ ಅಧ್ಯಕ್ಷೆ ಹೇಮಲತಾ ಪಿ. ಬೂದೆಪ್ಪ ಉದ್ಘಾಟಿಸಿದರು. ಭಾವಚಿತ್ರಗಳ ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿ ಭಾಗವಹಿಸದಿರುವುದಕ್ಕೆ ಕಾರ್ಯಕ್ರಮದಲ್ಲಿ ಕೆಲವರು ಆಕ್ಷೇಪ ವ್ಯಕ್ತಪಡಿಸಿ ಮಾತನಾಡಿದರು.
 
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಸಿದ್ಧಪಡಿಸಿದ ‘ನಮ್ಮ ಹೆಮ್ಮೆಯ ವಚನಕಾರರು’ ಕೈಪಿಡಿಯನ್ನು ಜಿಲ್ಲಾಧಿಕಾರಿ ಬಿಡುಗಡೆಗೊಳಿಸಿದರು. 
 
ತಹಸೀಲ್ದಾರ್‌ ಚಾಮರಾಜ ಪಾಟೀಲ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ನಿಜಲಿಂಗಪ್ಪ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಟಿ.ಕನುಮಪ್ಪ ಇದ್ದರು. ಈರಣ್ಣ ಬೆಂಗಾಲಿ ಅವರು ಸ್ವಾಗತಿಸಿದರು. ದಂಡಪ್ಪ ನಿರೂಪಿಸಿದರು. ಚಾಮರಾಜ ಪಾಟೀಲ ವಂದಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT